ಗುರುವಾರ , ಜನವರಿ 30, 2020
20 °C
ಸಂಕಷ್ಟದಲ್ಲಿ ರೈತ ; ಕಡಿಮೆ ಬೆಲೆಗೆ ವರ್ತಕರಿಗೆ ಮಾರಾಟ

ಎಪಿಎಂಸಿಗಳಲ್ಲಿ ಆರಂಭವಾಗದ ಖರೀದಿ ಕೇಂದ್ರ

ಪ್ರಜಾವಾಣಿ ವಾರ್ತೆ/ ಸಿ.ಕೆ.ಮಹೇಂದ್ರ Updated:

ಅಕ್ಷರ ಗಾತ್ರ : | |

ತುಮಕೂರು:  ಬೆಲೆ ಕುಸಿತದಿಂದ ಕಂಗಾಲಾಗಿ­ರುವ ರೈತರಿಂದ ಕೇಂದ್ರ ಸರ್ಕಾರ ನಿಗದಿ ಪಡಿಸಿದ ಬೆಂಬಲ ಬೆಲೆಯಲ್ಲಿ ರಾಗಿ, ಭತ್ತ, ಮೆಕ್ಕೆಜೋಳ, ಬಿಳಿಜೋಳ ಖರೀದಿಸಲು ಜಿಲ್ಲೆಯ ಎಪಿಎಂಸಿಗಳಲ್ಲಿ ಈವರೆಗೂ ಖರೀದಿ ಕೇಂದ್ರಗಳು ಆರಂಭವಾಗಿಲ್ಲ.ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ಗುಬ್ಬಿ, ತಿಪಟೂರು, ಚಿಕ್ಕ­ನಾಯಕನಹಳ್ಳಿ, ತುಮಕೂರು, ಶಿರಾ ಎಪಿಎಂಸಿ­ಯಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಕಳೆದ ವಾರ ಪತ್ರಿಕಾ ಪ್ರಕಟಣೆ ನೀಡಿದ್ದರೂ ಖರೀದಿ ಕೇಂದ್ರಗಳು ಆರಂಭ­ವಾಗಿಲ್ಲ. ಖರೀದಿ ಕೇಂದ್ರ ಎಲ್ಲಿ ತೆರೆಯಲಾಗಿದೆ ಎಂದು ಹುಡುಕಾಟ ನಡೆಸಬೇಕಾಗಿದೆ.ರಾಗಿ ಕ್ವಿಂಟಲ್‌ಗೆ ಕನಿಷ್ಠ ಬೆಂಬಲ ಬೆಲೆ ರೂ. 1500, ಸಹಾಯಧನ ₨ 300 ಸೇರಿ 1800ಕ್ಕೆ ಖರೀದಿಸಬೇಕು. ಬಿಳಿ ಜೋಳಕ್ಕೆ ₨ 1800, ಮೆಕ್ಕೆ ಜೋಳಕ್ಕೆ ₨ 1600 ನೀಡಿ ಖರೀದಿಸಬೇಕಾಗಿದೆ.ಸೋಮವಾರ ತುಮಕೂರು ಎಪಿಎಂಸಿಯಲ್ಲಿ ಉತ್ತಮ ಗುಣಮಟ್ಟದ ಕ್ವಿಂಟಲ್‌ ರಾಗಿ ಬೆಲೆ ₨ 1400–1450ರ ಆಸುಪಾಸಿನಲ್ಲಿತ್ತು. ಮೆಕ್ಕೆಜೋಳ ಕ್ವಿಂಟಲ್‌ಗೆ ₨ 1150–1300 ಇತ್ತು. ಖರೀದಿ ಕೇಂದ್ರದ ಆಸೆಹೊತ್ತು ಬಂದಿದ್ದ ರೈತರು ಕಡಿಮೆ ಬೆಲೆಗೆ ವರ್ತಕರಿಗೆ ಮಾರುವಂತಾಯಿತು.ಖರೀದಿ ಕೇಂದ್ರ ಆರಂಭಿಸಿರುವ ಕುರಿತು ರೈತರಿಗೆ ಜಾಗೃತಿ ಮೂಡಿಸಬೇಕು. ಅಲ್ಲದೇ ಖರೀದಿ ಮಾಡುತ್ತಿರುವ ಕುರಿತು ಎಪಿಎಂಸಿ ಆವರಣದಲ್ಲಿ ಬ್ಯಾನರ್‌, ಫಲಕ ಹಾಕಬೇಕು. ಆದರೆ ಇದರಿಂದ ಇಲಾಖೆ ದೂರ ಸರಿದು ರೈತರನ್ನು ಕತ್ತಲಿಗೆ ನೂಕುವ ಮೂಲಕ ವ್ಯಾಪಾರಿಗಳಿಗೆ ಅನುಕೂಲ  ಮಾಡಿಕೊಡುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.‘ಖರೀದಿ ಕೇಂದ್ರ ಇನ್ನೂ ಪ್ರಾರಂಭಿಸಿಲ್ಲ. ಆಹಾರ ಮತ್ತು ನಾಗರಿಕ ಸರಬರಾಜು ನಿಗ­ಮದ ಅಧಿಕಾರಿಗಳು ಸೋಮವಾರವಷ್ಟೆ ಎಪಿ­ಎಂಸಿಗೆ ಭೇಟಿ ನೀಡಿದ್ದು ಗೋದಾಮು, ಜಾಗ ಒದಗಿಸಲಾಗಿದೆ’ ಎಂದು ತಿಪಟೂರು ಎಪಿಎಂಸಿ ಕಾರ್ಯದರ್ಶಿ ನ್ಯಾಮಗೌಡ ತಿಳಿಸಿದರು.‘ಖರೀದಿ ಕೇಂದ್ರ ಆರಂಭಿಸಲಾಗಿದೆ. ಆದರೆ ರಾಗಿ, ಮೆಕ್ಕೆ ಜೋಳ ಮಾರುಕಟ್ಟೆಗೆ ಬರುತ್ತಿಲ್ಲ.  ಖರೀದಿ ಕೇಂದ್ರ ಪ್ರಾರಂಭಿಸಿರುವ ಕಡೆ ಬ್ಯಾನರ್‌, ಫಲಕ ಹಾಕಿಲ್ಲ. ನಾಳೆ ಹಾಕಿಸಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಇಲಾಖೆ ಉಪ ನಿರ್ದೇಶಕ ಕೆ.ರಾಮಪ್ಪ ತಿಳಿಸಿದರು.‘ಖರೀದಿ ಕೇಂದ್ರ ಆರಂಭಿಸಿಲ್ಲ. ಪ್ರಾರಂಭಿ­ಸಿದ್ದರೆ ರಾಗಿ, ಮೆಕ್ಕೆಜೋಳದ ಬೆಲೆ ಹೆಚ್ಚಾ­ಗುತಿತ್ತು. ಯಾಕಾಗಿ ಖರೀದಿ ಕೇಂದ್ರ ಆರಂಭಿಸಿಲ್ಲ ಎಂಬುದು ತಿಳಿದಿಲ್ಲ’ ಎಂದು ತುಮಕೂರು ಎಪಿಎಂಸಿ ಕಮೀಷನ್‌ ಏಜೆಂಟರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.‘ಶಿರಾದಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದೆ ಎಂದು ಹೇಳಲಾಗುತ್ತಿದೆ. ತುಮಕೂರು ಎಪಿಎಂಸಿಯಲ್ಲಿ ಗುರುವಾರದಿಂದ ರಾಗಿ ಖರೀದಿ ಕೇಂದ್ರ ಆರಂಭಿಸಲಾಗುವುದು. ಮೆಕ್ಕೆಜೋಳ ಖರೀದಿ ಮಾಡುತ್ತಿಲ್ಲ. ರಾಜ್ಯ ಕೃಷಿ ಮಾರುಕಟ್ಟೆ ಸಮಿತಿಯಿಂದ ಆದೇಶ ಬಾರದ ಕಾರಣ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿ­ಸಲು ಸಾಧ್ಯವಿಲ್ಲ.ಮೆಕ್ಕೆಜೋಳ ಖರೀದಿಗೆ ಹಣ ಕೂಡ ಬಿಡುಗಡೆಯಾಗಿಲ್ಲ’ ಎಂದು ತುಮ­ಕೂರು–ಕೊರಟಗೆರೆ ಎಪಿಎಂಸಿ ಅಧ್ಯಕ್ಷ ಗೂಳೂರು ಶಿವಕುಮಾರ್‌ ತಿಳಿಸಿದರು.‘ಖರೀದಿ ಕೇಂದ್ರ ತೆರೆಯಲು ಬೇಕಾದ ಎಲ್ಲ ಸೌಲಭ್ಯ ನೀಡುವುದಾಗಿ ಆಹಾರ ಮತ್ತು ನಾಗರಿಕ ಇಲಾಖೆಗೆ ಈಗಾಗಲೇ ಪತ್ರ ಬರೆಯ­ಲಾಗಿದೆ. ಆದರೆ ಇನ್ನೂ ತೆರೆದಿಲ್ಲ’ ಎಂದು ಅವರು ಹೇಳಿದರು.ರಾಗಿ, ಮೆಕ್ಕೆ ಜೋಳ ಎಪಿಎಂಸಿಗೆ ಬರುತ್ತಿಲ್ಲ ಎಂದು ಆಹಾರ ಮತ್ತು ನಾಗರಿಕ ಇಲಾಖೆ ಉಪ ನಿರ್ದೇಶಕ ಕೆ.ರಾಮಪ್ಪ ವಾದ ಮಂಡಿಸುತ್ತಾರೆ. ಆದರೆ ತುಮಕೂರು ಎಪಿಎಂಸಿ ಒಂದರಲ್ಲೆ ಸೋಮವಾರ ವರದಿಯಾಗಿರುವಂತೆ 250 ಕ್ವಿಂಟಲ್‌ ರಾಗಿ ಮತ್ತು 100 ಕ್ವಿಂಟಲ್‌ ಮೆಕ್ಕೆ­ಜೋಳ ಮಾರಾಟವಾಗಿದೆ ಎಂದು ಶಿವಕುಮಾರ್ ತಿಳಿಸಿದರು.ಬದ್ಧತೆ ಇಲ್ಲದ ಸರ್ಕಾರ

ಸರ್ಕಾರ ಹೇಳುವುದು ಒಂದು, ಮಾಡುವುದು ಇನ್ನೊಂದು ಆಗಿದೆ. ಸರ್ಕಾರಕ್ಕೆ ಬದ್ಧತೆ ಇಲ್ಲ. ಬಾಯಲ್ಲಿ ಮಾತ್ರ ರೈತರ ಪರವಿದೆ. ಸರ್ಕಾರದ ಮೇಲೆ ಇಟ್ಟಿರುವ ಭರವಸೆ ಸುಳ್ಳಾಗುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆ.

–ಬಿ.ಉಮೇಶ್‌, ಮುಖಂಡರು, ಕರ್ನಾಟಕ ಪ್ರಾಂತ ರೈತ ಸಂಘಕೂಡಲೇ ಆರಂಭಿಸಲಿ

ಮೂರು ವರ್ಷಗಳ ನಿರಂತರ ಬರದ ಕಾರಣ ಜಿಲ್ಲೆಯ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ಹಣ ಇಲ್ಲದೆ ಸಾಕಷ್ಟು ರೈತರು ರಾಗಿ ಕಟಾವು ಮಾಡಲು ಸಾಧ್ಯವಿಲ್ಲದೆ ಹೊಲದಲ್ಲೇ ಬಿಟ್ಟಿದ್ದಾರೆ. ಹಳೆ ರಾಗಿ ಮಾರಾಟ ಮಾಡಿ ಹೊಲ ಕಟಾವು ಮಾಡುವಂತ ಪರಿಸ್ಥಿತಿಯಿದೆ. ಹಳ್ಳಿ, ಮಾರುಕಟ್ಟೆಯಲ್ಲಿ ಒಳ್ಳೆಯ ಗುಣಮಟ್ಟದ ರಾಗಿ 1500ಕ್ಕೆ ಕೊಳ್ಳುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಖರೀದಿ ಕೇಂದ್ರ ಆರಂಭಿಸಬೇಕು.

–ಗೋಪಾಲಪ್ಪ, ಪ್ರಗತಿಪರ ಕೃಷಿಕರು, ತೋವಿನಕೆರೆ

ಪ್ರತಿಕ್ರಿಯಿಸಿ (+)