ಗುರುವಾರ , ಮೇ 19, 2022
24 °C

ಐಐಟಿ ಕ್ಯಾಂಪಸ್‌ನಲ್ಲಿ ಕ್ರಿಕೆಟ್ ಕಲರವ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಶ್ರೇಷ್ಠ ತಾಂತ್ರಿಕ ಕಾಲೇಜ್‌ಗಳಲ್ಲಿ ಒಂದು ಎನಿಸಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)-ಮದ್ರಾಸ್ ಕ್ಯಾಂಪಸ್‌ನಲ್ಲಿ ಬುಧವಾರ ತಂತ್ರಜ್ಞಾನದ ವಿಷಯಗಳಿಗೆ ಒಂದಿಷ್ಟು ಹೊತ್ತು ಬ್ರೇಕ್ ಬಿದ್ದಿತ್ತು. ಕಾರಣ ಅಲ್ಲಿ ಕ್ರಿಕೆಟ್‌ನದ್ದೇ ಮಾತು!ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಠವನ್ನು ಬದಿಗಿಟ್ಟು ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ವೀಕ್ಷಿಸಲು ಸಾಲುಗಟ್ಟಿ ನಿಂತಿದ್ದರು.ಇದಕ್ಕೆ ಕಾರಣ 250 ಎಕರೆ ಪ್ರದೇಶದಲ್ಲಿರುವ ಈ ಕ್ಯಾಂಪಸ್‌ನ ಕ್ರೀಡಾಂಗಣದಲ್ಲಿ ಭಾರತ ತಂಡದ ಆಟಗಾರರು ಅಭ್ಯಾಸ ನಡೆಸಲು ಆಗಮಿಸಿದ್ದರು.ಯುವರಾಜ್ ಸಿಂಗ್, ಸುರೇಶ್ ರೈನಾ, ವಿರಾಟ್ ಕೊಹ್ಲಿ, ಮುನಾಫ್ ಪಟೇಲ್, ಪಿಯೂಷ್ ಚಾವ್ಲಾ, ಯೂಸುಫ್ ಪಠಾಣ್ ಹಾಗೂ ಸ್ಥಳೀಯ ಫೇವರಿಟ್ ಆರ್.ಅಶ್ವಿನ್ ಎರಡು ಗಂಟೆ ಕಾಲ ಅಭ್ಯಾಸ ನಡೆಸಿದರು. ಅವರಿಗೆ ಕೋಚ್ ಗ್ಯಾರಿ ಕರ್ಸ್ಟನ್ ಮಾರ್ಗದರ್ಶನ ನೀಡಿದರು.ಆಟಗಾರರ ನೆಟ್ಸ್ ಪ್ರಾಕ್ಟೀಸ್ ವೀಕ್ಷಿಸಿದ ಭವಿಷ್ಯದ ವಿಜ್ಞಾನಿಗಳು, ಎಂಜಿನಿಯರ್‌ಗಳು ತುಂಬಾ ಖುಷಿಪಟ್ಟರು. ಕೆಲವರು ಕ್ಲಾಸ್‌ಗೆ ಚಕ್ಕರ್ ಹಾಕಿ ಬಂದಿದ್ದರು. ಕ್ಯಾಂಪಸ್‌ನಲ್ಲಿರುವ ಕಾಲೇಜ್ ಕಟ್ಟಡದ ಮೇಲೆಲ್ಲಾ ನಿಂತು ತಮ್ಮ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಂಡರು. ಆಟಗಾರರು ಕೂಡ ಅವರತ್ತ ಕೈಬೀಸಿ ಮತ್ತಷ್ಟು ಖುಷಿಗೆ ಕಾರಣರಾದರು.ಗುರುವಾರದ ಪಂದ್ಯಕ್ಕೆ ಇಂಗ್ಲೆಂಡ್ ಹಾಗೂ ವೆಸ್ಟ್‌ಇಂಡೀಸ್ ಆಟಗಾರರು ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ ಕಾರಣ ಭಾರತ ತಂಡದವರು 14 ಕಿ.ಮೀ.ದೂರದಲ್ಲಿರುವ ಐಐಟಿ ಕ್ಯಾಂಪಸ್‌ಗೆ ಬಂದಿದ್ದರು. ಗುರುವಾರ ಕೂಡ ಇಲ್ಲಿಯೇ ಅಭ್ಯಾಸ ನಡೆಸಲಿದ್ದಾರೆ.ಮತ್ತೆ ಅಭ್ಯಾಸಕ್ಕೆ ಚಕ್ಕರ್: ವಿಶ್ವಕಪ್‌ನಂತಹ ಪ್ರಮುಖ ಟೂರ್ನಿಯಲ್ಲಿ ಆಡುತ್ತಿದ್ದರೂ ಕೆಲ ಆಟಗಾರರು ಮತ್ತೆ ಅಭ್ಯಾಸ ತಪ್ಪಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ದಕ್ಷಿಣ ಆಫ್ರಿಕಾ ಎದುರಿನ ಪಂದ್ಯ ಮುಗಿದು ನಾಲ್ಕು ದಿನಗಳು ಕಳೆದಿವೆ. ಆದರೆ ಮುಂದಿನ ಪಂದ್ಯಕ್ಕೆ ಅಭ್ಯಾಸ ನಡೆಸುವ ಮನಸ್ಸು ಈ ತಂಡದ ಪ್ರಮುಖ ಆಟಗಾರರಿಗೆ ಇದ್ದಂತೆ ಕಾಣಿಸುತ್ತಿಲ್ಲ.ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್, ಮಹೇಂದ್ರ ಸಿಂಗ್ ದೋನಿ, ಹರಭಜನ್ ಸಿಂಗ್, ಸಚಿನ್ ತೆಂಡೂಲ್ಕರ್, ಆಶೀಶ್ ನೆಹ್ರಾ ಹಾಗೂ ಎಸ್.ಶ್ರೀಶಾಂತ್ ಅಭ್ಯಾಸಕ್ಕೆ ಬರಲಿಲ್ಲ. ಈ ಟೂರ್ನಿಯಲ್ಲಿ ಹಾಲೆಂಡ್, ಐರ್ಲೆಂಡ್ ಹಾಗೂ ಬಾಂಗ್ಲಾದೇಶದಂತಹ ದುರ್ಬಲ ತಂಡದ ಎದುರು ಮಾತ್ರ ಗೆದ್ದಿದ್ದಾರೆ. ಇಂಗ್ಲೆಂಡ್ ಎದುರು ಟೈ ಹಾಗೂ ದಕ್ಷಿಣ ಆಫ್ರಿಕಾ ಎದುರು ಸೋಲು ಕಂಡಿದ್ದಾರೆ.ದೋನಿ, ಭಜ್ಜಿ, ನೆಹ್ರಾ, ಶ್ರೀಶಾಂತ್ ಹೋಟೆಲ್‌ನಲ್ಲಿಯೇ ವಿಶ್ರಾಂತಿ ಪಡೆದರು. ಸಚಿನ್, ಸೆಹ್ವಾಗ್, ಗಂಭೀರ್ ಹಾಗೂ ಜಹೀರ್ ಬುಧವಾರ ಸಂಜೆ ತಂಡ ಸೇರಿಕೊಂಡರು. ಕೆಲ ಮೂಲಗಳ ಪ್ರಕಾರ ನವದೆಹಲಿಯಲ್ಲಿ ಗಂಭೀರ್ ಅವರ ನಿಶ್ಚಿತಾರ್ಥ ಇದ್ದ ಕಾರಣ ಇಲ್ಲಿಗೆ ಆಗಮಿಸಲು ತಡವಾಯಿತು ಎನ್ನಲಾಗುತ್ತಿದೆ. ಐಪಿಎಲ್ ಮುಗಿದ ಮೇಲೆ ಅವರು ವಿವಾಹವಾಗುತ್ತಿದ್ದಾರೆ.ಭಾರತ ತಂಡ ಭಾನುವಾರ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ಆಡಬೇಕಾಗಿದೆ. ಈ ತಂಡದವರ ಕ್ವಾರ್ಟರ್ ಫೈನಲ್ ಸ್ಥಾನ ಇನ್ನೂ ಖಚಿತವಾಗಿಲ್ಲ. ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ದುರ್ಬಲವಾಗಿರುವ ಈ ತಂಡದವರು ಭಾರಿ ಟೀಕೆಗೆ ಒಳಗಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.