ಶುಕ್ರವಾರ, ಮೇ 14, 2021
31 °C

ಕಚ್ಚಾಟ ಸಾಕು ಸಾಮರಸ್ಯ ಬೇಕು: ಶಿಮುಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸಮಾಜದಲ್ಲಿ ಕಚ್ಚಾಟ ನಿಲ್ಲಿಸಿ ಸಾಮಾರಸ್ಯ ಮೂಡಬೇಕು ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಆಶಯ ವ್ಯಕ್ತಪಡಿಸಿದರು.ನಗರದ ಬಸವಕೇಂದ್ರ ಮತ್ತು ಮುರುಘಾಮಠದ ಮುರುಘಾವನದ ಹುಲ್ಲುಹಾಸಿನ ಮೇಲೆ ಆಯೋಜಿಸಿದ್ದ 35 ಜೋಡಿ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.ಸಂಸಾರದಲ್ಲಿ ಗದ್ದಲ ಇರಬೇಕು. ಅದು ವಿಚ್ಛೇದನ, ಸಂಘರ್ಷ, ಸಂಕಷ್ಟ ತರಬಾರದು. ಬದಲಿಗೆ ಅದು ಸುಗಂಧ ಬೀರುವಂತಿರಬೇಕೇ ಹೊರತು ದುರ್ಗಂಧ ಬೀರಬಾರದೆಂದು ಕಿವಿಮಾತು ಹೇಳಿದರು.ರಾಜ್ಯದ ಇಂದಿನ ರಾಜಕೀಯದಲ್ಲಿ ದಿನ ಬೆಳಗಾದರೆ ದೋಷಾರೋಪಗಳೇ ಹೆಚ್ಚಾಗಿವೆ. ದೋಷಾರೋಪಗಳನ್ನು ಕೈಬಿಟ್ಟು ಜನರ ಸಂಕಷ್ಟಗಳನ್ನು ಆಲಿಸಿ ಪರಿಹರಿಸುವ ಹೊಣೆಗಾರಿಕೆಯತ್ತ ನಮ್ಮ ಜನಪ್ರತಿನಿಧಿಗಳ ಚಿತ್ತ ಹರಿಯಬೇಕಿದೆ. ಸಣ್ಣ ಕಾರಣಗಳಿಗೆ ಕಚ್ಚಾಟಗಳು ನಿಲ್ಲಬೇಕು ಎಂದರು.ವಕೀಲರು - ಪೊಲೀಸರು ಹಾಗೂ ಮಾಧ್ಯಮದವರ ನಡುವಿನ ಗದ್ದಲವೂ ಶಾಂತಿಭಂಗ ತಂದಿತ್ತು. ಆ ಹಿನ್ನೆಲೆಯಲ್ಲಿಯೂ ಪ್ರಯತ್ನ ಮಾಡಲಾಯಿತು. ರೈತ ಸಂಘಟನೆಗಳನ್ನು ಒಗ್ಗೂಡಿಸುವ ಕಾರ್ಯ ನಡೆದಿದೆ. ರಾಷ್ಟ್ರಕವಿ ಕುವೆಂಪು ಅವರು ಈ ಎಲ್ಲ ಕಚ್ಚಾಟಗಳಿಗೆ ಸಂದೇಶವನ್ನು ತಮ್ಮ ಕವನದಲ್ಲಿ `ಕಚ್ಚಾಡುವವರನು ಕೂಡಿಸು ಒಲಿಸು, ಹೊಟ್ಟೆಯ ಕಿಚ್ಚಿಗೆ ಕಣ್ಣೀರು ಸುರಿಸು~ ಎಂದು  ಹೇಳಿದ್ದಾರೆ. ಮಕ್ಕಳ ಸಂತಾನಕ್ಕೆ ಮಾನ್ಯತೆ ಕೊಟ್ಟಂತೆ ವೃಕ್ಷ ಸಂಪತ್ತನ್ನು ಹೆಚ್ಚಾಗಿಸಿದರೆ ತಂಪು ನೆಮ್ಮದಿ ಸಾಧ್ಯವಿದೆ ಎಂದರು.ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯಸ್ಥರು ಹಾಗೂ ನಿರ್ದೇಶಕ ಡಾ.ಓ.ಎಸ್. ಸಿದ್ದಪ್ಪ ಮಾತನಾಡಿ, ಸಕಾಲಕ್ಕೆ ಮಳೆ ಬಾರದೆ ಸದಾ ಬರಕ್ಕೆ ತುತ್ತಾಗುತ್ತಿರುವ ಮಧ್ಯಕರ್ನಾಟಕದ ಚಿತ್ರದುರ್ಗ ಜಿಲ್ಲೆ ಹಚ್ಚಹಸಿರಿನಿಂದ ಕಂಗೊಳಿಸಿ ಜನರ ಸಂಕಷ್ಟಗಳು ನಿವಾರಣೆ ಆಗಬೇಕಾದರೆ ಭದ್ರಾ ಮೇಲ್ದಂಡೆ ಕಾಮಗಾರಿ ತ್ವರಿತಗತಿಯಲ್ಲಿ ಸಾಗಬೇಕಿದೆ ಎಂದು ತಿಳಿಸಿದರು.ಬಸವಕುಂಬಾರ ಗುಂಡಯ್ಯ ಸ್ವಾಮೀಜಿ, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲ ಮತ್ತು ನಿರ್ದೇಶಕ ಡಾ.ಎಚ್.ಎಸ್. ಶಂಕರೇಗೌಡ, ಸೌಭಾಗ್ಯಾ ಸಿದ್ದಪ್ಪ, ಹೈದರಾಬಾದಿನ ಬಸವ ಸಂಘಟನೆಯ ಅಪ್ಪಾರಾವ್, ಶಂಕರ ಪಾಟೀಲ್, ಮಲ್ಲಿಕಾರ್ಜುನ, ವೀರೇಂದ್ರ ಪಾಟೀಲ್, ಬೀದರ್ ಬಸವಕೇಂದ್ರದ ಗುರುಶಾಂತಪ್ಪ, ಚಂದ್ರಪ್ಪ ಜಾಬಾ ಧಾರವಾಡದ ಪಾಟೀಲ ಬಂಧುಗಳು, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ವಿಧವಾ ವಿವಾಹ: ಈ ಸಂದರ್ಭದಲ್ಲಿ ವಿವಿಧ ಜಾತಿ ಜನಾಂಗಗಳ 35 ಜೋಡಿ ಸರಳ ಕಲ್ಯಾಣ ನಡೆಯಿತು. ಬೀದರ್‌ನ ಕರುಣಾ ಎಂಬ ವಿಧವೆಯನ್ನು ಅದೇ ಜಿಲ್ಲೆಯ ಹಳ್ಳಿಖೇಡದ ರಾಜಕುಮಾರ್ ಅವರು ಮದುವೆ ಮಾಡಿಕೊಂಡರು.ಈ ಸಂದರ್ಭದಲ್ಲಿ ನಗರದ ಕಾಂತರಾಜ ಸ್ಟೋರ್ಸ್‌ ವತಿಯಿಂದ ಉಚಿತ ಕ್ಯಾಲೆಂಡರ್ ವಿತರಿಸಿದರು.

`ಜಮುರಾ~ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಡಾ.ಎಂ. ಜಯಣ್ಣ ಸ್ವಾಗತಿಸಿದರು. ಪ್ರದೀಪ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಿ.ಪಿ. ಜ್ಞಾನಮೂರ್ತಿ ವಂದಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.