ಬುಧವಾರ, ಮಾರ್ಚ್ 3, 2021
28 °C
ತುಂಬಿ ಹರಿಯುತ್ತಿರುವ ಹಳ್ಳ ಕೊಳ್ಳಗಳು, ಅಸ್ತವ್ಯಸ್ತಗೊಂಡ ಜನ ಜೀವನ

ಒಂದೇ ದಿನ 21 ಸೆಂ.ಮೀ. ದಾಖಲೆ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದೇ ದಿನ 21 ಸೆಂ.ಮೀ. ದಾಖಲೆ ಮಳೆ

ಖಾನಾಪುರ: ಮಲಪ್ರಭೆಯ ಉಗಮ­ಸ್ಥಾನ ಮತ್ತು ತಾಲ್ಲೂಕಿನ ಕಣಕುಂಬಿ ಅರಣ್ಯದಲ್ಲಿ  ಒಂದೇ ದಿನ 21 ಸೆಂ.ಮೀ ಮಳೆ ಸುರಿದು ತಾಲ್ಲೂಕಿ­ನಲ್ಲೇ ಅಧಿಕ ಮಳೆ ಸುರಿದ ದಾಖಲೆ ನಿರ್ಮಿಸಿದೆ.ಕಣಕುಂಬಿ ಮಟ್ಟಿಗೆ ಶ್ರಾವಣ ಮಾಸದ ಆರಂಭ ರುದ್ರ ರಮಣೀಯ­ವಾಗಿದ್ದು, ಗ್ರಾಮದ ಸುತ್ತಮುತ್ತ ಆ.1­ರಂದು 4 ಸೆಂ.ಮೀ, 2 ರಂದು 13.7 ಸೆಂ.ಮೀ, 3 ರಂದು 4.5 ಸೆಂ.ಮೀ ಮತ್ತು 4 ರಂದು ದಾಖಲೆಯ 21.4 ಸೆಂ.ಮೀ ಮಳೆಯಾದ ದಾಖಲೆ ಇದೆ.ಕಳೆದ ಹಲವು ದಿನಗಳಿಂದ ತಾಲ್ಲೂ­ಕಿ­­ನಾದ್ಯಂತ ಸುರಿಯುತ್ತಿರುವ ಅವ್ಯಾಹತ ಮಳೆಯ ಪರಿಣಾಮ ಜನ­ಜೀವನ ಅಸ್ತವ್ಯಸ್ತಗೊಂಡಿದ್ದು, ಅರಣ್ಯ ಪ್ರದೇಶದ ಬಹುತೇಕ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಮಾಡುವ ಮಾರ್ಗದಲ್ಲಿ ಮರಗಿಡಗಳು ಉರುಳಿ ಬಿದ್ದ ಕಾರಣ ವಿದ್ಯುತ್ ಸರಬರಾಜಿಗೆ ಅಡಚಣೆ ಉಂಟಾಗಿ ಕಣಕುಂಬಿ, ಜಾಂಬೋಟಿ, ಗುಂಜಿ, ಹೆಮ್ಮಡಗಾ, ನಿಲಾವಡೆ, ಬೈಲೂರು, ಲೋಂಡಾ ಅರಣ್ಯದ 50ಕ್ಕೂ ಹೆಚ್ಚು ಗ್ರಾಮಗಳು ಕತ್ತಲಲ್ಲಿ ಮುಳುಗಿವೆ. ಸತತ ನಾಲ್ಕನೇ ದಿನವೂ ಎಡೆ­ಬಿಡದೇ ಸುರಿಯುತ್ತಿರುವ ಮಳೆ­ಯಿಂದಾ­ಗಿ ಪಾಂಡರಿ, ಮಹಾದಾಯಿ ಹಾಗೂ ಮಲಪ್ರಭಾ ನದಿಗಳು ತುಂಬಿ ಹರಿಯುತ್ತಿವೆ. ತಾಲ್ಲೂಕಿನ ಹೆಮ್ಮಡಗಾ, ಭೀಮಗಡ, ನೀಲಾವಡೆ, ಗವ್ವಾಳಿ, ಶಿರೋಲಿ, ನೇರಸಾ, ಗುಂಜಿ, ಕಣಕುಂಬಿ, ಚಾಪೋಲಿ, ಜಾಮಗಾಂವ, ಅಮ­ಗಾಂವ, ಕಬನಾಳಿ, ಮಳವ, ದೇಗಾಂವ,ಜಾಂಬೋಟಿ, ಭೀಮಗಡ ಅರಣ್ಯ ಭಾಗದಲ್ಲಿ ಉತ್ತಮ ಮಳೆ­ಯಾಗು­ತ್ತಿರುವ ಕಾರಣ ಕಳಸಾ, ಬಂಡೂರಿ, ಕುಂಬಾರ, ಅಲಾತ್ರಿ, ಮುಂಗೇತ್ರಿ, ನಿಟ್ಟೂರ, ಪಣ­ಸೂರಿ ಹಳ್ಳಕೊಳ್ಳಗಳೂ ಸಹ ತುಂಬಿ ಹರಿ­ಯುತ್ತಿವೆ.ನದಿಗಳು ಹಾಗೂ ಹಳ್ಳ­ಗಳು ತುಂಬಿ ಹರಿಯುತ್ತಿರುವ ಕಾರಣ ತಾಲ್ಲೂಕಿನ ಶಿರೋಲಿ ಹಾಗೂ ಮಾಂಗೇ­ನಹಾಳ, ನೇರಸಾ ಹಾಗೂ ಕೊಂಗಳಾ, ಲೋಂಡಾ ಹಾಗೂ ಮಾಚಾಳಿ, ಕೌಲಾ­ಪುರವಾಡಾ ಹಾಗೂ ಮೋದೆ­ಕೊಪ್ಪ ತೋರಾಳಿ, ಗೊಲ್ಯಾಳಿ ಹಾಗೂ ದೇವಾ­ಚಿಹಟ್ಟಿ  ನಡು­ವಿನ ಸಂಪರ್ಕ ಸೇತುವೆ­ಗಳು ಜಲಾವೃತ­ಗೊಂಡು ವಾಹನ ಸಂಚಾರ ಸ್ಥಗಿತಗೊಂಡಿದೆ.ಚಿಕ್ಕೋಡಿ ವರದಿ

ಮಹಾರಾಷ್ಟ್ರದ ಘಟ್ಟ ಪ್ರದೇಶದ ನದಿ ಜಲಾನಯನ ಪ್ರದೇಶಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಎಡೆಬಿಡದೇ ಸುರಿಯು­ತ್ತಿರುವ ಮಳೆಯಿಂದಾಗಿ ತಾಲ್ಲೂ­­­ಕಿನ ಹಿರಿಹೊಳೆ ಕೃಷ್ಣಾ ಮತ್ತು ಉಪನದಿಗಳು ಒಡಲು ಉಕ್ಕಿ ಹರಿ­ಯುತ್ತಿದ್ದು, ತಾಲ್ಲೂಕಿನಲ್ಲಿ ಕೆಳಮಟ್ಟದ ಆರು ಸೇತುವೆಗಳು ಜಲಾವೃತಗೊಂಡಿವೆ.ಇದರಿಂದಾಗಿ ಜನರು ಸುತ್ತು ಬಳಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ತಾಲ್ಲೂಕಿನಲ್ಲಿ ಗುರುವಾರ ದೂಧಗಂಗಾ ನದಿಗೆ 17, 776 ಕ್ಯುಸೆಕ್‌ ಮತ್ತು ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 1.00775 ಕ್ಯುಸೆಕ್‌ ಸೇರಿದಂತೆ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಯಲ್ಲಿ ಒಟ್ಟು 1.18,5521 ಕ್ಯುಸೆಕ್‌ ನೀರು ಹರಿದು ಬರುತ್ತಿದೆ.ಕೃಷ್ಣಾ ನದಿಗೆ ಇರುವ ಕಲ್ಲೋಳ–ಯಡೂರ, ದೂಧಗಂಗಾ ನದಿಯ ಮಲಿಕವಾಡ–ದತ್ತವಾಡ, ಕಾರದಗಾ–ಭೋಜ ಮತ್ತು ವೇದಗಂಗಾ ನದಿಗೆ ಇರುವ ಜತ್ರಾಟ–ಭೀವಶಿ, ಅಕ್ಕೋಳ–ಸಿದ್ನಾಳ ಮತ್ತು ಭೋಜವಾಡಿ–ಕುನ್ನೂರ ಗ್ರಾಮಗಳ ಮಧ್ಯೆ ಇರುವ ಕೆಳಮಟ್ಟದ ಸೇತು­ವೆಗಳು ಮುಳುಗಿದ್ದು  ಹತ್ತಾರು ಕಿ.ಮಿ ಸುತ್ತುಬಳಸಿ ಪ್ರಯಾಣಿಸಬೇಕಾದ ಅನಿ­ವಾರ್ಯತೆ ಎದುರಾಗಿದೆ.  ಗುರುವಾರ ಬೆಳಿಗ್ಗೆಯಿಂದ ಮಳೆ ಸಾಧಾರಣವಾಗಿ ಸುರಿಯುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.