ಶನಿವಾರ, ಏಪ್ರಿಲ್ 17, 2021
22 °C

ಎತ್ತ ಸಾಗುತ್ತಿದೆ ಪತ್ರಿಕೋದ್ಯಮ ಶಿಕ್ಷಣ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓದಿಗೆ ತಕ್ಕದಾದ ಕೆಲಸ ಅಥವಾ ಕೆಲಸಕ್ಕೆ ತಕ್ಕದಾದ ಓದಿನ ಬಗ್ಗೆ ಚಿಂತಿಸುವ ಹೆಚ್ಚಿನ ಯುವಕ ಯುವತಿಯರು ಪತ್ರಿಕೋದ್ಯಮವನ್ನು ಆರಿಸಿ ಕೊಳ್ಳುವುದು ಇತ್ತೀಚಿನ ಪ್ರವೃತ್ತಿಯಾಗಿ ಬೆಳೆದು ಬಂದಿದೆ. ವೃತ್ತಿ ಬದುಕಿನ ಐಷಾರಾಮಿ ಕನಸು ಕಾಣುವ ಯುವಕ ಯುವತಿಯರಿಗೆ ಪತ್ರಕರ್ತನ ಕೆಲಸ ವೃತ್ತಿಯಲ್ಲ ಸನ್ಯಾಸತ್ವ ಎಂಬ ಪರಿವೇ ಇರುವುದಿಲ್ಲ.ಅಸಲಿಗೆ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯ ಕಲಿಸುವುದಾದರೂ ಏನನ್ನು? ಪತ್ರಿಕೋದ್ಯಮ ಪಠ್ಯ ಕ್ರಮಗಳು ಕೆಲಸಕ್ಕೆ ಸೇರಿದ ನಂತರ ಉಪಯೋಗಕ್ಕೆ ಬರುವುದಾದರೂ ಎಷ್ಟರ ಮಟ್ಟಿಗೆ? ಎಂಬ ಪ್ರಶ್ನೆಗಳಿಗೆ ಭವಿಷ್ಯದಲ್ಲಿ ಪತ್ರಕರ್ತನ ವೃತ್ತಿ ನಿರ್ವಹಿಸಿದ ನಂತರವೇ ಅನುಭವಕ್ಕೆ ಬರುತ್ತದೆ.

 ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತುಕೊಡದ ವಿಶ್ವವಿದ್ಯಾಲಯಗಳು ಪತ್ರಿಕೋದ್ಯಮ ಶಿಕ್ಷಣವನ್ನು ಕೇವಲ ಪಠ್ಯ ಕ್ರಮಕ್ಕಷ್ಟೇ ಸೀಮಿತಗೊಳಿಸಿವೆ. ಭವಿಷ್ಯದಲ್ಲಿ ಕೆಲಸಕ್ಕೆ ಸೇರುವ ವಿದ್ಯಾರ್ಥಿಗಳಿಗೆ ತಾವು ಓದಿದ ಓದಿಗೂ ಮಾಡುತ್ತಿರುವ ಕೆಲಸಕ್ಕೂ ಇರುವ ನಂಟಾದರೂ ಏನು ಎಂಬ ಅಚ್ಚರಿ ಎದುರಾಗುವುದಂತೂ ಖಂಡಿತ.ಕೆಲವರಿಗಂತೂ ಕೊನೆಗೆ ಏನೂ ಕೆಲಸ ಸಿಗದಾಗ ಪಾಠ ಮಾಡಿದ  ಗುರುಗಳಿಗೆ ಮನಸಲ್ಲೇ ಬೈದು ಕಾಲ್‌ಸೆಂಟರ್ ಇತ್ಯಾದಿ ಕಂಪನಿಗಳಲ್ಲಿ ಕೆಲಸ ನಿರ್ವಹಿಸುವುದಂತೂ ವಾಡಿಕೆಯಾಗಿದೆ.  ಎಲ್ಲೋ ಹಳ್ಳಿಗಾಡಿನ ಪರಿಸರದಲ್ಲಿ ಬೆಳೆದ ಮುಗ್ಧ ಹುಡುಗನಿಂದ ಹಿಡಿದು ನಗರ ಪ್ರದೇಶದಲ್ಲಿ ಹೈಫೈ ಲೈಫ್ ಅನ್ನು ಸವಿಯುವ  ಯುವಕ ಯುವತಿಯರನ್ನು ಪತ್ರಿಕೋದ್ಯಮ ಆಕರ್ಷಿಸುತ್ತದೆ. ಆದರೆ, ವಿಶ್ವವಿದ್ಯಾಲಯಗಳ ಕಲಿಕೆಯ ಮಾರ್ಗದಿಂದಾಗಿ ವಿದ್ಯಾರ್ಥಿಗಳ ಭವಿಷ್ಯದಲ್ಲಿ ದುಃಖಿಸುತ್ತಿದ್ದಾರೆ.ನಿಜಕ್ಕೂ ಪತ್ರಿಕೋದ್ಯಮ ಸುಗಮ ಹಾದಿಯಲ್ಲ, ಅದೊಂದು ದುರ್ಗಮ ದಾರಿ, ಈ ವೃತ್ತಿ ಆರಿಸಿಕೊಳ್ಳವ ಮುನ್ನ ನೂರು ಬಾರಿ ಯೋಚಿಸಿ ಎಂದು ಪದೇ ಪದೇ ಹೆದರಿಸುವ ಅತಿಥಿ ಉಪನ್ಯಾಸಕರ ನುಡಿಗಳು ಪತ್ರಕರ್ತರಾಗುವ ವಿದ್ಯಾರ್ಥಿಗಳ ಆಸೆಯನ್ನು ಚಿವುಟುತ್ತದೆ. ಆದರೆ, ಇದಕ್ಕೆ ಎದೆ ಗುಂದದ ಕೆಲವರಷ್ಟೇ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮುಂದುವರೆಯುತ್ತಾರೆ.ಪತ್ರಿಕೋದ್ಯಮ ಕಲಿಯುವ ವಿದ್ಯಾರ್ಥಿಗಳಿಗೆ ಕೇವಲ ಪಾಠ ಮಾಡುವ ಗುರುಗಳು ಬೇಕಿಲ್ಲ; ಬದಲಾಗಿ ಮಾರ್ಗದರ್ಶನ ತೋರುವ ಪ್ರಾಯೋಗಿಕ ಚಿಂತನೆಯುಳ್ಳ ಗುರುಗಳ ಅಗತ್ಯತೆ ಇದೆ. ಕೇವಲ ಪುಸ್ತಕದ ಹುಳುಗಳನ್ನಾಗಿ ಮಾಡುವ ಪ್ರಾಧ್ಯಾಪಕರು ಬದಲಾದರೆ ವಿದ್ಯಾರ್ಥಿಗಳ ಜೀವನ ಹಸನಾಗುವುದರಲ್ಲಿ ಸಂಶಯವಿಲ್ಲ.ನೆಟ್ ತ್ರಿವಿಕ್ರಮರ ಅಟ್ಟಹಾಸ:  ಕೆಲ ನೆಟ್ ತ್ರಿವಿಕ್ರಮ ಶಿಕ್ಷಕರಿದ್ದಾರೆ. ಅಂತರ್ಜಾಲದಲ್ಲಿ ಕಲೆಹಾಕಿದ ಮಾಹಿತಿಗಳನ್ನೇ ವಿದ್ಯಾರ್ಥಿಗಳಿಗೆ ಟಿಪ್ಪಣಿ ಬರೆಸುವಂಥ ನಿಪುಣರಿವರು. ಐದು ವರ್ಷದ ಮಗು ಕೂಡ ಅಂತರ್ಜಾಲ ವೀಕ್ಷಿಸುವ ಕಾಲದಲ್ಲಿ ಇವರ ಬೋಧನಾ ಕ್ರಮ ನಿಜಕ್ಕೂ ಉತ್ತಮ ರ್ಮಾರ್ಗವಲ್ಲ. ಮತ್ತೆ ಕೆಲವರಿದ್ದಾರೆ ಕಳೆದ ಹತ್ತು ವರ್ಷದಿಂದ ಇವರು ಕೂಡಿಟ್ಟ ನೋಟ್ಸ್‌ಗಳು ಪರಿಷ್ಕೃತವೇ ಗೊಂಡಿಲ್ಲ. ಈ ಎರಡೂ ಗುಂಪಿನವರು ನೀಡುವ ಟಿಪ್ಪಣಿಗಳಿಂದ ಆಗುವ ಪ್ರಯೋಜವಾದರೂ ಏನು? ಇವರ ಈ ಜಂಜಾಟಗಳ ನಡುವೆಯೇ ವಿದ್ಯಾರ್ಥಿಗಳು ದಿಕ್ಕು ತಪ್ಪುತ್ತಿದ್ದಾರೆ.      ಹೀಗೊಂದು ಪ್ರಶ್ನೆ...

ಭಾರತೀಯ ಪತ್ರಿಕೋದ್ಯಮದ ಪಿತಾಮಹನೆಂದು ಕರೆಯಲಾಗುವ ಜೇಮ್ಸ್ ಅಗಸ್ಟಸ್ ಹೀಕಿಯನ್ನು ಬ್ರಿಟಿಷರು ಬಂಧನದಲ್ಲಿಟ್ಟಾಗಲೂ ಆತ ಪತ್ರಿಕೋದ್ಯಮವನ್ನು ಕೈ ಬಿಡಲಿಲ್ಲ ಎಂದು ಶಿಕ್ಷಕಿಯೊಬ್ಬರು ಹೇಳುತ್ತಿದ್ದರು. ಚಕ್ಕನೆ ಎದ್ದುನಿಂತ ವಿದ್ಯಾರ್ಥಿಯೊಬ್ಬ ಹೀಕಿಗೆ ಜೈಲಿನಲ್ಲಿ ಬರಹ ಸಾಮಗ್ರಿ ಒದಗಿಸುತ್ತಿದ್ದವರು ಯಾರು? ಆ ಪತ್ರಿಕೆ ಮುದ್ರಣವಾಗುತ್ತಿದ್ದುದಾದರೂ ಹೇಗೆ? ಎಂದು ಪ್ರಶ್ನಿಸಿದ. ಕಕ್ಕಾಬಿಕ್ಕಿಯಾದ ಆ ಮೇಡಂ ಮರುದಿನ ಉತ್ತರಿಸುತ್ತೇನೆಂದು ಹೇಳಿದರಾದರೂ ಮತ್ತೊಮ್ಮೆ ಆ ಪ್ರಶ್ನೆ ಕೇಳಿದಾಗ ಮಾತು ಮರೆಸಿದರು.ಅಶ್ಲೀಲ ನಗೆ ಚಟಾಕಿ ಹಾರಿಸಿದ ಪ್ರಾಧ್ಯಾಪಕ

ಪತ್ರಿಕೋದ್ಯಮ ಕಲಿಸಬೇಕಾದ ಶಿಕ್ಷಕ ಮಹಾಶಯರೊಬ್ಬರು ಸ್ಟ್ರೀಕ್ ಹೆಡ್ ಲೈನ್ ಬಗ್ಗೆ ಪಾಠ ಮಾಡುತ್ತಿದ್ದರು. ಪಾಠದ ಮಧ್ಯೆ ಜೋಕಿಗಾಗಿ ಸ್ಟ್ರೀಕ್ ಹೆಡ್‌ಲೈನ್ ಆಕಾರವು ಹೆಣ್ಣು ಮಕ್ಕಳ ದೇಹ ರಚನೆಯಂತಿರುತ್ತದೆ ಎಂದು ಅಶ್ಲೀಲ ನಗೆ ಚಟಾಕಿ ಹಾರಿಸಿ ಅವರೇ ನಕ್ಕರು. ತುಂಬಿದ ತರಗತಿಯಲ್ಲಿ ಹೀಗೆ ಅನುಚಿತವಾಗಿ ವರ್ತಿಸಿದರೂ ಕೇಳುವ ಧೈರ್ಯ ನಮಗ್ಯಾರಿಗೂ ಇರಲಿಲ್ಲ.

      

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.