ಭಾನುವಾರ, ಮೇ 9, 2021
28 °C

ಉಪವಿಭಾಗಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಉಪವಿಭಾಗಾಧಿಕಾರಿ ಪಿ.ವಸಂತ ಕುಮಾರ್ ಅವರ ಕಾರ್ಯವೈಖರಿ ಸಂಶಯಾಸ್ಪದ ವಾಗಿದ್ದು, ಅವರು ಮಂಗಳವಾರ ರಾತ್ರಿ ತಮ್ಮ ಕಚೇರಿಯಲ್ಲಿ ಅನಧಿಕೃತ ವ್ಯಕ್ತಿಗಳನ್ನು ಕೂರಿಸಿಕೊಂಡು ಕೆಲವಾರು ಕಡತ, ಆದೇಶ ಪತ್ರಗಳಿಗೆ ಸಹಿ ಹಾಕಿದ್ದಾರೆ. ವ್ಯಾಜ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರು ನೀಡಿರುವ ಆದೇಶಗಳನ್ನು ರದ್ದುಪಡಿಸಿ ಮರು ಪರಿಶೀಲಿಸಬೇಕು ಎಂದು ಶಾಸಕ ಕೆ.ಪಿ.ಬಚ್ಚೇಗೌಡ ಆಗ್ರಹಿಸಿದ್ದಾರೆ.ಬೇರೆಯೊಂದು ಸ್ಥಳಕ್ಕೆ ವರ್ಗಾವಣೆಗೊಂಡಿರುವ ವಸಂತಕುಮಾರ್ ಅವರು ಬುಧವಾರ ಬೆಳಿಗ್ಗೆ ನೂತನ ಅಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಬೇಕಿತ್ತು. ಇದನ್ನೇ ನೆಪವಾಗಿಸಿಕೊಂಡ ಅವರು ಮಂಗಳವಾರ ರಾತ್ರಿ ತುರ್ತಾಗಿ ಕೆಲ ಅನಧಿಕೃತ ವ್ಯಕ್ತಿಗಳನ್ನು ಕೂರಿಸಿಕೊಂಡು ತಮ್ಮ ನ್ಯಾಯಾಲಯ ವ್ಯಾಪ್ತಿಯಲ್ಲಿದ್ದ ವ್ಯಾಜ್ಯ ಪ್ರಕರಣಗಳಿಗೆ ವಿಶೇಷ ಆಸಕ್ತಿ ತೋರಿ ಆದೇಶಗಳನ್ನು ಹೊರಡಿಸಿದ್ದಾರೆ. ಈ ಎಲ್ಲದರ ಹಿಂದೆ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.`ವಸಂತಕುಮಾರ್ ಅವರ ಕಾರ್ಯವೈಖರಿ ಬಗ್ಗೆ ಕೆಲ ದಿನಗಳ ಹಿಂದೆಯೇ ಸಂಶಯ ವ್ಯಕ್ತವಾಗಿದ್ದ ಕಾರಣ ಎಚ್ಚರಿಕೆ ನೀಡಲಾಗಿತ್ತು. ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಕೆಲ ದಿನಗಳ ಹಿಂದೆ ವಕೀಲರು ಪ್ರತಿಭಟನೆ ನಡೆಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಿಂದ ಅವರಿಗೆ ಎಚ್ಚರಿಕೆಯನ್ನು ಸಹ ನೀಡಲಾಗಿತ್ತು.

ಇಷ್ಟೆಲ್ಲ ನಡೆದರೂ ಗಂಭೀರವಾಗಿ ಪರಿಗಣಿಸದ ಅವರು ರಾತ್ರಿ ಯಾರ‌್ಯಾರನ್ನೋ ಕೂರಿಸಿಕೊಂಡು ವ್ಯಾಜ್ಯ ಪ್ರಕರಣಗಳ ಕಾಗದಪತ್ರಗಳಿಗೆ ಸಹಿ ಹಾಕಿ ಆದೇಶಗಳನ್ನು ಹೊರಡಿಸಿದ್ದಾರೆ. ಇದು ಅಕ್ರಮವಾಗಿದ್ದು, ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಮಂತ್ರಿಯವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ ಅವರು, `ಪ್ರತಿಭಟನೆ ರೂಪದಲ್ಲಿ ವಕೀಲರು ನ್ಯಾಯಾಲಯ ಕಲಾಪ ಬಹಿಷ್ಕರಿಸಿದ ನಂತರವೂ ವಸಂತಕುಮಾರ್ ಅವರು ವ್ಯಾಜ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ತೀರ್ಪುಗಳನ್ನು ನೀಡಿದ್ದಾರೆ. ಕಕ್ಷಿದಾರರಿಂದ ಹಣ ಪಡೆದು ಅವರ ಪರವಾಗಿ ತೀರ್ಪು ಗಳನ್ನು ನೀಡಿದ್ದಾರೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ವೆಂಕಟ ನಾರಾಯಣಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ.ಎನ್.ಮುನೇಗೌಡ, ಹರಿನಾಥ ರೆಡ್ಡಿ, ಜೆಡಿಎಸ್ ಮುಖಂಡರಾದ ಕೆ.ಟಿ.ನಾರಾಯಣಸ್ವಾಮಿ, ಯಲು ವಹಳ್ಳಿ ಸೊಣ್ಣೇಗೌಡ, ಪಿ.ಶ್ರೀನಿವಾಸ್, ಅಜ್ಜವಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

`ಹಗರಣದ ಸತ್ಯಾಸತ್ಯತೆ  ಪರಿಶೀಲನೆಗೆ ತನಿಖೆ~

ಚಿಕ್ಕಬಳ್ಳಾಪುರ:
`ನಗರಸಭೆಯಲ್ಲಿ ಶಾರ್ಕ್ ಮೀನುಗಳಲ್ಲ. ತಿಮಿಂಗಲುಗಳು ಸೇರಿಕೊಂಡಿವೆ. ಈ ಕಾರಣದಿಂದಲೇ ಅಲ್ಲಿ ವ್ಯವಸ್ಥೆ ಸರಿಯಿಲ್ಲ. ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಗರಸಭೆ ವತಿಯಿಂದ ನಡೆಯುವುದಿಲ್ಲ~ ಎಂದು ಶಾಸಕ ಕೆ.ಪಿ.ಬಚ್ಚೇಗೌಡ ವ್ಯಂಗ್ಯವಾಡಿದರು.ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, `ಸ್ವತಃ ಕೇಂದ್ರ ಸಚಿವ ವೀರಪ್ಪ ಮೊಯಿಲಿಯವರು ನಗರಸಭೆ ಕಾರ್ಯವೈಖರಿ ಬಗ್ಗೆ ಬೇಸರಗೊಂಡಿದ್ದಾರೆ.ಯಾವುದೇ ಅಭಿವೃದ್ಧಿ ಕಾಮಗಾರಿಯಾಗದಿರುವ ಸಮರ್ಪಕವಾಗಿ ನಡೆಯದ ಕಾರಣ ಅವರು ನಗರಸಭೆ ಸದಸ್ಯರನ್ನು ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಗರಪ್ರದೇಶ ವ್ಯಾಪ್ತಿಯಲ್ಲಿ ಸಮಸ್ಯೆಗಳು ಸಾಕಷ್ಟಿದ್ದರೂ ನಗರಸಭೆಯು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ~ ಎಂದರು.`ಕೆಳಗಿನ ತೋಟ ಬಡಾವಣೆಯಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಸಂಬಂಧಿಸಿದಂತೆ ನಡೆದಿರುವ 30 ಲಕ್ಷ ರೂಪಾಯಿ ಹಗರಣದ ಸತ್ಯಾಸತ್ಯತೆಗಳನ್ನು ಪರಿಶೀಲಿಸಲಾಗುವುದು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು, ಶೀಘ್ರವೇ ಬಡಾವಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಉನ್ನತ ಮಟ್ಟದ ತನಿಖೆಗೆ ಶಿಫಾರಸು ಮಾಡಲಾಗುವುದು. ಹಗರಣ ನಡೆದಿರುವುದು ಸಾಬೀತಾದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸ ಲಾಗುವುದು~ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.