ಶುಕ್ರವಾರ, ಏಪ್ರಿಲ್ 16, 2021
31 °C

ಕಂದಕೂರು ಶಾಲೆ ಅವ್ಯವಸ್ಥೆ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಶಾಲೆಗೆ ತಡವಾಗಿ ಬರುವುದು, ಬಂದರೂ ಮೊಬೈಲ್‌ನಲ್ಲೇ ಹರಟೆ ಹೊಡೆಯುವ ಶಿಕ್ಷಕರು, ಶಿಕ್ಷಣಿಕ ವ್ಯವಸ್ಥೆ ಕುಸಿತ, ಬೇಕಾಬಿಟ್ಟಿ ಬಿಸಿಯೂಟ ಮೊದಲಾದ ವಿಷಯಗಳಿಗೆ ಬೇಸತ್ತ ತಾಲ್ಲೂಕಿನ ಕಂದಕೂರು ಗ್ರಾಮಸ್ಥರು ಅಲ್ಲಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಮುತ್ತಿಗೆಹಾಕಿ ಪ್ರತಿಭಟಿಸಿದ ಘಟನೆ ಶುಕ್ರವಾರ ನಡೆದಿದೆ.ಪ್ರಾರ್ಥನೆ ವೇಳೆಗೆ ಶಾಲೆಗೆ ಜನ ಬಂದರೂ ಕೆಲ ಶಿಕ್ಷಕರು ತಡವಾಗಿ ಬಂದ ಕಾರಣ ಅವರಿಗೆ ಶಾಲೆಯೊಳಗೆ ಬಿಡಲಿಲ್ಲ, ಶಾಲೆ ಅವ್ಯವಸ್ಥೆಯ ಆಗರವಾಗಿದೆ, ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸಬೇಕಾದವರೇ ಬೇಜವಾಬ್ದಾರಿಯಿಂದ ಹಾಳು ಮಾಡುತ್ತಿದ್ದೀರಿ ಎಂದು ಮುಖ್ಯಶಿಕ್ಷಕ ಸಹಿತ ಅಲ್ಲಿದ್ದ ಇತರೆ ಎಲ್ಲ ಶಿಕ್ಷಕರನ್ನು ಗ್ರಾಮಸ್ಥರು ತರಾಟೆಗೊಳಪಡಿಸಿದರು.1-8ನೇ ತರಗತಿಯ ಪ್ರಾಥಮಿಕ ಶಾಲೆಯಲ್ಲಿ 562 ಮಕ್ಕಳು ಕಲಿಯುತ್ತಿದ್ದಾರೆ, 5-6ನೇ ತರಗತಿ ಮಕ್ಕಳಿಗೂ ಕನ್ನಡ ಪಠ್ಯಪುಸ್ತಕಗಳನ್ನು ಸರಿಯಾಗಿ ಓದಲು ಬರುವುದಿಲ್ಲ, ಉಳಿದ ವಿಷಯಗಳಲ್ಲಿ ಮಕ್ಕಳಲ್ಲಿ ಪರಿಣಿತಿಯೇ ಇಲ್ಲ, ಇದೇ ಪರಿಸ್ಥಿತಿ ಮುಂದುವರೆದರೆ ಮಕ್ಕಳಿಗೆ ಭವಿಷ್ಯವೇ ಇಲ್ಲದಂತಾಗುತ್ತದೆ, ತಲಾ 6 ರಂತೆ ಶಿಕ್ಷಕ, ಶಿಕ್ಷಕಿಯರಿದ್ದರೂ ಶಾಲೆ ದನದ ದೊಡ್ಡಿಯಂತಾಗಿದೆ, ಯಾರೂ ಹೇಳುವವರು ಕೇಳುವವರೇ ಇಲ್ಲ, ಶಿಕ್ಷಕರು ನಡೆದದ್ದೇ ದಾರಿ ಎನ್ನುವಂತಾಗಿದೆ ಎಂದು ಪಾಲಕರು ಆತಂಕ ವ್ಯಕ್ತಪಡಿಸಿದರು.ಮೊಬೈಲ್ ಹರಟೆ
: ಸರ್ಕಾರ ಶಾಲೆಗಳಲ್ಲಿ ಮೊಬೈಲ್ ಬಳಸುವುದನ್ನು ನಿಷೇಧಿಸಿದ್ದರೂ ಶಿಕ್ಷಕರಿಗೆ ಅದರ ಪರಿವೇ ಇಲ್ಲ, ಪಾಠದ ವೇಳೆಯಲ್ಲೇ ಸದಾ ಮೊಬೈಲ್ ಗುಂಗಿನಲ್ಲೇ ಇರುತ್ತಾರೆ, ವರ್ಗದ ಕೋಣೆಯಿಂದ ಹೋರಗೆ ಹೋಗಿ ತಾವು ಶಾಲೆಯಲ್ಲಿದ್ದೇವೆ ಎಂಬ ಪರಿಜ್ಞಾನವೇ ಇಲ್ಲದಂತೆ ಹರಟೆಯಲ್ಲಿ ನಿರತರಾಗಿರುತ್ತಾರೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ತುಮ್ಮರಗುದ್ದಿ, ರಾಮಣ್ಣ ಭಾವಿಕಟ್ಟಿ, ಬಸವರಾಜ ಕಾಮನೂರು, ಹಾಲಪ್ಪ ಹೂಗಾರ, ಚಂದ್ರಪ್ಪ ಭಾವಿಕಟ್ಟಿ, ರಾಮಣ್ಣ ತಳವಾರ ಇನ್ನೂ ಅನೇಕರು ಆಕ್ರೋಶ ವ್ಯಕ್ತಪಡಿಸಿದರು.ಕಳಪೆ ಬಿಸಿಯೂಟ: ಬಿಸಿಯೂಟದ ವ್ಯವಸ್ಥೆ ಬಗ್ಗೆ ತಮ್ಮ ಅತೃಪ್ತಿ ಹೊರಹಾಕಿದ ಗ್ರಾಮಸ್ಥರು, ಈ ಶಾಲೆಯಲ್ಲಿ ಬಿಸಿಯೂಟ ಹೆಸರಿಗೆ ಮಾತ್ರ ಇರುವುದೆಲ್ಲ ಕಳಪೆ, ಅನ್ನದಲ್ಲಿ ಹುಳುಗಳು ಇರುತ್ತವೆ, ಅಕ್ಕಿ, ಬೇಳೆ ಇತರೆ ವಸ್ತುಗಳನ್ನು ಸ್ವಚ್ಛಗೊಳಿಸುವುದೇ ಇಲ್ಲ, ಇದನ್ನು ಶಿಕ್ಷಕರೂ ಗಮನಿಸುವುದಿಲ್ಲ, ಹಾಗಾಗಿ ಮಕ್ಕಳ ಆರೋಗ್ಯ ಹದಗೆಡುತ್ತಿದೆ ಎಂದು ಅಳಲು ತೋಡಿಕೊಂಡರು. ಅಲ್ಲದೇ ಐದಾರು ನೂರು ಮಕ್ಕಳಿದ್ದರೂ ಸಮರ್ಪಕ, ಸಾಂಬಾರ ಪದಾರ್ಥಗಳು, ತರಕಾರಿ ತರುವುದಿಲ್ಲ, ಕಾಟಾಚಾರಕ್ಕೆ ಒಂದೆರಡು ಕೇಜಿ ಮಾತ್ರ ತಂದರೂ ಸಾಕಷ್ಟು ಹಣ ಖರ್ಚುತೋರಿಸುತ್ತಾರೆ. ಆಹಾರದಲ್ಲಿ ಯಾವುದೇ ಪೌಷ್ಠಿಕಾಂಶವೇ ಇರುವುದಿಲ್ಲ ಎಂದು ದೂರಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಶಿಕ್ಷಕ ಪರಸಪ್ಪ ತಂಗಡಗಿ, ಇನ್ನುಮುಂದೆ ಇಂತಹ ಯಾವುದೇ ತೊಂದರೆಗಳು ಆಗದಂತೆ ನೋಡಿಕೊಳ್ಳುವುದಾಗಿ ಜನರಿಗೆ ಭರವಸೆ ನೀಡಿದರು. ಇಲ್ಲಿಯ ಶಿಕ್ಷಕರ ಬೇಜವಾಬ್ದಾರಿಯ ವರ್ತನೆ, ಬಿಸಿಯೂಟದ ನೂನ್ಯತೆಗಳಿಗೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಹಲವು ಬಾರಿ ವಿವರಿಸಿದ್ದೇವೆ ಆದರೆ ಸುಧಾರಣೆ ಮಾತ್ರ ಕಂಡುಬರದ ಕಾರಣ ಜನ ಪ್ರತಿಭಟನೆ ನಡೆಸುವುದು ಅನಿವಾರ್ಯವಾಯಿತು ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.