ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಧ್ಯೇಯದ `ಉನ್ನತಿ'

ಅಕ್ಷರ ಗಾತ್ರ

ಅನಕ್ಷರತೆ ಮತ್ತು ಬಡತನದ ಕಾರಣದಿಂದಲೇ ಇಂದು ಬಹುತೇಕ ಯುವಕ, ಯುವತಿಯರು ಹತಾಶೆ, ಅಸಮಾಧಾನಕ್ಕೆ ಒಳಗಾಗಿ ಸಮಾಜದ ಮುಖ್ಯವಾಹಿನಿಯಿಂದಲೇ ದೂರ ಉಳಿದುಬಿಡುತ್ತಾರೆ. ಇಂತಹ ವ್ಯಕ್ತಿಗಳನ್ನು ಹುಡುಕಿ ಅವರಿಗೆ ಉಚಿತವಾಗಿ ತಾಂತ್ರಿಕ ಕೌಶಲ ತರಬೇತಿ ನೀಡಿ ಉಚಿತವಾಗಿಯೇ  ಉದ್ಯೋಗ ಕೊಡಿಸುವ ಮೂಲಕ ಅವರ ಬದುಕಿಗೆ ಪರೋಕ್ಷವಾಗಿ ಸಹಾಯಹಸ್ತ ಚಾಚುತ್ತಾ ಬಂದಿದೆ ಬೆಂಗಳೂರಿನ ಬೈಯಪ್ಪನಹಳ್ಳಿಯ ಸದಾನಂದ ನಗರದ `ಉನ್ನತಿ ತರಬೇತಿ ಸಂಸ್ಥೆ'.

ಬಡತನದ ಕೂಪಕ್ಕೆ ಸಿಲುಕಿ ಶಿಕ್ಷಣ ಮುಂದುವರಿಸಲು ಸಾಧ್ಯವಾಗದೇ ಇರುವ ಯುವಜನರಲ್ಲಿ ಆತ್ಮವಿಶ್ವಾಸ ತುಂಬಿ ಅವರಿಗೆ ನೀಡುವ ತರಬೇತಿಗೆ ತಕ್ಕಂತೆ ವಿವಿಧ ಕಂಪೆನಿಗಳಲ್ಲಿ ಉದ್ಯೋಗ ಕೊಡಿಸುವುದೇ ಈ ಸಂಸ್ಥೆಯ ಮೂಲ ಉದ್ದೇಶ.

ಯುವಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕೆಂಬ ನಿಟ್ಟಿನಲ್ಲಿ 2003ರಲ್ಲಿ ಆರಂಭವಾದ ಈ ಸಂಸ್ಥೆ ಇದುವರೆಗೆ ಸುಮಾರು 4 ಸಾವಿರಕ್ಕೂ ಅಧಿಕ ಮಂದಿಗೆ ತರಬೇತಿ ನೀಡಿ, ಖಚಿತವಾಗಿ ನೌಕರಿಯನ್ನೂ ಕೊಡಿಸಿರುವ ಹೆಗ್ಗಳಿಕೆ ಹೊಂದಿದೆ. ಪರಿಣತ ಶಿಕ್ಷಕರ ತಂಡ, ಸುಸಜ್ಜಿತ ತರಗತಿಗಳು, ಕಂಪ್ಯೂಟರ್ ವ್ಯವಸ್ಥೆ, ದೃಶ್ಯ ಸಂಯೋಜನೆ ಮೂಲಕ ಬೋಧನಾ ವ್ಯವಸ್ಥೆ ಇಲ್ಲಿದೆ. ಇನ್ನು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಇನ್ಫೋಸಿಸ್ ಸಂಸ್ಥೆಯು ವಿಶಾಲವಾದ ಸುಸಜ್ಜಿತ ಸಭಾಂಗಣವನ್ನು ನಿರ್ಮಿಸಿಕೊಟ್ಟಿದೆ.

ಇಲ್ಲಿನ ತರಬೇತಿ 70 ದಿನಗಳ ಅಲ್ಪಾವಧಿಗೆ ಸೀಮಿತವಾಗಿದ್ದು, ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಡೇಟಾ ಎಂಟ್ರಿ, ರೀಟೇಲ್ ಸೇಲ್ಸ್ ಅಂಡ್ ಮಾರ್ಕೆಟಿಂಗ್,   ಇನ್‌ಸ್ಟೋರ್, ಜೀವನ ಕೌಶಲ, ಕಂಪ್ಯೂಟರ್, ಬಿಪಿಒ, ಗೆಸ್ಟ್ ಕೇರ್, ಡ್ರೈವಿಂಗ್, ಬ್ಯೂಟಿಷಿಯನ್, ಇಂಡಸ್ಟ್ರಿಯಲ್ ಪೇಂಟಿಂಗ್, ಸೆಕ್ಯೂರಿಟಿ ಸರ್ವೀಸಸ್, ಆಂಗ್ಲ ಭಾಷೆಯ ಸಂವಹನ... ಹೀಗೆ ಸುಮಾರು 15 ವಿಷಯಗಳಲ್ಲಿ ಪರಿಣತ ಶಿಕ್ಷಕರಿಂದ ಅಂತರ ರಾಷ್ಟ್ರೀಯ ಗುಣಮಟ್ಟದ ತರಬೇತಿಯನ್ನು ನೀಡಲಾಗುತ್ತಿದೆ.

ಬೆಂಗಳೂರಿನ ಅಭ್ಯರ್ಥಿಗಳೊಂದಿಗೆ ಹೊರಗಿನವರಿಗೂ ತರಬೇತಿ ಪಡೆಯಲು ಅವಕಾಶವಿದೆ. ಬೇರೆ ಊರುಗಳಿಂದ ಬರುವ ಅಭ್ಯರ್ಥಿಗಳಿಗಾಗಿಯೇ ಉಚಿತವಾಗಿ ವಸತಿ ಒದಗಿಸುವುದಲ್ಲದೆ, ಅವರಿಗೆ ಬೆಳಿಗ್ಗೆ ಮತ್ತು ಸಂಜೆ ಊಟದ ವ್ಯವಸ್ಥೆಯನ್ನೂ ಸಂಸ್ಥೆ ಮಾಡುತ್ತದೆ. ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಸತಿ ಸೌಲಭ್ಯ ಕಲ್ಪಿಸಲಾಗಿದೆ.

ಸಂಸ್ಥೆಯಲ್ಲಿ ಪ್ರಸ್ತುತ 100ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ತರಿಕೇರಿ, ಹೊಸಪೇಟೆ, ಬಿಜಾಪುರ, ಬೀದರ್, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಂಡ್ಯ... ಹೀಗೆ ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಪಂಜಾಬ್, ಬಿಹಾರ, ಅಸ್ಸಾಂ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಂದಲೂ ಆಸಕ್ತರು ಇಲ್ಲಿಗೆ ಬಂದು, ತರಬೇತಿ ಪಡೆದು, ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಗಳಿಸಿರುವುದು ವಿಶೇಷ.

ಕೆಲ ವಿಷಯಗಳಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ನಗರದ ವಿವಿಧೆಡೆಯಲ್ಲಿರುವ ಹಲವು ಕಂಪೆನಿ, ಹೋಟೆಲ್‌ಗಳಲ್ಲಿ ಪ್ರಾಯೋಗಿಕ ತರಬೇತಿಗೆ ಹೋಗಿ ಬರಲು ಉಚಿತ ಬಸ್ ಪಾಸ್ ವ್ಯವಸ್ಥೆ , ಪ್ರಯಾಣದ ವೆಚ್ಚವನ್ನು ಸಹ ಸಂಸ್ಥೆ ನೀಡುತ್ತದೆ. ಒಂದು ವೇಳೆ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳು ಅನಾರೋಗ್ಯಕ್ಕೆ ಒಳಗಾದಲ್ಲಿ ಅವರಿಗೆ ಉಚಿತ ವೈದ್ಯಕೀಯ ನೆರವು ನೀಡುತ್ತಿರುವುದು ಇದರ ಮತ್ತೊಂದು ಹೆಮ್ಮೆಯ ಸಂಗತಿ.

ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಉನ್ನತಿ ಕೇಂದ್ರವು ಸಂಸ್ಥೆಯ ಆವರಣದಲ್ಲಿಯೇ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸುತ್ತದೆ. ಇದರಲ್ಲಿ ಟಿಸಿಎಸ್, ಟಾಟಾ ಕ್ರೋಮ್, ಲೈಫ್ ಸ್ಟೈಲ್, ಅಡಿಗಾಸ್, ಆರ್‌ಎಂಕೆವಿ, ಸೇಂಟ್ ಮಾರ್ಕ್ಸ್ ಹೋಟೆಲ್, ಕೇರ್‌ವೇಲ್, ನ್ಯೂವೇರ್, ಡಿ.ಇ.ಎಲ್ ಮುಂತಾದ ಹೆಸರಾಂತ ಸಂಸ್ಥೆ- ಕಂಪೆನಿಗಳು ಭಾಗವಹಿಸುತ್ತವೆ. ಈ ಕಂಪೆನಿಗಳಲ್ಲಿಯೇ ಅಭ್ಯರ್ಥಿಗಳು ಉದ್ಯೋಗವನ್ನು ಪಡೆಯುತ್ತಾರೆ.

`ಉನ್ನತಿಯಲ್ಲಿ ಪ್ರಸ್ತುತ ಯುವಕರು, ಯುವತಿಯರು ಸೇರಿದಂತೆ ಸುಮಾರು 100 ಅಭ್ಯರ್ಥಿಗಳಿದ್ದಾರೆ. ಇವರಲ್ಲಿ ಕೆಲವರು ಹೊರ ರಾಜ್ಯದವರು. ಒಂದೊಂದು ತಂಡದಲ್ಲಿ 30 ವಿದ್ಯಾರ್ಥಿಗಳು ಇರುತ್ತಾರೆ. ಇವರೆಲ್ಲರಿಗೂ ನಾವು ವಿಷಯ ಪರಿಣತ ಶಿಕ್ಷಕರಿಂದ ಗುಣಮಟ್ಟದ ತರಬೇತಿಯನ್ನು ಕೊಡಿಸುತ್ತೇವೆ. ನಮ್ಮಲ್ಲಿ ತರಬೇತಿ ಪಡೆದ ಕೆಲವರು ಇಂದು 20 ಸಾವಿರ ರೂಪಾಯಿವರೆಗೂ ಆದಾಯ ಗಳಿಸುತ್ತಿದ್ದಾರೆ' ಎಂದು ಹೆಮ್ಮೆಯಿಂದ ಹೇಳುತ್ತಾರೆ ಉನ್ನತಿ ಕೇಂದ್ರದ ಆಡಳಿತಾಧಿಕಾರಿ ಮಾಧುರಿ.

`ತರಬೇತಿ ಅವಧಿಯಲ್ಲಿ ಪ್ರತಿ ವಿದ್ಯಾರ್ಥಿಗೆ ಕಡಿಮೆ ಎಂದರೂ 12 ಸಾವಿರ ರೂಪಾಯಿ ವೆಚ್ಚ ತಗಲುತ್ತದೆ. ಸರ್ಕಾರದ ಯಾವುದೇ ಅನುದಾನ ಇಲ್ಲದೆ ಸಮಾನ ಮನಸ್ಕರು, ದಾನಿಗಳು ನೀಡುವ ದೇಣಿಗೆಯಿಂದಲೇ ಕೇಂದ್ರದ ಖರ್ಚು ವೆಚ್ಚವನ್ನು ಸರಿದೂಗಿಸಲಾಗುತ್ತದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇನ್ಫೋಸಿಸ್ ಸಂಸ್ಥೆಯು ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಸಭಾಂಗಣವನ್ನು ನಿರ್ಮಿಸಿಕೊಟ್ಟಿದೆ. ಅದರಂತೆ ಟೈಟಾನ್, ಟಾಟಾ, ಡಿ.ಇ.ಎಲ್, ಸಿ.ಎ.ಎಫ್, ಬಾಷ್ ಕಂಪೆನಿಗಳು ಉನ್ನತಿ ಜೊತೆ ಕೈಜೋಡಿಸಿವೆ' ಎನ್ನುತ್ತಾರೆ ಅವರು.

`ಜೀವನ ಕೌಶಲ ಮತ್ತು ಸಂದರ್ಶನ ಎದುರಿಸುವ ಬಗ್ಗೆ ನಾನು ತರಬೇತಿ ನೀಡುತ್ತಿದ್ದೇನೆ. ಇಲ್ಲಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವುದು ನನಗೆ ತುಂಬಾ ಸಂತಸ ತಂದಿದೆ' ಎನ್ನುತ್ತಾರೆ ಕಳೆದ ನಾಲ್ಕು ವರ್ಷಗಳಿಂದ ಉನ್ನತಿಯಲ್ಲಿ ಶಿಕ್ಷಕಿಯಾಗಿರುವ ಚಾರುಮತಿ.

`ಇಲ್ಲಿ ನಮಗೆ ಉತ್ತಮ ತರಬೇತಿ ನೀಡಲಾಗುತ್ತಿದೆ. ತರಬೇತಿಯೊಂದಿಗೆ ಉಚಿತ ಊಟ, ವಸತಿ ಹಾಗೂ ಅನಾರೋಗ್ಯ ಉಂಟಾದಲ್ಲಿ ವೈದ್ಯಕೀಯ ಚಿಕಿತ್ಸೆ ಸಹ ಕೊಡಿಸುತ್ತಾರೆ. ಉದ್ಯೋಗ ಸಿಕ್ಕ ನಂತರ ನಾವು ನಮ್ಮ ಸಂಸ್ಥೆಗೆ ಸ್ವಲ್ಪ ಹಣ ನೀಡುತ್ತೇವೆ' ಎಂದು ಇಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಹೇಳುತ್ತಾರೆ.

`ನಾನು ಓದಿದ್ದು 10ನೇ ತರಗತಿ. ತುಂಬ ಬಡತನದ ಕಾರಣ ಮುಂದೆ ಓದಲು ಆಗಲಿಲ್ಲ. ಇಲ್ಲಿ ಕಂಪ್ಯೂಟರ್, ಸ್ಪೋಕನ್ ಇಂಗ್ಲಿಷ್ ತರಬೇತಿ ಪಡೆದು, ಈಗ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ' ಎಂದು ಇಂಗ್ಲಿಷ್ ಭಾಷೆಯಲ್ಲೇ ಆತ್ಮವಿಶ್ವಾಸದಿಂದ ಹೇಳಿದವರು ತಮಿಳುನಾಡಿನ ಮುರುಗೇಶ್.

`8ನೇ ತರಗತಿಯವರೆಗೆ ಮಾತ್ರ ಓದಿದ್ದೇನೆ. ಇಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ವಿಷಯಕ್ಕೆ ಸಂಬಂಧಿಸಿದ ತರಬೇತಿ ಪಡೆದು, ಈಗ ಸೇಂಟ್ ಮಾರ್ಕ್ಸ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ' ಎನ್ನುತ್ತಾರೆ ದೀಪ್ತಿ.

ಇವರಂತೆ ಇನ್ನೂ ಅನೇಕರು ಇಲ್ಲಿ ತರಬೇತಿ ಪಡೆದು ಬೇರೆ ಬೇರೆ ಸಂಸ್ಥೆ, ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ಸಂಸ್ಥೆಯಲ್ಲಿ ತರಬೇತಿ ಪಡೆದು, ಖಚಿತವಾಗಿ ಉದ್ಯೋಗ ಪಡೆಯವ ಆಸೆ ಇರುವವರು, ಫೆಬ್ರುವರಿ 9ರಂದು ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು.

ವಿಳಾಸ: ಉನ್ನತಿ ಕೇಂದ್ರ, ದೇವಸ್ಥಾನ ರಸ್ತೆ, ಎನ್‌ಜಿಇಎಫ್ ಲೇಔಟ್ (ಬೈಯಪ್ಪನ ಹಳ್ಳಿ ಮೆಟ್ರೊ ಸ್ಟೇಷನ್ ಬಳಿ), ಸದಾನಂದ ನಗರ, ಬೆಂಗಳೂರು. ಮಾಹಿತಿಗೆ: 080 25384642/ 25384443/ 918105534690/ 9880791171. ಜಾಲತಾಣ: www.unnatiblr.org

ಈ ಅರ್ಹತೆ ಬೇಕು
* ಬಡತನದಲ್ಲಿ ಇರಬೇಕು

* ಬಿಪಿಎಲ್ ಕಾರ್ಡ್, ಆದಾಯ ಪ್ರಮಾಣಪತ್ರ ಇದ್ದರೆ ಒಳ್ಳೆಯದು

* 18ರಿಂದ 35ರ ವಯೋಮಾನದವರಾಗಿರಬೇಕು

ಉಳ್ಳವರ ಸಹಾಯ ಹಸ್ತ
ಸೌಲಭ್ಯ ವಂಚಿತ, ನಿರ್ಗತಿಕ, ಅನಕ್ಷರಸ್ಥ ಬಡ ವಿದ್ಯಾರ್ಥಿಗಳಲ್ಲಿ ಬದುಕಿನ ಆತ್ಮವಿಶ್ವಾಸದ ಬಲ ತುಂಬಬೇಕು, ಅವರೂ ಇತರರಂತೆ ವ್ಯವಸ್ಥಿತವಾಗಿ ಬದುಕಬೇಕು ಎಂಬ ನಿಟ್ಟಿನಲ್ಲಿ ಉಗಮವಾಗಿದ್ದು `ಉನ್ನತಿ'.

ನಾವು ಬಡ ವಿದ್ಯಾರ್ಥಿಗಳನ್ನು ಗುರುತಿಸಿ, ಅವರ ಆಸಕ್ತಿಗೆ ಅನುಗುಣವಾಗಿ ತರಬೇತಿ ನೀಡುತ್ತೇವೆ. ಇದರಿಂದ ಅವರಿಗೆ ಉದ್ಯೋಗ ಖಚಿತವಾಗಿ ದೊರೆಯುತ್ತದೆ. ವಿದ್ಯಾರ್ಹತೆ ಕಡ್ಡಾಯವಿಲ್ಲ. ಅನಕ್ಷರಸ್ಥರು ಸಹ ಅರ್ಜಿ ಸಲ್ಲಿಸಬಹುದು, ಪ. ಜಾತಿ/ ಪಂಗಡದವರಾಗಿದ್ದಲ್ಲಿ ಜಾತಿ ಪ್ರಮಾಣಪತ್ರ ಇದ್ದರೆ ಉದ್ಯೋಗ ದೊರಕಿಸಿಕೊಡಲು ಅನುಕೂಲ.

ನಮ್ಮಲ್ಲಿ ಎಲ್ಲವೂ ಪಾರದರ್ಶಕ ಆಗಿರುವುದರಿಂದ ಸಹಾಯ ಹಸ್ತ ನೀಡಲು ಹಲವು ಸಂಸ್ಥೆ, ಕಂಪೆನಿ ಮತ್ತು ಸಮಾನ ಮನಸ್ಕರು ಮುಂದೆ ಬರುತ್ತಾರೆ. ಅವರೇ ಕೆಲ ವಿದ್ಯಾರ್ಥಿಗಳ ತರಬೇತಿ ಹಾಗೂ ಖರ್ಚು- ವೆಚ್ಚವನ್ನು ಭರಿಸುತ್ತಿದ್ದಾರೆ. ಉನ್ನತಿಗೆ ದೇಣಿಗೆ ನೀಡುವವರಿಗೆ ತೆರಿಗೆ ವಿನಾಯಿತಿ ಇದೆ.
-ರಮೇಶ್ ಸ್ವಾಮಿ `ಉನ್ನತಿ' ರೂವಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT