ಶನಿವಾರ, ಫೆಬ್ರವರಿ 27, 2021
20 °C

ಏನಾದ್ರೂ ಕೇಳ್ಬೋದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏನಾದ್ರೂ ಕೇಳ್ಬೋದು

* ನಾನು ಒಂಟಿ ಹೆಣ್ಣು. ಇದನ್ನು ತಿಳಿದ ನನ್ನ ಬಾಸ್‌ ನನಗೆ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಹಿಂಸೆ ಕೊಡುತ್ತಿದ್ದಾರೆ. ನನಗೆ ಕೆಲಸ ಅನಿವಾರ್ಯ. ಅದನ್ನು ಬಿಟ್ಟು ಹೋಗುವಂತಿಲ್ಲ. ಬೇರೆಯವರಲ್ಲಿಯೂ ವಿಷಯ ತಿಳಿಸುವ ಸಾಹಸ ನನ್ನಲ್ಲಿಲ್ಲ. ಏನು ಮಾಡುವುದು?

(ಹೆಸರು ಬೇಡ )
ಈ ಸಮಸ್ಯೆಯನ್ನು ನೀವು ಮುಕ್ತವಾಗಿ ಹೇಳಿಕೊಂಡಿರುವುದು ಸಂತೋಷಕರ ವಿಷಯ. ಅನೇಕ ಹೆಣ್ಣುಮಕ್ಕಳು ಇಂಥ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಆದರೆ ಅದನ್ನು ಬೇರೆಯವರ ಜೊತೆ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ನಿಮ್ಮಂಥ ಒಂಟಿ ಹೆಣ್ಣಿನಿಂದ ‘ಪ್ರಯೋಜನ’ ಬಯಸುವ ಕಾಮುಕರು ಸಮಾಜದಲ್ಲಿ ತುಂಬಾ ಮಂದಿ ಇದ್ದಾರೆ.  ಈ ಸಮಸ್ಯೆಯನ್ನು ನೀವೇ ಪರಿಹರಿಸಿಕೊಳ್ಳಬೇಕು.ಅವರ ಹಿಂಸೆ ಜಾಸ್ತಿಯಾದರೆ ನೀವು ಅದನ್ನು ಸಹಿಸಿಕೊಳ್ಳಬಾರದು. ಅದನ್ನು ನಿಮಗೆ ಆಪ್ತರು ಎನಿಸಿದವರಲ್ಲಿ ಹೇಳಿಕೊಳ್ಳಿ. ನಿಮ್ಮ ಬಾಸ್‌ ಅನಗತ್ಯವಾಗಿ ನಿಮ್ಮ ಬಳಿ ಬರಲು ಪ್ರಯತ್ನಿಸಿದರೆ ನಿರ್ದಾಕ್ಷಿಣ್ಯವಾಗಿ ಅದನ್ನು ತಿರಸ್ಕರಿಸಿ. ನಿಮಗೆ ಕೆಲಸ ಅನಿವಾರ್ಯ ಇರಬಹುದು, ಆದರೆ ಅದೇ ಕೆಲಸ ಅನಿವಾರ್ಯವಲ್ಲ. ಪರಿಸ್ಥಿತಿ ತುಂಬಾ ಹದಗೆಟ್ಟರೆ, ಬೇರೆ ಕೆಲಸಕ್ಕೆ ಸೇರಿ.* ನಾನು ಪ್ರೀತಿಸುತ್ತಿದ್ದ ಹುಡುಗ ಕೈಕೊಟ್ಟ. ಹೇಗೋ ಮನಸ್ಸನ್ನು ಸಮಾಧಾನ ಪಡಿಸಿಕೊಂಡಿದ್ದೇನೆ. ಆದರೂ ಜೀವನವೇ ಬೇಸರ ಎನ್ನಿಸುತ್ತಿದೆ. ಕೇವಲ ನಕಾರಾತ್ಮಕ ಯೋಚನೆಗಳು ಬರುತ್ತಿವೆ. ಇದರಿಂದ ಹೊರ ಬರಲು ಏನು ಮಾಡಬೇಕು?

(ಹೆಸರು ಬೇಡ )


ಜೀವನ ಎಂದರೆ ಅಲ್ಲಿ ಒಂದೇ ಅವಕಾಶ ಇರುವುದಿಲ್ಲ. ಒಂದು ಬಾಗಿಲು ಮುಚ್ಚಿದರೆ ಇನ್ನೊಂದು ಖಂಡಿತವಾಗಿಯೂ ತೆರೆದೇ ಇರುತ್ತದೆ. ಹಿಂದಿನದ್ದನ್ನು ಮರೆತು ಮನಸ್ಸನ್ನು ಗಟ್ಟಿ ಮಾಡಿಕೊಂಡಿರುವುದು ತುಂಬಾ ಸಂತೋಷ. ಅದನ್ನೇ ಮತ್ತೆ ಮತ್ತೆ ಯೋಚಿಸುತ್ತಾ ಕೂರಬೇಡಿ. ನಿಮ್ಮಿಷ್ಟದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಸದಾ ಒಂದಿಲ್ಲೊಂದು ಕಾರ್ಯದಲ್ಲಿ ನಿರತರಾಗಿ. ಹೀಗೆ ಆದಲ್ಲಿ ಕೆಟ್ಟ ಯೋಚನೆಗಳು ನಿಮ್ಮ ಮನಸ್ಸಿಗೆ ಬರಲು ಸಾಧ್ಯವೇ ಇಲ್ಲ.* ನಾನು ನಿವೃತ್ತ ನೌಕರ. ನನ್ನ ಇಬ್ಬರು ಮಕ್ಕಳಿಗೂ ಮದುವೆಯಾಗಿದೆ. ಅವರ ಮದುವೆ ನಂತರ ನನ್ನ ಹೆಂಡತಿ ಒಂಟಿತನ ಅನುಭವಿಸುತ್ತಿದ್ದಾಳೆ. ಟಿ.ವಿ ನೋಡುವುದು, ಅಡುಗೆ ಮಾಡುವುದು, ಓದುವುದು... ಹೀಗೆ  ಯಾವುದರಲ್ಲಿಯೂ ಆಸಕ್ತಿ ತೋರುತ್ತಿಲ್ಲ. ಅವಳು ಆರೋಗ್ಯದಿಂದ ಇದ್ದರೂ ಯಾವುದೇ ಕೆಲಸ ಮಾಡುತ್ತಿಲ್ಲ. ಸದಾ ಚಿಂತಿಸುತ್ತಿರುತ್ತಾಳೆ. ಅವಳನ್ನು ಸರಿ ಮಾಡುವುದು ಹೇಗೆ?

– ಸುರೇಶ್‌, ಉತ್ತರಹಳ್ಳಿ
ಇದು ನಿಮ್ಮ ಹೆಂಡತಿಯೊಬ್ಬರ ಸಮಸ್ಯೆಯಲ್ಲ. ಅನೇಕ ಅಮ್ಮಂದಿರು ಅನುಭವಿಸುವ ನೋವು ಇದು. ಇಷ್ಟು ದಿನ ಮಕ್ಕಳಿಂದ ತುಂಬಿಕೊಂಡಿದ್ದ ಮನೆ ಅವರು ಬಿಟ್ಟು ಹೋದ ಮೇಲೆ ಖಾಲಿ ಖಾಲಿ ಎನಿಸುವ ಕಾರಣ, ಹೆಚ್ಚಿನ ಅಮ್ಮಂದಿರ ಮನಸ್ಸೂ ಖಾಲಿ ಖಾಲಿಯಾಗಿ ಬಿಡುತ್ತದೆ. ಹೀಗೆಯೇ ಮುಂದುವರಿಯಲು ಬಿಟ್ಟರೆ ಅವರು ತಮ್ಮ ಕೆಲಸವನ್ನೂ ಮಾಡಿಕೊಳ್ಳದೇ ಸೋಮಾರಿಯಾಗುವ ಭಯವಿದೆ.ಡ್ರೆಸ್‌ ಮಾಡಿಕೊಳ್ಳುವುದು, ಬಾಚಿಕೊಳ್ಳುವುದು... ಹೀಗೆ ದೈನಿಂದಿನ ಕಾರ್ಯಗಳಿಂದ ಹಿಂಜರಿಯಬಹುದು. ಆದ್ದರಿಂದ ಅವರ ಮನಸ್ಸನ್ನು ಹತೋಟಿಗೆ ತರುವ ಜವಾಬ್ದಾರಿ ನಿಮ್ಮ ಮೇಲಿದೆ. ಅವರನ್ನು ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ಇರಿಸಿ. ಗಾರ್ಡನಿಂಗ್‌ನಲ್ಲಿ ಅವರ ಮನಸ್ಸನ್ನು ತೊಡಗಿಸಿ. ನಿಮ್ಮ ಮಕ್ಕಳು ಹತ್ತಿರದಲ್ಲಿ ಇದ್ದರೆ ಅವರನ್ನು ಆಗಾಗ್ಗೆ ಬರಹೇಳಿ, ಇಲ್ಲವೇ ನಿಮ್ಮ ಹೆಂಡತಿಯನ್ನೇ ಅವರ ಮನೆಗೆ ಕಳುಹಿಸುತ್ತಿರಿ. ಮೊಮ್ಮಕ್ಕಳ ಜೊತೆ ಇದ್ದರೆ ಖುಷಿಯಾಗಿ ಇರುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.