ಸೋಮವಾರ, ಮೇ 23, 2022
21 °C

ಐ.ಟಿ ರಾಷ್ಟ್ರೀಯ ಕರಡು ನೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐ.ಟಿ ರಾಷ್ಟ್ರೀಯ ಕರಡು ನೀತಿ

ನವದೆಹಲಿ (ಪಿಟಿಐ): ಭಾರತವನ್ನು ಜಾಗತಿಕ ಐ.ಟಿ ಶಕ್ತಿಯಾಗಿ ಇನ್ನಷ್ಟು ಬಲಪಡಿಸುವ, 2020ರಷ್ಟೊತ್ತಿಗೆ 100 ಲಕ್ಷದಷ್ಟು ಹೆಚ್ಚುವರಿ ಕುಶಲ ತಂತ್ರಜ್ಞರ ಸೃಷ್ಟಿ ಮತ್ತು ಮಾಹಿತಿ ತಂತ್ರಜ್ಞಾನ ವಲಯದಿಂದ 300 ಶತಕೋಟಿ ಡಾಲರ್‌ಗಳಷ್ಟು ರಫ್ತು ವರಮಾನದ (ರೂ 15,00,000 ಕೋಟಿ) ಗುರಿ ಹೊಂದಿರುವ ಮಾಹಿತಿ ತಂತ್ರಜ್ಞಾನದ ಹೊಸ ರಾಷ್ಟ್ರೀಯ ಕರಡು ನೀತಿಯನ್ನು ಕೇಂದ್ರ ಸರ್ಕಾರ ಅನಾವರಣಗೊಳಿಸಿದೆ.2020ರ ಹೊತ್ತಿಗೆ ದೇಶದ  ಐ.ಟಿ ರಫ್ತು ಮೊತ್ತವು 200 ಶತಕೋಟಿ ಡಾಲರ್‌ಗಳು ಮತ್ತು ರಫ್ತು ವರಮಾನವು 300 ಶತಕೋಟಿ ಡಾಲರ್‌ಗಳಷ್ಟು ಗುರಿ ತಲುಪುವ ಉದ್ದೇಶವನ್ನು ಈ  ಕರಡು ನೀತಿ ಒಳಗೊಂಡಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್, ಶುಕ್ರವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.ಸದ್ಯಕ್ಕೆ ದೇಶದ ರಫ್ತು ವರಮಾನ 59 ಶತಕೋಟಿ (ರೂ 2,95,000 ಕೋಟಿ) ಮತ್ತು ವರಮಾನವು 88 ಶತಕೋಟಿ ಡಾಲರ್‌ಗಳಷ್ಟು (ರೂ 4,40,000 ಕೋಟಿ) ಇದೆ. ದೇಶಿ ಐ.ಟಿ ಉದ್ಯಮವು ಸದ್ಯಕ್ಕೆ ರಫ್ತು ವಹಿವಾಟಿನಿಂದ ಶೇ 80ರಷ್ಟು ವರಮಾನ ಪಡೆಯುತ್ತಿದ್ದು, 25 ಲಕ್ಷದಷ್ಟು ತಂತ್ರಜ್ಞರು ದುಡಿಯುತ್ತಿದ್ದಾರೆ.

ಈ ಕರಡು ನೀತಿಯನ್ನು ಸಾರ್ವಜನಿಕರು ಮತ್ತು ಉದ್ಯಮದ ಅಭಿಪ್ರಾಯ ಪಡೆಯಲು ಬಿಡುಗಡೆ ಮಾಡಲಾಗುತ್ತಿದೆ.

 

ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಇಲಾಖೆಯ ಅಂತರಜಾಲ ತಾಣದಲ್ಲಿ ವಿವರಗಳು ಲಭ್ಯ ಇರಲಿವೆ.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ತೆರಿಗೆ ಲಾಭಗಳನ್ನು ನೀಡಲೂ ಕರಡು ನೀತಿಯಲ್ಲಿ ಉದ್ದೇಶಿಸಲಾಗಿದೆ. ಸಾಫ್ಟ್‌ವೇರ್ ಅನ್ನು ಅಗ್ಗದ ದರಕ್ಕೆ ಬಾಡಿಗೆಗೆ ಪಡೆಯುವ (ಕ್ಲೌಡ್ ಕಂಪ್ಯೂಟಿಂಗ್) ತಂತ್ರಜ್ಞಾನದ ಜಾಗತಿಕ ಮಾರುಕಟ್ಟೆ, ಮೊಬೈಲ್ ಆಧಾರಿತ ಮೌಲ್ಯವರ್ಧಿತ ಸೇವೆಗಳ ಬಗ್ಗೆಯೂ ಈ ನೀತಿ ಗಮನ ಹರಿಸಲಿದೆ.ಐ.ಟಿ ವಲಯದಲ್ಲಿ ಭಾರತ ದೀರ್ಘಾವಧಿಯಲ್ಲಿಯೂ ತನ್ನ ಪ್ರಭಾವ ಮುಂದುವರೆಸಿಕೊಂಡು ಹೋಗಲು ಸೂಕ್ತವಾಗಿ ನೆರವಾಗುವ ಮತ್ತು ಕಾರ್ಯತಂತ್ರ ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂದು ಸಿಬಲ್ ನುಡಿದರು.ಎರಡನೇ ಹಂತದ ನಗರಗಳಲ್ಲಿ ಬಂಡವಾಳ ಹೂಡಿಕೆ ಉತ್ತೇಜಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಂಡು ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲೂ  ಕರಡು ನೀತಿಯಲ್ಲಿ ಉದ್ದೇಶಿಸಲಾಗಿದೆ.ಬೆಂಗಳೂರು, ಪುಣೆ, ಮುಂಬೈಯಂತಹ ಪ್ರಮುಖ ನಗರಗಳಿಗೆ ಸೀಮಿತವಾಗಿರುವ ಸಾಫ್ಟ್‌ವೇರ್ ಸಂಸ್ಥೆಗಳ ವಿಸ್ತರಣೆ ಮತ್ತು ಐ.ಟಿ ಕೇಂದ್ರೀತ ಚಟುವಟಿಕೆಗಳು ಇತರ ನಗರಗಳಿಗೂ ವಿಸ್ತರಿಸಲು ಅಗತ್ಯವಾದ ಕ್ರಮಗಳ ವಿವರಗಳನ್ನು ಈ ನೀತಿ ಒಳಗೊಂಡಿದೆ ಎಂದು ಕಪಿಲ್ ಸಿಬಲ್ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.