ಗುರುವಾರ , ಜೂನ್ 17, 2021
27 °C

ಎರಡು ಹಾಸ್ಟೆಲ್‌ಗಳಿದ್ದರೂ ತಪ್ಪದ ಗೋಳು!

ಪ್ರಜಾವಾಣಿ ವಾರ್ತೆ ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಎರಡು ಹಾಸ್ಟೆಲ್‌ಗಳಿದ್ದರೂ ತಪ್ಪದ ಗೋಳು!

ಧಾರವಾಡ: ನಗರದಲ್ಲಿ ಎರಡು ಕ್ರೀಡಾ ಹಾಸ್ಟೆಲ್‌ಗಳಿದ್ದರೂ ಸೌಲಭ್ಯಗಳಿಲ್ಲದೆ ಅಲ್ಲಿರುವ ಕ್ರೀಡಾಪಟುಗಳಲ್ಲಿ ಅಸಮಾಧಾನ ಮಡುಗಟ್ಟಿದೆ. ಎರಡೂ ಹಾಸ್ಟೆಲ್‌ಗಳು ಶಿಥಿಲಗೊಂಡ ಕಟ್ಟಡಗಳಲ್ಲೇ ನಡೆಯುತ್ತಿರುವುದು ಇದಕ್ಕೆ ಪ್ರಧಾನ ಕಾರಣವಾಗಿದೆ.ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಎರಡೂ ಒಂದೊಂದು ಹಾಸ್ಟೆಲ್‌ಗಳನ್ನು ಧಾರವಾಡದಲ್ಲಿ ಹೊಂದಿವೆ. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಂಪೂರ್ಣ ಶಿಥಿಲಗೊಂಡ ಬಾಡಿಗೆ ಕಟ್ಟಡದಲ್ಲಿ ಕ್ರೀಡಾಪಟುಗಳಿಗೆ ವಸತಿ ಸೌಕರ್ಯವನ್ನು ಕಲ್ಪಿಸಿದ್ದರೆ, ಸಾಯ್ ಸ್ವಂತ ಹಾಸ್ಟೆಲ್ ಕಟ್ಟಡ ಹೊಂದಿದೆಯಾದರೂ ಅದು ಕೂಡ ವಾಸಕ್ಕೆ ಯೋಗ್ಯವಾಗಿಲ್ಲ.ಸೋರುವ ಮಾಳಿಗೆ, ಕತ್ತಲು ಗವಿಯಂತಿರುವ ಕೋಣೆ, ಕಿಷ್ಕಿಂಧೆಯಂತಹ ತರಬೇತಿ ಹಾಲ್, ಬಾಗಿಲು ಕಿತ್ತುಹೋದ ಶೌಚಾಲಯ, ಕಸರತ್ತು ಮಾಡಲು ಸ್ಥಳಾವಕಾಶವಿಲ್ಲದ ವ್ಯಾಯಾಮ ಶಾಲೆಯಿಂದ ಎರಡೂ ಹಾಸ್ಟೆಲ್‌ಗಳ ಕ್ರೀಡಾಪಟುಗಳು ಬೇಸತ್ತು ಹೋಗಿದ್ದಾರೆ.ರಾಜ್ಯ ಕ್ರೀಡಾ ಇಲಾಖೆ ಹಾಸ್ಟೆಲ್‌ನಲ್ಲಿ 48 ಕ್ರೀಡಾಪಟುಗಳು ಆಶ್ರಯ ಪಡೆದಿದ್ದು, ಹಾಕಿ ಮತ್ತು ಜಿಮ್ನಾ ಸ್ಟಿಕ್ಸ್ ತರಬೇತಿ ನೀಡಲಾಗುತ್ತದೆ. ಈ ಹಾಸ್ಟೆಲ್‌ನಲ್ಲಿ ನೀರಿನ ಸೌಲಭ್ಯವೇ ಇಲ್ಲವಾಗಿದ್ದು, ಟ್ಯಾಂಕರ್ ಮೂಲಕ ನೀರು ತರಿಸಲಾಗುತ್ತಿದೆ. ಕ್ರೀಡಾಪಟುಗಳು ಅಗತ್ಯಕ್ಕೆ ತಕ್ಕಷ್ಟು ನೀರು ಖರ್ಚು ಮಾಡುವ ಸ್ವಾತಂತ್ರ್ಯವನ್ನೂ ಹೊಂದಿಲ್ಲ. ಬಾಲಕಿಯರು ತಂಗುವ ಕೋಣೆ ಬಾಗಿಲು ಕಿತ್ತುಹೋಗಿದ್ದು, ಅವರಿಗೆ ರಕ್ಷಣೆಯೇ ಇಲ್ಲವಾಗಿದೆ. ಜಿಮ್ನಾಸ್ಟಿಕ್ಸ್ ಸಲಕರಣೆಗಳು ಮೂಲೆಗುಂಪಾಗಿವೆ.ಊಟದ ವ್ಯವಸ್ಥೆಯನ್ನು ಗುತ್ತಿಗೆ ನೀಡಲಾಗಿದ್ದು, ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿಲ್ಲ. ಇದೇ ಕಾರಣದಿಂದ ಕ್ರೀಡಾ ಇಲಾಖೆ ಗುತ್ತಿಗೆದಾರರ ಬಿಲ್‌ನಲ್ಲಿ ಕಡಿತ ಮಾಡಿದೆ. `ಗುತ್ತಿಗೆದಾರರ ಬಿಲ್ ತಡೆಹಿಡಿದರೆ ನಮಗೆ ಒಳ್ಳೆಯ ಊಟ ಸಿಕ್ಕಂತಾಯಿತೆ~ ಎಂದು ಕ್ರೀಡಾಪಟುಗಳು ಪ್ರಶ್ನೆ ಹಾಕುತ್ತಾರೆ. `ಶೀಘ್ರವೇ ಬೇರೆ ಕಟ್ಟಡಕ್ಕೆ ಹಾಸ್ಟೆಲ್ ಸ್ಥಳಾಂತರ ಮಾಡಲಾಗುತ್ತದೆ. ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆಹಾರ ಪೂರೈಸುವ ಗುತ್ತಿಗೆದಾರರ ಬದಲಾವಣೆಗೂ ನಿರ್ಧರಿಸಲಾಗಿದೆ~ ಎಂದು ಅಧಿಕಾರಿಗಳು ಹೇಳುತ್ತಾರೆ. ಸಾಯ್ ಹಾಸ್ಟೆಲ್‌ನಲ್ಲಿ ಸಹಾಯಕ ನಿರ್ದೇಶಕ ರಾಮಚಂದ್ರ ಶಿಲಾರೆ ಮತ್ತು ಅವರ ಹತ್ತು ಜನ ಕೋಚ್‌ಗಳ ತಂಡ ಕೊರತೆಗಳ ನಡುವೆಯೇ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ಸಿದ್ಧಪಡಿಸುವ ಕಾಯಕದಲ್ಲಿ ನಿರತವಾಗಿದೆ. 66 ಬಾಲಕರು ಹಾಗೂ 24 ಬಾಲಕಿಯರು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಥ್ಲೆಟಿಕ್ಸ್, ಜಿಮ್ನಾಸ್ಟಿಕ್ಸ್, ಹಾಕಿ, ಕಬಡ್ಡಿ, ಟೇಕ್ವಾಂಡೊ, ಬ್ಯಾಸ್ಕೆಟ್‌ಬಾಲ್ ಮತ್ತು ಕುಸ್ತಿ ಕ್ರೀಡೆಗಳ ತರಬೇತಿ ವ್ಯವಸ್ಥೆ ಇಲ್ಲಿದೆ.ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಲವು ದಶಕಗಳ ಹಿಂದೆ ಕಟ್ಟಿಸಿದ ಈ ಹಾಸ್ಟೆಲ್ ಅನ್ನು 1991ರಲ್ಲಿ ಸಾಯ್‌ಗೆ ಹಸ್ತಾಂತರ ಮಾಡಿತ್ತು. ಹಾಸ್ಟೆಲ್ ಒಳಗಡೆ ಅಗತ್ಯ ಸ್ಥಳ ಇಲ್ಲದ್ದರಿಂದ ಹೊರಗಡೆಯೇ ಮಕ್ಕಳು ತರಬೇತಿ ಪಡೆಯಬೇಕು. ಮಳೆಗಾಲದಲ್ಲಿ ಕ್ರೀಡಾಪಟುಗಳು ಇನ್ನೂ ಹೆಚ್ಚಿನ ಸಮಸ್ಯೆ ಎದುರಿಸುತ್ತಾರೆ. ಸೌಲಭ್ಯಗಳ ಕೊರತೆ ನಡುವೆಯೂ ಇಲ್ಲಿಯ ಕ್ರೀಡಾಪಟುಗಳು ಒಳ್ಳೆಯ ಸಾಧನೆಯನ್ನೇ ತೋರುತ್ತಿದ್ದಾರೆ. ವೇಗದ ಓಟಗಾರ ಬಿ.ಜಿ. ನಾಗರಾಜ್ ರಾಷ್ಟ್ರಮಟ್ಟದ ಕೂಟಗಳಲ್ಲಿ ಪದಕಗಳನ್ನು ಹೊತ್ತು ತಂದರೆ, ಟೇಕ್ವಾಂಡೊ ತಂಡ ವಿದೇಶದಲ್ಲೂ ಸಾಧನೆ ಮೆರೆದು ಬಂದಿದೆ. ಕುಸ್ತಿ ವಿಭಾಗದಿಂದಲೂ ಪ್ರಶಸ್ತಿಗಳು ಬರುತ್ತಿವೆ.ಕರ್ನಾಟಕ ವಿಶ್ವವಿದ್ಯಾಲಯದಿಂದ ಐದು ಎಕರೆ ಭೂಮಿಯನ್ನು (ಸರ್ವೇ ನಂ. 35/1, ರಾಣಿ ಚನ್ನಮ್ಮ ಕ್ರೀಡಾಂಗಣ ಪಕ್ಕ) ಗುತ್ತಿಗೆ ಪಡೆದು ಕ್ರೀಡಾ ಸೌಲಭ್ಯ ಒದಗಿಸುವ ಸಾಯ್ ಯೋಜನೆ ಇನ್ನೂ ಕುಂಟುತ್ತಾ ಸಾಗಿದೆ.ಜಿಲ್ಲಾಧಿಕಾರಿ ದರ್ಪಣ ಜೈನ್ ಈ ಯೋಜನೆ ವಿಷಯವಾಗಿ ಸಾಕಷ್ಟು ಮುತುವರ್ಜಿ ವಹಿಸಿದ್ದರೂ ಜಾಗ ಈವರೆಗೆ ಸಾಯ್‌ಗೆ ಸಿಕ್ಕಿಲ್ಲ. ಭೂಬಾಡಿಗೆ ವಿಷಯವಾಗಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳದಿರುವುದೇ ವಿಳಂಬಕ್ಕೆ ಕಾರಣವಾಗಿದೆ.ಸುಸಜ್ಜಿತ ಕಟ್ಟಡ, ಉತ್ತಮ ಸೌಕರ್ಯ ಹಾಗೂ ಪೌಷ್ಟಿಕ ಆಹಾರಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಜಿಲ್ಲೆಯ ಕ್ರೀಡಾ ಸಂಘಟನೆಗಳು, ಹಿರಿಯ ಕ್ರೀಡಾಪಟುಗಳು ಮತ್ತು ಕೋಚ್‌ಗಳ ಆಗ್ರಹವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.