ಸೋಮವಾರ, ಮೇ 25, 2020
27 °C

ಕಂಠೀರವ ಕಲರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಠೀರವ ಕಲರವ

‘ನಾನು ಫರ್ಸ್ಟ್ ಟೈಮ್ ಪ್ರೆಸ್‌ಮೀಟ್ ಅಡ್ರೆಸ್ ಮಾಡ್ತಿದೀನಿ. ನನ್ನ ಪಾತ್ರಕ್ಕೆ ಸೆಂಟಿಮೆಂಟ್, ಗ್ಲಾಮರ್ ಎಲ್ಲಾ ಇದೆ. ತಪ್ಪು ಮಾಡಿದಾಗ ಶಿಲೆ ತರಹ ಕೆತ್ತಿ ನನ್ನನ್ನ ತಿದ್ದಿದಾರೆ ಡೈರೆಕ್ಟರ್’. ‘ಈ ಚಿತ್ರದಲ್ಲಿ ಫೈಟ್ ಸೀನ್‌ನಲ್ಲಿ ನಿಂತ್ಕೊಳ್ಳೋ ಅವಕಾಶ ಸಿಕ್ಕಿದೆ. ಸೋ... ನೆಕ್ಸ್ಟ್ ಫಿಲಂನಲ್ಲಿ ಫೈಟ್‌ಗೆ ಆಫರ್ ಬಂದ್ರೆ ರೆಡಿ’.ಮೊದಲ ವಾಕ್ಯ ಉಲಿದವರು ರಿಷಿಕಾ ಸಿಂಗ್. ಎರಡನೆಯದು ಶುಭಾ ಪೂಂಜಾ ಅವರ ಮಾತು. ‘ಕಂಠೀರವ’ನ ನಾಯಕಿಯರಿಬ್ಬರೂ ಕಂಗ್ಲೀಷ್‌ನಲ್ಲಿ ಚುಟುಕಾಗಿ ಉಲಿದು ನಲಿದು ಆ ರಾತ್ರಿಯನ್ನು ಮತ್ತಷ್ಟು ತಂಪಾಗಿಸಿದರು. ಸಂಕ್ರಾಂತಿ ಹೊತ್ತಿಗೆ ‘ಕಂಠೀರವ’ ಬರಲಿದ್ದಾನೆ. ದುನಿಯಾ ವಿಜಯ್ ಚಿತ್ರದ ನಾಯಕ. ತೆಲುಗಿನ ‘ಸಿಂಹಾದ್ರಿ’ಯ ರೀಮೇಕ್ ಇದು. ಕೋಟಿ-ನಿರ್ಮಾಪಕ ರಾಮು ನಿರ್ಮಾಪಕ. ‘ಕಂಠೀರವ’ದ ಬಜೆಟ್ ಎಷ್ಟೆಂದು ಕೇಳಿದರೆ, ನಕ್ಕು ಸುಮ್ಮನಾದರು ರಾಮು.‘ದುನಿಯಾ’ ನೋಡಿದಾಗಿನಿಂದ ವಿಜಯ್ ಜೊತೆ ಚಿತ್ರ ಮಾಡಬೇಕು ಅಂತ ಯೋಚಿಸ್ತಾ ಇದ್ದೆ. ಇದು ಸಾಹಸ ಪ್ರಧಾನ ಚಿತ್ರವಾದ್ದರಿಂದ ವಿಜಯ್ ಇದಕ್ಕೆ ಸೂಕ್ತ ಎನ್ನಿಸಿತು. ಕನ್ನಡದ ಬಿಗ್ ಪಿಕ್ಚರ್ ಆಗೋ ಎಲ್ಲಾ ಫಾರ್ಮುಲಾ ಈ ಚಿತ್ರಕ್ಕಿದೆ. 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಲಿದೆ. ಒಟ್ಟು 5 ಹಾಡುಗಳಿದ್ದು ಥಾಯ್ಲೆಂಡ್, ಮೈಸೂರು, ಬೆಂಗಳೂರು, ಕೇರಳ, ತ್ರಿವೇಂಡ್ರಂನಲ್ಲಿ ಚಿತ್ರೀಕರಣ ಮಾಡಲಾಗಿದೆ. ಮೊದಲನೇ ಸಾಹಸ ದೃಶ್ಯಕ್ಕೆ ಸುಮಾರು 90 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಫೈಟ್ ಮಾಸ್ಟರ್ ಥ್ರಿಲ್ಲರ್ ಮಂಜು ಅದ್ಭುತವಾಗಿ ಸಾಹಸ ದೃಶ್ಯಗಳನ್ನು ಸಂಯೋಜನೆ ಮಾಡಿದ್ದಾರೆ’ ಎಂದರು.‘ಮಾಲಾಶ್ರೀ ಅಭಿನಯದ ‘ವೀರ’ ಮುಕ್ತಾಯದ ಹಂತದಲ್ಲಿದ್ದು, ಹದಿನೈದು ದಿನದೊಳಗೆ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಜೊತೆಗೆ ಓಂಪ್ರಕಾಶ್ ನಿರ್ದೇಶನದಲ್ಲಿ ದರ್ಶನ್ ಅಭಿನಯದ ‘ಭೀಮ’ ಮತ್ತು ಶಿವರಾಜ್‌ಕುಮಾರ್ ಅಭಿನಯದ ‘ಸಿಂಹ’ ಚಿತ್ರಗಳು ತಯಾರಾಗಲಿವೆ. ಹೆಸರಿಡದ ಇನ್ನೊಂದು ಚಿತ್ರವೊಂದನ್ನು ಎಂ.ಡಿ.ಶ್ರೀಧರ್ ನಿರ್ದೇಶಿಸಲಿದ್ದು, ಈ ತಿಂಗಳಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಲಾಗುವುದು. ಈ ಮೂರೂ ಚಿತ್ರಗಳೂ ಸ್ವಮೇಕ್’ ಎಂದು ಯೋಜನಾ ಪಟ್ಟಿಯ ಚುಟುಕು ವಿವರ ನೀಡಿದರು ರಾಮು.‘ಚಿತ್ರೀಕರಣ ನಡೆಯುವಾಗ ನಿರ್ದೇಶಕ ತುಷಾರ್ ರಂಗನಾಥ್‌ಗೆ ಹಾರ್ಟ್ ಅಟ್ಯಾಕ್ ಆಯ್ತು. ತಿಂಗಳುಗಟ್ಟಲೆ ವಿಶ್ರಾಂತಿ ಅವಶ್ಯವಿದ್ದರೂ ಐದನೇ ದಿನಕ್ಕೇ ಗಾಲಿಕುರ್ಚಿಯಲ್ಲಿ ಸೆಟ್‌ಗೆ ಬಂದು ಚಿತ್ರೀಕರಣದಲ್ಲಿ ತೊಡಗಿಕೊಂಡರು’ ಎಂದು ಹೇಳಿದ್ದು ನಾಯಕ ನಟ ವಿಜಯ್.

ನಿರ್ದೇಶಕ ತುಷಾರ್ ರಂಗನಾಥ್, ಛಾಯಾಗ್ರಾಹಕ ದಾಸರಿ ಸೀನು, ನಟ ಶ್ರೀನಿವಾಸಮೂರ್ತಿ, ಥ್ರಿಲ್ಲರ್ ಮಂಜು ಇತರರು ಅಲ್ಲಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.