ಶನಿವಾರ, ಜೂನ್ 19, 2021
21 °C

ಕಂದಾಯ ವಸೂಲಿಯಲ್ಲಿ ತಾರತಮ್ಯ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ನಗರಸಭೆ ಮಾ.1ರಿಂದ ಹಮ್ಮಿಕೊಂಡಿರುವ ಕಂದಾಯ ವಸೂಲಿ ಸಪ್ತಾಹದಲ್ಲಿ ಕೆಲವು ವಾರ್ಡ್‌ಗಳನ್ನು ಕೈ ಬಿಟ್ಟಿರುವುದು ಅಸಮಾಧಾನಕ್ಕೆ ದಾರಿ ಮಾಡಿದೆ.ನಗರದ ಕೋಟೆಯಲ್ಲಿರುವ ಯುವಜನ ಸೇವಾ ಕೇಂದ್ರದ ಆವರಣದಲ್ಲಿ 1ರಂದು ನಗರಸಭೆಯ ತೆರಿಗೆ ವಸೂಲಾತಿ ಸಪ್ತಾಹಕ್ಕೆ ನಗರಸಭೆ ಅಧ್ಯಕ್ಷೆ ನಾಜಿಯಾ, ಆಯುಕ್ತೆ ಆರ್.ಶಾಲಿನಿ ಚಾಲನೆ ನೀಡಿದ್ದರು. ನಂತರ ಮಾ.9ರಂದು ಹೊಸ ಬಡಾವಣೆಯ ಕನಕ ಮಂದಿರದಲ್ಲಿ ಕಂದಾಯ ವಸೂಲಿ ನಡೆದಿತ್ತು. ಮಂಗಳವಾರ ಪಾಲಸಂದ್ರ ಬಡಾವಣೆಯ 2ನೇ ಮುಖ್ಯರಸ್ತೆಯಲ್ಲಿ ನಗರಸಭೆ ಸಿಬ್ಬಂದಿ ಬೆಳಿಗ್ಗೆಯಿಂದ ಸಂಜೆವರೆಗೂ ಕಾರ್ಯನಿರ್ವಹಿಸಿ ಕಂದಾಯ ವಸೂಲಿ ಮಾಡಿದರು. ನಾಲ್ಕನೇ ವಸೂಲಿ ಕಾರ್ಯಕ್ರಮ 16ರಂದು ಗೌರಿಪೇಟೆಯ ಆಂಜನೇಯ ದೇವಾಲಯದಲ್ಲಿ ನಡೆಯಲಿದೆ. 20ರಂದು ಪಿಸಿ ಹಳ್ಳಿ ಸರ್ಕಾರಿ ಶಾಲೆಯಲ್ಲಿ ನಡೆಯಲಿದೆ.ಮೊದಲ ಬಾರಿ 1, 2, 3, 4ನೇ ವಾರ್ಡ್ ವ್ಯಾಪ್ತಿಯ ಜನರಿಂದ, ಎರಡನೇ ಬಾರಿ 5, 6, 12ನೇ ವಾರ್ಡ್ ವ್ಯಾಪ್ತಿಯಲ್ಲಿ ಮೂರನೇ ಬಾರಿ 7,8, 9ನೇ ವಾರ್ಡ್ ವ್ಯಾಪ್ತಿಯಲ್ಲಿ ಕಂದಾಯ ವಸೂಲಿ ನಡೆದಿದೆ. 16ರಂದು 10,11ನೇ   ವಾರ್ಡ್, 20ರಂದು 13, 14, 15ನೇ ವಾರ್ಡ್, 27ರಂದು 24, 25, 26ನೇ ವಾರ್ಡ್ ಮತ್ತು ಸಪ್ತಾಹದ ಕೊನೇ ದಿನವಾದ 29ರಂದು 18, 19ನೇ ವಾರ್ಡ್ ವ್ಯಾಪ್ತಿಯಲ್ಲಿ ಕಂದಾಯ ವಸೂಲಿ ನಡೆಯಲಿದೆ.

ಹೊರತು: ಈ ಸಪ್ತಾಹದಲ್ಲಿ 20            ವಾರ್ಡ್‌ಗಳನ್ನಷ್ಟೆ ಕೇಂದ್ರೀಕರಿಸಲಾಗಿದೆ. ಉಳಿದಂತೆ 16, 17, 20, 21, 22, 23 ಹಾಗೂ  27ರಿಂದ 35ನೇ ವಾರ್ಡ್‌ಗಳನ್ನು ಕೈಬಿಡಲಾಗಿದೆ. ಸದ್ಯಕ್ಕೆ ಈ ಅಂಶ ಅಸಮಾಧಾನಕ್ಕೆ ಕಾರಣವಾಗಿದೆ.ಪ್ರಸ್ತುತ ಸಪ್ತಾಹದಲ್ಲಿ ಕಂದಾಯ ವಸೂಲಿಗೆ ಆಯ್ಕೆ ಮಾಡಲಾಗಿರುವ ವಾರ್ಡ್‌ಗಳಲ್ಲಿ ಕಂದಾಯ ಪಾವತಿ ಆಶಾದಾಯಕವಾಗಿದೆ. ಬಹಳಷ್ಟು ನಿವಾಸಿಗಳು ಕಂದಾಯ ಪಾವತಿಸುತ್ತಾರೆ. ಆದರೆ ಈಗ ಕೈ ಬಿಡಲಾಗಿರುವ ವಾರ್ಡ್‌ಗಳಲ್ಲಿ ಬಹಳಷ್ಟು ವಾರ್ಡ್‌ಗಳಿಂದ ನಗರಸಭೆಗೆ ಕಂದಾಯವೇ ಪಾವತಿಯಾಗುತ್ತಿಲ್ಲ. ಅಂಥ ವಾರ್ಡ್‌ಗಳಲ್ಲಿ ಮೊದಲು ಕಂದಾಯ ವಸೂಲಿಗೆ ನಗರಸಭೆ ಮುಂದಾಗಬೇಕಿತ್ತು ಎಂಬುದು ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ ಆಕ್ಷೇಪ.ನಗರಸಭೆ ಅಧ್ಯಕ್ಷೆ ನಾಜಿಯಾ ಪ್ರತಿನಿಧಿಸುವ ವಾರ್ಡ್ 35ರಲ್ಲಿ ಕಂದಾಯ ಪಾವತಿ ನಿರಾಶಾದಾಯಕವಾಗಿದೆ. 35ಕ್ಕೂ ಮುಂಚಿನ          ವಾರ್ಡ್‌ಗಳಲ್ಲೂ ಇದೇ ಸನ್ನಿವೇಶವಿದೆ. ಅಲ್ಲಿ ಕಂದಾಯ ವಸೂಲಿ ಮಾಡುವುದೂ ಅಗತ್ಯ. ನಿಯಮಿತವಾಗಿ ಮತ್ತು ಪ್ರಾಮಾಣಿಕವಾಗಿ ಕಂದಾಯ ಪಾವತಿ ಮಾಡುವ ಜನರಿರುವ     ವಾರ್ಡ್‌ಗಳಲ್ಲಿ ಸುಲಭವಾಗಿ ಕಂದಾಯ ವಸೂಲಿ ಮಾಡುವ ಕೆಲಸ ಮಾತ್ರ ಈಗ ನಡೆಯುತ್ತಿದೆ. ಸಪ್ತಾಹದಲ್ಲಿ ನಗರಸಭೆ ವ್ಯಾಪ್ತಿಯ ಎಲ್ಲ 35 ವಾರ್ಡ್‌ಗಳಲ್ಲೂ ಕಂದಾಯ ವಸೂಲಿ ಮಾಡುವಂತೆ ಯೋಜನೆ ರೂಪಿಸಬಹುದಾಗಿತ್ತು ಎನ್ನುತ್ತಾರೆ ಅವರು.ಪ್ರತಿಭಟನೆ: ಈ ತಾರತಮ್ಯ ನೀತಿ ವಿರೋಧಿಸುವೆ. ನಾನು ಪ್ರತಿನಿಧಿಸುತ್ತಿರುವ 13ನೇ ವಾರ್ಡಿನ ವ್ಯಾಪ್ತಿಯಲ್ಲಿ ಪಿಸಿ ಬಡಾವಣೆ ಶಾಲೆ ಆವರಣದಲ್ಲಿ 20ರಂದು ಕಂದಾಯ ವಸೂಲಿ ಸಪ್ತಾಹ ನಡೆಯಲಿದೆ. ಆ ಸಂದರ್ಭದಲ್ಲಿ ನಾನು ಪ್ರತಿಭಟಿಸಲು ನಿರ್ಧರಿಸಿರುವೆ ಎಂದು ಅವರು ಮಂಗಳವಾರ `ಪ್ರಜಾವಾಣಿ~ಗೆ ತಿಳಿಸಿದರು. 27ರಂದು ಕಾರಂಜಿಕಟ್ಟೆಯ ಧರ್ಮರಾಯ ದೇವಾಲಯ ಮತ್ತು 29ರಂದು ಕಠಾರಿಪಾಳ್ಯದಲ್ಲಿರುವ ಕರಗ ದೇವಾಲಯದ ಬಳಿ ಕಂದಾಯ ವಸೂಲಿ ನಡೆಯಲಿದೆ.

`ಕಂದಾಯ ಖಾತೆ ಇಲ್ಲದೆಡೆಯೂ ವಸೂಲಿ~

ಕೋಲಾರ:
ಪ್ರಸ್ತುತ ನಗರಸಭೆಯಲ್ಲಿ ಕಂದಾಯ ಖಾತೆ ಇರುವ ಸ್ಥಳಗಳಲ್ಲಿ ಕಂದಾಯ ವಸೂಲಿ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಕಂದಾಯ ಖಾತೆ ಇಲ್ಲದ ಕಡೆ ಪ್ರತ್ಯೇಕವಾಗಿ ಕಂದಾಯ ವಸೂಲಿ ಮಾಡಲು ಅವಕಾಶವಿದೆ ಎಂದು ನಗರಸಭೆಯ ಕಂದಾಯಾಧಿಕಾರಿ ಚಲಪತಿ ತಿಳಿಸಿದ್ದಾರೆ.`ಪ್ರಜಾವಾಣಿ~ಯೊಡನೆ ಮಾತನಾಡಿದ ಅವರು,ನಗರಸಭೆಯಲ್ಲಿ ಕಂದಾಯ ಖಾತೆ ಇರದ ಸ್ಥಳಗಳ ಬಗ್ಗೆ ಪ್ರತ್ಯೇಕ ರಿಜಿಸ್ಟರ್ ಸಿದ್ಧಪಡಿಸಿ ಅಲ್ಲಿಯೂ ಕಂದಾಯ ವಸೂಲಿ ಮಾಡಲಾಗುವುದು ಎಂದರು.

ನಗರಸಭೆ ಹಮ್ಮಿಕೊಂಡಿರುವ ಕಂದಾಯ ವಸೂಲಾತಿ ಸಪ್ತಾಹಕ್ಕೆ ಜನತೆಯಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಮಂಗಳವಾರ ಪಾಲಸಂದ್ರ ಬಡಾವಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೂ 4.5 ಲಕ್ಷ ಕಂದಾಯ ವಸೂಲಾಗಿದೆ. ಈ ಹಿಂದಿನ ಕಾರ್ಯಕ್ರಮದಲ್ಲಿ ಇಷ್ಟು ವಸೂಲಾಗಿರಲಿಲ್ಲ ಎಂದು ತಿಳಿಸಿದರು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.