ಸೋಮವಾರ, ಮೇ 16, 2022
28 °C
ಕಾಮಗಾರಿ ಅಪೂರ್ಣ: ಸಂಚಾರಕ್ಕೆ ಸಂಚಕಾರ

ಒಳಚರಂಡಿ ಕೆಲಸ ನಿಧಾನ: ಹಲವೆಡೆ ನೀರಿನ ಸಂಪರ್ಕ ಕಡಿತ

ಕೆ.ಎಚ್. ಓಬಳೇಶ್ Updated:

ಅಕ್ಷರ ಗಾತ್ರ : | |

ಒಳಚರಂಡಿ ಕೆಲಸ ನಿಧಾನ: ಹಲವೆಡೆ ನೀರಿನ ಸಂಪರ್ಕ ಕಡಿತ

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಆದರೆ, ಕೆಲವೆಡೆ ಜೆಸಿಬಿ ಯಂತ್ರ ಬಳಸಿ ಪೈಪ್ ಅಳವಡಿಕೆಗೆ ತೆಗೆದಿರುವ ಆಳವಾದ ಗುಂಡಿಗಳನ್ನು ಮುಚ್ಚಿಲ್ಲ. ಇದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.ಹೌಸಿಂಗ್ ಬೋರ್ಡ್ ಕಾಲೊನಿಯ ಉದ್ಯಾನಕ್ಕೆ ಹೊಂದಿಕೊಂಡಿರುವ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ಹಿನ್ನೆಲೆಯಲ್ಲಿ ಪೈಪ್ ಅಳವಡಿಸಲು ತೆಗೆದಿರುವ ಗುಂಡಿಯೇ ಇದಕ್ಕೆ ತಾಜಾ ನಿದರ್ಶನ. ಉದ್ಯಾನಕ್ಕೆ ಹೊಂದಿ ಕೊಂಡಿರುವ ಬುದ್ಧನಗರ, ಕರಿನಂಜನಪುರ, ಕರಿನಂಜನಪುರದ ಹೊಸ ಬಡಾವಣೆಗೆ ಹೋಗುವ ಮುಖ್ಯರಸ್ತೆಬದಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹೀಗಾಗಿ, ಉದ್ಯಾನದ ಇನ್ನೊಂದು ಬದಿಯಲ್ಲಿರುವ ರಸ್ತೆ ಮೂಲಕ ಜನರು ಈ ಬಡಾವಣೆಗಳಿಗೆ ತೆರಳಬೇಕಿದೆ.ಆದರೆ, ಜನರು ಸಂಚರಿಸುವ ಈ ರಸ್ತೆಯಲ್ಲಿ ಮ್ಯಾನ್‌ಹೋಲ್‌ಗೆ ಪೈಪ್ ಅಳವಡಿಸುವ ಕಾಮಗಾರಿಗಾಗಿ ಅಳವಾದ ಗುಂಡಿ ತೆಗೆಯ ಲಾಗಿದೆ. ಈ ಮಾರ್ಗದಲ್ಲಿಯೇ ವಾಹನಗಳು, ಜನರು ಸಂಚರಿಸಬೇಕಿದೆ. ಇಂದಿಗೂ ಪೈಪ್ ಅಳವಡಿಸಿ ಗುಂಡಿ ಮುಚ್ಚಿಲ್ಲ. ಇದರಿಂದ ಈ ಮಾರ್ಗದಲ್ಲಿ ಜನರು ಜೀವಭಯದಿಂದ ಸಂಚರಿಸಬೇಕಿದೆ.ಉದ್ಯಾನಕ್ಕೆ ನಿತ್ಯವೂ ಈ ಮಾರ್ಗದಲ್ಲಿಯೇ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಬರುತ್ತಾರೆ. ಹಲವು ಮಕ್ಕಳು ಈ ಗುಂಡಿಯಲ್ಲಿ ಬಿದ್ದಿರುವ ನಿದರ್ಶನವಿದೆ. ಆದರೆ, ಸಂಬಂಧಪಟ್ಟವರು ಕಾಮಗಾರಿ ಪೂರ್ಣಗೊಳಿಸಿ ರಸ್ತೆ ಸಮತಟ್ಟು ಮಾಡಲು ಮುಂದಾಗಿಲ್ಲ ಎನ್ನುವುದು ಈ ಭಾಗದ ನಾಗರಿಕರ ದೂರು.ನಗರಸಭೆಯ ಎಲ್ಲ ವಾರ್ಡ್‌ಗಳಲ್ಲೂ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಕೆಲವು ಬಡಾವಣೆಗಳಲ್ಲಿ ರಸ್ತೆಬದಿ ಚರಂಡಿ ನಿರ್ಮಾಣ ಮಾಡಲಾಗುತ್ತದೆ. ಆದರೆ, ಬಹುತೇಕ ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆ ಸಮತಟ್ಟು ಮಾಡುತ್ತಿಲ್ಲ. ಇದರ ಪರಿಣಾಮ ವಾಹನ ಸವಾರರು ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಅದರಲ್ಲೂ ದ್ವಿಚಕ್ರವಾಹನ ಸವಾರರ ಪಾಡುಹೇಳತೀರದು. ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಆಯತಪ್ಪಿ ಬಿದ್ದು ಸವಾರರು ಗಾಯಗೊಂಡಿರುವ ಉದಾರಣೆಗಳಿವೆ.ಕೆಲವು ಬಡಾವಣೆಯಲ್ಲಿ ಮನೆಗಳಿಗೆ ಕುಡಿಯುವ ನೀರಿನ ಪೈಪ್‌ಲೈನ್ ಸಂಪರ್ಕ ಪಡೆಯಲು ರಸ್ತೆ ಅಗೆಯುವುದು ನಡೆಯುತ್ತಿದೆ. ರಸ್ತೆ ಅಗೆಯುವ ಮೊದಲು ನಗರ ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಮನೆ ಮಾಲೀಕರು ಅಂತಹ ಪ್ರಯತ್ನ ಮಾಡುವುದೇ ಇಲ್ಲ. ರಸ್ತೆ ಅಗೆದ ನಂತರ ಸಮರ್ಪಕವಾಗಿ ಸಮತಟ್ಟು ಮಾಡುವುದಿಲ್ಲ. ಪರಿಣಾಮ ನಾಗರಿಕರು ತೊಂದರೆ ಸಿಲುಕಿದ್ದಾರೆ.`ಪ್ರಸ್ತುತ ಜಿಲ್ಲಾ ಕೇಂದ್ರದ ವ್ಯಾಪ್ತಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಇದರಿಂದ ನಾಗರಿಕರು, ವಾಹನ ಸವಾರರು ಹೆಚ್ಚಿನ ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಕೆಲವೆಡೆ ಒಳಚರಂಡಿ ಪೈಪ್ ಅಳವಡಿಸಲು ತೋಡಿರುವ ಗುಂಡಿಗಳನ್ನು ಮುಚ್ಚಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳೆಯರು, ಮಕ್ಕಳು ಓಡಾಡುವಾಗ ಗುಂಡಿಯೊಳಕ್ಕೆ ಬಿದ್ದಿರುವ ನಿದರ್ಶನಗಳಿವೆ.ಯಾವುದೇ, ರಸ್ತೆಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಾಗ ಅದನ್ನು ಪೂರ್ಣಗೊಳಿಸಿದ ನಂತರ ಇತರೆಡೆ ಕಾಮಗಾರಿ ಕೈಗೆತ್ತಿಕೊಳ್ಳ ಬೇಕು. ಗುಂಡಿಗಳನ್ನು ಮುಚ್ಚಲು ಕೂಡಲೇ ಕಾಮಗಾರಿಯ ಉಸ್ತುವಾರಿ ಹೊತ್ತಿರುವ ಕಂಪೆನಿಯ ಅಧಿಕಾರಿಗಳು ಕ್ರಮಕೈಗೊಳ್ಳ ಬೇಕು' ಎಂಬುದು ನಾಗರಿಕ ಸಿದ್ದಪ್ಪ ಅವರ ಒತ್ತಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.