ಭಾನುವಾರ, ಮೇ 16, 2021
23 °C

ಒಲಿಂಪಿಕ್ಸ್ ಕುಸ್ತಿಗೆ `ಜೀವದಾನ'

ಪ್ರಮೋದ್ ಜಿ.ಕೆ Updated:

ಅಕ್ಷರ ಗಾತ್ರ : | |

ಒಲಿಂಪಿಕ್ಸ್ ಕುಸ್ತಿಗೆ `ಜೀವದಾನ'

ಒಬ್ಬ ಕ್ರೀಡಾಪಟುವಿಗೆ “ನಿನ್ನ ಕನಸೇನು” ಎನ್ನುವ ಪ್ರಶ್ನೆ ಎದುರಿಗಿಟ್ಟಾಗ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕು ಎನ್ನುವ ಉತ್ತರ ಸಹಜವಾಗಿ ಬರುತ್ತದೆ. ಆದರೆ ಈಗ ಒಲಿಂಪಿಕ್ಸ್‌ನಲ್ಲಿದ್ದುಕೊಂಡೇ ಹೊರಬೀಳುವ ದುಸ್ಥಿತಿ ಕುಸ್ತಿಗೆ ಎದುರಾಗಿದೆ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಕುಸ್ತಿಯ ಮೇಲೆ ಕೆಂಗಣ್ಣು ಬೀರಿದೆ. ಆದ್ದರಿಂದ ಈ ಕ್ರೀಡೆಯ ಭವಿಷ್ಯ ತಕ್ಕಡಿಯಲ್ಲಿ ತೂಗಾಡುತ್ತಿದೆ.2020ರ ಒಲಿಂಪಿಕ್ಸ್ `ಅಖಾಡ'ದಿಂದ ಕುಸ್ತಿಯನ್ನು ಹೊರದಬ್ಬುವ ಲೆಕ್ಕಾಚಾರಗಳು ಶುರುವಾಗಿವೆ. ಆದರೆ, ಈ ಕ್ರೀಡೆಯನ್ನು ಒಲಿಂಪಿಕ್ಸ್‌ನಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೊದಲ `ಜೀವದಾನ' ಲಭಿಸಿದೆ. ಇದರ ಲಾಭ ಪಡೆಯಲು ಕುಸ್ತಿ ಆಡುವ ರಾಷ್ಟ್ರಗಳು ತಮ್ಮ ಮುಷ್ಠಿಯನ್ನು ಬಲಗೊಳಿಸಬೇಕಿದೆ.ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಕಳೆದ ವಾರ ನಡೆದ ಐಒಸಿ ಸಭೆಯಲ್ಲಿ 2020ರ ಒಲಿಂಪಿಕ್ಸ್‌ನ ಸ್ಪರ್ಧಾ ಕಣದಲ್ಲಿ ಕುಸ್ತಿಯನ್ನು ಉಳಿಸಿಕೊಳ್ಳುವ ತೀರ್ಮಾನ ಕೈಗೊಳ್ಳಲಾಗಿದೆ. ಇದರ  ಜೊತೆಗೆ ಬೇಸ್‌ಬಾಲ್ ಮತ್ತು ಸ್ಕ್ವಾಷ್ ಸಹ ಸ್ಪರ್ಧೆಯಲ್ಲಿವೆ. ಆದರೆ, ಈ ಮೂರು ಕ್ರೀಡೆಗಳಲ್ಲಿ ಯಾವ ಕ್ರೀಡೆಗೆ ಒಲಿಂಪಿಕ್ಸ್‌ನಲ್ಲಿ ಸ್ಥಾನ ಲಭಿಸಲಿದೆ ಎನ್ನುವುದು ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ಗೊತ್ತಾಗಲಿದೆ.ಆಂತರಿಕ `ಕುಸ್ತಿ' ಕಡಿಮೆಯಾಗಲಿ: ಒಲಿಂಪಿಕ್ಸ್‌ನಲ್ಲಿ ಕುಸ್ತಿ ಉಳಿಯಬೇಕಾದರೆ, ಅದನ್ನು ಬೆಂಬಲಿಸುವ ರಾಷ್ಟ್ರಗಳು ಒಂದಾಗಿ ತಮ್ಮ ಮುಷ್ಠಿಯನ್ನು ಗಟ್ಟಿಮಾಡಬೇಕಿದೆ. ಅದಕ್ಕೂ ಮುನ್ನ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸ್ಪರ್ಧೆಯಲ್ಲಿರುವ ಬೇಸ್‌ಬಾಲ್ ಹಾಗೂ ಸ್ಕ್ವಾಷ್ ಬೆಂಬಲಿಸುವ ರಾಷ್ಟ್ರಗಳನ್ನು ಹಿಂದಿಕ್ಕಬೇಕಿದೆ. ಆಗ, ಕುಸ್ತಿ ಒಲಿಂಪಿಕ್ಸ್‌ನಲ್ಲಿ ಮುಂದುವರಿಯಬಹುದು.ಆದರೆ, ಭಾರತದಲ್ಲಿ ಕ್ರೀಡಾ ಆಡಳಿತಗಾರರು, ಪೈಲ್ವಾನರು ಮತ್ತು ರಾಜಕಾರಣಿಗಳ ನಡುವೆ ಹೊಂದಾಣಿಕೆಯ ಕೊರತೆ ಇದ್ದಂತಿದೆ. ಆಂತರಿಕ ಕಲಹಗಳೇನೇ ಇದ್ದರೂ ಐಒಸಿ ಮುಂದೆ ತಮ್ಮ ಪಟ್ಟು ಸಡಿಲಿಸಬಾರದು. ಇಲ್ಲವಾದರೆ, ಚಿಕ್ಕ ರಾಷ್ಟ್ರ ಎನಿಸಿಕೊಂಡಿರುವ ಅಮೆರಿಕ ತನ್ನ ರಾಷ್ಟ್ರೀಯ ಕ್ರೀಡೆ ಬೇಸ್‌ಬಾಲ್ ಅನ್ನು ಒಲಿಂಪಿಕ್ಸ್‌ನಲ್ಲಿ ಮತ್ತೆ ಸೇರಿಸುವ ಮೂಲಕ ದೊಡ್ಡ ಸಾಧನೆ ಮಾಡುವ ಅಪಾಯವಿದೆ. ಇದಕ್ಕೆ ಕುಸ್ತಿ ಆಡುವ ಪ್ರಮುಖ ರಾಷ್ಟ್ರಗಳಾದ ಭಾರತ, ಕಜಕಸ್ತಾನ, ಉಕ್ರೇನ್, ರಷ್ಯಾ, ಇರಾನ್, ಜಪಾನ್ ಅವಕಾಶ ನೀಡಬಾರದು.  ಕುಸ್ತಿ ಆಡುವ ಉಳಿದ ರಾಷ್ಟ್ರಗಳ ವಾದ ಏನೇ ಇದ್ದರೂ, ಭಾರತ ಮಾತ್ರ ತನ್ನ ಹಿಡಿತ ಸಡಿಲಿಸಬಾರದು. ಒಲಿಂಪಿಕ್ಸ್‌ನಲ್ಲಿ ಕುಸ್ತಿಯ ಮಹತ್ವವನ್ನು ಐಒಸಿಗೆ ಸಾರಿ ಹೇಳುವ ಜೊತೆಗೆ ಇತರೆ ರಾಷ್ಟ್ರಗಳ ವಿಶ್ವಾಸ ಗಳಿಸುವುದೂ ಭಾರತದ ಮುಂದಿರುವ ಸವಾಲು. ಒಲಿಂಪಿಕ್ಸ್‌ನಲ್ಲಿ ಕುಸ್ತಿ ಉಳಿಯುವುದು ಅತೀ ಮುಖ್ಯವಾಗಿದೆ. ಏಕೆಂದರೆ ಭಾರತದ ಪಾಲಿಗೆ ಕುಸ್ತಿ ಕೇವಲ ಕ್ರೀಡೆಯಲ್ಲ. ಅದು ಇಲ್ಲಿನ ಜನರೊಂದಿಗೆ ಭಾವನಾತ್ಮಕ ಬೆಸುಗೆ ಹೊಂದಿದೆ. ಅದಕ್ಕೆ ಉದಾಹರಣೆ ಕರ್ನಾಟಕ.ಆಟದ ಸ್ವರೂಪ, ಸಮಯದಲ್ಲಿ ಕೊಂಚ ಬದಲಾವಣೆಯಾಗಿದೆಯಾದರೂ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಜಾತ್ರೆಯ ಸಂದರ್ಭದಲ್ಲಿ, ಮೈಸೂರು ದಸರಾ, ಹಂಪಿ ಮತ್ತು ಆನೆಗುಂದಿ ಉತ್ಸವಗಳಲ್ಲಿ ಕುಸ್ತಿ ಆಡಿಸಲಾಗುತ್ತದೆ. ಇದಕ್ಕೆ ರಾಜ ಮಹಾರಾಜರ ಕಾಲದಿಂದಲೂ ರಾಜಾಶ್ರಯ ಲಭಿಸಿದೆ. ಸಾಂಸ್ಕೃತಿಕ ಮತ್ತು ಭಾವನಾತ್ಮಕ ನಂಟು ಹೊಂದಿರುವ `ಪೈಲ್ವಾನ'ರ  ಪರಾಕ್ರಮವನ್ನು `ಅಖಾಡ'ದಲ್ಲಿ ಕಣ್ತುಂಬಿಕೊಳ್ಳಲೆಂದೇ ಪ್ರಮುಖ ಉತ್ಸವಗಳನ್ನು ನೋಡಲು ಜನ ಇಂದಿಗೂ ಉತ್ಸುಕರಾಗಿದ್ದಾರೆ.ಭಾರತದ ಭವಿಷ್ಯ: ಒಲಿಂಪಿಕ್ಸ್‌ನಲ್ಲಿ ಕುಸ್ತಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದು ಉಳಿದ ರಾಷ್ಟ್ರಗಳಿಗಿಂತ ಭಾರತಕ್ಕೆ ಅತ್ಯಮೂಲ್ಯವಾಗಿದೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ ಜಯಿಸಿದ್ದು ಒಟ್ಟು ಆರು ಪದಕ. ಅದರಲ್ಲಿ ಎರಡು (ಸುಶೀಲ್ ಕುಮಾರ್ ಮತ್ತು ಯೋಗೀಶ್ವರ್ ದತ್) ಪದಕ ಲಭಿಸಿದ್ದು ಕುಸ್ತಿಯಲ್ಲಿಯೇ ಎನ್ನುವುದು ಭಾರತಕ್ಕೆ ಕುಸ್ತಿ ಎಷ್ಟೊಂದು ಮುಖ್ಯ ಎಂಬುದಕ್ಕೆ ಸಾಕ್ಷಿಯಾಗಿದೆ.ಯುವ ಸ್ಪರ್ಧಿಗಳು ಸಹ ಕುಸ್ತಿಯತ್ತ ಇತ್ತೀಚಿಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಸ್ವತಂತ್ರ್ಯಗೊಂಡ ಬಳಿಕ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಮೊದಲ ಪದಕ ಲಭಿಸಿದ್ದು ಕುಸ್ತಿಯಲ್ಲಿಯೇ. 1952ರ ಒಲಿಂಪಿಕ್ಸ್‌ನಲ್ಲಿ ಮಹಾರಾಷ್ಟ್ರದ ಕೆ.ಡಿ. ಜಾಧವ್ ಕಂಚು ಗೆದ್ದು ಈ ಸಾಧನೆ ಮಾಡಿದ್ದರು. ಯುವ ಸ್ಪರ್ಧಿಗಳಿಗೆ ಜಾಧವ್, ಟಿ.ಆರ್. ಸ್ವಾಮಿ, ಸುಶೀಲ್ ಹಾಗೂ ಯೋಗಿಶ್ವರ್ ಅವರಂತಹ ಪ್ರತಿಭಾವಂತರೇ ಸ್ಫೂರ್ತಿಯಾಗಿದ್ದಾರೆ. ಆದರೆ, ಕುಸ್ತಿಯ ಪಟ್ಟು ಕಲಿತು 2020ರ ವೇಳೆಗೆ ಒಲಿಂಪಿಕ್ಸ್‌ಅಖಾಡದಲ್ಲಿ ಸಾಮರ್ಥ್ಯ ಪ್ರದರ್ಶಿಸಲು ಸಜ್ಜುಗೊಂಡ ಸ್ಪರ್ಧಿಗೆ ಅವಕಾಶವೇ ಇಲ್ಲವೆಂದರೇ ಹೇಗೆ? ಆದ್ದರಿಂದ ಕುಸ್ತಿ ಆಡುವ ಪ್ರಮುಖ ರಾಷ್ಟ್ರಗಳು ಒಂದಾಗುವ ಅನಿವಾರ್ಯತೆ ಎದುರಾಗಿದೆ.59 ರಾಷ್ಟ್ರಗಳ 344 ಕುಸ್ತಿ ಸ್ಪರ್ಧಿಗಳು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. 2012ರ ಒಲಿಂಪಿಕ್ಸ್‌ನಲ್ಲಿ 71 ರಾಷ್ಟ್ರಗಳು ಕಣದಲ್ಲಿದ್ದವು. ಪ್ರತಿ ಒಲಿಂಪಿಕ್ಸ್‌ನಿಂದ ಒಲಿಂಪಿಕ್ಸ್‌ಗೆ ಕುಸ್ತಿಯ ಖ್ಯಾತಿ ಹೆಚ್ಚಾಗುತ್ತಿರುವುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ. ಆದರೆ, ಕುಸ್ತಿಯ ಮೇಲೆ ಐಒಸಿ ಕೆಂಗಣ್ಣು ಬೀರಿರುವುದು ಮಾತ್ರ ವಿಪರ್ಯಾಸ.ಸಜ್ಜಾಗುತ್ತಿದೆ ಅಮೆರಿಕ: `2020ರ ಒಲಿಂಪಿಕ್ಸ್‌ಗೆ ಸೇರ್ಪಡೆಯಾಗುವ ಕ್ರೀಡೆಗಳ ಬಗ್ಗೆ ಅಂತಿಮ ದಿನಾಂಕವನ್ನು (ಸೆಪ್ಟೆಂಬರ್ 7 ರಿಂದ 10) ಐಒಸಿ ಯಾವಾಗ ಠರಾವೊ ಮಾಡಿತೋ ಅಂದಿನಿಂದಲೇ ಅಮೆರಿಕ ತನ್ನ ಕಾರ್ಯವನ್ನು ಚುರುಕುಗೊಳಿಸಿದೆ. ಬೇಸ್‌ಬಾಲ್ ಆಡುವ ಪ್ರಮುಖ ರಾಷ್ಟ್ರಗಳಾದ ಇಂಗ್ಲೆಂಡ್, ಆಸ್ಟೇಲಿಯಾ, ನ್ಯೂಜಿಲೆಂಡ್, ಈಜಿಪ್ಟ್, ಕೆನಡಾ ದೇಶಗಳೂ ಎಚ್ಚರಗೊಂಡಿವೆ.2008ರ ಒಲಿಂಪಿಕ್ಸ್‌ನಲ್ಲಿ ಬೇಸ್‌ಬಾಲ್ ಇತ್ತು. ಆ ಒಲಿಂಪಿಕ್ಸ್‌ನಲ್ಲಿ ಎಂಟು ರಾಷ್ಟ್ರಗಳು (ಅಮೆರಿಕ, ಕೆನಡಾ, ಚೀನಾ, ಚೈನಿಸ್ ತೈಪೆ, ಕ್ಯೂಬಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಹಾಲೆಂಡ್) ಮಾತ್ರ ಪಾಲ್ಗೊಂಡಿದ್ದರಿಂದ 2012ರ ಒಲಿಂಪಿಕ್ಸ್‌ನಿಂದ ಈ ಕ್ರೀಡೆಯನ್ನು ಕೈಬಿಡಲಾಗಿತ್ತು. ಮತ್ತೆ ಇದನ್ನು ಒಲಿಂಪಿಕ್ಸ್‌ಗೆ ಸೇರಿಸುವ ಗುರಿಯನ್ನು ಅಮೆರಿಕ ಹೊಂದಿದೆ. 1984ರಿಂದ 2008ರ ವರೆಗೆ ಸತತವಾಗಿ ಬೇಸ್‌ಬಾಲ್ ಒಲಿಂಪಿಕ್ಸ್ ನಲ್ಲಿದ್ದು, ಈಗ ಹೊರಗಿರುವ ಕಾರಣ ಬೇಸ್‌ಬಾಲ್ ಆಡುವ ರಾಷ್ಟ್ರಗಳಿಗೆ ಮುಜುಗರವಾದಂತಿದೆ.ಒಲಿಂಪಿಕ್ಸ್ ಸೇರ್ಪಡೆಗೆ ಸ್ಪರ್ಧಾಕಣದಲ್ಲಿರುವ ಇನ್ನೊಂದು ಕ್ರೀಡೆ ಸ್ಕ್ವಾಷ್. ಜಗತ್ತಿನ 175 ರಾಷ್ಟ್ರಗಳಲ್ಲಿ ಈ ಕ್ರೀಡೆಯನ್ನು ಆಡಲಾಗುತ್ತಿದೆಯಾದರೂ, ಖ್ಯಾತಿ ಹೊಂದಿರುವುದು ಬೆರಳೆಣಿಕೆಯ ದೇಶಗಳಲ್ಲಿ ಮಾತ್ರ. ಆದರೆ, 2007ರಿಂದ ಈಚೆಗೆ ಸ್ಕ್ವಾಷ್ ಖ್ಯಾತಿ ಹೆಚ್ಚಾಗುತ್ತಿದೆ. `ಫೋಬ್ಸ್' ನಿಯತಕಾಲಿಗೆ ನಡೆಸಿದ ಸಮೀಕ್ಷಾ ವರದಿಯಂತೆ ಇಂಗ್ಲೆಂಡ್, ಈಜಿಪ್ಟ್, ಪಾಕಿಸ್ತಾನ, ಹಾಲೆಂಡ್ ಮತ್ತು ಆಸ್ಟ್ರೇಲಿಯಾ ಹೆಚ್ಚಾಗಿ ಈ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ.ಆದರೆ, ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯುವ ಕ್ರೀಡೆಗಳ ಬಗ್ಗೆ ನಿಜವಾದ ಪೈಪೋಟಿ ಇರುವುದು ಕುಸ್ತಿ ಮತ್ತು ಬೇಸ್‌ಬಾಲ್ ನಡುವೆ. ಆದ್ದರಿಂದ ಅಮೆರಿಕ ಇತರ ರಾಷ್ಟ್ರಗಳ ಬೆಂಬಲ ಪಡೆದು ಐಒಸಿ ಮುಂದೆ ತನ್ನ ವಾದವನ್ನು ಬಲವಾಗಿ ಮಂಡಿಸದಂತೆ ಮತ್ತು ಬೇಸ್‌ಬಾಲ್ ಆಡುವ ರಾಷ್ಟ್ರಗಳ ಕೈ ಮೇಲಾಗದಂತೆ ನೋಡಿಕೊಳ್ಳುವ ಸವಾಲು ಭಾರತದ ಮುಂದಿದೆ. ಇದು ಭಾರತದ ಕುಸ್ತಿಪಟುಗಳ ಆಶಯವೂ ಆಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.