ಬುಧವಾರ, ಮೇ 19, 2021
24 °C

ಕಟ್ಟಾ ಸುಬ್ರಹ್ಮಣ್ಯ ನ್ಯಾಯಾಂಗ ಬಂಧನ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಐಎಡಿಬಿ ಭೂ ಹಗರಣದ ಪ್ರಮುಖ ಆರೋಪಿಗಳಾಗಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಅವರ ಪುತ್ರ ಕಟ್ಟಾ ಜಗದೀಶ್ ಮತ್ತು ಇಟಾಸ್ಕಾ ಸಾಫ್ಟ್‌ವೇರ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ವಿ.ಶ್ರೀನಿವಾಸ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಇದೇ 19ರವರೆಗೆ ವಿಸ್ತರಿಸಿ ವಿಶೇಷ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.ಮೂವರು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಸೋಮವಾರಕ್ಕೆ ಕೊನೆಗೊಂಡಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಸೋಮವಾರ ಜಗದೀಶ್ ಮತ್ತು ಶ್ರೀನಿವಾಸ್ ಅವರನ್ನು `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಸಂದರ್ಭದಲ್ಲಿ ಮೂವರೂ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳ ಕಾಲ ವಿಸ್ತರಿಸಿ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಆದೇಶ ಹೊರಡಿಸಿದರು.ಅಳಲು ತೋಡಿಕೊಂಡ ಶ್ರೀನಿವಾಸ್:ಮಧ್ಯಾಹ್ನ 12 ಗಂಟೆಯ ವೇಳೆಗೆ ಜಗದೀಶ್ ಮತ್ತು ಶ್ರೀನಿವಾಸ್ ಅವರನ್ನು ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಕರೆತಂದರು. ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಶ್ರೀನಿವಾಸ್ ಅವರನ್ನು ನ್ಯಾಯಾಲಯದ ಆವರಣದಿಂದ ಗಾಲಿ ಕುರ್ಚಿಯಲ್ಲಿ ನ್ಯಾಯಾಲಯ ಸಭಾಂಗಣಕ್ಕೆ ಕರೆತರಲಾಯಿತು. ವಿಚಾರಣೆ ಬಳಿಕ ನ್ಯಾಯಾಲಯದಿಂದ ಕಾರಾಗೃಹಕ್ಕೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಯಿತು.`ನಾನು ಅತಿಯಾದ ರಕ್ತದೊತ್ತಡದಿಂದ ಬಳಲುತ್ತಿದ್ದೇನೆ. ಭಾನುವಾರ ನನ್ನ ರಕ್ತದೊತ್ತಡದ ಪ್ರಮಾಣ 145 ಇತ್ತು. ಕಾರಾಗೃಹದ ಅಧಿಕಾರಿಗಳ ಬಳಿ ಈ ವಿಷಯ ಹೇಳಿಕೊಂಡಿದ್ದೆ. ಅಲ್ಲಿನ ವೈದ್ಯರು ನನ್ನ ಆರೋಗ್ಯವನ್ನು ಪರೀಕ್ಷಿಸಿದರೂ ಯಾವುದೇ ಔಷಧಿ ನೀಡಿಲ್ಲ~ ಎಂದು ಶ್ರೀನಿವಾಸ್ ನ್ಯಾಯಾಧೀಶರ ಎದುರು ದೂರು ಹೇಳಿಕೊಂಡರು.ತಮ್ಮ ಕಕ್ಷಿದಾರರಿಗೆ ತೀವ್ರವಾದ ಆರೋಗ್ಯದ ಸಮಸ್ಯೆ ಇದೆ. ಅವರಿಗೆ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಆದೇಶ ನೀಡಬೇಕು ಎಂದು ಶ್ರೀನಿವಾಸ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ಕೋರಿಕೆಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, `ಆರೋಪಿ ಈಗ ಕಾರಾಗೃಹದ ವಶದಲ್ಲಿದ್ದಾರೆ. ಅಲ್ಲಿನ ಇತಿಮಿತಿಯಲ್ಲಿ ಉತ್ತಮ ಚಿಕಿತ್ಸೆ ನೀಡುವಂತೆ ನ್ಯಾಯಾಲಯ ಆದೇಶಿಸಬಹುದು~ ಎಂದರು.ಶ್ರೀನಿವಾಸ್‌ಗೆ ಸೂಕ್ತ ಚಿಕಿತ್ಸೆ ನೀಡುವಂತೆಯೂ ಕಾರಾಗೃಹ ಸಿಬ್ಬಂದಿಗೆ ಆದೇಶಿಸಿದರು.

ಕಟ್ಟಾ ಗೈರು: ಕೆಲ ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ನ್ಯಾಯಾಲಯಕ್ಕೆ ಕರೆತಂದಿರಲಿಲ್ಲ.

 

ಈ ಸಂಬಂಧ ಲಿಖಿತ ಪ್ರಮಾಣ ಪತ್ರ ಸಲ್ಲಿಸಿದ ಕಾರಾಗೃಹದ ಅಧಿಕಾರಿಗಳು, `ಕಟ್ಟಾ ಒಳರೋಗಿಯಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ಅವರನ್ನು ಕರೆತರಲು ಸಾಧ್ಯವಾಗಿಲ್ಲ. ಮುಂದಿನ ವಿಚಾರಣೆ ವೇಳೆಗೆ ಹಾಜರುಪಡಿಸಲಾಗುವುದು~ ಎಂದು ತಿಳಿಸಿದರು.ಕಟ್ಟಾ ಹಾಜರಿಗೆ ಸಂಬಂಧಿಸಿದಂತೆ ಕಾರಾಗೃಹ ಅಧಿಕಾರಿಗಳ ಮನವಿಯನ್ನು ನ್ಯಾಯಾಲಯ ಮಾನ್ಯ ಮಾಡಿತು. ಪ್ರಕರಣದ ಇತರೆ ಆರೋಪಿಗಳಾದ ಸಿ.ಬಸವಪೂರ್ಣಯ್ಯ, ಬಿ.ಕೆ.ಮಂಜುನಾಥ್, ಟಿ.ಪಿ.ಮುನಿನಾರಾಯಣಪ್ಪ, ಗೋಪಿ ವಿಚಾರಣೆಗೆ ಹಾಜರಾಗಿದ್ದರು.ತಕ್ಷಣ ಬಂಧನಕ್ಕೆ ಆದೇಶ: ಇಂದು ಬಿಲ್ಡರ್ಸ್ ಮತ್ತು ಡೆವಲಪರ್ಸ್ ಕಂಪೆನಿಯ ಪಾಲುದಾರರಾದ ವೆಂಕಯ್ಯ ಮತ್ತು ಜಗ್ಗಯ್ಯ ಅವರನ್ನು ಶೀಘ್ರದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಈ ಸಂದರ್ಭದಲ್ಲಿ ನ್ಯಾಯಾಧೀಶರು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದರು. ಈ ಇಬ್ಬರೂ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.