ಭಾನುವಾರ, ಮೇ 16, 2021
22 °C

ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸಿ: ಶ್ರೀಕಾಂತ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ ಅಗತ್ಯವಾದ ಎಲ್ಲ  ಕ್ರಮಗಳನ್ನು ಕೈಗೊಳ್ಳಬೇಕು~ ಎಂದು  ಅಂಕಿ-ಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ (ಸ್ವತಂತ್ರ ನಿರ್ವಹಣೆ) ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀಕಾಂತ್‌ಕುಮಾರ್ ಜೇನಾ ಸೋಮವಾರ ತಿಳಿಸಿದರು.ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ನಾಲ್ಕನೆಯ ಪದವೀಧರರ ದಿನಾಚರಣೆಯಲ್ಲಿ ಪದವಿ ಪ್ರದಾನದ ಮಾಡಿ ಮಾತನಾಡಿದ ಅವರು, `ಈ ಸಂಬಂಧವಾಗಿ ಕಾಲೇಜುಗಳಿಗೆ ಸ್ವಾಯತ್ತೆ ನೀಡಬೇಕು ಹಾಗೂ ನ್ಯಾಕ್ ಕಾಲೇಜುಗಳು ಮಾನ್ಯತೆ ನೀಡಬೇಕು. ಆಗ ಮಾತ್ರ ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ~ ಎಂದು ಹೇಳಿದರು.`11 ನೇ ಪಂಚ ವಾರ್ಷಿಕ ಯೋಜನೆಯಲ್ಲಿ ಉನ್ನತ ಶಿಕ್ಷಣದಲ್ಲಿ ಶೇ.15 ರಷ್ಟು ನೋಂದಣಿ ಮಾಡಿಸುವ ಗುರಿಯನ್ನು ಹೊಂದಲಾಗಿದ್ದು, 12 ನೇ ಪಂಚ ವಾರ್ಷಿಕ ಯೋಜನೆಯಲ್ಲಿ ಈ ಪ್ರಮಾಣವನ್ನು ಶೇ.21 ಕ್ಕೆ ಹೆಚ್ಚಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯಗಳು, ಸಾಂದರ್ಭಿಕ ತರಬೇತಿ ಕೋರ್ಸ್‌ಗಳು ಹಾಗೂ ತಾಂತ್ರಿಕ ಸಂಸ್ಥೆಗಳ ಸಂಖ್ಯೆ ಹೆಚ್ಚಬೇಕು. ಇವುಗಳು ಹೆಚ್ಚು ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಸಾಧ್ಯವಾಗಬೇಕು~ ಎಂದ ಅವರು `ಎಸ್‌ಸಿ, ಎಸ್‌ಟಿ ಮತ್ತು ಓಬಿಸಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ  ಪಡೆಯಲು ಅವಕಾಶ ಕಲ್ಪಿಸಬೇಕು~ ಎಂದರು.`ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಳ ಹಾಗೂ ವಿದ್ಯಾರ್ಥಿಗಳ ನೋಂದಣಿಗಾಗಿ ದೊಡ್ಡ ಪ್ರಮಾಣದಲ್ಲಿ ಹಣವನ್ನು ನೀಡುತ್ತಿವೆ. ಗುಣಮಟ್ಟದ ಶಿಕ್ಷಣ ನೀಡಲು ಮೂಲಸೌಕರ್ಯದ ಜೊತೆಗೆ ಸ್ಪರ್ಧಾತ್ಮಕ ಹಾಗೂ ತರಬೇತಿ ಹೊಂದಿದ ಶಿಕ್ಷಕರ ಅಗತ್ಯವಿದೆ.ಭಾರತದಂತಹ ದೇಶದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ದೊಡ್ಡ ಸವಾಲಾಗಿದೆ. ಸ್ವಾತಂತ್ರ್ಯಾನಂತರದಲ್ಲಿ ದೇಶದಲ್ಲಿ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು, ಶಿಕ್ಷಕರ ಸಂಖ್ಯೆಯಲ್ಲಿ ಅಗಾಧ ಬೆಳವಣಿಗೆಯಾಗಿದೆ. ಅಲ್ಲದೇ ವಿದ್ಯಾರ್ಥಿಗಳ ನೋಂದಣಿಯೂ ಹೆಚ್ಚಾಗಿದೆ. ಇದಕ್ಕೆ ಅನುಗುಣವಾಗಿ ಸವಲತ್ತುಗಳನ್ನು ನೀಡಬೇಕು. ಆಗ ಮಾತ್ರ ದೇಶಕ್ಕೆ ಕೊಡುಗೆ ನೀಡಲು ಸಾಧ್ಯ~ ಎಂದು ಹೇಳಿದರು.ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್‌ಎಸ್ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಬಿ.ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಜಂಟಿ ಕಾರ್ಯದರ್ಶಿ ಸತೀಶ್‌ಚಂದ್ರ ಪ್ರಮಾಣ ವಚನ ಬೋಧಿಸಿದರು.  ಪ್ರಾಂಶುಪಾಲ  ಪ್ರೊ.ಬಿ.ವಿ. ಸಾಂಬಶಿವಯ್ಯ ಸ್ವಾಗತಿ ಸಿದರು. ಪದವಿ ಪಡೆದ ಎಸ್.ಆನಂದ್, ಬಿ.ಎಂ.ಮನೋಜ್, ಪಿ.ಅಭಿಶೇಕ್, ಪಿ.ಎಸ್.ಅದಿತಿ, ಜಿ.ರೇಖಾ ಅನಿಸಿಕೆ ವ್ಯಕ್ತಪಡಿಸಿದರು.

ಸಹಾಯಕ ಪ್ರಾಧ್ಯಾಪಕ ಕೆ.ಜಿ.ಪರಮಶಿವಪ್ಪ ವಂದಿಸಿದರು.ವಿವಿಧ ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ 27 ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಗಣ್ಯರು ಗೌರವಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.