ಗುರುವಾರ , ಮೇ 19, 2022
20 °C

ಉಪ್ರಾಳ: 203 ಕುಟುಂಬಗಳಿಗೆ ನೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ನೆರೆ ಸಂತ್ರಸ್ತರಿಗೆ ಆಸರೆ ಪುನರ್ವಸತಿ ಯೋಜನೆಯಡಿ ತಾಲ್ಲೂಕಿನ ಉಪ್ರಾಳ ಗ್ರಾಮದ ಸಂತ್ರಸ್ತರಿಗಾಗಿ ತುಳಸಿ ಗೋಪಾಲ ದಾನಿ ಸಂಸ್ಥೆ ನೆರವಿನಡಿ ನಿರ್ಮಿಸಿದ 203 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮ ಇದೇ 19ರಂದು ಉಪ್ರಾಳದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮನೆ ಹಸ್ತಾಂತರಿಸಲಿದ್ದಾರೆ.ರಾಯಚೂರು ಕ್ಯಾಶುಟೆಕ್ ಸಂಸ್ಥೆಯು ಈ 203 ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿದೆ. ಪ್ರತಿ ಮನೆ 288 ಚದರ ಅಡಿ ಇದ್ದು, ಮನೆಗಳು ವಿಶಾಲವಾಗಿವೆ. ಈವರೆಗೂ ರಾಯಚೂರು ತಾಲ್ಲೂಕು ಹಾಗೂ ಜಿಲ್ಲೆಯ ಬೇರೆ ಕಡೆ ನಿರ್ಮಿಸಿದ ಆಸರೆ ಯೋಜನೆಯಡಿ ನಿರ್ಮಾಣಗೊಂಡ ಮನೆಗಳಿಗಿಂತ ವಿಸ್ತಾರವಾಗಿರುವುದು ಈ ಮನೆಗಳ ವಿಶೇಷ. ಪ್ರತಿ ಮನೆ ನಿರ್ಮಾಣಕ್ಕೆ ತುಳಸಿ ಗೋಪಾಲ ಸಂಸ್ಥೆ 1 ಲಕ್ಷ 30 ಸಾವಿರ ವೆಚ್ಚ ಮಾಡಿದೆ.ಸಿದ್ಧತೆ: 19ರಂದು ಬೆಳಿಗ್ಗೆ 9.45ಕ್ಕೆ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯುವುದು. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ವಸತಿ ಖಾತೆ ಸಚಿವ ವಿ ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರೀರಾಮುಲು, ಕಂದಾಯ ಖಾತೆ ಸಚಿವ ಕರುಣಾಕರರೆಡ್ಡಿ ಅವರು ಆಗಮಿಸುವರು. ಸಿದ್ಧತೆಗಳು ನಡೆದಿದ್ದು, ಮೂರು ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಕೊನೆ ಹಂತದ ಸಿದ್ಧತೆ ಪರಿಶೀಲಿಸುತ್ತಿದ್ದ ತಹಸೀಲ್ದಾರ್ ಡಾ.ಮಧುಕೇಶ್ವರ ತಿಳಿಸಿದರು.ಉಪ್ರಾಳ ನೆರೆ ಸಂತ್ರಸ್ತರಿಗೆ ಮನೆ ಹಸ್ತಾಂತರದ ಜೊತೆಗೆ ಜಾಗೀರ ವೆಂಕಟಾಪುರದಲ್ಲಿ ನಿರ್ಮಿತಿ ಕೇಂದ್ರ ನಿರ್ಮಿಸಿದ 60 ಮನೆ ಹಾಗೂ ಲಿಂಗಸುಗೂರು ತಾಲ್ಲೂಕು ಕಾಳಾಪುರದಲ್ಲಿ ಟಾಟಾ ರಿಲೀಫ್ ದಾನಿ ಸಂಸ್ಥೆಯು ನಿರ್ಮಿಸಿದ 38 ಮನೆಗಳನ್ನು  ಶನಿವಾರ ದಿನವೇ ಅಲ್ಲಿನ ನೆರೆ ಸಂತ್ರಸ್ತರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. 3,635 ಮನೆ ಪೂರ್ಣ, 1,382 ಹಸ್ತಾಂತರ: ಜಿಲ್ಲೆಯಲ್ಲಿ ಒಟ್ಟು 51 ಗ್ರಾಮಗಳಲ್ಲಿ 13,121 ಮನೆ ನಿರ್ಮಾಣ ಉದ್ದೇಶ ಹೊಂದಿದ್ದು, ಇದರಲ್ಲಿ 8404 ಮನೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಇದರಲ್ಲಿ 3,635 ಮನೆ ಪೂರ್ಣಗೊಂಡಿವೆ. ಜಿಲ್ಲೆಯ 7 ಗ್ರಾಮಗಳಲ್ಲಿ ಈಗಾಗಲೇ 1,382 ಮನೆಗಳನ್ನು ನೆರೆ ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ.ರಾಯಚೂರು ತಾಲ್ಲೂಕಿನಲ್ಲಿ ಗರಿಷ್ಠ 2,443 ಮನೆ ನಿರ್ಮಿಸಲಾಗಿದೆ. ಮಾನ್ವಿ ತಾಲ್ಲೂಕಿನಲ್ಲಿ 863, ದೇವದುರ್ಗ ತಾಲ್ಲೂಕಿನಲ್ಲಿ 96, ಲಿಂಗಸುಗೂರು ತಾಲ್ಲೂಕಿನಲ್ಲಿ 53, ಸಿಂಧನೂರು ತಾಲ್ಲೂಕಿನಲ್ಲಿ 180 ಮನೆ ನಿರ್ಮಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ. ರಾಜ್ಯ ಸರ್ಕಾರವು ವಿವಿಧ ದಾನಿ ಸಂಸ್ಥೆಗಳ ನೆರವಿನಡಿ 8,404 ಮನೆ ನಿರ್ಮಾಣ ಕೈಗೊಂಡಿದೆ. ಆದರೆ ಇನ್ನೂ 4,117 ಮನೆ ನಿರ್ಮಾಣಕ್ಕೆ ದಾನಿ ಸಂಸ್ಥೆಗಳು, ಈ ಮನೆ ನಿರ್ಮಾಣಕ್ಕೆ ಜಾಗೆ ಹುಡುಕಾಟವನ್ನು ಜಿಲ್ಲಾಡಳಿತ ಮುಂದುವರಿಸಿದೆ. ಹಲವಾರು ದಾನಿ ಸಂಸ್ಥೆಗಳನ್ನು ಸಂಪರ್ಕಿಸುವ ಪ್ರಯತ್ನ ನಡೆದಿದೆ. ಜಾಗೆ ಗುರುತಿಸುವ ಕಾರ್ಯ ಪ್ರಗತಿಯಲ್ಲದೆ ಎಂದು ಜಿಲ್ಲಾಡಳಿತ ಭರವಸೆ ಮಾತು ಆಡುತ್ತಲೇ ಬಂದಿದ್ದರೂ ಈವರೆಗೂ ಈ ದಿಶೆಯಲ್ಲಿ ಪ್ರಯತ್ನ ಆಗಿಲ್ಲ. ಇದರಿಂದ 4,117 ನೆರೆ ಸಂತ್ರಸ್ತ ಕುಟುಂಬಗಳಿಗೆ ‘ಮನೆ ದೊರಕುವ ಕನಸು’ ಮತ್ತಷ್ಟು ಮರೀಚಿಕೆಯಾಗುವ ಸಾಧ್ಯತೆಗಳು ಹೆಚ್ಚಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.