ಮಂಗಳವಾರ, ಮೇ 11, 2021
27 °C

ಉಸಿರುಗಟ್ಟಿಸಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ಕೈಕಾಲು ಕಟ್ಟಿ ಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಯಡಿಯೂರು ಕರೆಯ ಬಳಿ ಭಾನುವಾರ ಬೆಳಗಿನ ಜಾವ ಸಂಭವಿಸಿದೆ.ಜಯನಗರದ ಎರಡನೇ ಮುಖ್ಯರಸ್ತೆಯ 24ನೇ ಅಡ್ಡರಸ್ತೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಎಂ.ಜಿ.ರಸ್ತೆಯಲ್ಲಿರುವ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನ ಪ್ರಧಾನ ಕಚೇರಿಯಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಶಂಕರ ಪೂಜಾರಿ (56) ಕೊಲೆಯಾದವರು.ಇವರು ಮೂಲತಃ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಪಡುಕೋಣೆಯವರು ಎಂದು ತಿಳಿದು ಬಂದಿದೆ. ಒಂದೂವರೆ ವರ್ಷದ ಹಿಂದೆ ಬೆಂಗಳೂರಿನ ಜಯನಗರದ ಇದೇ ಬ್ಯಾಂಕ್‌ನ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚೆಗಷ್ಟೇ ಎಂ.ಜಿ.ರಸ್ತೆಯ ಮುಖ್ಯ ಕಚೇರಿಗೆ ವರ್ಗಾವಣೆ ಆಗಿದ್ದರು. ಮನೆಯಲ್ಲಿ ಒಬ್ಬರೇ ಇರುತ್ತಿದ್ದ ಪೂಜಾರಿ ಅವರ ಪತ್ನಿ ಕುಸುನಯನ ಮುಂಬೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಮಗಳೊಂದಿಗೆ ಅಲ್ಲಿಯೇ ವಾಸವಾಗಿದ್ದಾರೆ.ಪ್ರತಿದಿನ ಊಟ ತರಲು ಹುಡುಗನೊಬ್ಬನನ್ನು ಗೊತ್ತು ಮಾಡಿದ್ದರು. ಅಂತೆಯೇ ಭಾನುವಾರ ಸಂಜೆ 4.30ಕ್ಕೆ ಹುಡುಗ ಊಟದೊಂದಿಗೆ ತೆರಳಿದಾಗ ಬಾಗಿಲು ಅರ್ಧ ಮುಚ್ಚಿತ್ತು. ನಂತರ ಒಳಗೆ ಹೋಗಿ ನೋಡಿದಾಗ ಮೃತದೇಹ ಹಾಸಿಗೆ ಮೇಲೆ ಇರುವುದನ್ನು ನೋಡಿ ಗಾಬರಿಗೊಂಡು ಇತರರಿಗೆ ಈ ವಿಷಯ ತಿಳಿಸಿದ ಎಂದು ಪೊಲೀಸರು ತಿಳಿಸಿದ್ದಾರೆ. `ಒಂದಕ್ಕಿಂತ ಹೆಚ್ಚು ದುಷ್ಕರ್ಮಿಗಳು ಈ ಕೊಲೆ ಮಾಡಿರಬಹುದು~ ಎಂದು ಪಶ್ಚಿಮ ವಲಯದ ಜಂಟಿ ಪೊಲೀಸ್ ಕಮಿಷನರ್ ಪ್ರಣವ್ ಮೊಹಾಂತಿ ಅವರು ಶಂಕಿಸಿದ್ದಾರೆ.

 ಈ ಕುರಿತು ಮಾತನಾಡಿ, ಶಂಕರ್ ಮೊದಲನೇ ಮಹಡಿಯಲ್ಲಿ ವಾಸವಾಗಿದ್ದರು. ಕೊಲೆಯಾದ ನಂತರವಷ್ಟೇ ಕೆಳಭಾಗದ ಮನೆಯವರಿಗೆ ತಿಳಿದಿದೆ~ ಎಂದರು.ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್, `ದಂಪತಿಯ ಮಧ್ಯೆ ವಿರಸ ಉಂಟಾಗಿತ್ತೇ ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.