ಬುಧವಾರ, ಮಾರ್ಚ್ 3, 2021
21 °C

ಎಡಿಜಿಪಿ ವರ್ಗಾವಣೆ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಡಿಜಿಪಿ ವರ್ಗಾವಣೆ ಖಂಡಿಸಿ ಪ್ರತಿಭಟನೆ

ಬೆಂಗಳೂರು: ಎಡಿಜಿಪಿ ರವೀಂದ್ರನಾಥ್ ವರ್ಗಾವಣೆ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಸದಸ್ಯರು ನಗರದ ಪುರಭವನದ ಬಳಿ ಶನಿವಾರ ಪ್ರತಿಭಟನೆ ಮಾಡಿದರು.ದಲಿತ ಸಂಘರ್ಷ ಸಮಿತಿ, ಪ್ರಜಾ ಪರಿವರ್ತನಾ ವೇದಿಕೆ, ರಾಜ್ಯ ಜನಾಂದೋಲನ ಸಂಘಟನೆ ಹಾಗೂ ಸಮತಾ ಸೈನಿಕ ದಳದ ಕಾರ್ಯಕರ್ತರು ಬೆಳಿಗ್ಗೆ 11.30ರ ಸುಮಾರಿಗೆ ಪುರಭವನದ ಮುಂದೆ ಜಮಾಯಿಸಿ ಸರ್ಕಾರದ ಆದೇಶದ ವಿರುದ್ಧ ಘೋಷಣೆಗಳನ್ನು ಕೂಗಿದರು.ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಮಾರಪ್ಪ, ‘ಎಡಿಜಿಪಿ ರವೀಂದ್ರನಾಥ್ ಅವರು ಕೆಎಸ್‌ಆರ್‌ಪಿ ಎಡಿಜಿಪಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ಅವರು ಇಲಾಖೆಯ ಉನ್ನತ ಹುದ್ದೆಗೆ ಹೋಗುವವರಿದ್ದರು. ಅವರ ಈ ಯಶಸ್ಸನ್ನು ಸಹಿಸದ ಕಮಿಷನರ್‌ ರಾಘವೇಂದ್ರ ಔರಾದಕರ್‌, ಡಿಸಿಪಿ ಬಿ.ಆರ್.ರವಿಕಾಂತೇಗೌಡ ಹಾಗೂ ಹೈಗ್ರೌಂಡ್ಸ್‌ ಎಸ್‌ಐ ರವಿ ಅವರ ಮೂಲಕ ಎಡಿಜಿಪಿ ವಿರುದ್ಧ ಷಡ್ಯಂತ್ರ ಮಾಡಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.‘ಕಮಿಷನರ್‌, ಡಿಸಿಪಿ ಹಾಗೂ ಎಸ್‌ಐ ಅವರು ರವೀಂದ್ರನಾಥ್‌ ಅವರನ್ನು ಅಸ್ಪೃಶ್ಯನಂತೆ ನಡೆಸಿಕೊಂಡಿದ್ದಾರೆ. ಅವರ ವಿರುದ್ಧ ರವೀಂದ್ರನಾಥ್‌, ಪರಿಶಿಷ್ಟ ಜಾತಿ ಮತ್ತು ಪಂಗಡದವರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ–1989ರ ಅನ್ವಯ ಕಬ್ಬನ್‌ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆ ಮೂವರನ್ನು ಕೂಡಲೇ ಬಂಧಿಸಬೇಕು’ ಎಂದು ಆಗ್ರಹಿಸಿದರು.ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಗೋಪಾಲ್, ‘ರವೀಂದ್ರನಾಥ್‌ ಅವರನ್ನು ಇಲಾಖೆಯಲ್ಲಿ ಮೂಲೆ ಗುಂಪು ಮಾಡುವ ಪ್ರಯತ್ನ ನಡೆಯುತ್ತಿದೆ. ಸರ್ಕಾರ, ವರ್ಗಾವಣೆ ಆದೇಶವನ್ನು ಹಿಂಪಡೆದು ಕೆಎಸ್‌ಆರ್‌ಪಿ ಎಡಿಜಿಪಿಯಾಗಿ ಅವರನ್ನೇ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

ನಂತರ ಗೃಹಸಚಿವ ಕೆ.ಜೆ.ಜಾರ್ಜ್‌ ಅವರನ್ನು ಭೇಟಿ ಮಾಡಿದ ಪ್ರತಿಭಟನಾಕಾರರು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.ಈ ವೇಳೆ ಮಾತನಾಡಿದ ಜಾರ್ಜ್‌, ‘ಪ್ರಕರಣದ ತನಿಖೆಯನ್ನು ಸದ್ಯ ಸಿಐಡಿ  ಅಧಿಕಾರಿಗಳು ನಡೆಸುತ್ತಿದ್ದಾರೆ. ಅವರು ವರದಿ ಸಲ್ಲಿಸಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.