ಭಾನುವಾರ, ಜನವರಿ 26, 2020
18 °C

ಎಚ್‌ಡಿಕೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ವಿಧಾನಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕರ ಸ್ಥಾನಮಾನ ನೀಡಲಾಗಿದೆ ಎಂದು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಘೋಷಿಸಿದರು.ಬಿಜೆಪಿ, ಜೆಡಿಎಸ್ ಸದನದಲ್ಲಿ ಸಮಬಲ ಹೊಂದಿವೆ. ಜೆಡಿಎಸ್‌ನ 40 ಶಾಸಕರು ಪಡೆದಿರುವ ಮತಗಳು, ಬಿಜೆಪಿ ಶಾಸಕರ ಮತಗಳಿಗಿಂತ ಹೆಚ್ಚಾಗಿವೆ. ಹೀಗಾಗಿ ನಿಯಮಾವಳಿ ಪ್ರಕಾರ ಜೆಡಿಎಸ್‌ಗೆ ಅಧಿಕೃತ ವಿರೋಧ ಪಕ್ಷದ ಮಾನ್ಯತೆ ನೀಡಲಾಗಿದೆ ಎಂದು ತಿಮ್ಮಪ್ಪ ಅವರು ಶುಕ್ರವಾರ ಸದನದಲ್ಲಿ ಪ್ರಕಟಿಸಿದರು.ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಕುಮಾರಸ್ವಾಮಿ ಆಯ್ಕೆಯಾಗಿರುವ ಪತ್ರವನ್ನು ಆ ಪಕ್ಷದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ ನೀಡಿದ್ದಾರೆ. ಅದನ್ನು ಆಧರಿಸಿ ಕುಮಾರಸ್ವಾಮಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಲಾಗಿದೆ ಎಂದರು.ಜಗದೀಶ್ ಶೆಟ್ಟರ್ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ, ಆರ್. ಅಶೋಕ ಅವರು ಉಪ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅದೇ ರೀತಿ ಬಿ.ಎಸ್.ಯಡಿಯೂರಪ್ಪ ಅವರು ಕೆಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಹಾಗೂ ಬಿ.ಆರ್.ಪಾಟೀಲ ಅವರು ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ಸದನಕ್ಕೆ ತಿಳಿಸಿದರು.ಸಂಬಳ ಪಡೆಯಲ್ಲ: ಹಿಂದೆ ಸಚಿವರಾಗಿದ್ದಾಗಲೂ ವೇತನ ಪಡೆದಿರಲಿಲ್ಲ. ಈಗ ಶಾಸಕನಾಗಿಯೂ ವೇತನ ಪಡೆಯುವುದಿಲ್ಲ ಎಂದು ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ತಿಳಿಸಿದರು. ಅನಾವಶ್ಯಕ ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಅಧ್ಯಯನದ ಹೆಸರಿನಲ್ಲಿ ವಿದೇಶ ಪ್ರವಾಸ ಹೋಗುವುದು ಸರಿಯಲ್ಲ. ಅದರಿಂದ ಉಪಯೋಗ ಆಗುವುದಿಲ್ಲ ಎಂದು ಅವರು ಸಲಹೆ ಮಾಡಿದರು.

ಪ್ರತಿಕ್ರಿಯಿಸಿ (+)