ಸೋಮವಾರ, ಜೂನ್ 21, 2021
23 °C

ಕಟ್ಟಡ ಕಾಮಗಾರಿಗೆ ಅಡ್ಡಿ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪೇಟೆ: ನಿರ್ಮಾಣ ಹಂತದಲ್ಲಿದ್ದ ಶಾಲಾ ಕಟ್ಟಡದ ಕಬ್ಬಿಣದ ಕಂಬಿಗಳನ್ನು ಮುರಿದುಹಾಕಿ ಕಟ್ಟಡ ಕಾಮಗಾರಿಗೆ ಅಡ್ಡಿಪಡಿಸಿರುವ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ ತಾಲ್ಲೂಕಿನ ಆಲಂಬಾಡಿಕಾವಲು ಗ್ರಾಮದ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ಮಂಗಳವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.ತಾಲ್ಲೂಕಿನ ಆಲಂಬಾಡಿಕಾವಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (ಕನ್ನಡ) ಆವರಣದಲ್ಲಿ ಮುಖ್ಯ ಶಿಕ್ಷಕರ ಕೊಠಡಿಯು ನಿರ್ಮಾಣ ಹಂತದಲ್ಲಿದ್ದು, ಖಾಸಗಿ ವ್ಯಕ್ತಿಯೊಬ್ಬರು ಕಟ್ಟಡ ಕಟ್ಟುತ್ತಿರುವ ಸ್ಥಳ ತಮಗೆ ಸೇರಿದ್ದೆಂದು ತಕರಾರು ತೆಗೆದು ನ್ಯಾಯಾಲಯದ ಮೆಟ್ಟಿ ಲೇರಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಶಾಲಾ ಕಟ್ಟಡ ನಿರ್ಮಾಣಕ್ಕೆ ಅಡ್ಡಿಯುಂಟು ಮಾಡಬಾರದು ಎಂಬ ಆದೇಶವನ್ನೂ ನೀಡಿತ್ತು.ಆದರೂ, ಪದೇ ಪದೇ ಶಾಲೆಗೆ ಬಂದು ಕಿರಿಕಿರಿ ಮಾಡುತ್ತಿದ್ದ ಗ್ರಾಮದ ಅಲ್ತಫ್‌ ಎಂಬ ವ್ಯಕ್ತಿ ಮಂಗಳವಾರ ಬೆಳಿಗ್ಗೆ ತನ್ನ ಇಬ್ಬರು ಜೊತೆಗಾರರೊಂದಿಗೆ ಶಾಲಾವರಣಕ್ಕೆ ಬಂದು ಕಾಮಗಾರಿಯನ್ನು ತಡೆದಿದ್ದಾನೆ. ಅಲ್ಲದೆ ನಿರ್ಮಾಣ ಹಂತದಲ್ಲಿ ಇದ್ದ ಪಿಲ್ಲರ್‌ನ ಕಂಬಿಗಳನ್ನು ಮುರಿದು ಹಾಕಿದ್ದಾನೆ ಎಂದು ದೂರಿದರು.ವಿಷಯ ತಿಳಿದ ಗ್ರಾಮದ ಮುಖಂಡರು ಶಾಲೆ ಎದುರಿನ ರಸ್ತೆಯಲ್ಲಿ ಮಕ್ಕಳೊಂದಿಗೆ ಬಂದು ಧರಣಿ ಕುಳಿತರು. ಇಡೀ ಗ್ರಾಮದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಲಾಯಿತು. ಕೃಷ್ಣರಾಜನಗರ – ಸೋಮನಹಳ್ಳಿ ಮುಖ್ಯ ರಸ್ತೆಯಲ್ಲಿ ಟೈರ್‌ಗಳನ್ನು ಸುಟ್ಟು ವಾಹನ ಸಂಚಾರಕ್ಕೆ ಅಡ್ಡಿಪಡಿಸಲಾಯಿತು. ತಕ್ಷಣ ಘಟನೆಗೆ ಕಾರಣರಾದ ವ್ಯಕ್ತಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.ವೃತ್ತ ಆರಕ್ಷಕ ನಿರೀಕ್ಷಕ ಕೆ. ರಾಜೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌. ರೇವಣ್ಣ, ಗ್ರಾಮಾಂತರ ಠಾಣೆ ಉಪನಿರೀಕ್ಷಕ ಧನರಾಜ್‌ ಮತ್ತಿತರ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತರನ್ನು ಸಮಾಧಾನಪಡಿಸಿ ಧರಣಿಯನ್ನು ಹಿಂದಕ್ಕೆ ಪಡೆಯುವಂತೆ ಮಾಡಿದರು. ಇಡೀ ಗ್ರಾಮದ ಜನತೆ ಶಾಲೆ ಮತ್ತು ಮಕ್ಕಳ ಪರವಾಗಿ ಇದ್ದಾರೆ. ನ್ಯಾಯಾಲಯದ ಆದೇಶಕ್ಕೂ ಬೆಲೆಕೊಡದೆ ಶಾಲಾ ಕಟ್ಟಡ ನಿರ್ಮಾಣವಾಗುತ್ತಿರುವ ಸ್ಥಳದ ಮೇಲೆ ಅಧಿಕಾರ ಸ್ಥಾಪಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳನ್ನು ಕಾನೂನಿನ ವಶಕ್ಕೆ ಪಡೆಯಬೇಕು ಎಂದು ಗ್ರಾಮದ ಮುಖಂಡರಾದ ಎ.ಎಂ. ಸಂಜೀವಪ್ಪ, ಭಾಸ್ಕರ್‌, ಪಠಾಣ್‌ಬಾಬು, ಖಲೀಲ್ ಮತ್ತಿತರರು ಅಧಿಕಾರಿಗಳನ್ನು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.