ಶನಿವಾರ, ಜನವರಿ 28, 2023
19 °C

ಒಂದು ಕಾಡು ಎರಡು ಹೆಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದು ಕಾಡು ಎರಡು ಹೆಸರು

ಒಂದೇ ಅರಣ್ಯ. ಅದಕ್ಕೆ ಒಂದೊಂದು ದೇಶದಲ್ಲಿ ಒಂದೊಂದು ಹೆಸರು. ಭಾರತ ಮತ್ತು ನೇಪಾಳ ಎರಡೂ ದೇಶಗಳ ಗಡಿಯಲ್ಲಿ ಹರಡಿರುವ ಈ ಅರಣ್ಯ ನೇಪಾಳದಲ್ಲಿ ರೋಯಲ್ ಚಿತ್‌ವನ್ ರಾಷ್ಟ್ರೀಯ ಉದ್ಯಾನವನ ಎಂದು ಕರೆಸಿಕೊಂಡರೆ, ಬಿಹಾರದಲ್ಲಿ ‘ವಾಲ್ಮೀಕಿನಗರ ಹುಲಿಗಳ ರಕ್ಷಣಾವಲಯ’ ಎಂಬ ಹೆಸರನ್ನು ಪಡೆದಿದೆ. ಒಂದೇ ಅರಣ್ಯ ಎರಡು ದೇಶಗಳಲ್ಲಿ ಹಂಚಿಹೋದ ಕಾರಣ ಎರಡು ಹೆಸರು.ನೇಪಾಳ ಸರ್ಕಾರ ವಿದೇಶಿ ಪರ್ಯಟಕರನ್ನು ಸೆಳೆಯಲು ಚಿತ್‌ವನ್‌ನಲ್ಲಿ ಸಾಕಷ್ಟು ಸೌಕರ್ಯಗಳನ್ನು ಮಾಡಿಕೊಟ್ಟಿದೆ. ಹಾಗಾಗಿ, ದಕ್ಷಿಣ ನೇಪಾಳದ ಚಿತ್‌ವನ್ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆ ಜಾಸ್ತಿ. ಆದರೆ ಅದಕ್ಕಿಂತಲೂ ಸುಂದರವಾಗಿರುವ ವಾಲ್ಮೀಕಿನಗರ ಹುಲಿಗಳ ರಕ್ಷಣಾವಲಯದಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ.ನೇಪಾಳದಲ್ಲಿ ಸುಮಾರು 16 ರಾಷ್ಟ್ರೀಯ ಉದ್ಯಾನ ಮತ್ತು ಸಂರಕ್ಷಿತ ಅರಣ್ಯಗಳಿವೆ. ಇವುಗಳಲ್ಲೊಂದು ರೋಯಲ್ ಚಿತ್‌ವನ್ ರಾಷ್ಟ್ರೀಯ ಉದ್ಯಾನವನ. ಇಲ್ಲಿ ಪ್ರವಾಸಿಗರಿಗೆ ಸಾಕಷ್ಟು ರೆಸಾರ್ಟ್‌ಗಳಿವೆ. ಅದು ನೇಪಾಳ-ಭಾರತ ಗಡಿ ಭಾಗವಾದ್ದರಿಂದ ‘ಮಾದೇಶಿ’ಗಳ  (ಭಾರತೀಯ ಮೂಲದ ನೇಪಾಳಿಗಳು) ಸಂಖ್ಯೆ ಅಧಿಕ. ಅವರು ಥ್ಯಾ ಸೇರಿದಂತೆ ವಿವಿಧ ಜಾನಪದ ನೃತ್ಯ ಪ್ರದರ್ಶನಗಳನ್ನು ಪ್ರವಾಸಿಗರಿಗಾಗಿ ನಡೆಸುತ್ತಾರೆ. ನಮ್ಮೂರಿನ ‘ತಮಟೆ’ಗೆ ನವಿಲುಗರಿ ಸಿಕ್ಕಿಸಿ ಏಳೆಂಟು ಜಾನಪದ ಕಲಾವಿದರು ಅದನ್ನು ಬಡಿಯುತ್ತಾ, ಹಾಡು ಹೇಳುತ್ತಾ ಸುತ್ತು ಬರುವಂಥ ನೃತ್ಯಗಳಿವೆ.ರೋಯಲ್ ಚಿತ್‌ವನ್ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ಸವಾರಿ ಜನಪ್ರಿಯ. ಸೌರಹ್ ಚಿತ್‌ವನ್‌ನಲ್ಲಿ ಆನೆ ಮೇಲೆ (ನಾಲ್ವರು ಕೂರಬಹುದು) ಕೂತರೆ ಎರಡು ಗಂಟೆ ಕಾಲ ಅರಣ್ಯ ಸುತ್ತುಹಾಕಿ ಬರಬಹುದು. ಮರದ ಗೆಲ್ಲುಗಳನ್ನು ಮುರಿಯುತ್ತಾ ಆನೆ ಮುಂದೆ ಹೋಗುತ್ತಿದ್ದಂತೆ ಭಯವೂ ಆಗುತ್ತದೆ.932 ಚದರ ಕಿ.ಮೀ. ವ್ಯಾಪ್ತಿಯ ಈ ಉದ್ಯಾನ ‘ವರ್ಲ್ಡ್ ಹೆರಿಟೇಜ್’ ಮಾನ್ಯತೆ ಪಡೆದಿದೆ. 50ಕ್ಕೂ ಹೆಚ್ಚು ಜಾತಿಯ ಸಸ್ಯಗಳು, 40ಕ್ಕೂ ಹೆಚ್ಚು ವಿವಿಧ ಬಗೆಯ ಪ್ರಾಣಿಗಳು, ಅದರಲ್ಲೂ ರಾಯಲ್ ಬಂಗಾಳ ಹುಲಿ, ಒಂದು ಕೊಂಬಿನ ಘೇಂಡಾಮೃಗ, ಸಾರಂಗ... ಹೀಗೆ ಹತ್ತು ಹಲವು ಪಶುಪಕ್ಷಿಗಳನ್ನು ವೀಕ್ಷಿಸಬಹುದು. ಆನೆ ಸವಾರಿಗೆ ಖಾಸಗಿ ಮತ್ತು ಸರ್ಕಾರಿ ವ್ಯವಸ್ಥೆಗಳಿವೆ. ಮಾವುತನ ಹಿಂದಿ ಭಾಷೆ ಮಾತ್ರ ಅಷ್ಟು ಸುಲಭದಲ್ಲಿ ಭಾರತೀಯರಿಗೆ ಅರ್ಥ ಆಗದು.ಇಲ್ಲಿನ ಪರ್ವತಗಳ ತಳದಲ್ಲಿನ ನದಿಯಲ್ಲಿ ನಾವೆ ಸವಾರಿ ಕೂಡಾ ಪ್ರವಾಸಿಗರಿಗೆ ಇಷ್ಟದ ಸಂಗತಿ. ಜೊತೆಗೆ ಪ್ರವಾಸಿಗರಿಗೆ ಸಂತೋಷವಾಗಲೆಂದು ಆನೆಯನ್ನು ನದಿ ತೀರಕ್ಕೆ ಕೊಂಡೊಯ್ದು ಮಾವುತರು ‘ಸ್ನಾನ’ ಮಾಡಿಸುತ್ತಾರೆ. ಆನೆಯ ಸ್ನಾನದ ದೃಶ್ಯ ಮನರಂಜನೆ ನೀಡುತ್ತದೆ. ಅಂದಹಾಗೆ, ನೇಪಾಳ ಸರ್ಕಾರ 2011ನೇ ವರ್ಷವನ್ನು ‘ಪರ್ಯಟನೆ ವರ್ಷ’ವೆಂದು ಆಚರಿಸುತ್ತಿದೆ.ಪ್ರವಾಸೋದ್ಯಮ ನೇಪಾಳದ ಆದಾಯದ ಪ್ರಮುಖ ಮೂಲ. ಹಾಗಾಗಿ ಪ್ರವಾಸಿಗರಿಗೆ ರಕ್ಷಣೆಯನ್ನು ಕೊಡಲಾಗುತ್ತದೆ. ಮಾವೋವಾದಿ ಉಗ್ರರ ಉಪಟಳವಿದ್ದರೂ ಪ್ರವಾಸಿಗರಿಗೆ ಅನ್ಯಾಯವಾದದ್ದು ಇಲ್ಲಿ ಅಪರೂಪ.ಇದೇ ಅರಣ್ಯದ ಮತ್ತೊಂದು ಭಾಗ ಬಿಹಾರದ ವಾಲ್ಮೀಕಿನಗರ ಹುಲಿಗಳ ರಕ್ಷಣಾವಲಯ. ಇದು 880 ಕಿ.ಮೀ. ಹರಡಿದೆ. ಇಲ್ಲಿನ 530 ಕಿ.ಮೀ.ಯನ್ನು ವ್ಯಾಘ್ರ ಸಂರಕ್ಷಣಾ ಯೋಜನೆಗೆ ಮೀಸಲಿಡಲಾಗಿದೆ. ಇಲ್ಲಿ ರಾಯಲ್ ಬಂಗಾಳ ಹುಲಿ, ಘೇಂಡಾಮೃಗ, ಕಾಡುಕೋಣ, 50 ಅಡಿಯ ಹೆಬ್ಬಾವು, ಕಿಂಗ್ ಕೋಬ್ರಾ ಎಲ್ಲವೂ ವಾಸವಾಗಿವೆ.

 

ನೇಪಾಳದ ಚಿತ್‌ವನ್‌ದಲ್ಲಿ ವನ್ಯಜೀವಿಗಳು ಇಷ್ಟೊಂದು ಸಂಖ್ಯೆಯಲ್ಲಿ ಇಲ್ಲ. ಹಾಗಾಗಿ ಚಿತ್‌ವನ್‌ಗಿಂತ ವಾಲ್ಮೀಕಿನಗರದ್ದು ಇಮ್ಮಡಿ ಸೌಂದರ್ಯ. ಅಲ್ಲದೇ ಇಲ್ಲಿಂದ ಹಿಮಾಲಯದ ಶಿಖರ ಅದ್ಭುತವಾಗಿ ಕಾಣಿಸುತ್ತದೆ. ಆದರೆ ಪ್ರವಾಸಿಗರಿಗೆ ಸಾಕಷ್ಟು ಸೌಕರ್ಯಗಳು ಇಲ್ಲದ್ದರಿಂದ ಇದು ಜನಪ್ರಿಯವಾಗಿಲ್ಲ.

ನೇಪಾಳದ ಚಿತ್‌ವನ್ ಪರ್ಯಟಕರು ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ವಾಲ್ಮೀಕಿ ಪಾರ್ಕ್‌ನಲ್ಲಿ (ಗಂಡಕ್ ನದಿಯಲ್ಲಿ) ಸವಾರಿ ಮಾಡಲು ಪರ್ಯಟಕರೇ ಇಲ್ಲ.ಬುದ್ಧಗಯಾ, ನಾಲಂದ, ಪಾವಾಪುರಿ, ವೈಶಾಲಿ... ಹೀಗೆ ಹಲವು ಪ್ರವಾಸಿ ತಾಣಗಳನ್ನು ನಿರ್ವಹಿಸುತ್ತಿರುವ ಬಿಹಾರ ಸರ್ಕಾರ ವಾಲ್ಮೀಕಿಯನ್ನು ನಿರ್ಲಕ್ಷಿಸಿತ್ತು.ಇತ್ತೀಚೆಗೆ ವಾಲ್ಮೀಕಿ ಹುಲಿ ಸಂರಕ್ಷಣಾ ವಲಯಕ್ಕೆ ಹೊಸ ಕಾಯಕಲ್ಪ ನೀಡಲಾಗುತ್ತಿದೆ. ಪ್ರವಾಸಿಗರಿಗೆ ಹೋಟೆಲ್, ರೆಸ್ಟೊರೆಂಟ್‌ಗಳ ಸೌಕರ್ಯ ಹೆಚ್ಚಿಸಲಾಗುತ್ತಿದೆ. ರಸ್ತೆ ಸೌಲಭ್ಯ ಕಲ್ಪಿಸುವ ವ್ಯವಸ್ಥೆಯಾಗುತ್ತಿದೆ.  ಕಳೆದ ಒಂದೆರಡು ವರ್ಷಗಳಿಂದ ವಾಲ್ಮೀಕಿನಗರ ಹುಲಿಗಳ ಸಂರಕ್ಷಣಾವಲಯ ಪ್ರವಾಸಿಗರನ್ನು ಆಕರ್ಷಿಸಲು ಆರಂಭಿಸಿದೆ. ಭಾರತ-ನೇಪಾಳ ಗಡಿಪ್ರದೇಶ ಸೊನೌಲಿ ಮೂಲಕ ನೇಪಾಳದ ಪೋಖ್ರಾ, ಕಠ್ಮಂಡುವಿಗೆ ಪ್ರವಾಸ ಹಮ್ಮಿಕೊಳ್ಳುವವರು ಚಿತ್‌ವನ್ ರಾಷ್ಟ್ರೀಯ ಉದ್ಯಾನವನಕ್ಕೂ ಹೋಗಿ ಬರಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.