ಸೋಮವಾರ, ಮೇ 10, 2021
25 °C

ಕಂದಾಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ಅಕ್ರಮ ಮರಳು ಸಾಗಣೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿದ ಕಂದಾಯ ಇಲಾಖೆ ಸಿಬ್ಬಂದಿ ಮೇಲೆ ಮರಳು ಸಾಗಣೆದಾರರು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಮಂಗಳವಾರ ಸಂಜೆ ಸಮೀಪದ ತಗ್ಗಹಳ್ಳಿ ಬಳಿ ನಡೆದಿದೆ.ಗ್ರಾಮ ಸಹಾಯಕರಾದ ಚಿಕ್ಕೋಜಿ ಶಂಕರ್, ಪ್ರದೀಪ್, ಗ್ರಾಮ ಲೆಕ್ಕಾಧಿಕಾರಿ ಸತೀಶ್, ರಾಜಸ್ವ ನಿರೀಕ್ಷಕರಾದ ನಾಗಯ್ಯ, ದೇವರಸಯ್ಯ ಎಂಬುವರಿಗೆ ಗಾಯಗಳಾಗಿವೆ. ಮಂಗಳವಾರ ಸಂಜೆ 6ಗಂಟೆ ಸಮಯದಲ್ಲಿ ತಗ್ಗಹಳ್ಳಿ ಬಳಿ 6 ಲಾರಿಗಳಲ್ಲಿ ಅಕ್ರಮವಾಗಿ ಮರಳು ತುಂಬಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಂದಾಯ ಇಲಾಖೆ ಸಿಬ್ಬಂದಿ ತಹಶೀಲ್ದಾರ್ ಜೀಪಿನಲ್ಲಿ ಅಲ್ಲಿಗೆ ತೆರಳಿದರು.ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾದಾಗ ಅಲ್ಲಿಗೆ ಆಗಮಿಸಿದ ಮುಖಂಡ ಹೊಂಬೇಗೌಡರ ಮಗ ಶಿವರಾಮು ಎಂಬಾತ ಕಂದಾಯ ಇಲಾಖೆ ಸಿಬ್ಬಂದಿಯನ್ನು ಅಡ್ಡಗಟ್ಟಿದರು. ಅಲ್ಲದೇ ಜನರನ್ನು ಗುಂಪುಗೂಡಿಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ 4 ಲಾರಿಗಳು ಅಲ್ಲಿಂದ ಮರಳು ತುಂಬಿಕೊಂಡು ಪರಾರಿಯಾಗಿವೆ.ಅಷ್ಟರಲ್ಲಿ ಸಿಬ್ಬಂದಿ ದಿಗ್ಬಂಧನ ವಿಚಾರ ತಿಳಿದ ಕೊಪ್ಪ ಪಿಎಸ್‌ಐ ಮುನಿಯಪ್ಪ ಸಿಬ್ಬಂದಿಯೊಂದಿಗೆ ತೆರಳಿ ಜನರನ್ನು ಚೆದುರಿಸಿ ಸಿಬ್ಬಂದಿಯನ್ನು ದಿಗ್ಬಂಧನದಿಂದ ಮುಕ್ತಗೊಳಿಸಿದರು. ಅಲ್ಲದೇ 2ಲಾರಿಗಳನ್ನು ವಶಕ್ಕೆ ತೆಗೆದುಕೊಂಡರು. ಇದೇ ಮಾದರಿಯಲ್ಲಿ ಮಾಲಗಾರನಹಳ್ಳಿ ಸಮೀಪವೂ ಮರಳುಕೋರರು ಕಂದಾಯ ಇಲಾಖೆ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಆದರೆ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.ಮೊಕದ್ದಮೆ ದಾಖಲಿಸುವೆ: ಮರಳು ಸಾಗಣೆದಾರರು ತಮ್ಮ ಸಿಬ್ಬಂದಿಯ ಮೇಲೆ ದಾಳಿ ನಡೆಸಿರುವುದರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುವುದು. ಅಲ್ಲದೇ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ತಗ್ಗಹಳ್ಳಿಯ ಮುಖಂಡರಾದ ಶಿವರಾಮು ಮೇಲೆ ಮೊಕದ್ದಮೆ ದಾಖಲಿಸಲಾಗುವುದು. ಯಾವುದೇ ಕಾರಣಕ್ಕೂ ತಾಲ್ಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ತಹಶೀಲ್ದಾರ್ ನಾಗರಾಜು ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.