ಶನಿವಾರ, ಮೇ 15, 2021
23 °C

ಎಚ್ಚರಿಕೆ ಯಂತ್ರ ಖರೀದಿ ಅವ್ಯವಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿ: ತಾಲ್ಲೂಕಿನ 154 ಅಂಗನವಾಡಿ ಕೇಂದ್ರಗಳಲ್ಲಿ ಇಲಿ, ಹೆಗ್ಗಣ, ಹಾವು ಮುಂತಾದ ವಿಷಜಂತುಗಳು ಬಂದರೆ ಎಚ್ಚರಿಕೆ ನೀಡುವ ಯಂತ್ರಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ.ರೂ14,900 ದರದಲ್ಲಿ ಒಂದು ಯಂತ್ರವನ್ನು ಖರೀದಿಸಲಾಗಿದೆ.

 

ಇದೇ ಯಂತ್ರ ಮಾರುಕಟ್ಟೆಯಲ್ಲಿ ಕೇವಲರೂ 3000 ಬೆಲೆ ಇದೆ. ಈಗಾಗಲೇ 154 ಅಂಗನವಾಡಿ ಕೇಂದ್ರಗಳಿಗೆ ಇಂತಹ ಯಂತ್ರಗಳನ್ನು ಸರಬರಾಜು ಮಾಡಿದ್ದು ಅವ್ಯವಹಾರ ನಡೆದಿರುವ ಬಗ್ಗೆ ತನಿಖೆ ಆಗಬೇಕೆಂದು ಪ್ರತಿಪಕ್ಷ ಸದಸ್ಯರಾದ  ಜೆ. ರಂಗನಾಥ್, ಶಂಕರ  ಪಾಟೀಲ್ ಗುರುವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಪಟ್ಟು ಹಿಡಿದರು.ಈ ಆರೋಪಕ್ಕೆ ಸಿಡಿಪಿಒ ಎ.ಜಿ. ಶಿವಪ್ರಕಾಶ್ ಉತ್ತರ ನೀಡಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಅವರ ಆದೇಶದ ಮೇರೆಗೆ ಯಂತ್ರಗಳನ್ನು ಟೆಂಡರ್ ಮೂಲಕ ಖರೀದಿಸಲಾಗಿದೆ. ಯಂತ್ರಗಳನ್ನು ಖರೀದಿ ಮಾಡಲು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯದರ್ಶಿಯವರು ಅನುಮೋದನೆ ನೀಡಿದ್ದಾರೆ. ಪಾರದರ್ಶಕವಾಗಿ ಖರೀದಿ ಮಾಡಿದ್ದು, ಯಾವುದೇ ಅವ್ಯವಹಾರ ನಡೆದಿಲ್ಲ. ಯಾವುದೇ ತನಿಖೆಗೂ ಸಿದ್ದ.

 

ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲೂ ಇದೇ ರೀತಿಯ ಯಂತ್ರಗಳನ್ನು ಖರೀದಿಸಲಾಗಿದೆ ಎಂದು ಸಭೆಗೆ ತಿಳಿಸಿದರು.ಈ ಸಂದರ್ಭದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಗ್ರಾಮ ಸ್ವರಾಜ್ ಹಾಗೂ ವಿವಿಧ ಯೋಜನೆಗಳ ಅಡಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಉತ್ತಮ ಗುಣಮಟ್ಟದಿಂದ ಕೂಡಿವೆ. ಅಭಿವೃದ್ಧಿ ಕಾರ್ಯದಲ್ಲಿ ಈ ತಾಲ್ಲೂಕು ರಾಜ್ಯದಲ್ಲಿಯೇ 2ನೇ ಸ್ಥಾನದಲ್ಲಿದೆ ಎಂದು ಕೇಂದ್ರ ಗ್ರಾಮ ಸ್ವರಾಜ್ ಹಾಗೂ ಕೇಂದ್ರ ವಿಚಕ್ಷಣ ದಳದ ಅಧಿಕಾರಿಗಳು ವರದಿ ನೀಡಿದ್ದಾರೆ.

 

ಆಡಳಿತಪಕ್ಷ ಮತ್ತು ವಿರೋಧಪಕ್ಷ ಎಂಬ ಭಾವನೆಯನ್ನು ಹೊಂದದೇ ಇಡೀ ತಾಲ್ಲೂಕಿನ ಅಭಿವೃದ್ಧಿಗೆ ಸಹಕಾರ ನೀಡಬೇಕು. ತಾಲ್ಲೂಕಿಗೆ ಬಸವ ಇಂದಿರಾ ಅವಾಸ್ ಯೋಜನೆಯಡಿ ಮತ್ತೆ 2,000 ಮನೆಗಳು ಮಂಜೂರಾಗಿದ್ದು, ಅರ್ಹ ಫಲಾನುಭವಿಗಳನ್ನು ಚುನಾಯಿತ ಪ್ರತಿನಿಧಿಗಳು ಆಯ್ಕೆ ಮಾಡಬೇಕು. ಅದೇ ರೀತಿ ಯಾವುದೇ ಇಲಾಖೆಗಳಿಗೆ ಚುನಾಯಿತ ಪ್ರತಿನಿಧಿಗಳು ಬಂದಾಗ ಅವರಿಗೆ ಅಧಿಕಾರಿಗಳು ಗೌರವವನ್ನು ಕೊಡಬೇಕು.ಸಭೆಯಲ್ಲಿ ಪರಸ್ಪರ ಮಾತಿನ ಚಕಮಕಿ ನಡೆಸದೇ ಶಾಂತಿಯಿಂದ ಚರ್ಚೆ ನಡೆಸುವ ಗುಣವನ್ನು ಸದಸ್ಯರು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.ಸಭೆಯಲ್ಲಿ ಮಾತನಾಡುವ ಬಗ್ಗೆ ಪ್ರತಿಪಕ್ಷ ಸದಸ್ಯ ಉಸ್ಮಾನ್ ಶರೀಫ್ ಹಾಗೂ ಆಡಳಿತಪಕ್ಷದ ಸದಸ್ಯರಾದ ಶಿವಕುಮಾರ್, ಕೆ.ಜಿ. ಫಾಲಾಕ್ಷಪ್ಪ, ಹಾಲೇಶಪ್ಪ, ಸಿ.ಬಿ. ನಾಗರಾಜ್, ಕೆ.ಎಚ್. ವೀರಪ್ಪ ಪರಸ್ಪರ ಮಾತಿನ ಚಕಮಕಿ ನಡೆಸಿದ್ದರಿಂದ ಸಭೆಯಲ್ಲಿ ಒಂದಿಷ್ಟು ಹೊತ್ತು ಯಾರೂ ಏನೂ ಮಾತನಾಡುತ್ತಾರೆ ಎಂಬುದು ತಿಳಿಯದಾಯಿತು.ತಾ.ಪಂ. ಅಧ್ಯಕ್ಷೆ ಈ. ಸುಧಾ ಕುಮಾರಸ್ವಾಮಿ, ಉಪಾಧ್ಯಕ್ಷ ಎನ್. ಗಣೇಶ್‌ನಾಯ್ಕ, ಇಒ ಬಿ.ಇ. ಶಿವಕುಮಾರ್ ಚರ್ಚೆಯಲ್ಲಿ ಪಾಲ್ಗೊಂಡರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.