ಗುರುವಾರ , ಮಾರ್ಚ್ 4, 2021
18 °C

ಉಸ್ಮಾನಿಯಾ ವಿ.ವಿ: ಹಿಂಸೆಗೆ ತಿರುಗಿದ ಮಾಂಸದ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಸ್ಮಾನಿಯಾ ವಿ.ವಿ: ಹಿಂಸೆಗೆ ತಿರುಗಿದ ಮಾಂಸದ ಉತ್ಸವ

ಹೈದರಾಬಾದ್ (ಐಎಎನ್‌ಎಸ್): ಇಲ್ಲಿನ ಪ್ರತಿಷ್ಠಿತ ಉಸ್ಮಾನಿಯಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿ ಸಂಘಟನೆಗಳು ಭಾನುವಾರ ಆಯೋಜಿಸಿದ್ದ `ದನದ ಮಾಂಸದ ಉತ್ಸವ~ ಅನಿರೀಕ್ಷಿತವಾಗಿ ಹಿಂಸಾಚಾರಕ್ಕೆ ತಿರುಗಿದ ಘಟನೆ ನಡೆದಿದ್ದು, ವಿದ್ಯಾರ್ಥಿಯೊಬ್ಬನಿಗೆ ಚೂರಿಯಿಂದ ಇರಿಯಲಾಗಿದೆ.ಉತ್ಸವದ ಪರ ಮತ್ತು ವಿರೋಧವಾಗಿ ವಿದ್ಯಾರ್ಥಿಗಳ ಗುಂಪುಗಳು ಹಿಂಸಾಚಾರದಲ್ಲಿ ತೊಡಗಿದ್ದರಿಂದ ವಿಶ್ವವಿದ್ಯಾಲಯದ ಆವರಣ ರಣರಂಗವಾಗಿ ಮಾರ್ಪಟ್ಟು, ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ಮನೆಮಾಡಿದೆ.ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಘಟನೆಯಲ್ಲಿ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅನೇಕ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಆಂಧ್ರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಬೆಂಕಿಗೆ ಆಹುತಿಯಾಗಿದೆ.ನಡೆದದ್ದೇನು?: ವಿಶ್ವವಿದ್ಯಾಲಯ ಆವರಣ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಜಾರಿಯಲ್ಲಿರುವ ಕಡ್ಡಾಯ ಸಸ್ಯಾಹಾರ ಅನೇಕ ಮಾಂಸಾಹಾರಿ ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ತಮ್ಮ ಮೇಲೆ ಬಲವಂತವಾಗಿ ಸಸ್ಯಾಹಾರ ಪದ್ಧತಿ ಹೇರಲಾಗುತ್ತಿದೆ, ವಿದ್ಯಾರ್ಥಿ ನಿಲಯಗಳಲ್ಲಿರುವ ಬಹುಸಂಖ್ಯಾತ ವಿದ್ಯಾರ್ಥಿಗಳು ಮಾಂಸಾಹಾರದಿಂದ ವಂಚಿತರಾಗುತ್ತಿದ್ದಾರೆ, ದನದ ಮಾಂಸದ ಆಹಾರ ಸೇವನೆ ಸಂಸ್ಕೃತಿ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯಗಳಲ್ಲಿ ಮಾಂಸದೂಟ ತಯಾರಿಸಬೇಕು ಎಂದು ದಲಿತ ಮತ್ತು ಎಡ ಪಂಥೀಯ ವಿದ್ಯಾರ್ಥಿ ಸಂಘಟನೆಗಳು ಬೇಡಿಕೆ ಸಲ್ಲಿಸಿದ್ದವು.`ಸಸ್ಯಾಹಾರ ಸಂಸ್ಕೃತಿಯ ನಿರಂಕುಶ ಧೋರಣೆ~ ವಿರುದ್ಧ ಭಾನುವಾರ ವಿದ್ಯಾರ್ಥಿ ನಿಲಯಗಳಲ್ಲಿ ದನದ ಮಾಂಸಾಹಾರ ಉತ್ಸವ ಏರ್ಪಡಿಸಿದ್ದವು.  ಇದರ ಅಂಗವಾಗಿ ದನದ ಮಾಂಸದಿಂದ ನಾನಾ ತರಹದ ಭಕ್ಷ್ಯಗಳನ್ನು ತಯಾರಿಸಲಾಗಿತ್ತು. 200ಕ್ಕೂ ಹೆಚ್ಚು ದಲಿತ ಮತ್ತು ಎಡ ಪಂಥೀಯ ಮಾಂಸಾಹಾರಿ ವಿದ್ಯಾರ್ಥಿಗಳಲ್ಲದೇ ಪ್ರಾಧ್ಯಾಪಕರೂ ಭಾಗವಹಿಸಿದ್ದರು. ಆಗ ಉತ್ಸವದ ಸ್ಥಳಕ್ಕೆ ಏಕಾಏಕಿ ನುಗ್ಗಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ದಾಂಧಲೆ ನಡೆಸಿದರು. ಈ ಸಂದರ್ಭದಲ್ಲಿ ಎರಡು ಗುಂಪುಗಳು ಪರಸ್ಪರ ಕೈ ಮಿಲಾಯಿಸಿ, ಕಲ್ಲು, ಕಟ್ಟಿಗೆಗಳಿಂದ ದಾಳಿ ನಡೆಸಿದವು. ಈ ವೇಳೆ ಉತ್ಸವದ ಪರವಾಗಿದ್ದ ವಿದ್ಯಾರ್ಥಿಯೊಬ್ಬನಿಗೆ ಚೂರಿಯಿಂದ ಇರಿಯಲಾಗಿದ್ದು, ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.ತೆಲಂಗಾಣ ವಿದ್ಯಾರ್ಥಿ ಸಂಘ, ಪ್ರಗತಿಪರ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ, ಎಸ್‌ಎಫ್‌ಐ, ವಿದೇಶಿ ಭಾಷಾ ಅಧ್ಯಯನ ವಿಭಾಗದ ವಿದ್ಯಾರ್ಥಿ ಸಂಘಟನೆಗಳು ಜಂಟಿಯಾಗಿ ಉತ್ಸವವನ್ನು ಸಂಘಟಿಸಿದ್ದವು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.