ಶನಿವಾರ, ಜನವರಿ 18, 2020
19 °C

ಏನಾಯಿತು ಸೈನಾ...?

ಕೆ. ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

‘ಇದು ಅದೃಷ್ಟದಿಂದ ಬಂದ ಪದಕವಲ್ಲ. 204 ದೇಶಗಳು ಪಾಲ್ಗೊಂಡ ಕ್ರೀಡಾಕೂಟದಲ್ಲಿ ಗೆದ್ದ ಪದಕ. ಇದರ ಹಿಂದೆ 13 ವರ್ಷಗಳ ಪರಿಶ್ರಮವಿದೆ. ಅಪ್ಪ, ಅಮ್ಮನ ತ್ಯಾಗವಿದೆ. ಕೋಚ್‌ ಗಳ ದುಡಿಮೆ ಇದೆ. ಪದಕದ ಮೇಲೆ ಯಾವಾಗಲೋ ನನ್ನ ಹೆಸರು ಬರೆದಾಗಿತ್ತು. ಈ ಪದಕ ಮುಂದಿನ ಸಾಧನೆಗೆ ಮತ್ತಷ್ಟು ಪ್ರೇರಕ’–ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಾಗ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಈ ಮಾತು ಹೇಳಿದ್ದು ಸೈನಾ ನೆಹ್ವಾಲ್‌. ಕಂಚಿನ ಪದಕಕ್ಕಾಗಿ ನಡೆದ ಹೋರಾಟದ ವೇಳೆ ಚೀನಾದ ವಾಂಗ್‌ ಕ್ಸಿನ್‌ ಕಾಲುನೋವಿನ ಕಾರಣ ಹಿಂದೆ ಸರಿದಿದ್ದರು. ಹಾಗಾಗಿ ಸೈನಾಗೆ ಈ ಪದಕ ಒಲಿದಿತ್ತು.ನಿಜ, 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದಾಗಲೇ ಸೈನಾ ಅವರ ಪ್ರತಿಭೆ ಏನು ಎಂಬುದು ಬ್ಯಾಡ್ಮಿಂಟನ್‌ ಜಗತ್ತಿಗೆ ಗೊತ್ತಾಗಿತ್ತು. ಆಗ ಅವರ ವಯಸ್ಸು ಕೇವಲ 18 ವರ್ಷ. ಚೀನಾ, ಇಂಡೊನೇಷ್ಯಾ, ಡೆನ್ಮಾರ್ಕ್‌ನ ಆಟಗಾರ್ತಿಯರ ಭದ್ರ ಕೋಟೆಯೊಳಗೆ ನುಗ್ಗಬಹುದು ಎಂಬುದನ್ನು ತೋರಿಸಿಕೊಟ್ಟವರು ಹೈದರಾಬಾದ್‌ನ ನೆಹ್ವಾಲ್‌.ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ ವಿಭಾಗದಲ್ಲಿ ಪದಕ ಗೆದ್ದ ಭಾರತದ ಮೊದಲ ವ್ಯಕ್ತಿ ಕೂಡ. ಸೈನಾಗೆ ಲಭಿಸಿದ ಯಶಸ್ಸು ದೇಶದಲ್ಲಿ ಬ್ಯಾಡ್ಮಿಂಟನ್‌ ಕ್ರಾಂತಿಗೆ ಕಾರಣವಾಯಿತು. ‘ಸೈನಾ ಅವರಂತೆ ನಮ್ಮ ಮಗಳು ಆಗಬೇಕು’ ಎಂದು ಅದೆಷ್ಟೊ ಅಪ್ಪಅಮ್ಮಂದಿರು ಕನಸು ಕಂಡರು. ಅಷ್ಟೇ ಏಕೆ? ವಿಶ್ವ ಬ್ಯಾಡ್ಮಿಂಟನ್‌ ರ್‍ಯಾಂಕಿಂಗ್‌ನಲ್ಲಿ ನೆಹ್ವಾಲ್‌ ಎರಡನೇ ಸ್ಥಾನಕ್ಕೇರಿದರು. ಇದೆಲ್ಲಾ ಆಗಿ ಒಂದೂವರೆ ವರ್ಷವಾಗಿದೆ ಅಷ್ಟೆ. ಈ ಅವಧಿಯಲ್ಲಿ ಸೈನಾ ಆಟ ಹೇಗಿತ್ತು ಎಂದು ಕಣ್ಣು ಹರಿಸಿದರೆ ವೈಫಲ್ಯವೇ ಹೆಚ್ಚು. ಅದರಲ್ಲೂ 2013ರಲ್ಲಿ ನೆಹ್ವಾಲ್ ಸಾಧನೆ ಶೂನ್ಯ. ಆಡಿದ ಯಾವುದೇ ಟೂರ್ನಿಯಲ್ಲಿ ಅವರು ಪ್ರಶಸ್ತಿ ಗೆಲ್ಲಲಿಲ್ಲ. ಫೈನಲ್ ಕೂಡ ತಲುಪಲಿಲ್ಲ ಎನ್ನುವುದು ಅಚ್ಚರಿ  ಮೂಡಿಸುವ ಅಂಶ. ರ್‍ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನಕ್ಕೆ ಕುಸಿದರು.ಹೀಗಾಗಲು ಕಾರಣವೇನು ಸೈನಾ...?

ಸಿಕ್ಕ ಅಪಾರ ಯಶಸ್ಸು, ಹಣ, ಖ್ಯಾತಿ ಹಾಗೂ ಪ್ರಚಾರ ದಾರಿ ತಪ್ಪಿಸಿರಲ್ಲಿಕ್ಕಿಲ್ಲ ಎಂದ ಭಾವಿಸಿದರೂ ಸೈನಾ ಅವರ ಯಶಸ್ಸಿನ ಗ್ರಾಫ್‌ ತೀರಾ ಕುಸಿತ ಕಂಡಿದೆ. ಅಭ್ಯಾಸವನ್ನೂ ಕಡಿಮೆ ಮಾಡಿದ್ದಾರೆ. ಇದನ್ನು ಕೋಚ್‌ ಪಿ.ಗೋಪಿಚಂದ್‌ ಕೂಡ ಒಪ್ಪಿಕೊಳ್ಳುತ್ತಾರೆ. ಫಿಟ್‌ನೆಸ್‌ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಮುಖವಾಗಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಬಗ್ಗೆ ಅವರು ತಿರಸ್ಕಾರ ಭಾವ ಹೊಂದಿದ್ದಾರೆ. ಐದು ವರ್ಷಗಳಿಂದ ಈ ಚಾಂಪಿಯನ್‌ಷಿಪ್‌ನಲ್ಲಿ ಆಡುತ್ತಿಲ್ಲ. 2007ರಲ್ಲಿ ಪಟ್ನಾದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು.ಕ್ವಾಲಾಲಂಪುರದಲ್ಲಿ ಇತ್ತೀಚೆಗೆ ನಡೆದ ಬಿಡಬ್ಲ್ಯುಎಫ್‌ ಸೂಪರ್‌ ಸರಣಿ ಫೈನಲ್ಸ್‌ ಟೂರ್ನಿಯ ಲೀಗ್‌ ಹಂತದಲ್ಲೇ ಸೋಲು ಕಂಡರು. ಆಡಿದ ಮೂರು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆದ್ದಿದ್ದರು. ಹಾಗಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆದಿರಲಿಲ್ಲ.ಮಂಡಿ ನೋವು, ಕಾಲಿನ ಬೆರಳು ಹಾಗೂ ಪಾದದ ಗಾಯದಿಂದಾಗಿ ಸುದೀರ್‌ಮನ್‌ ಕಪ್‌, ಚೀನಾ ಮಾಸ್ಟರ್ಸ್‌, ಜಪಾನ್‌ ಓಪನ್‌ನಲ್ಲೂ ಆಡಲಿಲ್ಲ. ಸದ್ಯ ಅನಾರೋಗ್ಯದಿಂದ ಬಳಲುತ್ತಿರುವ ನೆಹ್ವಾಲ್‌ ನವದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್‌ಷಿಪ್‌ನಿಂದಲೂ ಹಿಂದೆ ಸರಿದಿದ್ದಾರೆ. ಅಕಸ್ಮಾತ್‌ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಕೊರಿಯಾ ಓಪನ್‌ನಲ್ಲಿ ಆಡದಿದ್ದರೆ ಮತ್ತಷ್ಟು ಸ್ಥಾನ ಕುಸಿಯುವ ಸಾಧ್ಯತೆ ಇದೆ.2007ರ ಬಳಿಕ ಸೈನಾ ಇದೇ ಮೊದಲ ಬಾರಿ ಪ್ರಶಸ್ತಿಯ ಬರ ಅನುಭವಿಸಿದ್ದಾರೆ. ಒಲಿಂಪಿಕ್ಸ್‌ ಪದಕ ಗೆದ್ದ ಬಳಿಕ ಸಹಜವಾಗಿಯೇ ಎಲ್ಲರ ಗಮನ ಸೈನಾ ಅವರತ್ತ ನೆಟ್ಟಿದೆ. ಅಭಿಮಾನಿಗಳು ಹೆಚ್ಚಾಗಿದ್ದಾರೆ. ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಮಾರಂಭಗಳಿಗೆ ಅತಿಥಿಯಾಗಿ ಹೋಗುತ್ತಿದ್ದಾರೆ. ಫ್ಯಾಷನ್ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾಧ್ಯಮಗಳು, ಪ್ರಾಯೋಜಕರ  ಚಿತ್ತ ಹಿಂದೆಂದಿಗಿಂತಲೂ ನೆಹ್ವಾಲ್‌ ಅವರತ್ತ ಹೆಚ್ಚಾಗಿ ಹರಿಯುತ್ತಿದೆ. ಟ್ವಿಟರ್‌, ಫೇಸ್‌ಬುಕ್‌ನಲ್ಲೂ ‘ಹಿಂಬಾಲಕರು’ ಹೆಚ್ಚಾದರು.‘ಸೈನಾ ಅವರ ಮೇಲೆ ತುಂಬಾ ಒತ್ತಡವಿದೆ. ಗಮನವಿಟ್ಟು ಆಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಜೊತೆಗೆ ಗಾಯದ ಸಮಸ್ಯೆಯೂ ಕಾಡುತ್ತಿದೆ. ಹಾಗಾಗಿ ಸದ್ಯ ಅವರು ಎಲ್ಲರ ನಿರಾಸೆಗೆ ಕಾರಣರಾಗಿದ್ದಾರೆ. ನೆಹ್ವಾಲ್‌ ಅನುಭವಿ ಆಟಗಾರ್ತಿ. ಇಂಥ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕು’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದು ರಾಷ್ಟ್ರೀಯ ತಂಡದ ಮಾಜಿ ಕೋಚ್‌ ಯು. ವಿಮಲ್‌ ಕುಮಾರ್‌.‘ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೇಲೆ ಖಂಡಿತ ಸೈನಾ ಅವರ ಜೀವನಶೈಲಿ ಬದಲಾಗಿದೆ. ದೊಡ್ಡ ಸೆಲೆಬ್ರೆಟಿಯಾಗಿದ್ದಾರೆ. ಹಾಗಾಗಿ ಅವರತ್ತ ಸಹಜವಾಗಿಯೇ ಎಲ್ಲರ ಗಮನ ನೆಟ್ಟಿದೆ. ಇದರಿಂದ ನೆಹ್ವಾಲ್‌ ಅವರ ಚಿತ್ತಕ್ಕೆ ಭಂಗ ಉಂಟಾಗಿದೆ. ಈ ಹಂತಕ್ಕೇರುವ ಬಹುತೇಕ ಕ್ರೀಡಾಪಟುಗಳಿಗೆ ಈ ರೀತಿ ಆಗುತ್ತದೆ. ಆದರೆ ಅವರಿಗೆ ಇನ್ನೂ 23 ವರ್ಷ ವಯಸ್ಸು. ನಾಲ್ಕೈದು ವರ್ಷಗಳ ಆಟ ಬಾಕಿ ಇದೆ. ಹಾಗಾಗಿ ಅವರ ಮೇಲಿನ ವಿಶ್ವಾಸ ಕಳೆದುಕೊಳ್ಳುವುದು ಬೇಡ’ ಎಂದು ಮಾಜಿ ಆಟಗಾರರೂ ಆಗಿರುವ ವಿಮಲ್‌ ನುಡಿಯುತ್ತಾರೆ.2005–06ರ ಅವಧಿಯಲ್ಲಿ ಇಂಥದ್ದೇ ಕ್ರೇಜ್‌ಅನ್ನು ಸೃಷ್ಟಿಸಿದ್ದು ಸಾನಿಯಾ ಮಿರ್ಜಾ. ಅವರ ಮೇಲೂ ಆ ಸಮಯದಲ್ಲಿ ತುಂಬಾ ಭರವಸೆ ಇಟ್ಟುಕೊಳ್ಳಲಾಗಿತ್ತು. ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿ ಭರವಸೆಯ ಕಿರಣವಾಗಿದ್ದರು. ಆದರೆ ಲಭಿಸಿದ ಖ್ಯಾತಿ, ಪ್ರಚಾರ ಹಾಗೂ ಹಣ ಅವರ ಆಟದ ಮೇಲೆ ನಿಧಾನವಾಗಿ ಪರಿಣಾಮ ಬೀರುತ್ತಾ ಹೋಯಿತು. ಅದಾಗಿ ನಾಲ್ಕೈದು ವರ್ಷಗಳಲ್ಲಿ ಸಂಪೂರ್ಣವಾಗಿ ಫಾರ್ಮ್‌ ಕಳೆದುಕೊಂಡರು. ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ನೇರ ಪ್ರವೇಶವೇ ಅವರಿಗೆ ಸಿಗಲಿಲ್ಲ. ಸದ್ಯ ಡಬಲ್ಸ್‌ನತ್ತ ಮಾತ್ರ ಅವರು ಗಮನ ಹರಿಸುತ್ತಿದ್ದಾರೆ.ಇಂಥದ್ದೇ ಸಮಸ್ಯೆಯನ್ನು ಈಗ ಸೈನಾ ಎದುರಿಸುತ್ತಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಬಳಿಕ ನಗದು ಬಹುಮಾನ, ಪ್ಲಾಟ್‌, ಬಿಎಂಡಬ್ಲ್ಯು ಕಾರಿನ ಉಡುಗೊರೆ ಲಭಿಸಿತು. ಒಂದಿಷ್ಟು ದಿನ ಬಿಡುವಿಲ್ಲದಂತೆ ವಿವಿಧ ರಾಜ್ಯಗಳಿಗೆ ತೆರಳಿ ಸನ್ಮಾನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಕೆಲವು ಕಂಪೆನಿಯ ಉತ್ಪನ್ನಗಳಿಗೆ ರಾಯಭಾರಿಯಾದರು. ಇಂಥ ಕಾರ್ಯಕ್ರಮಕ್ಕೆಂದು ಒಂದೂವರೆ ವರ್ಷದಲ್ಲಿ ಬೆಂಗಳೂರಿಗೇ  ನಾಲ್ಕು ಬಾರಿ ಬಂದಿದ್ದರು.ಸಾನಿಯಾ ಹಾಗೂ ಸೈನಾ ಕ್ರಿಕೆಟ್‌ ಕ್ರೇಜ್‌ ನಾಡಿನ ಚಿತ್ತವನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದ ಆಟಗಾರ್ತಿಯರು. ಅಷ್ಟೇ ಯಶಸ್ಸು ಕಂಡವರು. 2005ರಿಂದ 2009ರ ಅವಧಿಯಲ್ಲಿ ಸಾನಿಯಾ ಭಾರತದ ಕ್ರೀಡಾ ಕ್ಷೇತ್ರದಲ್ಲಿ ಮಿಂಚು ಹರಿಸಿದರೆ, 2010–2012ರ ಅವಧಿಯಲ್ಲಿ ಸೈನಾ ದೊಡ್ಡ ಹೆಸರು ಮಾಡಿದರು. ಸಾನಿಯಾ.... ಸಾನಿಯಾ... ಎನ್ನುತ್ತಿದ್ದ ಅಭಿಮಾನಿಗಳ ಧ್ವನಿಯಲ್ಲಿ ಸಣ್ಣ ಬದಲಾವಣೆಯಾಗಿ ಸೈನಾ... ಸೈನಾ... ಎಂಬಂತಾಯಿತು. ಸುದ್ದಿ ಅಥವಾ ಲೇಖನ ಬರೆಯುವಾಗಲೂ ಗೊಂದಲಕ್ಕೆ ಸಿಕ್ಕ ಉದಾಹರಣೆ ಇದೆ.ಸೈನಾ ಇದ್ದದ್ದು ಸಾನಿಯಾ, ಸಾನಿಯಾ ಇದ್ದದ್ದು ಸೈನಾ ಆಗಿದ್ದುಂಟು. ಆದರೆ ಯಶಸ್ಸು ಹಾಗೂ ಖ್ಯಾತಿಯನ್ನು ಅವರು ಸರಿಯಾಗಿ ನಿರ್ವಹಿಸಲು ವಿಫಲರಾದರು. ನಿಜ, ಎಲ್ಲರೂ ಸಚಿನ್‌ ತೆಂಡೂಲ್ಕರ್‌, ರೋಜರ್‌ ಫೆಡರರ್, ಉಸೇನ್‌ ಬೋಲ್ಟ್‌ ಆಗಲು ಸಾಧ್ಯವಿಲ್ಲ. ಏಕೆಂದರೆ ಯಶಸ್ಸು ಅವರ ತಲೆಗೆ ಹೋಗಲೇ ಇಲ್ಲ.ಈ ನಡುವೆ, ಎಲ್ಲರೂ ನೆಹ್ವಾಲ್‌ ಜಪದಲ್ಲಿ ತೊಡಗಿದ್ದಾಗ ಉದ್ಭವಿಸಿದ ಪ್ರತಿಭೆ ಸಿಂಧು. 18ರ ಹರೆಯದ ಸಿಂಧು ಈ ವರ್ಷ ಚೀನಾದ ಘಟಾನುಘಟಿ ಆಟಗಾರ್ತಿಯರನ್ನು ನಡುಗಿಸಿದರು. ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದರು. ಸಿಂಗಲ್ಸ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಕೂಡ. ಮಲೇಷ್ಯಾ ಓಪನ್‌ ಗ್ರ್ಯಾನ್‌ ಪ್ರಿನಲ್ಲಿ ಚಿನ್ನದ ಪದಕ, ಮಕಾವೊ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದರು.ವಿಮಲ್‌ ಹೇಳಿದಂತೆ ಸೈನಾ ಪಾಲಿಗೆ ಈ ವರ್ಷ ತುಂಬಾ ನಿರಾಸೆ ಉಂಟು ಮಾಡಿದೆ. ಆದರೆ ಛಲಗಾತಿ ಸೈನಾ ಪುಟಿದೇಳಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಒಂದು ಪ್ರಶಸ್ತಿ ಅವರನ್ನು ಮತ್ತೆ ಯಶಸ್ಸಿನ  ಹಾದಿಗೆ ತಂದು ನಿಲ್ಲಿಸಬಲ್ಲದು.2014ರಲ್ಲಿ ಪ್ರಮುಖ ಟೂರ್ನಿಗಳು ಎದುರಿವೆ. ಜುಲೈನಲ್ಲಿ ಗ್ಲಾಸ್ಗೋದಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟವಿದೆ. ಸೆಪ್ಟೆಂಬರ್‌ನಲ್ಲಿ ಇಂಚೋನ್‌ನಲ್ಲಿ ಏಷ್ಯಾ ಕ್ರೀಡಾಕೂಟ ನಡೆಯುತ್ತಿದೆ. ಅದೇನೇ ಇರಲಿ, 13 ವರ್ಷಗಳ ಕಠಿಣ ಪರಿಶ್ರಮದಿಂದಾಗಿ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಸೈನಾಗೆ ಮತ್ತೆ ಫಾರ್ಮ್‌ ಕಂಡುಕೊಳ್ಳುವುದು ಅಷ್ಟು ಕಷ್ಟವಾಗಲಾರದು.

ಪ್ರತಿಕ್ರಿಯಿಸಿ (+)