ಭಾನುವಾರ, ಮೇ 16, 2021
22 °C
`ಸಾಹಿತ್ಯ ಸಾಂಗತ್ಯ'

ಓದು `ನನ್ನಂಥ' ಮನುಷ್ಯನ ಬದುಕಿನ, ಆತ್ಮದ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓದು `ನನ್ನಂಥ' ಮನುಷ್ಯನ ಬದುಕಿನ, ಆತ್ಮದ ಅಗತ್ಯ

`ಸಾಹಿತ್ಯ ಸಾಂಗತ್ಯ' ಅಂಕಣದ ಈ ಬಾರಿಯ ಅತಿಥಿ ಚಿಂತಾಮಣಿ ಕೊಡ್ಲೆಕೆರೆ. ಕವಿ, ಕಥೆಗಾರ, ಪ್ರಬಂಧಕಾರ ಹಾಗೂ ವಿಮರ್ಶಕರಾದ ಚಿಂತಾಮಣಿ, ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ನದಿತೀರದ ಅಘನಾಶಿನಿ ಎಂಬ ಊರಿನವರು. ಈವರೆಗೆ `ಈ ಜಗತ್ತು', `ಭೂಮಧ್ಯ ರೇಖೆ', `ಗೋವಿನ ಹೆಜ್ಜೆ', `ತಲೆಮಾರಿನ ಕೊನೆಯ ಕೊಂಡಿ', `ಉಪ್ಪಿನ ಗೊಂಬೆ' ಕವಿತೆಗಳ ಸಂಗ್ರಹವನ್ನು ಪ್ರಕಟಿಸಿದ್ದಾರೆ. `ಬಬ್ರುವಾಹನ ಎಂಬ ಇರುವೆ', `ಮಾಯಾವಿ ಮಾಂಗಿ' ಅವರ ಕಥಾಸಂಗ್ರಹಗಳಾಗಿವೆ. `ಸಿಂಡ್ರೆಲಾ ಅಂಬ್ರೆಲಾ' ಅವರ ಮಕ್ಕಳ ಕವಿತೆಗಳ ಗುಚ್ಛ. `ಅಂತರಂಗದ ಆಕಾಶ' ಅವರ ಸಂಶೋಧನಾ ಪ್ರಬಂಧವಾಗಿದ್ದು, `ಮೊದಲ ಮನೆಯ ಮೆಟ್ಟಿಲು', `ಟಪಾಲು ಬಂತು' ಪ್ರಬಂಧ ಸಂಗ್ರಹಗಳಾಗಿವೆ. ಬಿಎಸ್‌ಎನ್‌ಎಲ್‌ನ ಉದ್ಯೋಗಿ. ಸದ್ಯ ಬೆಂಗಳೂರಿನಲ್ಲಿ ವಾಸ.*ಉತ್ತರ ಕನ್ನಡದ ಹಿರೇಗುತ್ತಿಯಂಥ ಹಳ್ಳಿಯಿಂದ ಬಂದವರು ನೀವು. ಓದನ್ನು ತೀರಾ ಹಚ್ಚಿಕೊಂಡದ್ದು ಯಾವಾಗ? ಹೇಗೆ ಈ ಓದಿನ ಪ್ರಯಾಣ ಆರಂಭವಾಯಿತು? ಅಂಥ ವಾತಾವರಣವೊಂದು ಅಲ್ಲಿ ಇತ್ತೆ?

ಚಿಕ್ಕಂದಿನಿಂದಲೂ ನಾನು ಒಳಮುಖಿಯೇ. ಆಟಗಳನ್ನೂ ನನ್ನಷ್ಟಕ್ಕೇ ಆಡಿದವನು! ನನ್ನ ತಂದೆ ಹಿರೇಗುತ್ತಿಯಲ್ಲಿ ಅಧ್ಯಾಪಕರಾಗಿದ್ದರು. ದಿನಪತ್ರಿಕೆ, ವಾರಪತ್ರಿಕೆ ಎಲ್ಲವೂ ಮನೆಗೆ ಬರುತ್ತಿದ್ದವು. ಎಲ್ಲರೊಡನೆ ಹೆಚ್ಚು ಬೆರೆಯಲಾರದ, ಯಾರಾದರೂ ದನಿ ಎತ್ತಿ ಮಾತಾಡಿದರೆ ಅಳುವೇ ನುಗ್ಗಿ ಬರುತ್ತಿದ್ದ ಸ್ವಭಾವದ ನನಗೆ ಓದು ಒಂದು ಪ್ರತ್ಯೇಕ ಲೋಕವನ್ನು ಕಲ್ಪಿಸಿಕೊಟ್ಟಿತು.ನನ್ನ ತಂದೆಯವರು ವಿಜ್ಞಾನ ಪದವೀಧರರಾದರೂ ಕನ್ನಡ ಸಾಹಿತ್ಯದ ಓದು ಅಸಾಮಾನ್ಯವಾಗಿತ್ತು. ನನ್ನನ್ನು ಕೂರಿಸಿಕೊಂಡು ಅವರು `ಕಗ್ಗದ ಕಥೆ' ಓದಿ ಹೇಳಿದರು ಎರಡು, ಮೂರು ದಿನ. ಮುಂದೆ ಇರುವ ಕಗ್ಗದ ವಚನಗಳಂತೂ ಅವರಿಗೆ ಹೃದ್ಗತವಾಗಿದ್ದವು. ಹರಿಶ್ಚಂದ್ರಕಾವ್ಯ, ಅಶ್ವತ್ಥಾಮನ್, ಲಕ್ಷ್ಮೀಶ, ಕುಮಾರವ್ಯಾಸರ ಪದ್ಯಭಾಗಗಳ ವಾಚನವೂ ಹೀಗೇ ನಡೆಯಿತು.ಹಿರೇಗುತ್ತಿ ಸಣ್ಣ ಹಳ್ಳಿ ನಿಜ. ಆದರೆ ಅಲ್ಲಿ ಕುವೆಂಪು ಅವರ `ಶ್ರೀ ರಾಮಾಯಣ ದರ್ಶನಂ' ಓದಿದ ಅಡ್ಲೂರ ಬೀರಣ್ಣ ನಾಯಕರಂಥ ಹಿರಿಯರಿದ್ದರು. ಯಕ್ಷಗಾನ ಪ್ರಸಂಗಗಳನ್ನು, ಪದಗಳನ್ನು ನಿಂತ ಮೆಟ್ಟಿನಲ್ಲಿ ಪುಂಖಾನುಪುಂಖವಾಗಿ ಉಲ್ಲೇಖಿಸಬಲ್ಲ ಕಲಾಸಕ್ತರಿದ್ದರು. ಇಷ್ಟರ ನಡುವೆ ಮೂರನೇ ತರಗತಿಯಲ್ಲಿದ್ದಾಗಲೋ ಏನೋ ಯಾರಿಗೂ ಸುದ್ದಿ ಕೊಡದೆ ನಾನೊಬ್ಬ ಕವಿಯಾಗಿಬಿಟ್ಟೆ.ಓದು, ಬರಹ ನನ್ನ ಕೈಬಿಡದ ಸಂಗಾತಿಗಳಾಗಿಬಿಟ್ಟವು. ಏನು ಕಂಡರೂ ಓದಿದೆ. ಸಾಮಾನು ಕಟ್ಟಿ ತಂದ ಪೇಪರು, ಹ್ಯಾಂಡ್‌ಬಿಲ್, ಜಾತ್ರೆಯಲ್ಲಿ ಹಂಚಿದ ಧರ್ಮಪ್ರಚಾರದ ಪುಸ್ತಿಕೆಗಳು... ಓದು ತಲೆಯಲ್ಲಿ ಅಚ್ಚಾಗಿ ಕೂತಿರುತ್ತಿತ್ತು. ಇಂಥ ಪುಸ್ತಕ, ಇಷ್ಟನೇ ಪುಟ ಎಂದು ಖಚಿತವಾಗಿ ಹೇಳಬಲ್ಲವನಾಗಿದ್ದೆ. ಇವೆಲ್ಲ ತಂದ ಮೆಚ್ಚುಗೆ, ಪ್ರೋತ್ಸಾಹಗಳಿಂದ ಓದಿನ ಹಸಿವೆ ಹೆಚ್ಚಾಗುತ್ತಲೇ ಹೋಯಿತು. ಶಿವರಾತ್ರಿಗೆಂದು ಕೊಟ್ಟ ಹಣದಲ್ಲೂ ಪುಸ್ತಕ ಕೊಂಡು ತರುತ್ತಿದ್ದ ಮಗನಿಗಾಗಿ ನನ್ನ ತಂದೆ `ಚಿಂತನ ಲೈಬ್ರರಿ' ಎಂದು ಒಂದು ಶೆಲ್ಫ್‌ನಲ್ಲಿ ಪುಸ್ತಕ ಜೋಡಿಸಿಡಲು ಅನುವು ಮಾಡಿಕೊಟ್ಟರು. ನನ್ನ ಲೈಬ್ರರಿಗೆ ಸಂಬಂಧಿಕರು, ಗೆಳೆಯರಿಂದ ಉಚಿತವಾಗಿ ಪುಸ್ತಕಗಳು ಬಂದವು!

*ನಿಮಗೆ ನಿಮ್ಮ ಓದನ್ನು ಆರಂಭಿಸಿದ ದಿನಗಳಲ್ಲಿ ಅತ್ಯಂತ ಖುಷಿಕೊಟ್ಟ ಅಥವಾ ಇಷ್ಟವಾದ ಪುಸ್ತಕಗಳ ಬಗ್ಗೆ ಹೇಳಿ. ನಿಮ್ಮ ಪ್ರಕಾರ ಅತ್ಯುತ್ತಮ ಸಾಹಿತ್ಯ ಕೃತಿ ಎಂದರೆ ಯಾವುದು ? ವಿಸ್ತಾರವಾದ ನಿಮ್ಮ ಓದಿನ ವ್ಯಾಪ್ತಿಯಲ್ಲಿ ಒಂದೆರಡು ಉದಾಹರಣೆ ಕೊಡಲು ಸಾಧ್ಯವೆ ?

ಜಿ.ಪಿ. ರಾಜರತ್ನಂ ಅವರು ಮಕ್ಕಳಿಗಾಗಿ ಬರೆಯುತ್ತಿದ್ದ ಕತೆ, ಕವಿತೆಗಳು, ದಿನಕರ ದೇಸಾಯಿಯವರ ಚುಟುಕುಗಳು, ಬೇಂದ್ರೆಯವರ ಗಂಗಾವತರಣ ಇವೆಲ್ಲ ನನ್ನ ಮೈಮರೆಸಿದವು. ಇವತ್ತಿಗೂ ಸಾಹಿತ್ಯದ ಈ ಮ್ಯಾಜಿಕಲ್ ಗುಣ ನನಗೆ ಇಷ್ಟ. ಮುಂದೆ ನನ್ನ ನಲವತ್ತರ ಹರಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಕಾವ್ಯ ಮೀಮಾಂಸೆಗಳನ್ನು ಓದಿಕೊಳ್ಳತೊಡಗಿದಾಗ ಕುವೆಂಪು ಮತ್ತು ಪುತಿನರು ಹೇಳುವ, `ಲೋಕದಲ್ಲಿದ್ದೂ ಲೋಕೋತ್ತರಗೊಳಿಸುವ' ಸಾಹಿತ್ಯದ ಅಪಾರ ಶಕ್ತಿವಿಲಾಸದ ಕುರಿತ ತಾತ್ವಿಕ ಗ್ರಹಿಕೆಗಳು ಸಿಕ್ಕವು.ಅತ್ಯುತ್ತಮ ಸಾಹಿತ್ಯ ಕೃತಿಗಳಲ್ಲಿ ಅನುಭವಕ್ಕೆ ಸಿಕ್ಕವು ಜೀವಸ್ಪಂದನ ಓದುಗನನ್ನು ಅಲ್ಲಾಡಿಸಿ ಬಿಡುವಂಥದು. ಅನಂತಮೂರ್ತಿಯವರ `ಸೂರ್ಯನ ಕುದುರೆ', ತೇಜಸ್ವಿಯವರ `ನಿಗೂಢ ಮನುಷ್ಯರು', ಲಂಕೇಶರ `ಅವ್ವ' ಕವಿತೆ, ಬೇಂದ್ರೆ ಕುವೆಂಪುರ ಅನೇಕ ಪದ್ಯಗಳು, ಪುತಿನರ ಪ್ರಬಂಧಗಳು ಹಾಗೆ ನನ್ನಲ್ಲಿ ಧನ್ಯತೆಯ ಭಾವ ಹುಟ್ಟಿಸಿವೆ.

*ಯಾವ ಸಾಹಿತ್ಯ ಕೃತಿ (ಕೃತಿಗಳು) ನಿಮ್ಮ ಮೇಲೆ ತೀರಾ ಪ್ರಭಾವ ಬೀರಿವೆ ? ಸಾಹಿತ್ಯದ ಹೊರತಾಗಿ ಅನುಭಾವಿಗಳ, ಅಧ್ಯಾತ್ಮದ ಓದೂ ನಿಮಗಿದೆ. ಅವು ನಿಮ್ಮ ಬದುಕು, ಸಾಹಿತ್ಯವನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿವೆ ಎಂದು ಅನ್ನಿಸಿದೆಯೇ ?

ಅನುಭಾವಿಗಳ, ಅಧ್ಯಾತ್ಮದ ಓದಿಗೆ ನಾನು ಹೊರಳಿಕೊಂಡಿದ್ದೂ ಸಾಹಿತ್ಯದ ಓದಿನ ಮೂಲಕವೇ. ಬದುಕಿನ ನಿಗೂಢಗಳ ಕುರಿತು, ಮನುಷ್ಯನೆಂಬ ಅದ್ಭುತ ಪ್ರಾಣಿಯ ಕುರಿತು ಯೋಚಿಸುತ್ತ ಹೋದಂತೆ ತಳವೇ ಇಲ್ಲದ ಬಾವಿಗೋ, ಎಂದೂ ಮುಟ್ಟಲಾಗದ ಆಕಾಶಕ್ಕೋ ಕೈಚಾಚಿದಂತಾಗುತ್ತದೆ. ಅನುಭಾವ, ಅಧ್ಯಾತ್ಮ ಅವೆಲ್ಲ ಬದುಕಿನಾಚೆಗಿನ ಅಥವಾ `ಲೌಕಿಕ' ಮನುಷ್ಯನ ಆಸಕ್ತಿಗಳಿಗೆ ಹೊರತಾದ ಅಥವಾ ತಕ್ಕುದಲ್ಲದ ಸಂಗತಿಯೆಂದು ತಿಳಿಯುವುದು ಆಶ್ಚರ್ಯಕರವೇ ಸರಿ.ನಮ್ಮ ಅತಿ ಶ್ರೇಷ್ಠ ಸಂತರಲ್ಲಿ ಅನೇಕರು ಕವಿಗಳಾಗಿದ್ದರು. ರಮಣರು `ಹಪ್ಪಳದ ಹಾಡು' ಬರೆದಿದ್ದಾರೆ. ಅವರ ತಾಯಿ ಈ ತರುಣ ಸನ್ಯಾಸಿ ಮಗನನ್ನು ಹಪ್ಪಳ ಮಾಡಲು ಕರೆದರು. ಅದು ಆಶ್ರಮ ಇವೆಲ್ಲ ಬೇಡ ಎಂದು ರಮಣರು ಸ್ಪಷ್ಟವಾಗಿಯೇ ಹೇಳಿದ್ದರೂ ತಾಯಿ ಹಪ್ಪಳ ಮಾಡುವ ಸಿದ್ಧತೆ ನಡೆಸಿದರು.ರಮಣರೂ ತಾಯಿ ಅಡುಗೆ ಮನೆಯಲ್ಲಿಲ್ಲದಾಗ ಹಪ್ಪಳದ ಉಂಡೆ ತಿಂದರಂತೆ! ಹಪ್ಪಳ ಮಾಡಲು ಮಾತ್ರ ಹೋಗಲಿಲ್ಲ. ಆದರೆ ಹಪ್ಪಳದ ಕುರಿತು ಪದ್ಯ ಬರೆಯುವೆನೆಂದು ಹೇಳಿದರಂತೆ. ತಾಯಿ ಒಪ್ಪಿದರು! ಇದಕ್ಕೆಲ್ಲ ಏನು ಹೇಳುತ್ತೀರಿ? ಯಾವುದು ಅಧ್ಯಾತ್ಮ ಮತ್ತು ಯಾವುದು ಅಲ್ಲ? `ಆತ್ಮದ ಕುರಿತಾದುದು' ಅಧ್ಯಾತ್ಮ ಸಾಹಿತ್ಯ ಮತ್ತು ಎಲ್ಲ ಕಲೆಗಳೂ ಮನುಷ್ಯನ ಎಲ್ಲ ಚಟುವಟಿಕೆಗಳೂ ಅಧ್ಯಾತ್ಮವೇ ತತ್ತ್ವ. ನಿಸ್ಸಂದೇಹವಾಗಿ ಇಂಥ ಸಂತರು, ವಚನಕಾರರು, ದಾಸರು ನನ್ನನ್ನು ಬೆಳೆಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಸಂತ ಸಾಹಿತ್ಯದ ಕೃಪೆ, ಆಶೀರ್ವಾದ ದೊಡ್ಡದು. ಇದು ನನ್ನ ಮಾತಲ್ಲ, ವರಕವಿಗಳು ಎದೆತುಂಬಿ ಹೊರಡಿಸಿದ ಉದ್ಗಾರ.

*ಈಗ ಪುಸ್ತಕಗಳ ಓದು ಕಡಿಮೆಯಾಗುತ್ತಿದೆ, ಅದನ್ನು ಓದುತ್ತಿರುವವರು ಹೊತ್ತು ಕಳೆಯಲು ಓದುತ್ತಿರುವ ಹಿರಿಯರು ಎಂಬ ಮಾತುಗಳು  ಕೇಳಿಬರುತ್ತಿರುತ್ತವೆ. ಕನ್ನಡದ ಪ್ರಮುಖ ಲೇಖಕರಾಗಿ ನಿಮಗೆ ಕನ್ನಡದ ಸಂದರ್ಭದಲ್ಲಿ ಈ ಕುರಿತು ಏನೆನ್ನಿಸುತ್ತದೆ ?

ಪುಸ್ತಕ ಓದುವವರು ಕಡಿಮೆ ಆಗುತ್ತಿರುವುದು ಹೌದೆನಿಸುತ್ತಿದೆ ಆದರೆ ಅಂಥ ಭಾವನೆ ಹುಟ್ಟಿಸುವ ಹೊಸ ತಲೆಮಾರಿನವರೂ ಕಂಪ್ಯೂಟರ್ ಮೂಲಕ `ಓದುತ್ತಿದ್ದಾರೆ!' ಇಪ್ಪತ್ತು, ಮೂವತ್ತರ ಹರಯದಲ್ಲಿರುವ ಅನೇಕ ಬರಹಗಾರರ ಮಾತುಗಳನ್ನು ಕೇಳುವಾಗ, ಕೃತಿಗಳನ್ನು ಓದುವಾಗ ನಿರಾಸೆಗೊಳ್ಳಬೇಕಾದುದಿಲ್ಲ ಎಂದೇ ಅನಿಸುತ್ತದೆ.ಒಬ್ಬ ಬಾಷೆವಿಕ್ ಸಿಂಗರ್ ಯಿದ್ದಿಶ್ ಭಾಷೆಗೆ ಮರುಜೀವ ಕೊಡಲು ಸಾಧ್ಯವಾಯಿತು ಎಂಬುದನ್ನು ನೆನೆದಾಗ ಕನ್ನಡಮಾತು ತಲೆಯೆತ್ತಿ ನಿಲ್ಲುವ ಬಗೆಗೆ ಕಳವಳಗೊಳ್ಳುವುದು ಬೇಡವೆನಿಸುತ್ತವೆ. ಬದಲಾಗಿ ನಮ್ಮ ಮಕ್ಕಳನ್ನು ಕನ್ನಡ ಓದಿನಿಂದ ದೂರ ಮಾಡುತ್ತಿರುವ ಆಂಗ್ಲ ಭಾಷಾ ಮಾಧ್ಯಮದ ಶಿಕ್ಷಣದ ಕುರಿತು ಚಿಂತಿಸಬೇಕಾಗಿದೆ. ಅಲ್ಲಿ ಒಳ್ಳೆಯ ಇಂಗ್ಲೀಷಾದರೂ ಕಲಿತಿದ್ದರೆ ಅವರ ಓದಿನ ಹಸಿವೆ ಹೆಚ್ಚುತ್ತಿತ್ತೋ ಏನೋ! ಓದಿನ ಬಗೆಗೆ ಪ್ರೀತಿ ಹುಟ್ಟಿಸದೆ ಹೋಗುವುದು ಅದೆಂಥ ಶಿಕ್ಷಣ?

*ಬಿಎಸ್‌ಎನ್‌ಎಲ್‌ನಲ್ಲಿ ಕೆಲಸ ಮಾಡುತ್ತಿರುವ ನೀವು ಓದು, ಬರವಣಿಗೆಗೆ ಹೇಗೆ ಸಮಯ ಹೊಂದಿಸಿಕೊಳ್ಳುತ್ತೀರಿ?

ವೃತ್ತಿ ಮತ್ತು ಬರವಣಿಗೆಯ ಸಮನ್ವಯ ಸಾಧಿಸುವುದು ನಿರಂತರ ಹೋರಾಟ, ಅನುದಿನದ ಸವಾಲು. ನನ್ನ ಪುಣ್ಯವೆಂದರೆ ನಾನು ಸಂತೆಯಲ್ಲಿ ಕೂತು ಬೇಕಾದರೂ ಓದಬಲ್ಲೆ, ಬರೆಯಬಲ್ಲೆ ತಮಾಷೆಯಾಗಿ ನಾನು ಹೇಳುವುದಿದೆ, ವಾಣಿ ಮತ್ತು ದೂರವಾಣಿ ಬೇರೆ, ಬೇರೆ ಅಲ್ಲ ನಿಜದಲ್ಲಿ `ಅನುದಿನದ ಅಂತರಗಂಗೆ'ಯನ್ನು ನಾನೇ ಕ್ರಮಿಸಬೇಕು...

* ಓದು ಮನುಷ್ಯನ ಬದುಕಿನ, ಆತ್ಮದ ಅಗತ್ಯ ಎಂದು ಅನ್ನಿಸುತ್ತದೆಯೇ?

ಓದು `ನನ್ನಂಥ' ಮನುಷ್ಯನ ಬದುಕಿನ, ಆತ್ಮದ ಅಗತ್ಯವಾಗಿದೆ. ಅದಿಲ್ಲದೆಯೂ ಮನುಷ್ಯ ಖಂಡಿತ ಬಾಳಬಲ್ಲ, ಬೆಳೆಯಬಲ್ಲ. ಪರಮಹಂಸರು ಹಾಗೆ ಬಾಳಿದರು. ಆದರೆ ಅವರು ನನಗೆ ದಕ್ಕಲು ಸಿಕ್ಕಲು ಓದುವುದನ್ನು ಬಿಟ್ಟು ಇನ್ನಾವ ಹಾದಿಯಿದೆ?

*ಮಕ್ಕಳಿಗಾಗಿ ಕವಿತೆಳನ್ನು ಬರೆದಿದ್ದೀರಿ. ಅವನ್ನು ಈಗಿನ ಮಕ್ಕಳು ಓದುತ್ತಾರೆ ಎಂದು ಅನಿಸುತ್ತಿದೆಯೇ? ಮಕ್ಕಳ ಸಾಹಿತ್ಯದ ಓದು ಹೇಗಿದೆ ? ಮಕ್ಕಳಿಗಾಗಿ ಯಾವ ಲೇಖಕ, ಪುಸ್ತಕ, ಕವಿತೆಗಳನ್ನು ನೀವು ಶಿಫಾರಸು ಮಾಡಲು ಬಯಸುತ್ತೀರಿ ?

ನಾನು ಸಣ್ಣ ಹುಡುಗನಿದ್ದಾಗಲೇ ಕವಿತೆ ಬರೆದವನೆಂದು ಆಗಲೇ ಹೇಳಿದೆ. ಆ ಹುಡುಗಾಟಿಕೆ, ಕುಣಿತದ ಲಯಗಳು ನನ್ನ ಬೆಂಬಿಡದ ಸಂಗಾತಿಗಳು. ಹಾಗೆ, ನಾನು ಮಕ್ಕಳ ಪದ್ಯ ಬರೆಯುವುದು. ಈಗಿನ ಮಕ್ಕಳು ಬಹುಪಾಲು ಆ ಪದ್ಯಗಳನ್ನು ಓದಿರುವುದಿಲ್ಲ. ಆದರೆ `ಕೇಳಿಸಿಕೊಳ್ಳುವುದು' ಸಾಧ್ಯವಿದೆ, `ನೋಡುವುದು' ಸಾಧ್ಯವಿದೆ. ಹಾಗೆ `ಕೇಳಿಸಿ', `ತೋರಿಸಿ' ಮಕ್ಕಳಿಗೆ ಓದಿಸಲು ಯತ್ನಿಸಬೇಕಾಗಿದೆ.ಇದು ಸ್ವಲ್ಪ ಕಷ್ಟದ ಕೆಲಸವಾದರೂ ಅಗತ್ಯವಾದುದು ಎಂದು ನನಗನಿಸುತ್ತದೆ. ಇನ್ನು ಮಕ್ಕಳು ಏನೆಲ್ಲ ಓದಬೇಕೆಂಬ ಕುರಿತು ಹೇಳುವುದಾದರೆ ಅತ್ಯುತ್ತಮವಾದುದೆಲ್ಲವೂ ಅವರಿಗೆ ಸಿಕ್ಕಬೇಕೆಂದು ಬಯಸುವವನು ನಾನು. ಪಂಜೆ, ರಾಜರತ್ನಂ, ದಿನಕರ ದೇಸಾಯಿ, ಹೊಯಿಸಳ, ಎಚ್ಚೆಸ್ವಿ, ಭಟ್ಟರು, ನಾಡಿಗ್ ಇವರೆಲ್ಲ ಎಷ್ಟೊಂದು ಒಳ್ಳೊಳ್ಳೆಯ ಮಕ್ಕಳ ಪದ್ಯ, ಸಾಹಿತ್ಯ ಬರೆದುಕೊಟ್ಟಿದ್ದಾರೆ! ಆದರೆ ನಮ್ಮ ಪಠ್ಯ ಪುಸ್ತಕಗಳನ್ನು ನೋಡಿ ಅದರಲ್ಲೂ ಪದ್ಯಭಾಗಗಳನ್ನು ಪ್ರದೇಶ, ವಸ್ತು ವಿಷಯ ಮತ್ತು ಪ್ರಾಯಶಃ ಕವಿಯ ಜಾತಕ ನೋಡಿ ಆಯ್ಕೆ ಮಾಡಲಾಗುವ ಆ ರಚನೆಗಳಲ್ಲಿ ಎಲ್ಲವೂ ಇವೆ- ಪದ್ಯವೊಂದನ್ನು ಬಿಟ್ಟು. ಇಂಥ ಸಾಹಿತ್ಯ ಓದಿಸಿ ಮಕ್ಕಳಿಗೆ ಸಾಹಿತ್ಯದ ಕುರಿತು ಪ್ರೀತಿ ಹುಟ್ಟಿಸಲು ಸಾಧ್ಯವೆ? ಒಂದು ಪುಣ್ಯಕೋಟಿಯ ಕಥೆಯೇ, ಒಂದು ಕಿಂದರಿಜೋಗಿಯೇ ಮಕ್ಕಳಿಗೆ ಓದಿನ ಹುಚ್ಚು ಹೆಚ್ಚಿಸೀತು. ಸರಿ, ಆದರೆ ದೊಡ್ಡವರ ಹುಚ್ಚು ಬಿಡಿಸುವವರು ಯಾರು?

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.