ಸೋಮವಾರ, ಜೂನ್ 14, 2021
27 °C

ಎಲ್ಲೂ ಇಲ್ಲದ ಕಾನೂನು ಯಾದಗಿರಿ ಜಿಲ್ಲೆಯಲ್ಲಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಪ್ರತಿ ಭಾನುವಾರ ಎಲ್ಲ ಅಂಗಡಿ-ಮುಗ್ಗಟ್ಟುಗಳನ್ನು ಬಂದ್ ಮಾಡುವ ಮೂಲಕ ಜಿಲ್ಲೆಯ ನಾಗರಿಕರಿಗೆ ಆಗುತ್ತಿರುವ ತೊಂದರೆಯನ್ನೂ ಗಮನಕ್ಕೆ ತೆಗೆದುಕೊಳ್ಳದ ಜಿಲ್ಲಾಡಳಿತ, ಇದೀಗ ದ್ವಿತೀಯ ಪಿಯುಸಿ ಪರೀಕ್ಷೆಯ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧಕ್ಕೆ ಯತ್ನಿಸುತ್ತಿರುವುದು ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಬುಧವಾರ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿವೆ. ಪ್ರತಿ ವರ್ಷದಂತೆ ಮಾಧ್ಯಮ ಪ್ರತಿನಿಧಿಗಳು, ಛಾಯಾಗ್ರಾಹಕರು, ಪಿಯುಸಿ ಪರೀಕ್ಷೆಯ ಚಿತ್ರ ತೆಗೆಯಲು ಪರೀಕ್ಷಾ ಕೇಂದ್ರಕ್ಕೆ ಹೋದರೆ, ಪಾಸ್‌ಗಳನ್ನು ಕೇಳಲಾಯಿತು. ಪಾಸ್ ಇದ್ದರೆ ಮಾತ್ರ ಒಳಗೆ ಹೋಗಲು ಅನುಮತಿ ನೀಡಲಾಗುವುದು ಎಂಬ ಉತ್ತರ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಂದ ಬಂತು.

 

ಇದರಿಂದ ವಿಚಲಿತರಾದ ಛಾಯಾಗ್ರಾಹಕರು, ಪಾಸ್ ಬಗ್ಗೆ ಯಾವುದೇ ಮಾಹಿತಿಯೇ ಇಲ್ಲ. ಮೇಲಾಗಿ ಪಾಸ್‌ಗಳನ್ನೂ ನೀಡಿಲ್ಲ. ಇದೀಗ ಏಕಾಏಕಿ ಪಾಸ್ ಇದ್ದರೆ ಮಾತ್ರ ಚಿತ್ರ ತೆಗೆಯಲು ಅವಕಾಶ ನೀಡುವುದಾಗಿ ಹೇಳಿದರೆ ಹೇಗೆ ಎಂದು ಪ್ರಶ್ನೆ ಮಾಡಿದರು. ಆದರೆ ಇದಾವುದನ್ನೂ ಕೇಳುವ ಸ್ಥಿತಿಯಲ್ಲಿ ಇರದ ಪರೀಕ್ಷಾ ಕೇಂದ್ರ ಮುಖ್ಯಸ್ಥರು, ಈ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನೇ ಕೇಳಿ ಎಂದು ಉತ್ತರಿಸಿ ಜಾರಿಕೊಂಡರು.ಆದರೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಆರ್. ಶಿವಕುಮಾರ ಸಹ, ದ್ವಿತೀಯ ಪಿಯುಸಿ ಪರೀಕ್ಷೆ ಪೂರ್ವ ಸಿದ್ಧತಾ ಸಭೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪಾಸ್‌ಗಳನ್ನು ಕೊಡುವುದಾಗಿ ಜಿಲ್ಲಾಧಿಕಾರಿಗಳೇ ತಿಳಿಸಿದ್ದಾರೆ. ಪಾಸ್ ಇದ್ದವರಿಗೆ ಮಾತ್ರ ಪರೀಕ್ಷಾ ಕೇಂದ್ರದಲ್ಲಿ ಅನುಮತಿ ನೀಡಲಾಗುವುದು ಎಂದು ಹೇಳಿದರು.ಇದರಿಂದ ಆಕ್ರೋಶಗೊಂಡ ಮಾಧ್ಯಮದವರು, ಪ್ರತಿ ವರ್ಷ ಇಲ್ಲದ ಕಾನೂನು ಈ ಬಾರಿ ಏಕೆ? ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ರಾಜ್ಯದಾದ್ಯಂತ ಇಂತಹ ಆದೇಶವಿದ್ದರೆ, ಅದನ್ನು ಒಪ್ಪಿಕೊಳ್ಳಲಾಗುವುದು. ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಇದನ್ನು ಅನ್ವಯಿಸುವುದು ಸರಿಯಲ್ಲ ಎಂದು ಹೇಳಿದರು.ಆದರೆ ಜಿಲ್ಲಾಡಳಿತದ ಸೂಚನೆಗೆ ಕಟ್ಟು ಬಿದ್ದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಪಾಸ್ ಇಲ್ಲದೇ ಫೋಟೋ ತೆಗೆಯಲು ಅವಕಾಶ ನೀಡುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಇದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಮಾಧ್ಯಮದವರು, ಒಳ್ಳೆಯ ರೀತಿಯಿಂದ ಪರೀಕ್ಷೆ ನಡೆಸಿದರೆ, ಮಾದರಿ ಪರೀಕ್ಷೆ ನಡೆಸಿರುವ ಬಗ್ಗೆ ವರದಿ ಮಾಡುತ್ತೇವೆ. ಮಾಧ್ಯಮಗಳಿಂದ ಪರೀಕ್ಷೆಯನ್ನು ಮುಚ್ಚಿಡುವ ಅವಶ್ಯಕತೆ ಏನಿದೆ ಎಂದು ಪ್ರಶ್ನೆಗೆ ಮಾತ್ರ ಉತ್ತರ ನೀಡಲಿಲ್ಲ.ಜಿಲ್ಲೆಯಲ್ಲಿ ಮಾತ್ರ ಈ ವ್ಯವಸ್ಥೆ:
ರಾಜ್ಯದ 29 ಜಿಲ್ಲೆಗಳಲ್ಲಿ ಇರದೇ ಇರುವ ಕಾನೂನು ಯಾದಗಿರಿ ಜಿಲ್ಲೆಯಲ್ಲಿ ಜಾರಿಗೊಳಿಸುತ್ತಿರುವುದಕ್ಕೆ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಯಾವುದೇ ಆದೇಶ ಬಂದಿಲ್ಲ. ಹಾಗಾಗಿ ಯಾದಗಿರಿ ಜಿಲ್ಲೆಯ ಪತ್ರಕರ್ತರಿಗೆ ಮಾತ್ರ ಪಾಸ್ ನೀಡುವ ವ್ಯವಸ್ಥೆ ಮಾಡಿದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಸಿದ್ದನ್ನು ಮಾಧ್ಯಮಗಳು ಪ್ರಕಟಿಸಿದ್ದವು. ಆದರೆ ಶಿಕ್ಷಕರು ನಕಲು ನಡೆದೇ ಇಲ್ಲ ಎಂದು ವಾದ ಮಂಡಿಸಿದ್ದರು. ಈ ಬಗ್ಗೆ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರೊ. ಮುಮ್ತಾಜ್ ಅಲಿಖಾನ್‌ರ ನೇತೃತ್ವದಲ್ಲಿಯೇ ಮಾಧ್ಯಮ ಪ್ರತಿನಿಧಿಗಳು ಹಾಗೂ ಶಿಕ್ಷಕರ ಸಭೆ ನಡೆದಿತ್ತು.

 

ಸಭೆಯಲ್ಲಿ ವಿಡಿಯೋ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾದ ಚಿತ್ರಗಳನ್ನು ನೋಡಿದ ಪ್ರೊ. ಮುಮ್ತಾಜ್ ಅಲಿಖಾನ್, ಸಾಮೂಹಿಕ ನಕಲು ನಡೆದಿರುವುದು ಈ ಚಿತ್ರಗಳಿಂದ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಡಿಡಿಪಿಐ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಇದರಿಂದಾಗಿಯೇ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಾಧ್ಯಮಗಳನ್ನು ನಿರ್ಬಂಧಿಸುವ ಯತ್ನ ಮಾಡಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ ಹೇಳಿದ್ದಾರೆ.ಜಿಲ್ಲೆಯು ಶೈಕ್ಷಣಿಕವಾಗಿ ಅಭಿವೃದ್ಧಿ ಆಗಲಿ ಎಂಬ ಉದ್ದೇಶದಿಂದ ಪತ್ರಿಕೆಗಳು ವರದಿ ಮಾಡುತ್ತಿವೆ. ಜೊತೆಗೆ ಎಲ್ಲ ಕಾಲೇಜು, ಸರ್ಕಾರಿ ಸಮಾರಂಭಗಳ ವರದಿಗೆ ಪತ್ರಕರ್ತರು ಬೇಕು. ಪರೀಕ್ಷೆಯ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆ ಕಡಿವಾಣ ಹಾಕಲು ಯತ್ನಿಸುವುದು ಸರಿಯಲ್ಲ. ಇಂತಹ ಪ್ರಯತ್ನವನ್ನು ಯಾರೂ ಸಹಿಸುವುದೂ ಇಲ್ಲ ಎಂದು ಎಚ್ಚರಿಸಿದ್ದಾರೆ.ಒಂದಾದ ಮೇಲೊಂದು ಹೊಸ ಕಾನೂನುಗಳು ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಜಾರಿಯಾಗುತ್ತಿವೆ. ಜಿಲ್ಲೆಯ ಜನರ ಶಾಂತಿ, ಸಹನೆಯನ್ನು ಪರೀಕ್ಷೆ ಮಾಡುತ್ತಿರುವುದು ಸರಿಯಲ್ಲ ಎಂದು ಅರ್ಜುನ್ ಪವಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಚಿವರ ಜೊತೆ ಚರ್ಚೆ: ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವರಾವ ಕುಲಕರ್ಣಿ, ಪರೀಕ್ಷೆಯ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವ ಪ್ರಯತ್ನ ಸರಿಯಲ್ಲ. ಪತ್ರಕರ್ತರು ಭಯೋತ್ಪಾದಕರಲ್ಲ. ಆಯಾ ಪತ್ರಿಕೆಗಳು ತಮ್ಮ ವರದಿಗಾರರಿಗೆ ಗುರುತಿನ ಚೀಟಿ ನೀಡಿವೆ. ಬೇಕಾದರೆ ಅವುಗಳನ್ನು ಪರಿಶೀಲನೆ ಮಾಡಿ, ಪತ್ರಕರ್ತರನ್ನು ಒಳಗೆ ಬಿಡಲಿ.ಅದನ್ನು ಬಿಟ್ಟು, ಪ್ರತ್ಯೇಕ ಪಾಸ್ ನೀಡುವುದಾಗಿ ಹೇಳಿರುವುದು ಸರಿಯಲ್ಲ. ಹಾಗಾದರೆ, ಪ್ರತಿಯೊಂದು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರತ್ಯೇಕ ಪಾಸ್ ನೀಡಬೇಕಾಗುತ್ತದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ನರಸಿಂಹ ನಾಯಕ (ರಾಜೂಗೌಡ) ಅವರೊಂದಿಗೆ ಕೂಲಂಕಷವಾಗಿ ಚರ್ಚಿಸಿ, ಪತ್ರಕರ್ತರ ವೃತ್ತಿಗೆ ಧಕ್ಕೆ ಬರದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.

 3,605 ವಿದ್ಯಾರ್ಥಿಗಳು ಹಾಜರ್

ಯಾದಗಿರಿ: ದ್ವಿತೀಯ ಪಿಯುಸಿ ಪರೀಕ್ಷೆಗಳು ಗುರುವಾರದಿಂದ ಆರಂಭವಾಗಿದ್ದು, ಇತಿಹಾಸ ವಿಷಯದ ಪರೀಕ್ಷೆಗೆ ಜಿಲ್ಲೆಯಲ್ಲಿ 3,605 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.ಜಿಲ್ಲೆಯ 11 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಸುಲಲಿತವಾಗಿ ನಡೆದಿದ್ದು, ನಕಲು ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಗುರುವಾರ ನಡೆದ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಡಿಬಾರ್ ಆಗಿಲ್ಲ. ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿ, ಜಾಗೃತ ದಳದವರು ಹಾಜರಿದ್ದು, ನಕಲು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರು.ಶುಕ್ರವಾರ (ಮಾ.16) ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಜೀವಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ. ಜಿಲ್ಲೆಯಲ್ಲಿ ಯಾವುದೇ ವಿದ್ಯಾರ್ಥಿಗಳು ಡಿಬಾರ್ ಆಗಿಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಆರ್. ಶಿವಕುಮಾರ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.