ಶನಿವಾರ, ಜೂನ್ 6, 2020
27 °C

ಎಚ್.ಡಿ.ಕೋಟೆ: ಕೊನೆಗೂ ಸೆರೆ ಸಿಕ್ಕ ಕಾಡಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್.ಡಿ.ಕೋಟೆ: ಕೊನೆಗೂ ಸೆರೆ ಸಿಕ್ಕ ಕಾಡಾನೆ

ಎಚ್.ಡಿ.ಕೋಟೆ: ಸತತ ನಾಲ್ಕು ದಿನಗಳಿಂದ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದ್ದ ಕಾಡಾನೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶುಕ್ರವಾರ ಯಶಸ್ವಿಯಾಗಿದೆ. ಇದರಿಂದಾಗಿ ಈ ಭಾಗದ ರೈತರು, ಗ್ರಾಮಸ್ಥರು, ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.ಅರಣ್ಯ ಇಲಾಖೆಯ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ದಸರಾ ಆನೆಗಳಾದ ಅರ್ಜುನ, ಬಲರಾಮ, ಅಭಿಮಾನ್ಯು, ಮೇರಿ ಪ್ರಮುಖ ಪಾತ್ರ ವಹಿಸಿದ್ದವು.  ಇವುಗಳ ಸಹಾಯದಿಂದ ಸೆರೆ ಹಿಡಿದ ಕಾಡಾನೆಯನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಬಿಡಲಾಯಿತು. ಈ ಕಾಡಾನೆ ಗುರುವಾರ ರಾತ್ರಿ ಬೆಳಗನಹಳ್ಳಿ ಕೆರೆಯಲ್ಲಿ ಬೀಡು ಬಿಟ್ಟಿತ್ತು.

ಇಲ್ಲಿಂದ ಮೇಲೆ ಕರೆ ತರಲು ಅರಣ್ಯ ಸಿಬ್ಬಂದಿ ಸಾಕಷ್ಟು ಪ್ರಯತ್ನಿಸಿತು. ಆದರೆ ಕಾರ್ಯಾಚರಣೆ ಫಲ ಕೊಟ್ಟಿರಲಿಲ್ಲ.ಮೂರು ತಂಡ ರಚನೆ: ನಾಲ್ಕು ದಿನಗಳಿಂದ ಸತಾಯಿಸುತ್ತಿದ್ದ ಈ ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೂರು ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಕಾಡಾನೆಯ ಚಲನವಲನದ ಮೇಲೆ ತೀವ್ರ ನಿಗಾ ಇಟ್ಟಿದ್ದರು. ಆದರೂ ಗುರುವಾರ ರಾತ್ರಿ ಬೆಳಗನಹಳ್ಳಿ ಕೆರೆಯಿಂದ ಹೊರಬಂದು ಕಣ್ಮರೆಯಾಗಿತ್ತು.ಒಂದನೇ ತಂಡ ಬೆಳಗನಹಳ್ಳಿ ಕೆರೆಯ ಭಾಗದಲ್ಲಿಯೂ, ಎರಡನೇ ತಂಡ ಹೈರಿಗೆ, ಮಾದಾಪುರ, ಮಟಕೆರೆ, ಬೊಪ್ಪನಹಳ್ಳಿ ಪ್ರದೇಶದಲ್ಲಿಯೂ  ಹಾಗೂ ಮೂರನೇ ತಂಡ ವಡ್ಡರಗುಡಿ, ಹಾರೋಪುರ, ಮಲಾರ ಕಾಲೋನಿ ಭಾಗದಲ್ಲಿ ನಿಗಾ ಇಟ್ಟಿದ್ದವು. ಬೆಳಗಿನ ಜಾವ 5.30 ರಲ್ಲಿ ಮಲಾರ ಕಾಲೊನಿಯ ಸಮೀಪದ ಡಾ.ಖಾನ್‌ರವರ ತೋಟಕ್ಕೆ ಕಾಡಾನೆ ನುಗ್ಗಿದ್ದನ್ನು ಮೂರನೇ ತಂಡ ಗಮನಿಸಿತು.ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಅಧಿಕಾರಿಗಳು ಕೆರೆಯ ಸಮೀಪದಲ್ಲಿದ್ದ ಪಶುವೈದ್ಯ ಡಾ.ಪ್ರಯಾಗ್‌ ಅವರನ್ನು ಕರೆಸಿಕೊಂಡು ಅರ್ಜುನನ ಸಹಾಯದೊಂದಿಗೆ ಬೆಳಿಗ್ಗೆ 7.45ಕ್ಕೆ ಮೊದಲ ಅರಿವಳಿಕೆ ಚುಚ್ಚುಮದ್ದನ್ನು ಹಾರಿಸಿತು. ಇದರಿಂದ ತಪ್ಪಿಸಿಕೊಂಡ ಕಾಡಾನೆ   ಮುನ್ನುಗ್ಗಿತು. ಮತ್ತೊಂದು ಬಾರಿ ಹಾರಿಸಿದ ಚುಚ್ಚುಮ್ದ್ದದು ಕಾಡಾನೆಗೆ ತಗುಲಿತು.

 

ಇದರಿಂದ ಗಾಬರಿಕೊಂಡು ಜೋರಾಗಿ ಓಡುತ್ತಾ ಹಿಂದೆ ವಾಸ್ತವ್ಯ ಹೂಡಿದ ಬೆಳಗನಹಳ್ಳಿ ಕೆರೆಯತ್ತ ಹೊರಟಿತು. ಮಲಾರ ಕಾಲೊನಿಯ ಜನರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ಅಡ್ಡಗಟ್ಟಿ ಜಮೀನಿನತ್ತ ಓಡಿಸಿದರು. ಇಷ್ಟರಲ್ಲಿ ಸುಸ್ತಾಗಿದ್ದ ಕಾಡಾನೆ ನಂಜುಂಡಮೂರ್ತಿಯವರ ಅರಿಶಿಣದ ಗದ್ದೆಯಲ್ಲಿ ನೆಲಕ್ಕುರುಳಿತು.ಕೊನೆಗೂ ಸಿಕ್ಕಿತು: ಅರಣ್ಯ ಸಿಬ್ಬಂದಿ ತಕ್ಷಣ ಕಾರ್ಯ ಪ್ರವೃತ್ತರಾಗಿ ಅರ್ಜುನ, ಬಲರಾಮ ಮತ್ತು ಮೇರಿ ಹಾಗೂ ಮಾವುತ ಮಾಸ್ತಿ ಸಹಕಾರದಿಂದ ಕಾಡಾನೆಯನ್ನು ಬಂಧಿಸಿದರು. ನಂತರ ಡಾ.ಪ್ರಯಾಗ್ ಪ್ರಜ್ಞೆ ಬರುವ ಚುಚ್ಚುಮದ್ದು ನೀಡಿದರು.ಹೀಗಾಗಿ ಸ್ವಲ್ಪ ಹೊತ್ತಿನಲ್ಲೇ ಚೇತರಿಸಿಕೊಂಡು ಮೇಲಕ್ಕೆ ಎದ್ದು ನಿಂತಿತು. ಕಾಡಾನೆಯ ಕುತ್ತಿಗೆ ಮತ್ತು ಕಾಲಿಗೆ ಹಗ್ಗ ಕಟ್ಟಲಾಯಿತು. ಹಗ್ಗವನ್ನು ಮುಂಭಾಗದಿಂದ ಅರ್ಜುನ ಎಳೆದುಕೊಂಡು  ನಡೆದರೆ, ಹಿಂದಿನಿಂದ ಬಲರಾಮ ತಳ್ಳುತ್ತಿದ್ದ. ಹೀಗೆ ಸ್ವಲ್ಪದೂರ ಹೋಗುತ್ತಿದ್ದಂತೆ ಕಾಡಾನೆ ಯಾವುದೇ ತಕರಾರು ಮಾಡದೆ ಸರಾಗವಾಗಿ ಮುನ್ನಡೆಯಿತು. ಈ ದೃಶ್ಯವನ್ನು ನೋಡಲು ಜನಜಾತ್ರೆ ಸೇರಿತ್ತು.ಹಾರೋಪುರ ಮತ್ತು ಕೊಡಸೀಗೆ ತಿರುವಿನ ಬಳಿ ಈ ಆನೆಯನ್ನು ಲಾರಿಗೆ ಹತ್ತಿಸಲು ಹರಸಾಹಸ ಮಾಡಬೇಕಾಯಿತು. ಬಲರಾಮ ಕಾಡಾನೆಯ  ಕಾಲಿಗೆ ಕಟ್ಟಿದ್ದ ಹಗ್ಗವನ್ನು ಸೊಂಡಿಲಿನಲ್ಲಿ ಹಿಡಿದು ಎಳೆಯುವ ಮೂಲಕ ಲಾರಿಯನ್ನು ಹತ್ತಿಸಿದ.ಅರಿವಳಿಕೆ ಚುಚ್ಚುಮದ್ದು ಮತ್ತು ಪ್ರಜ್ಞೆ ಬರುವ ಚುಚ್ಚುಮದ್ದು ನೀಡಿದ್ದರಿಂದ ಆನೆಯ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿತ್ತು. ಆದ್ದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ನೀರು ಹಾರಿಸುವ ಮೂಲಕ ತಂಪುಗೊಳಿಸಿತು.ಸಿಎಫ್ ಮಾರ್ಕಂಡಯ್ಯ ಮಾರ್ಗದರ್ಶನದಲ್ಲಿ, ಡಿಸಿಎಫ್ ಮನೋಜ್‌ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಸ್ಥಳಕ್ಕೆ ತಹಶೀಲ್ದಾರ್ ಎನ್.ಸಿ.ಜಗದೀಶ್, ಕಂದಾಯ ನಿರೀಕ್ಷಕ ಸಣ್ಣರಾಮಪ್ಪ, ಎಸಿಎಫ್‌ಗಳಾದ ತಮ್ಮಯ್ಯ, ಚಂದ್ರಶೇಖರ್, ಸಿಪಿಐ ಮಲ್ಲಿಕ್, ಪಿಎಸ್‌ಐ  ನಟರಾಜು, ನಂಜಪ್ಪ, ನವೀನ್ ಹಾಗೂ ಆರ್‌ಎಫ್‌ಒ ಪ್ರವೀಣ್‌ಕುಮಾರ್, ಸಂತೋಷ್‌ನಾಯಕ್, ಮಾವುತ ಅಕ್ರಂ, ಅಂತರಸಂತೆ, ಬಳ್ಳೆ,  ಮೇಟಿಕುಪ್ಪೆ ಹಾಗೂ ಇತರ ವಲಯದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.