ಸೋಮವಾರ, ಜನವರಿ 27, 2020
28 °C

ಎಎಪಿಯ ಶೇ 11ರಷ್ಟು ಶಾಸಕರಿಗೆ ಕ್ರಿಮಿನಲ್‌ ಹಿನ್ನೆಲೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅಚ್ಚರಿಯ ಗೆಲುವು ಸಾಧಿಸಿ, ರಾಜಕೀಯ ಪಂಡಿತರ ಹುಬ್ಬೇರುವಂತೆ ಮಾಡಿರುವ ಆಮ್‌ ಆದ್ಮಿ ಪಕ್ಷದ (ಎಎಪಿ) ಶೇಕಡ 11ರಷ್ಟು ಶಾಸಕರು ಕ್ರಿಮಿನಲ್‌ ಅಪರಾಧ ಪ್ರಕರಣ ಎದುರಿಸುತ್ತಿದ್ದಾರೆ! ರಾಷ್ಟ್ರೀಯ ಚುನಾವಣಾ ಕಣ್ಗಾವಲು (ಎನ್‌ಇಡಬ್ಲ್ಯೂ) ಮತ್ತು ಅಸೋಸಿ­ಯೇಷನ್‌ ಫಾರ್‌ ಡೆಮೊಕ್ರಾಟಿಕ್‌ ರಿಫಾರ್ಮ್ಸ್‌ ಸಂಸ್ಥೆಗಳು ನಡೆಸಿದ ಸಮೀಕ್ಷೆಯಿಂದ ಇದು ಗೊತ್ತಾಗಿದೆ.



ದೆಹಲಿ ವಿಧಾನಸಭೆಗೆ ಆಯ್ಕೆಯಾಗಿರುವ ಎಲ್ಲ 70 ಶಾಸಕರ ಪ್ರಮಾಣಪತ್ರಗಳನ್ನು ಪರಿಶೀಲಿಸಿ ಈ ಮಾಹಿತಿ ಕಲೆಹಾಕಲಾಗಿದೆ. ಎಎಪಿ­ಯಿಂದ 28 ಜನ ವಿಧಾನಸಭೆಗೆ ಆಯ್ಕೆ­ಯಾಗಿದ್ದಾರೆ. ಇವರಲ್ಲಿ ಮೂರು ಮಂದಿ ಕ್ರಿಮಿನಲ್‌ ಅಪರಾಧ ಪ್ರಕರಣ ಎದುರಿಸುತ್ತಿದ್ದಾರೆ. ಬಿಜೆಪಿಯ ಶೇ 55­ರಷ್ಟು (17 ಮಂದಿ) ಶಾಸಕರು, ಕಾಂಗ್ರೆಸ್‌ನ ಶೇ 25ರಷ್ಟು (2 ಮಂದಿ) ಶಾಸಕರು ಕ್ರಿಮಿನಲ್‌ ಅಪರಾಧ ಪ್ರಕರಣ ಎದುರಿಸುತ್ತಿದ್ದಾರೆ.



ದೆಹಲಿ ವಿಧಾನಸಭೆಯ ಸದಸ್ಯರ ಸರಾಸರಿ ಆಸ್ತಿ 2008ರಲ್ಲಿ ರೂ 2.94 ಕೋಟಿ ಆಗಿತ್ತು. ಇದು ಈ ಬಾರಿ ರೂ 10.83 ಕೋಟಿಗೆ ಏರಿಕೆ ಕಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಶಾಸಕರ ಸರಾ­ಸರಿ ಆಸ್ತಿ ಕ್ರಮವಾಗಿ ರೂ 12.49 ಕೋಟಿ ಮತ್ತು ರೂ 10.25 ಕೋಟಿ. ಎಎಪಿ ಶಾಸ­ಕರ ಸರಾಸರಿ ಆಸ್ತಿ ರೂ 1.82 ಕೋಟಿ ಮಾತ್ರ.ಕ್ರಿಮಿನಲ್‌ ಅಪರಾಧ ಹಿನ್ನೆಲೆ ಹೊಂದಿರುವ ಶಾಸಕರ ಪ್ರಮಾಣ ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಕಡಿಮೆಯಾಗಿದೆ. 2008ರಲ್ಲಿ ಆಯ್ಕೆ­ಯಾದ ಶೇ 43ರಷ್ಟು ಶಾಸಕರು ಅಪ­ರಾಧ ಹಿನ್ನೆಲೆ ಹೊಂದಿದ್ದರೆ, ಈ ಬಾರಿ ಅದರ ಪ್ರಮಾಣ ಶೇ 36ಕ್ಕೆ ಇಳಿದಿದೆ.



ಮಧ್ಯಪ್ರದೇಶ: ಕ್ರಿಮಿನಲ್‌ ಹಿನ್ನೆಲೆಯ ಶಾಸಕರ ಸಂಖ್ಯೆ ಹೆಚ್ಚಳ

ಭೋಪಾಲ್ (ಪಿಟಿಐ):
ಮಧ್ಯಪ್ರದೇಶ­ದಲ್ಲಿ ನಡೆದ ವಿಧಾನಸಭಾ ಚುನಾ­ವಣೆಯಲ್ಲಿ ಆಯ್ಕೆಯಾಗಿರುವ ಕ್ರಿಮಿ­ನಲ್ ಹಿನ್ನೆಲೆಯುಳ್ಳ ಶಾಸಕರ ಸಂಖ್ಯೆ, ಕಳೆದ ಬಾರಿಗಿಂತ ಈ ಭಾರಿ ಹೆಚ್ಚಾಗಿದೆ.

ಈ ಕುರಿತ ಮಾಹಿತಿಗಳನ್ನು ರಾಷ್ಟ್ರೀಯ ಚುನಾವಣಾ ಕಾವಲು (ಎನ್‌ಇಡಬ್ಲ್ಯೂ) ಮತ್ತು ಪ್ರಜಾ­ಪ್ರಭುತ್ವ ಸುಧಾರಣಾ ಸಂಸ್ಥೆ (ಎಡಿ­ಆರ್) ಕಲೆಹಾಕಿದ್ದು, ‘ಒಟ್ಟು 71 ಶಾಸ­ಕರು ಕ್ರಿಮಿನಲ್ ಹಿನ್ನೆಲೆಯುಳ್ಳ­ವರಾಗಿದ್ದು, ಇವರಲ್ಲಿ 48 ಮಂದಿ ಬಿಜೆಪಿ ಹಾಗೂ 23 ಮಂದಿ ಕಾಂಗ್ರೆ­ಸ್‌ಗೆ ಸೇರಿದವರಾಗಿದ್ದಾರೆ. 2008ರ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಕಳಂಕಿತರ ಸಂಖ್ಯೆ ಶೇ 6ರಷ್ಟು ಹೆಚ್ಚಾಗಿದೆ’ ಎಂದು ಸಂಸ್ಥೆ ತಿಳಿಸಿದೆ.



ಅಲ್ಲದೆ,  ‘ಇವರಲ್ಲಿ 20 ಮಂದಿ ಎರಡನೇ ಬಾರಿಯೂ ಆಯ್ಕೆಯಾಗಿ ದ್ದಾರೆ. ಕ್ರಿಮಿನಲ್ ಹಿನ್ನೆಲೆ ಹೊಂದಿ­ರುವ ಈ ಕಳಂಕಿತರಿಗೆ ಸರ್ಕಾರದ ಯಾವುದೇ ಸಾಂವಿಧಾನಿಕ  ಹುದ್ದೆ­ಗಳನ್ನು ನೀಡಬಾರದು’ ಎಂದು ಮುಖ್ಯ­ಮಂತ್ರಿ ಶಿವರಾಜ್ ಸಿಂಗ್ ಚೌವಾಣ್ ಅವರನ್ನು ಎನ್‌ಇಡಬ್ಲ್ಯೂ ಮತ್ತು ಎಡಿಆರ್ ಆಗ್ರಹಿಸಿವೆ.

ಪ್ರತಿಕ್ರಿಯಿಸಿ (+)