ಮಂಗಳವಾರ, ಮೇ 24, 2022
26 °C

ಐಎಫ್‌ಎಸ್ ಅಧಿಕಾರಿ ಲೋಕಾಯುಕ್ತ ಬಲೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |
ಚಾಮರಾಜನಗರ: ಸರ್ಕಾರಿ ವಾಹನದಲ್ಲೇ ಅಕ್ರಮವಾಗಿ 8 ಲಕ್ಷ ರೂ. ನಗದು ಸಾಗಿಸುತ್ತಿದ್ದ ಕೊಳ್ಳೇಗಾಲದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ. ನಾರಾಯಣಸ್ವಾಮಿ ಅವರು ಭಾನುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ  ಒಳಪಡಿಸಲಾಗಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನೀಡಲು ಬೆಂಗಳೂರಿಗೆ ಈ ಹಣ ಸಾಗಿಸುತ್ತಿದ್ದರು ಎನ್ನಲಾಗಿದೆ.ಬೆಳಿಗ್ಗೆ ಅರಣ್ಯ ಇಲಾಖೆಗೆ ಸೇರಿದ ವಾಹನದಲ್ಲಿಯೇ ಸೂಟ್‌ಕೇಸ್‌ನಲ್ಲಿ ಹಣ ಸಾಗಿಸುತ್ತಿದ್ದರು. ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಇ. ಡಿಸೋಜ ನೇತೃತ್ವದ ತಂಡ ಕೊಳ್ಳೇಗಾಲ ಸಮೀಪದ ಅಣಗಳ್ಳಿ ಬಳಿ ನಾರಾಯಣಸ್ವಾಮಿ ಪ್ರಯಾಣಿಸುತ್ತಿದ್ದ ವಾಹನ ತಡೆದು ತಪಾಸಣೆ ನಡೆಸಿತು.ತಪಾಸಣೆಗೆ ನಾರಾಯಣಸ್ವಾಮಿ ವಿರೋಧ ವ್ಯಕ್ತಪಡಿಸಿದರು. ಐಎಫ್‌ಎಸ್ ಅಧಿಕಾರಿಯೊಬ್ಬರನ್ನು ರಸ್ತೆಯಲ್ಲಿ ನಿಲ್ಲಿಸಿ ತಪಾಸಣೆ  ಮಾಡುವುದು ಸರಿಯಲ್ಲವೆಂದು ಅಸಹಕಾರ ತೋರಿದರು ಎನ್ನಲಾಗಿದೆ. ಕೊನೆಗೆ, ತಪಾಸಣೆ ನಡೆಸಿದಾಗ 500 ಮತ್ತು 1 ಸಾವಿರ ರೂ. ಮುಖ ಬೆಲೆಯ ನೋಟುಗಳಿದ್ದ 8 ಲಕ್ಷ ರೂಪಾಯಿ ಪತ್ತೆ ಆಯಿತು.ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ಮುಂದೆ ನಾರಾಯಣಸ್ವಾಮಿ ಅವರನ್ನು ಹಾಜರುಪಡಿಸಲಾಗಿದ್ದು, ಮಾರ್ಚ್ 30ರ ವರೆಗೆ ನ್ಯಾಯಾಂಗ  ಬಂಧನಕ್ಕೆ ಒಪ್ಪಿಸಲಾಗಿದೆ.‘ಎರಡು ದಿನದ ಹಿಂದೆಯೇ ಗುತ್ತಿಗೆದಾರರಿಂದ ಪಡೆದ ಹಣವನ್ನು ಬೆಂಗಳೂರಿಗೆ ಸಾಗಿಸಲು ಮುಂದಾಗಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ನಾರಾಯಣಸ್ವಾಮಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಇದು ಅವರ ಸ್ವಂತ ಹಣವೇ ಅಥವಾ ಅಕ್ರಮವಾಗಿ ಪಡೆದಿರುವುದೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಡಿಸೋಜ ತಿಳಿಸಿದರು.

ನಾರಾಯಣಸ್ವಾಮಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.