ಮಂಗಳವಾರ, ಮೇ 11, 2021
20 °C

ಔಷಧ ಉದ್ದಿಮೆ: ಅನೈತಿಕ ಅಭ್ಯಾಸ ಸಲ್ಲ- ರಾಷ್ಟ್ರಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ): ಔಷಧ ಉದ್ದಿಮೆಯಲ್ಲಿ ನಕಲಿ ಔಷಧಗಳ ತಯಾರಿಕೆ ಮತ್ತು ಅನೈತಿಕ ಅಭ್ಯಾಸಗಳ ಬಗ್ಗೆ ಭಾನುವಾರ ಆತಂಕ ವ್ಯಕ್ತಪಡಿಸಿರುವ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು, ಗುಣಮಟ್ಟ ಮತ್ತು ಔಷಧಗಳ ಸುರಕ್ಷತೆ ಬಗ್ಗೆ ಉದ್ದಿಮೆಯವರು ಮತ್ತು ಆರೋಗ್ಯ ಸಂಸ್ಥೆಗಳು ದೃಢಪಡಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.ಅಂತರರಾಷ್ಟ್ರೀಯ ಔಷಧವಿಜ್ಞಾನ ಒಕ್ಕೂಟ ಮತ್ತು ಭಾರತೀಯ ಔಷಧವಿಜ್ಞಾನ ಸಂಘದವರು ಏರ್ಪಡಿಸಿದ್ದ 71ನೇ ವಿಶ್ವ ಔಷಧೀಯ ವಿಜ್ಞಾನ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.`ಔಷಧಗಳ ಸುರಕ್ಷತೆ ಮತ್ತು ಗುಣಮಟ್ಟದೊಂದಿಗೆ ರಾಜಿ ಮಾಡಿಕೊಂಡಿಲ್ಲ ಎಂಬುದನ್ನು ಖಾತ್ರಿ ಪಡಿಸಬೇಕಾದದ್ದು ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿ ಸಂಸ್ಥೆಯ ಹೊಣೆಗಾರಿಕೆ.  ಹಾನಿಕರವಾದ ನಕಲಿ ಔಷಧಗಳನ್ನು ತಯಾರಿಸಿರುವ ಬಗ್ಗೆ ನಿದರ್ಶನಗಳು ಇವೆ. ಇದು ಅಪರಾಧ ಮತ್ತು ಅನೈತಿಕ ಅಭ್ಯಾಸ~ ಎಂದು ರಾಷ್ಟ್ರಪತಿ ತಿಳಿಸಿದ್ದಾರೆ.`ಯಾವುದಕ್ಕೂ ಹೇಸದ ಇಂತಹ ತಯಾರಕರನ್ನು ಸರ್ಕಾರವೊಂದೇ ಗುರುತಿಸಲು ಆಗುವುದಿಲ್ಲ. ಇಂತಹ ದುರಭ್ಯಾಸಗಳನ್ನು ಪತ್ತೆ ಹಚ್ಚಲು ಉದ್ದಿಮೆ ಕೂಡ ಘಟಕಗಳನ್ನು ಹೊಂದಿದ್ದು ಇಂಥದ್ದನ್ನು ಸರ್ಕಾರದ ಗಮನಕ್ಕೆ ತರಬೇಕು~ ಎಂದಿದ್ದಾರೆ.ವಿಶ್ವದಾದ್ಯಂತ ಸುಮಾರು ಶೇಕಡಾ 50ರಷ್ಟು ಔಷಧಗಳನ್ನು `ಅನುಚಿತವಾಗಿ~ ಶಿಫಾರಸು ಮಾಡಲಾಗಿರುತ್ತದೆ ಇಲ್ಲವೇ ಮಾರಾಟ ಮಾಡಲಾಗಿರುತ್ತದೆ. ಇದು ಆರೋಗ್ಯದ ಸಮಸ್ಯೆಗೆ ಕಾರಣವಾಗುತ್ತದೆ. ಇಂತಹ ದುರುಪಯೋಗವನ್ನು ಈ ಉದ್ದಿಮೆಯವರು ತಡೆಯಬೇಕು ಎಂದು ಪ್ರತಿಭಾ ಪಾಟೀಲ್ ಸಲಹೆ ನೀಡಿದ್ದಾರೆ.

ಭಾರತೀಯ ಔಷಧೀಯ ಉದ್ದಿಮೆಯು ಈಗ 1200 ಕೋಟಿ ಡಾಲರ್ ವ್ಯವಹಾರ ನಡೆಸುತ್ತಿದ್ದು 2015ರ ವೇಳೆಗೆ ಇದು 2000 ಕೋಟಿ ಡಾಲರ್ ಆಗಲಿದೆ ಎಂದು ಹೇಳಿದ್ದಾರೆ.ವೈದ್ಯಕೀಯ ವಿಜ್ಞಾನವು ಅದ್ಭುತ ಪ್ರಗತಿ ಸಾಧಿಸಿದ್ದರು ಕೂಡ `ವಿಶ್ವದ ಬಹುತೇಕ ಜನರು ಕೊಳ್ಳಬಹುದಾದ ದರದಲ್ಲಿ ಅಗತ್ಯ ಔಷಧಗಳು ಲಭಿಸುತ್ತಿಲ್ಲ~ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.ಸಮಾರಂಭದ ಬಳಿಕ ಅವರು ಇಲ್ಲಿನ ಬೇಗಂಪೇಟ್ ವಿಮಾನನಿಲ್ದಾಣದಿಂದ ನವದೆಹಲಿಗೆ ತೆರಳಿದರು.

ಆಂಧ್ರಪ್ರದೇಶದ ರಾಜ್ಯಪಾಲ ನರಸಿಂಹನ್, ಮುಖ್ಯಮಂತ್ರಿ ಎನ್. ಕಿರಣ್‌ಕುಮಾರ್ ರೆಡ್ಡಿ, ಉಪ ಮುಖ್ಯಮಂತ್ರಿ ಸಿ. ದಾಮೋದರ್ ರಾಜನರಸಿಂಹ, ಕೆಲವು ಸಚಿವರು ವಿಮಾನನಿಲ್ದಾಣದಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.