ಸೋಮವಾರ, ಮೇ 10, 2021
25 °C

ಎಲ್‌ಇಟಿಗೆ ಕಠಿಣ ಸಂದೇಶ- ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪಾಕಿಸ್ತಾನವನ್ನು ತನ್ನ ಚಟುವಟಿಕೆಯ ನೆಲೆ ಮಾಡಿಕೊಂಡಿರುವ ಉಗ್ರ ಹಫೀಸ್ ಸಯೀದ್‌ನ ಸುಳಿವು ಹಾಗೂ ಶಿಕ್ಷೆಗೆ ಪೂರಕವಾಗುವ ಸುಳಿವು ನೀಡುವವರಿಗೆ 1 ಕೋಟಿ ಡಾಲರ್ ಬಹುಮಾನ ಪ್ರಕಟಿಸಿರುವ ಅಮೆರಿಕದ ನಿರ್ಧಾರವನ್ನು ಭಾರತ ಸ್ವಾಗತಿಸಿದ್ದು, ಲಷ್ಕರ್ ಎ ತೊಯ್ಬಾ (ಎಲ್‌ಇಟಿ) ಹಾಗೂ ಅದನ್ನು ಬೆಂಬಲಿಸುವ ಸಂಘಟನೆಗಳಿಗೆ ಇದು ಕಠಿಣ ಸಂದೇಶ ರವಾನಿಸುತ್ತದೆ ಎಂದು ಹೇಳಿದೆ.ಸಯೀದ್‌ನನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಲು ಸಾಕಷ್ಟು ಸಾಕ್ಷ್ಯಾಧಾರಗಳು ಇದ್ದರೂ ಪಾಕಿಸ್ತಾನ ತನ್ನ ಕರ್ತವ್ಯದಿಂದ ವಿಮುಖವಾಗಿದೆ. ಆತನ ಸುಳಿವಿಗಾಗಿ ಅಮೆರಿಕವು ಬಹುಮಾನ ಘೋಷಿಸಿರುವ ಹಿನ್ನೆಲೆಯಲ್ಲಿ, ಆತನ ವಿರುದ್ಧ ಕ್ರಮ ಕೈಗೊಳ್ಳಲು ಆ ರಾಷ್ಟ್ರ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮುಂಬೈ ದಾಳಿ ಆರೋಪಿಗಳ ವಿರುದ್ಧದ ತನ್ನ ತನಿಖಾ ಪ್ರಹಸನವನ್ನು ಪಾಕ್ ಈಗಿನಂತೆಯೇ ಮುಂದುವರಿಸಬಾರದು ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಜಾಗತಿಕ ಸಮುದಾಯ ಸಂಘಟಿತವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ. ಮುಂಬೈ ಮೇಲಿನ ಅಮಾನುಷ ದಾಳಿಯಲ್ಲಿ ಭಾಗಿಯಾದವರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂಬ ತಮ್ಮ ಬೇಡಿಕೆಗಳ ಬಗ್ಗೆ ಭಾರತ ಹಾಗೂ ಅಮೆರಿಕಗಳಿಗೆ ಇರುವ ಬದ್ಧತೆಯನ್ನು ಇದು ತೋರಿಸುತ್ತದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಸಯ್ಯದ್ ಅಕ್ಬರುದ್ದೀನ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.ಅಮೆರಿಕವು ಜಗತ್ತಿನ ನಾಲ್ವರು ಉಗ್ರರ ಪತ್ತೆಗೆ 1 ಕೋಟಿ ಡಾಲರ್ ಬಹುಮಾನ ಘೋಷಿಸಿದ್ದು ಅವರಲ್ಲಿ ಹಫೀಜ್ ಕೂಡ ಒಬ್ಬನಾಗಿದ್ದಾನೆ.ಅಲ್ ಖೈದಾ ಮುಖ್ಯಸ್ಥ ಅಲ್ ಜವಾಹಿರಿ ಬಗ್ಗೆ ಸುಳಿವು ನೀಡಿದವರಿಗೆ ಅಮೆರಿಕವು ಅತ್ಯಧಿಕ 2.5 ಕೋಟಿ ಡಾಲರ್ ಬಹುಮಾನ ಪ್ರಕಟಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.