ಗುರುವಾರ , ಮೇ 19, 2022
22 °C

ಎಳ್ಳಿನಲ್ಲಿ ಮಹಿಳೆಯ ಮಹಿಮೆ

-ಎಚ್. ಚಂದ್ರೇಗೌಡ . Updated:

ಅಕ್ಷರ ಗಾತ್ರ : | |

ಎಳ್ಳಿನಲ್ಲಿ ಮಹಿಳೆಯ ಮಹಿಮೆ

ವರ ಬಳಿ ಆಧುನಿಕ ತಂತ್ರಜ್ಞಾನವಿಲ್ಲ, ರಾಸಾಯನಿಕ ಗೊಬ್ಬರಗಳ ಬಳಕೆಯೂ ಇಲ್ಲ. ಆದರೂ ಮಳೆಯಾಶ್ರಿತ ಖುಷ್ಕಿ ಭೂಮಿಯಲ್ಲಿ ಉತ್ತಮ ಪ್ರಮಾಣದ ಎಳ್ಳು ಬಿತ್ತಿದ್ದು, ಇದೀಗ ಯಶಸ್ವಿ ಕೃಷಿಕ ಮಹಿಳೆ ಎನಿಸಿಕೊಂಡಿದ್ದಾರೆ.ಸಾಂಪ್ರದಾಯಿಕ ಪದ್ಧತಿಯಲ್ಲಿ ಈ `ಸಮೃದ್ಧ ಎಳ್ಳು' ಫಸಲು ಬೆಳೆದವರು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಹನಿಯೂರು ಗ್ರಾಮದ ಅಡ್ಡಬೀದಿಯ ಗೌರಮ್ಮ ಸಿದ್ದೇಗೌಡ. ಪತಿ ಸಿದ್ದೇಗೌಡರ ಕೃಷಿ ಚಟುವಟಿಕೆಗಳಲ್ಲಿ 45 ವರ್ಷಗಳಿಂದಲೂ ದುಡಿದವರು ಗೌರಮ್ಮ.ಕೃಷಿ ಕೆಲಸಗಳಲ್ಲಿ ಸದಾ ಎತ್ತಿನಂತೆ ದುಡಿಯುತ್ತಿದ್ದರು ಈ ದಂಪತಿ. ಎರಡು ವರ್ಷಗಳ ಹಿಂದೆ ಸಿದ್ದೇಗೌಡರು ತೀರಿಹೋದರು. ಹೊಲ-ಮನೆಗಳನ್ನು ತಾವೇ ನೋಡಿಕೊಳ್ಳುವ ಜವಾಬ್ದಾರಿ ಗೌರಮ್ಮ ಅವರ ಮೇಲೆ ಬಿತ್ತು. ಅನೇಕ ವರ್ಷಗಳ ಕಾಲದ ಅನುಭವದಿಂದ ಮಾಗಿದ ಗೌರಮ್ಮನವರು ಧೈರ್ಯವಾಗಿ ವ್ಯವಸಾಯ ಮಾಡಿಸುವತ್ತ ಗಮನವಹಿಸಿದರು. ಇದಕ್ಕೆ ಬೆಂಗಳೂರಿನಲ್ಲಿರುವ ಮಕ್ಕಳು ಆರ್ಥಿಕ ಬೆಂಬಲ ನೀಡಿದರು.ಎಳ್ಳಿನ ಯಶೋಗಾಥೆ

ಸುತ್ತಮುತ್ತಲೂ ಕಾಡಿನಿಂದ ಕೂಡಿರುವ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಪ್ರತಿವರ್ಷ ಕಡಲೆಕಾಯಿ ಬೆಳೆಯುವುದು ಗೌರಮ್ಮನವರ ಕಾಯಂ ಕಾಯಕ. ಕಡಲೆಕಾಯಿ ಕಟಾವಿನ ನಂತರ ಹುರುಳಿ ಬೆಳೆಯುವುದು ಮಾಮೂಲಾಗಿತ್ತು. ಮೊದಲ ಮಳೆ ಬಿದ್ದರೆ, ಕಸಕಡ್ಡಿಗಳನ್ನು ಹೊಲದ ಮಣ್ಣಲ್ಲಿಯೇ ಕೊಳೆಯುವಂತೆ ಮಾಡಿ, ಒಂದು ಸಲ ಹೊಲವನ್ನು ಉಳುಮೆ ಮಾಡಿಸಿ ಎಳ್ಳು ಚೆಲ್ಲಿಸುವುದು ಗೌರಮ್ಮನವರ ಕೃಷಿ ಚಟುವಟಿಕೆಯ ಪದ್ಧತಿ.

ಅಂತೆಯೇ ಕಳೆದ ವರ್ಷ ಒಂದೂವರೆ ಎಕರೆ ಜಮೀನಿನ ಪೈಕಿ ಒಂದು ಎಕರೆಯಲ್ಲಿ ಎಳ್ಳು ಚೆಲ್ಲಿಸಿ ಉತ್ತಮ ಇಳುವರಿ ಪಡೆದಿದ್ದರು. ಕಟಾವಿಗೂ ಮುನ್ನವೇ ಎಳ್ಳು ಸಿಡಿದು ಕಾಲುಭಾಗದಷ್ಟು ಮಣ್ಣು ಸೇರಿತ್ತು. ಆದರೂ ಆ ಸಲ ಕೈಗೆ ಉತ್ತಮ ಫಸಲು ಸಿಕ್ಕಿತ್ತು. ಇದರಿಂದ ಪ್ರೇರಿತಗೊಂಡು ಈ ಬಾರಿ ಇರುವ ಒಂದೂವರೆ ಎಕರೆಗೂ ಎಳ್ಳು ಬಿತ್ತಿದ್ದಾರೆ. ಈಗ ಹೊಲದಲ್ಲಿ ಎಳ್ಳುಕಾಯಿಗಳಿಂದ ಆಳೆತ್ತರದ ಗಿಡಗಳು ನಲಿಯುತ್ತಿರುವುದನ್ನು ನೋಡಿದರೆ ಗೌರಮ್ಮನವರ ನಿರೀಕ್ಷೆ ಸುಳ್ಳಾಗಲಿಲ್ಲವೆನ್ನಬಹುದು.ಅಪರೂಪದ ಬೀಜ ಸಂರಕ್ಷಕಿ

30 ವರ್ಷಗಳಿಂದಲೂ ತಮ್ಮ ಜಮೀನಿನಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿರುವ ಗೌರಮ್ಮ ಅವರು, ತಮ್ಮ ಹೊಲದಲ್ಲಿ ಕಡಲೆಕಾಯಿ, ರಾಗಿ, ಹುರುಳಿ, ಅವರೆ, ಜೋಳ ಬೆಳೆಯುತ್ತಿದ್ದವರು. ಇವರಿಗೆ ಅರಿಯದಂತೆಯೇ ಅನೇಕ ಬೀಜಗಳ ಸಂರಕ್ಷಕಿಯೂ ಹೌದು ಎಂಬುದು ಅವರ ಬೀಜ ಸಂಗ್ರಹಣೆ ನೋಡಿದರೆ ಮನದಟ್ಟಾಗುತ್ತದೆ. ಅಪರೂಪವೆನಿಸುವ ಉತ್ತಮ ಕಡಲೆಕಾಯಿ ಬೀಜ ಮತ್ತು ಬಿತ್ತನೆ ಎಳ್ಳುಬೀಜ, ಪಡುವಲಕಾಯಿ ಬೀಜ, ಕುಂಬಳಕಾಯಿ ಬೀಜ, ಕೀರೆಬೀಜ, ದಂಟಿನಬೀಜ, ಸ್ವಾಮೆ, ನವಣೆ ಬೀಜಗಳೂ ಇವರ ಸಂಗ್ರಹದಲ್ಲಿವೆ.ಮದುವೆಯಾದ ವರ್ಷದಲ್ಲಿ ತಮ್ಮ ತವರು ಮನೆಯಿಂದ ತಂದ ಕರಿಎಳ್ಳನ್ನು ಹೊಲದಲ್ಲಿ ಬಿತ್ತುತ್ತಾ ಬಂದಿದ್ದಾರೆ ಗೌರಮ್ಮ. ಈ ಎಳ್ಳು ಗಾಢವಾದ ಕಪ್ಪುಬಣ್ಣದ್ದಾಗಿದ್ದು, ರುಚಿಯೂ ಹೆಚ್ಚಿದೆ. ಬಿತ್ತನೆ ಕಾಲವಾಗಲೀ, ಹಬ್ಬ-ಹರಿದಿನವಾಗಲೀ ಎಳ್ಳಿಗಾಗಿ ಜನರು ಗೌರಮ್ಮ ಅವರ ಬಳಿ ಬಂದೇ ಬರುತ್ತಾರೆ. ಊರಿನಲ್ಲಿ ಯಾರ ಬಳಿ ಎಳ್ಳಿರದಿದ್ದರೂ ಗೌರಮ್ಮನ ವಾಡೆಯಲ್ಲಿ ಇದ್ದೇ ಇರುತ್ತದೆ ಎಂಬ ನಂಬಿಕೆ ಸುತ್ತಲಿನ ಏಳು ಹಳ್ಳಿಗಳ ಜನರದ್ದು.ಹಿಂದಿನ ಗುಟ್ಟೇನು

`ನಿಮ್ಮ ಹೊಲದಲ್ಲಿ ಬೆಳೆದಿರುವ ಎಳ್ಳಿನ ಹೆಚ್ಚು ಇಳುವರಿಯ ಹಿಂದಿರುವ ರಹಸ್ಯವೇನು' ಎಂದರೆ, ಗೌರಮ್ಮ ಅವರು ಹೇಳುವುದು ಹೀಗೆ, `ಅಯ್ಯೋ, ಎಳ್ ಬೆಳಿಯೋದ್ರಲ್ ಗುಟ್ಟೇನಪ್ಪಾ ಅದೆ..? ಯಾರ್ ಏನೇ ಅಂದ್ರುವೆ, ನಾನ್ ಮಾತ್ರ ನಮ್ ಹಟ್ಟಿ ಗೊಬ್ರಾನಾ ಮಾರೂದಿಲ್ಲಾ. ನಾವ್ ಮೊದ್ಲೆಲ್ಲಾ ಹಸ, ಕುರಿ, ಆಡು, ಕೋಳಿ ಸಾಕ್ತಾ ಇದ್ದೋ...

ಅವ್ತ್ರೆ ಗೊಬ್ರಾನೆಲ್ಲಾ ಯಾರ‌್ಗೂ ಮಾರ್ದೆ ಎಲ್ಲಾನೂವೆ ಹೊಲಕ್ಕೆ ತಂದ್ ಸುರೀತಿದ್ದೋ, ಅದ್ರಿಂದ್ಲೇ ನಮ್ ಈ ಬೂಮ್ತೋಯವ್ವ ಫಲವತಿ ಆಗವ್ಳೆ. ಅವತ್ತಿಂದ ಇವತ್ತುನ್ ತನಕಾ ಈ ನನ್ ತಾಯೀನಾ ಅದೇನೋ ಯೂರ‌್ಯಾ-ಗೀರ‌್ಯಾ, ಅದೂ ಇದೂ ಅಂತಾ ಹಾಕಿ ಕೆಡುಸ್ಲಿಲ್ಲಾ ಅದ್ಕೇ ಇವ್ಳ ಇವತ್ತುನ್ ತನಕಾನೂವೆ ನಮ್ ಕೈ ಬುಡ್ಲಿಲ್ಲಾ.ಇವ್ಳ...'ಎಂದು ಆಕಾಶ ನೋಡ್ತಾರೆ ಗೌರಮ್ಮ.ಹೀಗೆ ತಮ್ಮದೇ ಆದ ಎಳ್ಳು ತಳಿಯೊಂದನ್ನು ಅನೇಕ ವರ್ಷಗಳಿಂದ ಉಳಿಸಿ-ಬೆಳೆಸಿಕೊಂಡು ಬರುತ್ತಿರುವ ಗೌರಮ್ಮ ಅವರಿಗೆ ಎಳ್ಳಿನೊಂದಿಗೆ ತನ್ನ ತವರಿನ ನಂಟು ಇದೆ. ಅದೊಂದು ರೀತಿಯಲ್ಲಿ ಭಾವನಾತ್ಮಕ ಬಾಂಧವ್ಯ.ಇತರರು ತಮ್ಮ ಪ್ರತಿ ಎಕರೆಗೆ 4 ಸೇರು ಎಳ್ಳನ್ನು ಬಿತ್ತನೆ ಮಾಡಿದ್ದಾರೆ. ಅದೂ ಅಲ್ಲದೆ ಅವರು ಬಿತ್ತನೆ ವೇಳೆಯಲ್ಲಿ ರಾಸಾಯನಿಕ ಗೊಬ್ಬರವನ್ನು ಬಳಸಿ ಬಿತ್ತನೆ ಮಾಡಿದ್ದಾರೆ. ಆದರೂ ಇತರರ ಹೊಲದಲ್ಲಿ ಅಷ್ಟಾಗಿ ಎಳ್ಳುಗಿಡಗಳು ಹುಟ್ಟಲಿಲ್ಲ ಮತ್ತು ಹುಟ್ಟಿರುವಷ್ಟು ಎಳ್ಳುಗಿಡಗಳೂ ಸರಿಯಾಗಿ ಎಳ್ಳುಕಾಯಿಗಳನ್ನು ಬಿಡಲಿಲ್ಲ.

ಆದರೆ, ಗೌರಮ್ಮನವರು ತಮ್ಮ ಒಂದೂವರೆ ಎಕರೆ ಜಮೀನಿಗೆ ಬಿತ್ತನೆಗಾಗಿ ಬಳಸಿರುವುದು ಕೇವಲ 4 ಸೇರು ಬಿತ್ತನೆ ಎಳ್ಳನ್ನು ಮಾತ್ರ. ಅದರಲ್ಲೂ ಗೌರಮ್ಮ, ಯಾವುದೇ ರಾಸಾಯನಿಕ ಗೊಬ್ಬರವನ್ನೂ ನೆಚ್ಚಿಕೊಳ್ಳದೆ ಕೇವಲ ಕೊಟ್ಟಿಗೆ ಗೊಬ್ಬರದ ಆಶ್ರಯವನ್ನು ಪಡೆದು ಎಳ್ಳುಬೆಳೆಯಲ್ಲಿ ಉತ್ತಮ ಸಾಧನೆ ಕಂಡಿದ್ದಾರೆ.

-ಎಚ್. ಚಂದ್ರೇಗೌಡ .

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.