ಸೋಮವಾರ, ಸೆಪ್ಟೆಂಬರ್ 20, 2021
26 °C

ಎಸ್‌ಎಂಎಸ್‌ನಲ್ಲಿ ಫಸಲ್ ದರ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

ಎಸ್‌ಎಂಎಸ್‌ನಲ್ಲಿ ಫಸಲ್ ದರ

ಉಳ್ಳಾಗಡ್ಡೆ ಬೆಳೆದು ಸರಿಯಾದ ಧಾರಣೆ ಸಿಗದೆ ನಷ್ಟ ಅನುಭವಿಸುತ್ತಿದ್ದ ರೈತ ಕಲ್ಲಪ್ಪ ಪ್ರತಿ ಬಾರಿ ದಲ್ಲಾಳಿಗಳಿಂದ ಮೋಸಕ್ಕೆ ಬಲಿಯಾಗುತ್ತಿದ್ದರು.



ಪ್ರತಿ ಬಾರಿ ಟೊಮೆಟೊ ಬೆಳೆದು ಮಾರುಕಟ್ಟೆಗೆ ಹೋಗಿ ಮಾರಲಾಗದ ಮಾಲೂರಿನ ಯುವ ರೈತ ವೆಂಕಟೇಶ ಜಮೀನಿಗೆ ಬಂದು ಖರೀದಿಸುತ್ತಿದ್ದ ಮಧ್ಯವರ್ತಿಗಳು ಕೇಳಿದ ಬೆಲೆಗೆ ಮಾರಿ ನಷ್ಟ ಅನುಭವಿಸುತ್ತಿದ್ದರು.



ತೆಂಗು ಬೆಳೆಯುತ್ತಿದ್ದ ಹೊಸದುರ್ಗದ ರಮೇಶ್ ಅವರು ಮಾರುಕಟ್ಟೆಯಲ್ಲಿರುವ ನಿಖರ ಧಾರಣೆ ತಿಳಿಯದೇ ಊರಲ್ಲಿಯೇ ಒಣಕೊಬ್ಬರಿಯನ್ನು ಕೈಗೆ ಬಂದ ದರಕ್ಕೆ ಕೊಟ್ಟು ನಂತರ ಪರಿತಪಿಸುತ್ತಿದ್ದರು.



ಕುರಂಬಳ್ಳಿಯ ಗಿರೀಶ್ ಅವರದು ಅಡಿಕೆಗೆ ಯೋಗ್ಯ ಬೆಲೆ ಸಿಗುತ್ತಿಲ್ಲ ಎನ್ನುವ ಕೊರಗು. ಜತೆಗೆ ಪ್ರತಿ ಸಾರಿ ಕೂಡ ಅವರಿಗೆ ದಲ್ಲಾಳಿಗಳಿಂದ ದರದಲ್ಲಿ ನಷ್ಟವಾಗುತ್ತಿತ್ತು.

ಹೀಗೆ ಮಧ್ಯವರ್ತಿಗಳ ಶೋಷಣೆ, ತಾವು ಬೆಳೆದ ಬೆಳೆಗೆ ಯೋಗ್ಯ ಬೆಲೆ ಪಡೆಯದೆ ವಂಚನೆಗೊಳಗಾಗುವ ಇಂಥ ರೈತರಿಗೊಂದು ಸಂತಸದ ಸುದ್ದಿ ತಂದಿದೆ `ಫಸಲ್~. ಅದೇ ನಿಖರ ಬೆಲೆಗಾಗಿ `ಫಸಲ್~ ಎಸ್‌ಎಂಎಸ್ ಸೇವೆ.



ಇದರ ಮೂಲಕ ಇನ್ನು ಮುಂದೆ ರೈತರು ತಾವು ಬೆಳೆದ ಫಸಲನ್ನು ಮಾರಾಟಕ್ಕೆ ಒಯ್ಯುವ ಮೊದಲೇ ಬೇರೆ ಬೇರೆ ಮಾರುಕಟ್ಟೆಯಲ್ಲಿ ಆ ಉತ್ಪನ್ನಕ್ಕೆ ಇರುವ ಅಂದಿನ ನಿಖರ ಬೆಲೆ ತಿಳಿದುಕೊಂಡು ಅಧಿಕ ಬೆಲೆ ಇರುವ ಕಡೆ ಹೋಗಿ ಲಾಭ ಪಡೆಯಬಹುದು.



ಮಧ್ಯಮ ಗಾತ್ರದ ಉದ್ಯಮಗಳು, ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು ಮತ್ತು ಕ್ರೆಡಿಟ್ ಯೂನಿಯನ್‌ಗಳು, ಗ್ರಾಹಕರು ಮತ್ತು ಅಕೌಂಟಿಂಗ್ ವೃತ್ತಿಪರರಿಗೆ ಉದ್ಯಮ ಹಾಗೂ ಹಣಕಾಸು ನಿರ್ವಹಣಾ ಸೇವೆ ನೀಡುವ ಅಮೆರಿಕ ಮೂಲದ ಇನ್‌ಟ್ಯೂಟ್ ಐಎನ್‌ಸಿ (ನಾಸ್ ಡಾಕ್: ಐಎನ್‌ಟಿಯು) ಇದೀಗ ರೈತರ ಅನುಕೂಲಕ್ಕಾಗಿ ಎಸ್‌ಎಂಎಸ್ ಆಧಾರಿತ `ಫಸಲ್~ ಸೇವೆ ಪ್ರಾರಂಭಿಸಿದೆ. ರೈತರಿಗೆ ನಯಾಪೈಸೆ ಕೂಡ ಖರ್ಚಿಲ್ಲದೆ ಸಂಪೂರ್ಣ ಉಚಿತವಾಗಿ ವಿವಿಧ ಕೃಷಿ ಉತ್ಪನ್ನಗಳ ಬೆಲೆಗಳನ್ನು ತಿಳಿಸುತ್ತದೆ.



ಇನ್‌ಟ್ಯೂಟ್‌ನ ಈ `ಫಸಲ್~ ಎಸ್‌ಎಂಎಸ್ ಸೇವೆಯು ರೈತರ ವೈಯಕ್ತಿಕ ಅಪೇಕ್ಷೆಯನ್ನಾಧರಿಸಿ ಅವರು ಬೆಳೆದ ಉತ್ಪನ್ನಕ್ಕೆ ಅವರಿಷ್ಟದ ಮಾರುಕಟ್ಟೆಗಳಲ್ಲಿರುವ ನಿಖರ ಬೆಲೆಯನ್ನು ಅನುಕೂಲವಾದ ಭಾಷೆಯಲ್ಲಿ ಸೂಕ್ತ ಸಮಯದಲ್ಲಿ ರವಾನಿಸುತ್ತದೆ. ಈ ಮೂಲಕ ರೈತರು ಹಾಗೂ ಖರೀದಿದಾರರ ನಡುವೆ ಸಂಪರ್ಕ ಕಲ್ಪಿಸುತ್ತದೆ.



ಧಾನ್ಯಗಳು, ಬೇಳೆಕಾಳುಗಳು, ಅಡಿಕೆ, ತರಕಾರಿ, ಹಣ್ಣು ಹಾಗೂ ಹೂವು ಸೇರಿದಂತೆ ರಾಜ್ಯದಲ್ಲಿ ಬೆಳೆಯುವ ವಿವಿಧ ಕೃಷಿ ಉತ್ಪನ್ನಗಳ ದರ ಕುರಿತಂತೆ ರೈತರು ಈ ಸೇವೆ ಪಡೆಯಬಹುದು.



ರಾಜ್ಯದ ಎಲ್ಲ ಎಪಿಎಂಸಿಗಳು ಸೇರಿದಂತೆ 38ಕ್ಕೂ ಅಧಿಕ ಮಾರುಕಟ್ಟೆಗಳೊಂದಿಗೆ ಕಂಪೆನಿ ನಿರಂತರ ಸಂಪರ್ಕ ಇಟ್ಟುಕೊಂಡು ದಿನೇ ದಿನೇ ಮಾರುಕಟ್ಟೆಯಲ್ಲಿ ಬದಲಾಗುವ ಕೃಷಿ ಉತ್ಪನ್ನಗಳ ಬೆಲೆ ಮಾಹಿತಿಯನ್ನು ಪರಿಷ್ಕರಿಸುತ್ತದೆ. ಹೀಗಾಗಿ ರೈತರು ಈ ಎಲ್ಲ ಮಾರುಕಟ್ಟೆಗಳಲ್ಲಿರುವ ತಮ್ಮ ಬೆಳೆಯ ನಿಖರ ಬೆಲೆ ತಿಳಿದುಕೊಳ್ಳಬಹುದು.



ಈಗ ಕರ್ನಾಟಕದಲ್ಲಿ ವಿಸ್ತರಣೆಯಾಗುತ್ತಿರುವ ಈ ಸೇವೆ ಈಗಾಗಲೇ ಆಂಧ್ರಪ್ರದೇಶ, ಗುಜರಾತ್‌ನಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿ ಇದರ ಸದುಪಯೋಗವನ್ನು ಸುಮಾರು 8.5 ಲಕ್ಷ ರೈತರು ಪಡೆಯುತ್ತಿದ್ದಾರೆ ಎನ್ನುತ್ತಾರೆ ಫಸಲ್‌ನ ಅಧಿಕಾರಿಗಳು.



`ಅನೇಕ ಬಾರಿ ರೈತರಿಗೆ ತಮ್ಮ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿದೆಯೇ ಎಂಬುದು ತಿಳಿದಿರುವುದೇ ಇಲ್ಲ. ಇದರ ಅವಶ್ಯಕತೆ ಮನಗಂಡು ನಾವು ರೈತರಿಗೆ ಫಸಲ್ ಮೂಲಕ ಮಾಹಿತಿ ಒದಗಿಸಿ ಅವರು ತಮ್ಮ ಬೆಳೆಗೆ ಹೆಚ್ಚಿನ ಬೆಲೆಯನ್ನು ಪಡೆಯಲು ನೆರವು ನೀಡುತ್ತ್ದ್ದಿದೇವೆ.



 ಇದರಿಂದ ರೈತರಿಗೂ ಲಾಭ~ ಎನ್ನುತ್ತಾರೆ  `ಎಮರ್ಜಿಂಗ್ ಮಾರ್ಕೆಟ್ ಇನ್ನೊವೇಷನ್ ಇನ್‌ಟ್ಯೂಟ್ ಇಂಡಿಯಾ~ದ ನಿರ್ದೇಶಕಿ ದೀಪಾ ಬಚು.



ಸೇವೆ ಪಡೆಯುವುದು ಹೇಗೆ ?

ರೈತರು ಮಾಡಬೇಕಾಗಿದ್ದಿಷ್ಟೆ. 080 6764 6764 ಸಂಖ್ಯೆಗೆ ತಮ್ಮ ಮೊಬೈಲ್‌ನಿಂದ ಕರೆ ಮಾಡಿ ತಮ್ಮ ಬೆಳೆ, ತಮ್ಮ ಅಪೇಕ್ಷೆಯ ಮಾರುಕಟ್ಟೆ ಹಾಗೂ ಫೋನ್‌ನಲ್ಲಿ ಉಪಯೋಗಿಸುವ ಭಾಷೆ (ಎಸ್‌ಎಂಎಸ್ ಸಂದೇಶ ಓದಲು ಅನುಕೂಲವಾಗುವಂತೆ) ಈ ಎಲ್ಲ ಮಾಹಿತಿಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕು.



ಬಳಿಕ ಮಾರುಕಟ್ಟೆ ಬೆಲೆ ತಿಳಿಯಬೇಕಾದಾಗಲೆಲ್ಲ ಶುಲ್ಕ ರಹಿತ ದೂರವಾಣಿ 1800 103 8616 ಸಂಖ್ಯೆಗೆ ನೀವು ಮಿಸ್ ಕಾಲ್ ಮಾಡಿದರೆ ಸಾಕು. ಕೂಡಲೇ ಫಸಲ್‌ನಿಂದ ನಿಮಗೆ ನಿಮ್ಮ ಅಪೇಕ್ಷೆಯ ಮಾರುಕಟ್ಟೆಯಲ್ಲಿ ನಿಮ್ಮ ಉತ್ಪನ್ನಕ್ಕಿರುವ ಬೆಲೆ ಕುರಿತಾದ `ಎಸ್‌ಎಂಎಸ್~ ಸಂದೇಶ ಬರುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.