ಶುಕ್ರವಾರ, ಮೇ 7, 2021
19 °C
ಸುವರ್ಣ ಸಂಭ್ರಮ ಸಮಾರೋಪ ಸಮಾರಂಭದಲ್ಲಿ ಡಾ. ಅಬ್ದುಲ್ ಕಲಾಂ ಭಾಗಿ

ಔಷಧ ವಿಜ್ಞಾನ ಕಾಲೇಜುಗಳಲ್ಲೂ ಚಿಕಿತ್ಸೆ ಸೌಲಭ್ಯಕ್ಕೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ಸರ್ಕಾರಿ ಔಷಧ ವಿಜ್ಞಾನ ಕಾಲೇಜುಗಳಲ್ಲಿಯೂ ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕು. ಇದರಿಂದ ಸಾಮಾನ್ಯ ಜನರಿಗೆ ನೆರವಾಗುತ್ತದೆ. ಇಲ್ಲಿ ಕ್ಷಯ, ರಕ್ತದೊತ್ತಡದಂತಹ ರೋಗಗಳಿಗೆ ಅಗತ್ಯ ಔಷಧೋಪಚಾರವನ್ನು ನೀಡಲು ಅವಕಾಶ ನೀಡಬೇಕು' ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಹೇಳಿದರು.ಸರ್ಕಾರಿ ಔಷಧ ವಿಜ್ಞಾನ ಕಾಲೇಜು ನಗರದ ನಿಮ್ಹಾನ್ಸ್ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸುವರ್ಣ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಔಷಧ ವಿಜ್ಞಾನ ಕಾಲೇಜುಗಳಲ್ಲಿ ಚಿಕಿತ್ಸೆ ನೀಡುವುದರಿಂದ ಅನೇಕ ಕಡೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಸಿಗದ ವೇಳೆಯಲ್ಲಿ ಜನರಿಗೆ ಅನುಕೂಲವಾಗುತ್ತದೆ. ಇದಕ್ಕಾಗಿ ಇಲ್ಲಿ ಡಿಪ್ಲೊಮಾ ಪಡೆದವರಿಗೆ ಪದವಿಯನ್ನು ಪಡೆದುಕೊಳ್ಳಲು ಪ್ರತ್ಯೇಕ ಪಠ್ಯಕ್ರಮವನ್ನು ಅಳವಡಿಸಬೇಕು. ವೈದ್ಯಶಾಸ್ತ್ರೀಯ ರೂಪದಲ್ಲಿ ವಿದ್ಯಾರ್ಥಿಗಳಿಗೆ ಕಲಿಸಬೇಕು' ಎಂದು ಸಲಹೆ ನೀಡಿದರು.`ಔಷಧಗಳನ್ನು ತಯಾರಿಸುವಾಗ ಕೇವಲ ಅವುಗಳ ರಸಾಯನಿಕ ಜೋಡಣೆಗೆ ಮಹತ್ವ ನೀಡಲಾಗುತ್ತಿದೆ. ಆದರೆ, ಔಷಧಗಳ ಮೂಲ ಕಣಗಳನ್ನು ಸಂಶೋಧಿಸುವ ಕಾರ್ಯವಾಗಬೇಕಿದೆ. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಯಾಗಬೇಕಾದರೆ ಔಷಧಗಳ ಮೂಲ ರಸಾಯನಿಕಗಳನ್ನು ಪತ್ತೆ ಹಚ್ಚಿ ಸೃಷ್ಟಿಸುವ ಕೆಲಸ ಆಗಬೇಕಿದೆ' ಎಂದರು.`ಔಷಧ ಮಾರುಕಟ್ಟೆಯು ಹೊಸ ಸಂಶೋಧನೆಗಳನ್ನು ನಿರ್ಲಕ್ಷಿಸುತ್ತಿದೆ. ಆದರೆ, ಭಾರತದಲ್ಲಿ ಸರ್ಕಾರವೇ ಮುತುವರ್ಜಿ ವಹಿಸಿ, ಮುಕ್ತವಾಗಿ ಪರಸ್ಪರ  ಮಾಹಿತಿಯನ್ನು ಹಂಚಿಕೊಂಡು ಹೊಸ ಔಷಧಗಳನ್ನು ಕಂಡುಕೊಳ್ಳುವ ಯೋಜನೆಯನ್ನು ಜಾರಿಗೆ ತಂದಿದೆ.ಇದರಿಂದ ಸಾವಿರಕ್ಕೂ ಅಧಿಕ ಜನರ ಬಲಿ ತೆಗೆದುಕೊಳ್ಳುತ್ತಿದ್ದ ಕ್ಷಯ ರೋಗಕ್ಕೆ ಈಗ ದೇಶದಲ್ಲಿ 500 ಕ್ಕೂ ಅಧಿಕ ಔಷಧಿಗಳಿವೆ. ಹೀಗೆ ಆಳವಾದ ಸಂಶೋಧನೆಗಳು ನಡೆಯಬೇಕಾಗಿದೆ' ಎಂದು ಹೇಳಿದರು.`ಕಾಲೇಜುಗಳಲ್ಲಿ ಸಂಶೋಧನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಉತ್ತಮ ಬೋಧನಾ ಪದ್ಧತಿ ಇರುವೆಡೆಯಲ್ಲಿ ಸಂಶೋಧನೆಯೂ ಉತ್ತಮವಾಗಿರುತ್ತದೆ. ಕಾಲೇಜುಗಳು ಸಂಶೋಧನೆ, ಬೋಧನೆ ಮತ್ತು ಸಂಶೋಧನೆ ಎಂಬ ತತ್ವವನ್ನು ಅಳವಡಿಸಿಕೊಳ್ಳಬೇಕು. ಔಷಧ ವಿಜ್ಞಾನ ಕಾಲೇಜು 50 ವರ್ಷಗಳನ್ನು ಪೂರೈಸಿರುವ ಈ ಸಮಯದಲ್ಲಿ ಹೆಚ್ಚಿನ ಸಂಶೋಧನೆಯ ಕಡೆಗೆ ಒತ್ತು ನೀಡಬೇಕಾಗಿದೆ' ಎಂದರು.ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಮಾತನಾಡಿ, `ಸರ್ಕಾರಿ ಫಾರ್ಮಸಿ ಕಾಲೇಜಿನಲ್ಲಿ ಸಂಶೋಧನೆಗೆ ಅವಕಾಶ ನೀಡಬೇಕು ಎಂಬ ಬೇಡಿಕೆ ತುಂಬಾ ದಿನಗಳಿಂದ ಇದೆ. ಆದ್ದರಿಂದ, ಸರ್ಕಾರವು ಈ ಸಂಶೋಧನೆಗಾಗಿಯೇ ವೆಚ್ಚ ಮಾಡಲು ರೂ9.2 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಇದರಲ್ಲಿ ಕಾಲೇಜುಗಳಿಗೆ ಅನುದಾನವನ್ನು ನೀಡಲಾಗುವುದು' ಎಂದು ಭರವಸೆ ನೀಡಿದರು.540 ಪ್ರಕರಣಗಳು ಬಾಕಿ

ಔಷಧ ನಿಯಂತ್ರಕ ಜಗಶೆಟ್ಟಿ  ಮಾತನಾಡಿ, `ರಾಜ್ಯದಲ್ಲಿ ಕಳಪೆ ಗುಣಮಟ್ಟದ ಔಷಧಿಗಳು ಮಾರುಕಟ್ಟೆಯಲ್ಲಿವೆ. ಆದರೆ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಈ ಪ್ರಮಾಣ ಕಡಿಮೆ ಇದ್ದು, ಕೇವಲ 3.5 ರಷ್ಟಿದೆ.ಈ ಕುರಿತು ಸಾಕಷ್ಟು ಪ್ರಕರಣಗಳನ್ನು ದಾಖಲಿಸಿದ್ದು, ನ್ಯಾಯಾಲಯದಲ್ಲಿ ಈ ವರೆಗೆ 540 ಪ್ರಕರಣಗಳು ಬಾಕಿಯಿವೆ' ಎಂದು ಹೇಳಿದರು.`ಔಷಧ ಗುಣಮಟ್ಟ ನಿಯಂತ್ರಣ ಘಟಕದಲ್ಲಿ ಸುಮಾರು 20 ಕ್ಕೂ ಹೆಚ್ಚು ಇನ್‌ಸ್ಪೆಕ್ಟರ್ ಹುದ್ದೆಗಳು ಖಾಲಿ ಇದ್ದು, ಸರ್ಕಾರವು ಇವುಗಳನ್ನು ಭರಿಸಲು ಸಿದ್ಧವಾಗಿದೆ. ಅಲ್ಲದೇ, ದೇಶದಲ್ಲಿಯೇ ಮೊದಲ ಬಾರಿಗೆ ಸಂಚಾರಿ ಘಟಕವನ್ನು ಸ್ಥಾಪಿಸಲು ಸರ್ಕಾರದ ಅನುಮತಿಯನ್ನು ಕೇಳಲಾಗಿದೆ' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.