ಮಂಗಳವಾರ, ಜೂನ್ 22, 2021
24 °C

ಐ.ಟಿ ಉದ್ಯಮಕ್ಕೂ ನೀರಿನ ಬರದ ಬಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐ.ಟಿ ಉದ್ಯಮಕ್ಕೂ ನೀರಿನ ಬರದ ಬಿಸಿ

ಬೆಂಗಳೂರು: ನಗರದಲ್ಲಿ ಕುಡಿಯುವ ನೀರಿನ ಅಭಾವ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರ ಬಿಸಿ ಈಗ ಐಟಿ ಕಂಪೆನಿ ಉದ್ಯೋಗಿಗಳಿಗೂ ತಟ್ಟಿದೆ. ನೀರಿನ ಸಮಸ್ಯೆಯಿಂದ ಕಂಗೆಟ್ಟಿರುವ ಕಂಪೆನಿಗಳು ನೀರನ್ನು ಮಿತವಾಗಿ ಬಳಕೆ ಮಾಡುವಂತೆ ಉದ್ಯೋಗಿಗಳಿಗೆ ಮನವಿ ಮಾಡಿವೆ. ಪ್ರಮುಖ ಐಟಿ ಕಂಪೆನಿಗಳು ಆಂತರಿಕ ಸುತ್ತೋಲೆ ಸಹ ಕಳುಹಿಸಿವೆ.ಸ್ನಾನಗೃಹ ಇರುವ ಜಿಮ್ನಾಷಿಯಂ ಇತರೆಡೆ ನೀರನ್ನು ಮಿತವಾಗಿ ಬಳಸಿ. ಸ್ನಾನ ಗೃಹಗಳಲ್ಲಿ ಶವರ್‌ಗೆ ಬದಲಾಗಿ ಬಕೆಟ್ ಬಳಸಿ. ಬಟ್ಟೆ ತೊಳೆಯುವಾಗ ನೀರಿನ ಮಿತವ್ಯಯವಿರಲಿ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕೆಲ ಕಂಪೆನಿಗಳು ವಾರಾಂತ್ಯದ ದಿನಗಳಲ್ಲಿ ಜಿಮ್ನಾಷಿಯಂ ಮುಚ್ಚಲು ನಿರ್ಧರಿಸಿವೆ. ಈಜುಕೊಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.ನೀರಿನ ಮಿತವ್ಯಯದ ಬಗ್ಗೆ ಕಂಪೆನಿ ಸುತ್ತೋಲೆ ಕಳುಹಿಸಿರುವುದನ್ನು ಇನ್ಫೋಸಿಸ್‌ನ ಉದ್ಯೋಗಿ ಪ್ರಕಾಶ್ (ಹೆಸರು ಬದಲಾಯಿಸಲಾಗಿದೆ) ಖಚಿತಪಡಿಸಿದ್ದಾರೆ.ಎರಡು ದಿನದ ಹಿಂದೆಯೇ ಕಂಪೆನಿ ಹೊರಡಿಸಿದ್ದ ಆಂತರಿಕ ಸುತ್ತೋಲೆ ಸಿಕ್ಕಿದೆ. ಅನವಶ್ಯಕ ನೀರಿನ ಬಳಕೆ ಮತ್ತು ನೀರಿನ ಬಳಕೆ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಿ. ನೀರಿನ ಬಗ್ಗೆ ಜಾಗೃತಿ ಮೂಡಿಸಿ ಎಂದು ತಿಳಿಸಲಾಗಿದೆ ಎಂದು ಪ್ರಕಾಶ್ ಹೇಳಿದರು. ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿರುವಂತೆ ನೀರಿನ ಖರೀದಿ ಹಲವು ಕಂಪೆನಿಗಳಿಗೆ ದುಬಾರಿಯಾಗುತ್ತಿದೆ. `ಸಂಘವು ನೀರಿಗಾಗಿ ಒಂದು ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಜಲಮಂಡಳಿ, ಕೊಳವೆ ಬಾವಿ ನೀರು ಹಾಗೂ ಖಾಸಗಿ ವ್ಯಕ್ತಿಗಳಿಂದ ನೀರು ಖರೀದಿಸಲು ಮಾಡುವ ವೆಚ್ಚ ಇದರಲ್ಲಿ ಸೇರಿದೆ~ ಎಂದು ಎಲೆಕ್ಟ್ರಾನಿಕ್‌ಸಿಟಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಬಾಬು ರಂಗಸ್ವಾಮಿ ಹೇಳುತ್ತಾರೆ.`ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಕೊಳಚೆ ನೀರನ್ನು ಶುದ್ಧೀಕರಿಸಿ ಬಳಸುವ ವ್ಯವಸ್ಥೆಯೂ ಇದೆ. ಆದರೂ ನೀರಿನ ಸಮಸ್ಯೆ ತೀವ್ರವಾಗಿದೆ. ಆದ್ದರಿಂದ ಪ್ರತಿ ಕಂಪೆನಿಗೆ ಎಷ್ಟು ಪ್ರಮಾಣದ ನೀರು ಬೇಕು ಎಂದು ಅಂದಾಜು ಮಾಡಲು ನಿರ್ಧರಿಸಲಾಗಿದೆ~ ಎಂದು ಅವರು ಹೇಳಿದರು.ಪ್ರತಿ ತಿಂಗಳು 28 ಮಿಲಿಯನ್ ಲೀಟರ್ ನೀರು ಎಲೆಕ್ಟ್ರಾನಿಕ್‌ಸಿಟಿಗೆ ಪೂರೈಕೆಯಾಗುತ್ತಿದೆ. ವಾಣಿಜ್ಯ ದರದಲ್ಲಿ (ಕಿಲೋ ಲೀಟರ್ 60 ರೂಪಾಯಿ) ಸಂಘ ನೀರು ಖರೀದಿಸುತ್ತಿದೆ.ಜಲಮಂಡಳಿಗೆ ಪ್ರತಿ ತಿಂಗಳು 17 ಲಕ್ಷ ರೂಪಾಯಿ ಪಾವತಿಸಲಾಗುತ್ತಿದೆ. ಕೋನಪ್ಪನಅಗ್ರಹಾರ ಮತ್ತು ದೊಡ್ಡತೋಗೂರಿನಲ್ಲಿರುವ ಕೆಲ ಕಂಪೆನಿಗಳಿಗೂ ಸಂಘವು ಟ್ಯಾಂಕರ್ ಮೂಲಕ ನೀರು ಕಳುಹಿಸುತ್ತಿದೆ.ಎಲೆಕ್ಟ್ರಾನಿಕ್‌ಸಿಟಿ ಭಾರತದಲ್ಲೇ ಅತಿ ದೊಡ್ಡ ಕೈಗಾರಿಕಾ ಪ್ರದೇಶವಾಗಿದೆ. 332 ಎಕರೆ ವಿಸ್ತಾರವಿರುವ ಈ ಪ್ರದೇಶದಲ್ಲಿ 150 ಕಂಪೆನಿಗಳಿವೆ. ಇಲ್ಲಿ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್ ಮತ್ತು ಕಾಲೇಜ್‌ಗಳು ಇವೆ. ಇಲ್ಲಿರುವ ಒಟ್ಟು ಐಟಿ ಉದ್ಯೋಗಿಗಳಲ್ಲಿ ಶೇ 20ರಷ್ಟು ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.