ಬುಧವಾರ, ಏಪ್ರಿಲ್ 14, 2021
24 °C

ಎಲ್‌ಪಿಜಿ ಮಿತಿ 9ಕ್ಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್‌ಪಿಜಿ ಮಿತಿ 9ಕ್ಕೆ?

ನವದೆಹಲಿ: ಸಬ್ಸಿಡಿ ದರದ ಅಡುಗೆ ಅನಿಲವನ್ನು (ಎಲ್‌ಪಿಜಿ) ವರ್ಷಕ್ಕೆ ಆರು ಸಿಲಿಂಡರ್‌ಗಳಿಗೆ ಮಿತಿ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಕೇಂದ್ರ ಸರ್ಕಾರ, ತನ್ನ ಈ ನಿರ್ಧಾರ ಮರು ಪರಿಶೀಲಿಸಿ ವರ್ಷಕ್ಕೆ ಒಂಬತ್ತು ಸಿಲಿಂಡರ್ ಪೂರೈಸಲು ಚಿಂತಿಸುತ್ತಿದೆ.ಗುಜರಾತ್ ವಿಧಾನಸಭಾ ಚುನಾವಣೆಯ ಬಳಿಕ (ಡಿ.17) ಈ ವಿಚಾರವನ್ನು ಕೇಂದ್ರ ಸರ್ಕಾರವು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.ಆರ್ಥಿಕ ಸುಧಾರಣಾ ಕ್ರಮದಡಿಯಲ್ಲಿ ಸಬ್ಸಿಡಿ ದರದ ಎಲ್‌ಪಿಜಿ ಪೂರೈಕೆಗೆ ಮಿತಿ ಹೇರಿರುವ ಕ್ರಮವನ್ನು ಸರ್ಕಾರ ಸಮರ್ಥಿಸಿಕೊಂಡರೂ, ಅದಕ್ಕೆ ಕಾಂಗ್ರೆಸ್‌ನ ಅನೇಕ ಸಚಿವರು ಮತ್ತು ಸಂಸದರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ.ಇವರು ತಮ್ಮ ಅಸಮಾಧಾನವನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ್ಲ್ಲಲಿ ಹೇಳಿಕೊಂಡಿದ್ದಾರೆ. ಈ ನಿರ್ಧಾರದಿಂದ ಪಕ್ಷದ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ  ಎಂದು ಅಭಿಪ್ರಾಯಪಟ್ಟಿದ್ದಾರೆಂದೂ ತಿಳಿದುಬಂದಿದೆ.ಜತೆಗೆ ಯುಪಿಎ ಅಂಗಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳಿಂದ ಹಾಗೂ ವಿವಿಧ ಸಂಘಟನೆಗಳಿಂದಲೂ ಭಾರಿ ಪ್ರತಿಭಟನೆ ಕೂಡ ವ್ಯಕ್ತವಾಗಿತ್ತು. ಈ ನಿರ್ಧಾರ ಹಿಂದಕ್ಕೆ ಪಡೆಯಬೇಕು ಎಂದು ಬಹುತೇಕರು ಒತ್ತಾಯಿಸಿದ್ದರು. ಕೆಲವರು ಮಿತಿಯನ್ನು ಆರರ ಬದಲು ಒಂಬತ್ತು ಸಿಲಿಂಡರ್‌ಗೆ ನಿಗದಿ ಮಾಡಬೇಕು ಎಂದೂ ಆಗ್ರಹಿಸಿದ್ದರು. ಆದರೆ, ಸರ್ಕಾರ ಇದನ್ನು ಒಪ್ಪಿರಲಿಲ್ಲ.ಇದೇ ಭಾನುವಾರ ಮತದಾನ ನಡೆಯಲಿರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಈ ವಿಚಾರವೇ ಪ್ರಮುಖ ಚುನಾವಣಾ ವಿಷಯವಾಗಿದೆ. ಮುಂದಿನ ತಿಂಗಳು ಚುನಾವಣೆ ನಡೆಯಲಿರುವ ಗುಜರಾತ್‌ನಲ್ಲೂ ಇದೇ ವಿಷಯ ಪ್ರಮುಖವಾಗಿ ಚರ್ಚೆಯಾಗುವ ಎಲ್ಲಾ ಸಾಧ್ಯತೆಗಳು ಇವೆ.ಈ ಎರಡೂ ರಾಜ್ಯಗಳಲ್ಲಿ ಎಲ್‌ಪಿಜಿ ಗ್ರಾಹಕರು ಸಿಲಿಂಡರ್ ಅಭಾವದ ಆತಂಕದಿಂದ ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸಿದ್ದರು.ಎಲ್‌ಪಿಜಿ ಸಿಲಿಂಡರ್ ಮಿತಿಯನ್ನು ಒಂಬತ್ತಕ್ಕೆ ವಿಸ್ತರಿಸುವ ವಿಷಯವು ಇದೇ 9ರಂದು ಸೂರಜ್‌ಕುಂಡ್‌ನಲ್ಲಿ ನಡೆಯಲಿರುವ ಕಾಂಗ್ರೆಸ್ ಪ್ರಮುಖರ ಸಮಾವೇಶದಲ್ಲಿಯೂ ಚರ್ಚೆಯಾಗುವ ನಿರೀಕ್ಷೆ ಇದೆ. ಪಕ್ಷವು ಚುನಾವಣಾ ಸಂದರ್ಭದಲ್ಲಿ ಹೊರಡಿಸಿದ್ದ ಪ್ರಣಾಳಿಕೆಯಲ್ಲಿನ ಭರವಸೆಗಳು ಜಾರಿಯಾಗಿರುವ ಕುರಿತು ಚರ್ಚಿಸುವ ಉದ್ದೇಶದಿಂದ ಈ ಸಮಾವೇಶ ಸಂಘಟಿಸಲಾಗಿದೆ.ಎಲ್‌ಪಿಜಿ ಸಿಲಿಂಡರ್ ಪೂರೈಕೆಗೆ ಮಿತಿ ವಿಧಿಸಿದ ಬಳಿಕ ರಾಷ್ಟ್ರದ ಅನೇಕ ಕಡೆಗಳಲ್ಲಿ ವಾಣಿಜ್ಯ ಉದ್ದೇಶದ ಸಿಲಿಂಡರ್‌ಗಳು ಸೇರಿದಂತೆ ಎಲ್‌ಪಿಜಿ ಸಿಲಿಂಡರ್‌ಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಈ ಗೊಂದಲಗಳನ್ನು ನಿವಾರಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಕೂಡ ಕಾರ್ಯೋನ್ಮುಖವಾಗಿದೆ.ಸಿಲಿಂಡರ್ ಪೂರೈಕೆಯಲ್ಲಿನ ಗೊಂದಲದ ಬಗ್ಗೆ ವರದಿ ನೀಡುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಎಂ. ವೀರಪ್ಪ ಮೊಯ್ಲಿ ಅವರು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳಿಗೆ ಸೂಚಿಸಿದ್ದಾರೆ ಎಂದೂ ತಿಳಿದುಬಂದಿದೆ.ಸೆಪ್ಟೆಂಬರ್‌ನಲ್ಲಿ ಸಬ್ಸಿಡಿ ದರದ ಸಿಲಿಂಡರ್‌ಗಳನ್ನು 2 ತಿಂಗಳಿಗೆ ಒಂದರಂತೆ ವರ್ಷಕ್ಕೆ ಆರು ಮಾತ್ರ ಪೂರೈಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿತ್ತು. ಹೆಚ್ಚುವರಿಯಾಗಿ ಸಿಲಿಂಡರ್ ಬೇಕಿದ್ದರೆ ಸಬ್ಸಿಡಿ ರಹಿತ ದರ ನೀಡಿ ಖರೀದಿಸುವಂತೆಯೂ ಹೇಳಿತ್ತು.ಸದ್ಯ ನವದೆಹಲಿಯಲ್ಲಿ ಸಬ್ಸಿಡಿ ದರದ ಸಿಲಿಂಡರ್ ದರ  ರೂ 410.12 ಮತ್ತು  ಸಬ್ಸಿಡಿ ರಹಿತ ಸಿಲಿಂಡರ್ ದರ ರೂ 895.50 ರೂಪಾಯಿ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.