ಬುಧವಾರ, ಮೇ 18, 2022
24 °C
ಕಾಲುವೆಗೆ ನೀರು ಹರಿಸಲು ಒತ್ತಾಯ

ಎಂಜಿನಿಯರ್ ಕಚೇರಿಗೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂದಗಿ: ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಕಾಲುವೆಗಳಿಗೆ ಕೂಡಲೇ ನೀರು ಹರಿಸುವಂತೆ ಒತ್ತಾಯಿಸಿ ರೈತರು ಗುರುವಾರ ಜೆಡಿಎಸ್ ತಾಲ್ಲೂಕು ಘಟಕದ ನೇತೃತ್ವದಲ್ಲಿ ರಾಂಪುರ ಪಿ.ಎ ಗ್ರಾಮದಲ್ಲಿನ ಕೃಷ್ಣಾ ಭಾಗ್ಯ ಜಲ ನಿಗಮ ಮುಖ್ಯ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಜೆಡಿಎಸ್ ಯುವ ಧುರೀಣ ಅಶೋಕ ಮನಗೂಳಿ ಮಾತನಾಡಿ, ಮಳೆ ಇಲ್ಲದೇ ತಾಲ್ಲೂಕಿನಾದ್ಯಂತ ರೈತರ ಬೆಳೆಗಳು ಸಂಪೂರ್ಣ ಒಣಗಿ ಹೋಗುವ ಸ್ಥಿತಿಯಲ್ಲಿದ್ದು, ರೈತರು ಕಂಗಾಲಾಗಿದ್ದಾರೆ. ಈಗಾಗಲೇ ಆಲಮಟ್ಟಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಕೂಡಲೇ ಕೃಷ್ಣಾ ಕಾಲುವೆ ಮತ್ತು ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಸಿದರೆ ರೈತರು ಚೇತರಿಸಿಕೊಳ್ಳಬಹುದಾಗಿದೆ. ಇಲ್ಲದಿದ್ದರೆ ತುಂಬಾ ಸಂಕಷ್ಟಕ್ಕೊಳಗಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇದೆ. ಇಂಥ ಗಂಭೀರ ಪರಿಸ್ಥಿತಿಯಲ್ಲಿ ಕಾಲುವೆಗಳಿಗೆ ನೀರು ಹರಿಸದಿದ್ದರೆ ಜಲಾಶಯದಲ್ಲಿನ ನೀರು ಯಾತಕ್ಕೆ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿಂದಗಿ ನಗರವನ್ನೊಳಗೊಂಡು ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಹೀಗಾಗಿ ಇದೇ  15ರೊಳಗಾಗಿ ಕಾಲುವೆಗೆ ನೀರು ಹರಿಸದಿದ್ದರೆ ಅದೇ ದಿನದಿಂದ ರಾಂಪುರ ಪಿ.ಎ ಕೃ.ಭಾ.ಜ.ನಿಗಮ ಮುಖ್ಯ ಎಂಜಿನಿಯರ್ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ತಾಲ್ಲೂಕು ನೀರು ಬಳಕೆದಾರರ ಸಂಘದ ಅಧ್ಯಕ್ಷ ಯಶವಂತರಾಯಗೌಡ ರೂಗಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಡಾ.ರಾಜಶೇಖರ ಪೂಜಾರಿ ಮಾತನಾಡಿ, ಕಾಲುವೆಗೆ ಕೂಡಲೇ ನೀರು ಹರಿಸದಿದ್ದರೆ ತಾಲ್ಲೂಕಿನ ಸಾವಿರಾರು ರೈತರನ್ನೊಳಗೊಂಡು ಕಚೇರಿ ಬಂದ್ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಹಿರೇಕುರುಬರ, ವಕ್ತಾರ ಸಿದ್ದಣ್ಣ ಚೌಧರಿ, ಶೈಲಜಾ ಸ್ಥಾವರಮಠ, ಅನ್ನಪೂರ್ಣ ಹೊಟಗಾರ, ನಿರ್ಮಲಾ ಪಟೇದ, ಸಲೀಂ ಜುಮನಾಳ, ಪುರಸಭೆ ಸದಸ್ಯ ಮಂಜುನಾಥ ಬಿಜಾಪೂರ, ಝುಲ್ಪಿಕರ್‌ಅಲಿ ಅಂಗಡಿ, ವಿಜಯ ಹೂಗಾರ, ಪರಶುರಾಮ ಕಾಂಬಳೆ, ಎಂ.ಎ. ಮುಜಾವರ, ಇಬ್ರಾಹೀಂಸಾಬ್ ನಾಟೀಕಾರ, ಸೈಫನ್ ಕರ್ಜಗಿ, ರಫೀಕ್, ಗುರು ಬಿರಾದಾರ ಮುಂತಾದವರು ಪಾಲ್ಗೊಂಡಿದ್ದರು.ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರರ ಕಚೇರಿ ಎಸ್‌ಇ ಮಲ್ಲೇಶಯ್ಯ ಪ್ರತಿಭಟನಾಕಾರರಿಂದ ಮನವಿ  ಸ್ವೀಕರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.