ಭಾನುವಾರ, ಜೂನ್ 13, 2021
25 °C

ಎರಡನೇ ದಿನವೂ ಸದನದಲ್ಲಿ ಸದ್ದು ಮಾಡಿದ ತೆಲಂಗಾಣ ವಿವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

ನವದೆಹಲಿ, (ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮತ್ತು ಸಂಸದರ ಬಗ್ಗೆ ಅಣ್ಣಾ ತಂಡದ ಅವಮಾನಕರ ಹೇಳಿಕೆಗಳನ್ನು ಸದನದಲ್ಲಿ ಪ್ರಸ್ತಾಪಿಸಿದ ಸಂಸದರು, ಮಂಗಳವಾರ ಆರಂಭವಾದ ಲೋಕಸಭೆಯ ಎರಡನೇ ದಿನದ ಕಲಾಪದಲ್ಲಿ ಕೋಲಾಹಲ ಉಂಟುಮಾಡಿದಾಗ ಮಧ್ಯಾಹ್ನದವರಗೆ ಕಲಾಪವನ್ನು ಮುಂದೂಡಬೇಕಾಯಿತು.

ಬೆಳಿಗ್ಗೆ ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ, ತೆಲಂಗಾಣ ಪ್ರದೇಶದಿಂದ ಆಯ್ಕೆಯಾಗಿರುವ ಕಾಂಗ್ರೆಸ್  ಮತ್ತು ಟಿಆರ್ ಎಸ್ ಪಕ್ಷದ ಸಂಸದರು ಪ್ರತ್ಯೇಕ ತೆಲಂಗಾಣ ರಚನೆಗೆ ಆಗ್ರಹಿಸತೊಡಗಿದರು. 

ಈಚೆಗೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾದ ಕಾಂಗ್ರೆಸ್ ಸದಸ್ಯ  ಕೆ ಜಯಪ್ರಕಾಶ್ ಹೆಗ್ಡೆ ಅವರು ಪ್ರಮಾಣ ವಚನ ಸ್ವೀಕರಿಸಬೇಕಿದೆ ಎಂದು ಸಭಾಧ್ಯಕ್ಷೆ ಮೀರಾಕುಮಾರಿ ಅವರ ಮನವಿಗೆ ಸಮ್ಮತಿಸಿದ ಆ ಸದಸ್ಯರು, ಪ್ರಮಾಣ ವಚನ ಸ್ವೀಕಾರ ವಿಧಿ ಮುಗಿಯುತ್ತಿದ್ದಂತೆಯೇ ಸಭಾಧ್ಯಕ್ಷರ ಪೀಠದತ್ತ ನುಗ್ಗಿ ಗದ್ದಲವೆಬ್ಬಿಸತೊಡಗಿದರು.

ಪ್ರಶ್ನೋತ್ತರ ವೇಳೆಯಲ್ಲಿ ಒಂದು ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿತು. ನಂತರದ ಪ್ರಶ್ನೋತ್ತರ ಗದ್ದಲದ ನಡುವೆ ಕೇಳಿಸಲಿಲ್ಲ.

ಈ ನಡುವೆ ಜೆಡಿಯು ಸಂಸದರು ಅಣ್ಣಾ ತಂಡದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸುತ್ತಾ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಗೆ ಒತ್ತಾಯಿಸುತ್ತಿರುವವರೊಂದಿಗೆ ತಮ್ಮ ದನಿಗೂಡಿಸಿ ಸದನದಲ್ಲಿ ಸಭಾಧ್ಯಕ್ಷರ ಪೀಠದತ್ತ ನುಗ್ಗಿದಾಗ ಕೋಲಾಹಲ ಮೂಡಿತು.

ಜೆಡಿಯು ನಾಯಕ ಶರದ್ ಯಾದವ್ ಮಧ್ಯಾಹ್ನ 4 ಗಂಟೆಗೆ ವಿಷಯವನ್ನು ಪ್ರಸ್ತಾಪಿಸಬಹುದು ಎಂದು  ಸಭಾಧ್ಯಕ್ಷೆ ತಿಳಿಸಿದಾಗ, ಜೆಡಿಯು ಸದಸ್ಯರು ತಮ್ಮ ಸ್ಥಳಗಳಿಗೆ ಹಿಂದಿರುಗಿದರು. 

ನಂತರವೂ ಸದನದಲ್ಲಿನ ಗದ್ದಲ ತಹಬದಿಗೆ ಬಾರದೇಹೋದಾಗ ಸಭಾಧ್ಯಕ್ಷೆ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.