ಶುಕ್ರವಾರ, ಜನವರಿ 17, 2020
22 °C

ಉಳುಮೆ ಬೇಡದ ನೈಸರ್ಗಿಕ ಹೊಲ

ಡಿ.ಎಂ.ಘನಶ್ಯಾಮ Updated:

ಅಕ್ಷರ ಗಾತ್ರ : | |

ಈಚಿನ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ತೆಂಗಿನ ಎಣ್ಣೆ (ತೆಂತಾ) ಚಳವಳಿ ಆರಂಭವಾಗಿದೆ. ತೆಂಗಿನಕಾಯನ್ನು ಹದವಾಗಿ ಹುರಿದು, ಮನೆಯಲ್ಲಿಯೇ ಎಣ್ಣೆ ತೆಗೆದು ಮಾರುವ ರೈತರ ಪ್ರಯತ್ನಕ್ಕೆ ವೇಗ ದೊರಕಿಸಿದವರು ತುರುವೇಕೆರೆ ತಾಲ್ಲೂಕು ಕುರುಬರಹಳ್ಳಿಕೊಪ್ಪ ಗ್ರಾಮದ ರೈತ ನಾಗೇಶ್‌ಬಾಬು.

ನಿಸರ್ಗದ ಮೇಲಿನ ಇವರ ಪ್ರೀತಿಯಿಂದಾಗಿಯೇ ಎಲ್ಲರ ಬಾಯಲ್ಲಿ ಇವರು ‘ನಿಸರ್ಗ’ ನಾಗೇಶ್ ಆಗಿದ್ದಾರೆ.  ಇದೇ ಪ್ರೀತಿ ಇವರ ನೈಸರ್ಗಿಕ ಹೊಲದಲ್ಲೂ ಎದ್ದು ಕಾಣುತ್ತದೆ.16 ಎಕರೆ ಭೂಮಿಯಲ್ಲಿ ಅಡಿಕೆ, ತೆಂಗು, ಬಾಳೆ, ಕೋಕೊ, ಕಾಳುಮೆಣಸು, ಏಲಕ್ಕಿ, ಅರಿಶಿಣ, ಚಕ್ಕೆ, ಭತ್ತ, ರಾಗಿ ಸೇರಿದಂತೆ ಅನೇಕ ರೀತಿಯ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಿದ್ದಾರೆ. ಭತ್ತ, ರಾಗಿ ಬೆಳೆಯಲು ಪ್ರತ್ಯೇಕ ಜಮೀನು ಇದೆ. ಆಹಾರಧಾನ್ಯ ಹೊರತುಪಡಿಸಿ, ಉಳಿದೆಲ್ಲಾ ಬೆಳೆಗಳನ್ನೂ ತೋಟದಲ್ಲಿಯೇ ಸಂಯೋಜಿಸಿ ಜಾಣತನ ಮೆರೆದಿದ್ದಾರೆ.ಮೊದಲು ರಾಸಾಯನಿಕ ಕೃಷಿಕರಾಗಿದ್ದ ಇವರು ಹತ್ತು ವರ್ಷಗಳಿಂದ ನೈಸರ್ಗಿಕ ಕೃಷಿಗೆ ಒಲಿದಿದ್ದಾರೆ. ಅದರ ಹಿಂದಿನ ಕಥೆ ಇದು. 2003-–04ರಲ್ಲಿ ತೀವ್ರ ಬರಗಾಲ. ಅಂತರ್ಜಲ ಕುಸಿದು, ಕುಡಿಯುವ ನೀರಿಗೂ ತತ್ವಾರವಾಗಿತ್ತು. ಇಂಥ ಸನ್ನಿವೇಶದಲ್ಲಿ ಅಡಿಕೆ ತೋಟ ಉಳಿಸಿಕೊಳ್ಳುವುದು ದುಸ್ಸಾಸಹ ಎನಿಸಿತ್ತು. ಆರು ಕೊಳವೆ ಬಾವಿ ಕೊರೆಸಿದರೂ, ಜೀವ ಉಳಿದದ್ದು ಎರಡರಲ್ಲಿ ಮಾತ್ರ. ನೋಡ-ನೋಡುತ್ತಲೇ ಒಂದು ಸಾವಿರಕ್ಕೂ ಅಧಿಕ ಅಡಿಕೆ ಮರಗಳು ಒಣಗಿ ಹೋದವು.ಆದರೆ, ಇಂಥ ಬರಗಾಲದಲ್ಲಿಯೂ ಕೆಲವು ತೋಟಗಳು ಜೀವ ಉಳಿಸಿಕೊಂಡಿದ್ದವು. ಅಂಥ ತೋಟಗಳನ್ನು ಪರಿಶೀಲಿಸಿ, ಹೊಸ ಚಿಂತನೆಯ ರೈತರೊಂದಿಗೆ ಚರ್ಚಿಸಿ; ‘ನಾನೆಲ್ಲಿ ಎಡವಿದೆ’ ಎಂದು ಪ್ರಶ್ನಿಸಿಕೊಂಡರು.‘ತೋಟದಲ್ಲಿ ಬಹುಬೆಳೆ ಇರಬೇಕು, ಸದಾ ಮುಚ್ಚಿಗೆ ಅಗತ್ಯ. ಹಾಯಿ ನೀರಿಗೆ ತಡೆಹಾಕಿ ಹನಿ ಅಥವಾ ತುಂತುರು ನೀರಾವರಿ ಅಳವಡಿಸಿಕೊಳ್ಳ­ಬೇಕು, ಹೆಚ್ಚು ನೀರು ಕೇಳುವ ರಾಸಾಯನಿಕಗಳಿಂದ ದೂರಾಗಿ ಸಾವಯವ ಗೊಬ್ಬರಗಳನ್ನು ಹೆಚ್ಚಿಸಬೇಕು’ ಎಂಬ ನೈಸರ್ಗಿಕ ಕೃಷಿ ವಿಧಾನದ ಪ್ರಾಥಮಿಕ ಅಂಶಗಳು ಮನವರಿಕೆಯಾದವು. ಸಿರಿಸಮೃದ್ಧಿ ಮಾಸಿಕ ಬಳಗದ ಸಭೆಗಳು, ನೈಸರ್ಗಿಕ ಕೃಷಿ ಕುರಿತಾದ ಲೇಖನಗಳು, ಸುಭಾಷ್ ಪಾಳೇಕರ್ ಅವರ ಚಿಂತನೆಗಳ ಪ್ರಭಾವ ಇವರನ್ನು ರಾಸಾಯನಿಕ ಕೃಷಿಯ ವ್ಯಾಮೋಹ ತೊರೆಯುವಂತೆ ಮಾಡಿತು.ನೈಸರ್ಗಿಕ ಕೃಷಿಯ ಮೊದಲ ಹೆಜ್ಜೆಯಾಗಿ ತೋಟಕ್ಕೆ ದ್ವಿದಳ ಧಾನ್ಯಗಳನ್ನು ಬಿತ್ತಿದರು. ಜೀವಾಮೃತ ತಯಾರಿಸಿ ಮರಗಳಿಗೆ ಕೊಟ್ಟರು. ತೋಟದಲ್ಲಿ ಹಸಿರು ಚಿಗುರಲಾರಂಭಿಸಿತು. ಈ ವಿಧಾನ ಅಳವಡಿಸಿದ ನಂತರದ ಮೊದಲ ಬೆಳೆಯ ಇಳುವರಿ ಕುಂಠಿತಗೊಂಡಿತ್ತು. ಎರಡನೇ ಬೆಳೆ ಪರವಾಗಿಲ್ಲವೆನಿಸಿತು, ಮೂರನೇ ವರ್ಷದ ಹೊತ್ತಿಗೆ ಏರಿಕೆ ಕಂಡು ಇವರ ಚಿಂತೆ ದೂರ ಮಾಡಿತು.‘ಈಗ ನಮ್ ತೋಟಕ್ಕೆ ಜೀವಾಮೃತ ಸೈತ ಬೇಕಿಲ್ಲ, ಮಣ್ಣು ಫಲವತ್ತಾಗಿದೆ, ಎಲ್ಲೆಲ್ಲೂ ಎರೆಹುಳು ಇದಾವೆ, ಎಷ್ಟು ಮಳೆ ಬಂದ್ರೂ ನೀರು ಇಲ್ಲೇ ಇಂಗುತ್ತೆ’ ಎನ್ನುವ ನಾಗೇಶ್ ಕಳೆದ ಹತ್ತು ವರ್ಷಗಳಿಂದ ತೋಟದಲ್ಲಿ ಉಳುಮೆ ಮಾಡಿಲ್ಲ.ಮೌಲ್ಯ ವರ್ಧನೆ

ತಮ್ಮ ಭೂಮಿಯಲ್ಲಿ ಬೆಳೆಯುವ ರಾಗಿ, ತೆಂಗು, ಅರಿಶಿಣ, ಕಾಳುಮೆಣಸು ಸೇರಿದಂತೆ ಅನೇಕ ಬೆಳೆಗಳ ಮೌಲ್ಯವರ್ಧನೆ ಮತ್ತು ನೇರ ಮಾರಾಟದಲ್ಲಿ ನಾಗೇಶ್ ತೊಡಗಿಸಿಕೊಂಡಿದ್ದಾರೆ.ರಾಗಿ –ಒಂದೆಲಗ, ರಾಗಿ –ಅಮೃತಬಳ್ಳಿ, ರಾಗಿ –ಕೊತ್ತಂಬರಿ ಮುಂತಾದ ಸಂಯೋಜನೆಗಳಿಂದ ರುಚಿಕರ ಮತ್ತು ಸುವಾಸನಾಭರಿತ ಹಪ್ಪಳ ತಯಾರಿಸುತ್ತಾರೆ. ವಿವಿಧ ವರ್ಗದ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಹೀಗೆ ಮಾಡುತ್ತೇವೆ ಎನ್ನುತ್ತಾರೆ ನಾಗೇಶ ಅವರ ಪತ್ನಿ ಚಂದ್ರಕಲಾ. ಸಕ್ಕರೆ ಕಾಯಿಲೆಯವರಿಗೆ ಅಮೃತಬಳ್ಳಿ ಮಿಶ್ರಣದ ರಾಗಿ ಹಪ್ಪಳ, ಮಕ್ಕಳಿಗೆ ಒಂದೆಲಗದ ಮಿಶ್ರಣ ಒಳ್ಳೆಯದು ಎಂದು ವಿವರಿಸುತ್ತಾರೆ.ತಾವು ಬೆಳೆಯುವ ಅರಿಶಿಣವನ್ನು ಪುಡಿ ಮಾಡಿ ಪ್ಯಾಕಿಂಗ್ ಮಾಡಿ ನೇರ ಮಾರುಕಟ್ಟೆ ಮಾಡುತ್ತಿದ್ದಾರೆ. ತೋಟದಿಂದ ಕಿತ್ತ ಅರಿಶಿಣವನ್ನು 45 ನಿಮಿಷದವರೆಗೆ ಬೇಯಿಸಿ 8ರಿಂದ-10 ದಿನ ಚೆನ್ನಾಗಿ ಒಣಗಿಸುತ್ತಾರೆ. ನಂತರ ಮಿಲ್ ಮಾಡಿಸಿ 50, 100 ಮತ್ತು 250 ಗ್ರಾಮ್ ಪ್ಯಾಕ್ ಮಾಡಿ ಸ್ಥಳೀಯ ಅಂಗಡಿಗಳು ಹಾಗೂ ರಾಜ್ಯದ ವಿವಿಧ ಸಾವಯವ ಅಂಗಡಿಗಳಿಗೆ ರವಾನಿಸುತ್ತಾರೆ.ತೆಂಗಿನ ಎಣ್ಣೆ

ತಮ್ಮದೇ ತೋಟದ ತೆಂಗಿನಕಾಯಿಗಳಿಂದ ತಾಜಾ ಎಣ್ಣೆ ತಯಾರಿಸಿ ಮಾರಾಟ ಮಾಡುತ್ತಾರೆ. ದಿನಕ್ಕೆ ಸರಾಸರಿ 10 ಲೀಟರ್ ತೆಂಗಿನ ಎಣ್ಣೆಗೆ ಬೇಡಿಕೆ ಇದ್ದು, ಈಚಿನ ದಿನಗಳಲ್ಲಿ ಲಾಭದಾಯಕ ಉದ್ದಿಮೆಯಾಗಿ ರೂಪುಗೊಳ್ಳುತ್ತಿದೆ. ‘ನಿಸರ್ಗ ನ್ಯಾಚುರಲ್’ ಹೆಸರಿನ ಬ್ರಾಂಡ್‌ ಅಡಿಯಲ್ಲಿ ಪ್ಯಾಕ್ ಮಾಡಿ ರಾಜ್ಯದ ವಿವಿಧೆಡೆ ಪೂರೈಸುತ್ತಾರೆ. ಎಣ್ಣೆ ತೆಗೆದಾಗ ಬರುವ ಹಿಂಡಿಯನ್ನು ನೇರವಾಗಿ– ಕೆಲವೊಮ್ಮೆ ಮಿಠಾಯಿ ತಯಾರಿಸಿ ಮಾರುತ್ತಾರೆ. ಹೈನುಗಾರಿಕೆ ಮಾಡುವವರು ದನಗಳಿಗೆ ಬೂಸಾ ಜೊತೆಗೆ ಕೊಡಲು ಇದನ್ನು ಕೊಳ್ಳುತ್ತಾರೆ.ತೆಂಗಿನ ಎಣ್ಣೆ ಮಾಡಲು ಕಾಯಿ ಒಡೆದಾಗ ಚೂರಾಗುವ ಹೊಪ್ಪುಗಳನ್ನು ಸಣ್ಣ-ಸಣ್ಣ ಚೂರು ಮಾಡಿ ಒಣಗಿಸಿ ಒಗ್ಗರಣೆ ಹಾಕಿ ಚಿಪ್ಸ್ ಮಾಡಿ, ಮಾರುತ್ತಾರೆ. ತೆಂತಾ ಎಣ್ಣೆ ತಯಾರಿಕೆಗಾಗಿ ಸ್ಥಳೀಯ ಯುವಕರನ್ನು ನೇಮಿಸಿಕೊಂಡು ಉದ್ಯೋಗದಾತರೂ, ಅಕ್ಕಪಕ್ಕದ ತೋಟಗಳ ಕಾಯಿ ಖರೀದಿಸಿ ಉದ್ಯಮಿಯೂ ಆಗಿದ್ದಾರೆ.ಸಂಶೋಧನೆ

ಕೇವಲ ಬೆಳೆ ಬೆಳೆಯುವುದರಲ್ಲಿ ನಾಗೇಶ್ ತೃಪ್ತರಾಗಿಲ್ಲ. ಅವರು ಕೃಷಿ ಸಂಶೋಧಕರೂ ಹೌದು. ‘ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವವರು ಬೀಜಾಮೃತ– ಜೀವಾಮೃತ– ಹೊದಿಕೆ– ಆರ್ದ್ರತೆ ಎಂಬ ನಾಲ್ಕು ಮೂಲ ಅಂಶಗಳನ್ನು ಅರಿತುಕೊಳ್ಳಬೇಕು. ತೆಂಗಿನ ತೋಟಗಳಲ್ಲಿ ಎರಡು ಮರಗಳ ನಡುವಣ ಗರಿಯ ತುದಿ ಇರುವ ಸ್ಥಳಕ್ಕೆ ನೀರು ಹರಿಸಬೇಕು. ಬದಲಾವಣೆಗೆ ಯತ್ನಿಸುವವರು ಮೊದಲು 3 ವರ್ಷ ತಾಳ್ಮೆಯಿಂದ ಕಾಯಬೇಕು’ ಇದು ನಾಗೇಶ್ ಅವರ ಅನುಭವದ ಸಾರ. ಅವರ ಸಂಪರ್ಕಕ್ಕೆ 9448432809.

 

ಪ್ರತಿಕ್ರಿಯಿಸಿ (+)