ಬುಧವಾರ, ಏಪ್ರಿಲ್ 21, 2021
23 °C

ಕಡತಗಳ ಖಜಾನೆಯಲ್ಲಿ...

ಸಂಧ್ಯಾ ಹೆಗಡೆ ಆಲ್ಮನೆ Updated:

ಅಕ್ಷರ ಗಾತ್ರ : | |

‘ಭಾರತೀಯರು ಹದ ಮಾಡಿದ ಬಟ್ಟೆ ಮೇಲೆ ಬರೆಯುತ್ತಾರೆ’ ಎಂದು ಕ್ರಿ.ಶ. 4ನೇ ಶತಮಾನದ ಪೂರ್ವದಲ್ಲಿ ಸುಮಾರು 2500 ವರ್ಷಗಳ ಹಿಂದೆ ಗ್ರೀಸ್‌ ದೇಶದ ನಿಯಾರ್ಕಸ್‌ ಹೇಳಿದ್ದ. ಮದ್ರಾಸ್‌ ಪ್ರಾಂತ್ಯದಲ್ಲಿದ್ದ ಕೆನರಾ ಜಿಲ್ಲೆಯ ಮೊದಲ ಕಲೆಕ್ಟರ್‌ ಮನ್ರೊ ‘ನನ್ನ ಕಚೇರಿಯ ಶಾನುಭೋಗರು ಕಡತಗಳಲ್ಲಿ ದಾಖಲೆಗಳನ್ನು ಬರೆದಿಡುತ್ತಾರೆ’ ಎಂದು 1799ರ ವೇಳೆಗೆ ಉಲ್ಲೇಖಿಸಿದ್ದ. ಆದರೆ 1890ರ ದಶಕದಲ್ಲಿ ಅಧಿಕಾರಕ್ಕೆ ಬಂದ ಕಲೆಕ್ಟರ್‌ ಸ್ವರಾಕ್‌ ‘ನನ್ನ ಕಚೇರಿಯಲ್ಲಿ ಕಡತಗಳನ್ನೇ ನೋಡಿಲ್ಲ’ ಎನ್ನುತ್ತಾರೆ.ಹೀಗೆ ಕೇವಲ 80–90 ವರ್ಷಗಳಲ್ಲಿ ಭಾರತೀಯ ಚರಿತ್ರೆಯ ಪುಟಗಳನ್ನು ತೆರೆದಿಡುವ ಕಡತಗಳು ಬದಿಗೆ ಸರಿದವು ಎಂದು ಹಿರಿಯ ಇತಿಹಾಸ ತಜ್ಞ, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಡಾ.ಎ.ಕೆ, ಶಾಸ್ತ್ರಿ ಕಡತಗಳ ಕತೆಯನ್ನು ಬಿಚ್ಚಿಟ್ಟರು. ಕಡತಗಳ ಮೇಲೆ ಆಳ ಅಧ್ಯಯನ ನಡೆಸಿ ಕನ್ನಡ ಹಾಗೂ ಇಂಗ್ಲಿಷಿನಲ್ಲಿ ಏಳಕ್ಕೂ ಹೆಚ್ಚು ಗ್ರಂಥ ರಚಿಸಿದ ಅವರು ಕರ್ನಾಟಕದ ಕಡತಶಾಸ್ತ್ರಿ ಎಂದೇ ಇತಿಹಾಸ ವಲಯದಲ್ಲಿ ಪರಿಚಿತರು. ಶಾಸ್ತ್ರಿ ಅವರ ಜೊತೆ ಮಾತಿಗಿಳಿದರೆ ಕಡತಗಳ ಜೀವನ ಚರಿತ್ರೆ ಅನಾವರಣಗೊಳ್ಳುತ್ತದೆ.1971ರಲ್ಲಿ ಇತಿಹಾಸ ತಜ್ಞ ಡಾ.ಜಿ.ಎಸ್‌. ದೀಕ್ಷಿತರ ಮಾರ್ಗದರ್ಶನದಲ್ಲಿ ಶೃಂಗೇರಿ ಮಠದಲ್ಲಿರುವ ಕಡತಗಳ ಮೇಲೆ ಅಧ್ಯಯನ ನಡೆಸಿ ಮಂಡಿಸಿದ ‘ಎ ಹಿಸ್ಟರಿ ಆಫ್‌ ಶೃಂಗೇರಿ’ ಪ್ರಬಂಧಕ್ಕೆ ಡಾಕ್ಟರೇಟ್‌ ಪಡೆದ ಶಾಸ್ತ್ರಿ ಅವರ ಖಜಾನೆಯಲ್ಲಿ ಕಡತಗಳ ವೈವಿಧ್ಯಮಯ ವಿವರಗಳಿವೆ. 12ನೇ ಶತಮಾನದಲ್ಲಿ ಹೊಯ್ಸಳ ವಿಷ್ಣುವರ್ಧನನ ಮಗ ನರಸಿಂಹ ಯುದ್ಧದಲ್ಲಿ ಸಾಧಿಸಿದ ಜಯವನ್ನು ಕಡತಗಳಲ್ಲಿ ದಾಖಲಿಸಲಾಗಿತ್ತು. 1883ರ ಬಾಂಬೆ ಗೆಜೆಟಿಯರ್‌ನಲ್ಲಿ ಸಹ ಕಡತಗಳ ಉಲ್ಲೇಖವಿದೆ.ನಿಘಂಟುಕರ್ತ ಕಿಟೆಲ್‌ ಕೂಡ ಕರ್ನಾಟಕದಲ್ಲಿ ಕಡತಗಳ ಬಳಕೆ ಇರುವುದನ್ನು ಉದಾಹರಿಸಿದ್ದಾರೆ. ಕಾಲಚಕ್ರದಲ್ಲಿ ಕಡತಗಳು ನಾಶವಾದವೇ ಅಥವಾ ಬೇರೆಲ್ಲಿಗಾದರೂ ಸಾಗಿಸಲಾಯಿತೇ ಎಂಬುದರ ಬಗ್ಗೆ ಮಾತ್ರ ಖಚಿತತೆ ಇಲ್ಲ. ಶೃಂಗೇರಿ ಮಠದಲ್ಲಿ ಅನೇಕ ಚಕ್ಕಡಿ ಗಾಡಿಗಳಲ್ಲಿ ತುಂಬಬಹುದಾದಷ್ಟು ಕಡತಗಳು ಇದ್ದವು. ಇವು ಭಾರತದ, ವಿಶೇಷವಾಗಿ ಕರ್ನಾಟಕದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಮಹತ್ವದ ದಾಖಲೆಗಳಾಗಿದ್ದವು ಎಂಬುದನ್ನು 1916ರ ಸಂದರ್ಭದಲ್ಲಿ ಮೈಸೂರು ಪುರಾತತ್ವ ಇಲಾಖೆ ನಿರ್ದೇಶಕರಾಗಿದ್ದ ಆರ್‌.ನರಸಿಂಹಾಚಾರ್‌ ತಮ್ಮ ಬರಹದಲ್ಲಿ ಹೇಳಿದ್ದಾರೆ.ಕೌಟಿಲ್ಯನ ಅರ್ಥಶಾಸ್ತ್ರ ಬೆಳಕಿಗೆ ತಂದ ಆರ್‌.ಶಾಮ ಶಾಸ್ತ್ರಿ ಸ್ವಲ್ಪ ಮಟ್ಟಿಗೆ ತಮ್ಮ ಗ್ರಂಥಗಳಲ್ಲಿ ಕಡತ ಬಳಕೆ ಮಾಡಿಕೊಂಡಿದ್ದರು. ಮುಂದೆ ಅದು ಸಂಪೂರ್ಣ ಕಡೆಗಣನೆಗೆ ಒಳಗಾಯಿತು ಎನ್ನುವ ಎ.ಕೆ. ಶಾಸ್ತ್ರಿ 70ರ ದಶಕದಿಂದ ಇಲ್ಲಿಯವರೆಗೂ ನಿರಂತರ ನಾಲ್ಕು ದಶಕಗಳ ಕಾಲ ಕಡತಗಳ ಅಧ್ಯಯನ ಮಾಡುತ್ತಿದ್ದಾರೆ.

ಏನಿದು ಕಡತ

ಬಟ್ಟೆಯನ್ನು ಪುಸ್ತಕದ ಅಳತೆಯಲ್ಲಿ ಕತ್ತರಿಸಿ ಅಗತ್ಯವಿದ್ದರೆ ಅವನ್ನು ಜೋಡಿಸಿ ಅದರ ಮೇಲೆ ಹುಣಸೆ ಬೀಜದ ಪುಡಿಗೆ ಅಕ್ಕಿ ಅಥವಾ ಗೋಧಿ ಗಂಜಿಯ ಅಂಟು ಸೇರಿಸಿದ ಮಿಶ್ರಣವನ್ನು ಬಳಿಯುತ್ತಾರೆ. ಇದರ ಮೇಲೆ ಇದ್ದಿಲಿನ ಪುಡಿಯನ್ನು ಹಚ್ಚಿ ಒಣಗಿಸಿ ಅದನ್ನು ನಯವಾಗಿಸಲು ಗಾರೆಕಲ್ಲು ಅಥವಾ ಗಣಪೆ ಕಾಯಿ (gnetum ula) ಉಜ್ಜಿ ಹದಗೊಳಿಸುತ್ತಾರೆ. ನಂತರ ಪುಸ್ತಕ ರೂಪದಲ್ಲಿ ಮಡಚಿಟ್ಟ ಅವನ್ನು ಬರಹಕ್ಕೆ ಬಳಸುತ್ತಿದ್ದರು. ಸಾಮಾನ್ಯವಾಗಿ ಸೀಸದ ಬಳಪದ ಕಲ್ಲಿನಿಂದ ಬರೆದ ಕನ್ನಡ ಮೋಡಿ ಲಿಪಿಯ ಬರಹ ಕಡತಗಳಲ್ಲಿರುತ್ತದೆ.

ಏನಿದರ ಹೂರಣ

ವಿಜಯನಗರ ಕಾಲದಿಂದ ಬ್ರಿಟಿಷ್‌ ಅವಧಿಯ 19ನೇ ಶತಮಾನದ ಅಂತ್ಯದ ವರೆಗೆ ಕಡತಗಳ ಅಸ್ತಿತ್ವ ಇರಬಹುದಾಗಿದೆ. ಶೃಂಗೇರಿ ಮಠದಲ್ಲಿರುವ ಕಡತಗಳು 17ರಿಂದ 19ನೇ ಶತಮಾನಕ್ಕೆ ಸಂಬಂಧಿಸಿದವುಗಳಾಗಿವೆ. ಪ್ರಜೆಗಳು ಹಾಗೂ ಮಠಗಳ ನಡುವಿನ ಸೌಹಾರ್ದ ನಂಟು, ನೂರಾರು ಶತಮಾನಗಳ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ ಚಿತ್ರಣ ಅರಿಯಲು ಕಡತಗಳು ಆಕರಗಳಾಗಿವೆ. ‘ಸರ್ವ ಸಾಮಾನ್ಯ’, ‘ಅರ್ಧ ಮಾನ್ಯ’, ‘ತುಂಡು ಸಂಬಳ’, ನಾಣ್ಯ ಪದ್ಧತಿಯ ಮೇಲೆ ಬೆಳಕು ಚೆಲ್ಲುವ ಗದ್ಯಾಣ, ವರಹ, ಹೊನ್ನು, ಮುಪಾಗ ಇಂತಹ ಪ್ರಾಚೀನ ಕನ್ನಡ ಪದಗಳ ಕೋಶ ಕಡತ. ಹೆಚ್ಚಿನ ಕಡತಗಳು ಕನ್ನಡದಲ್ಲಿವೆ.ಕೆಲವಷ್ಟು ಮರಾಠಿ, ತಮಿಳು, ತೆಲಗು, ಪರ್ಷಿಯನ್‌, ಸಂಸ್ಕೃತ ಭಾಷೆಯ ವಿವರಣೆ ಹೊಂದಿದ್ದರೂ ಅವು ಕೂಡ ಕನ್ನಡ ಮೋಡಿ ಲಿಪಿಯಲ್ಲಿವೆ. 15 ಸಾವಿರ ನಿರೂಪಗಳು ಹಾಗೂ ಬಿನ್ನವತ್ತಳೆಗಳು ಇದರಲ್ಲಿವೆ. ಇವಕ್ಕೆ ಸಂಬಂಧಿಸಿದ 205 ಕಡತಗಳು ಉಳಿದುಕೊಂಡಿವೆ. ಆರ್ಥಿಕ ವ್ಯವಹಾರ ದಾಖಲಿಸಿದ 500ಕ್ಕೂ ಅಧಿಕ ಕಡತಗಳು ಇವೆ. ಯಳಂದೂರು, ತೀರ್ಥಹಳ್ಳಿ ಸಮೀಪದ ಕವಲೆದುರ್ಗ ಮಠ, ಕೆಳದಿ ವಸ್ತುಸಂಗ್ರಹಾಲಯಗಳಲ್ಲಿ ಕಡತಗಳ ಸಂಗ್ರಹಗಳಿವೆ. ಕೊಲ್ಲೂರು, ಹಲಸನಾಡು, ಧರ್ಮಸ್ಥಳ, ಕಳಸ ದೇವಾಲಯಗಳು, ಧಾರ್ಮಿಕ ಕ್ಷೇತ್ರಗಳಲ್ಲಿ ಕಡತಗಳು ರಕ್ಷಣೆ ಪಡೆದಿವೆ. ವಿಶ್ವವಿದ್ಯಾಲಯಗಳಲ್ಲಿ ಸಾಂಕೇತಿಕವಾಗಿ ಮಾತ್ರ ಉಳಿದುಕೊಂಡಿವೆ.‘ಕರ್ನಾಟಕ ವಿಶ್ವವಿದ್ಯಾಲಯ, ಮೈಸೂರು, ಬೆಂಗಳೂರು ವಿಶ್ವ ವಿದ್ಯಾಲಯಗಳಲ್ಲಿ ಶಾಸನಗಳ ಅಧ್ಯಯನಕ್ಕೆ ಅವಕಾಶವಿದೆ. ಆದರೆ ಲಕ್ಷ ಸಂಖ್ಯೆಯ ದಾಖಲೆ ಇರುವ ಕನ್ನಡ ಮೋಡಿ ಲಿಪಿ ಕಲಿಕೆಗೆ ಸೂಕ್ತ ವ್ಯವಸ್ಥೆ ಇಲ್ಲವಾಗಿದೆ. ಹಂಪಿಯಲ್ಲಿರುವ ಹಸ್ತಶಾಸ್ತ್ರ ಅಧ್ಯಯನ ವಿಭಾಗ ದೇಶದಲ್ಲಿರುವ ಏಕೈಕ ಅವಕಾಶ. ಹೀಗಾಗಿ ರಾಜ್ಯದಲ್ಲಿ ಕಡತಗಳ ತಜ್ಞರು, ಅವನ್ನು ಕಲಿಸುವವರು ಬೆರಳೆಣಿಕೆಯ ಸಂಖ್ಯೆಯಲ್ಲಿದ್ದಾರೆ’ ಎನ್ನುತ್ತಾರೆ ಎ.ಕೆ. ಶಾಸ್ತ್ರಿ.30ಕ್ಕೂ ಹೆಚ್ಚು ಇತಿಹಾಸ ಗ್ರಂಥ ರಚಿಸಿರುವ ಶಾಸ್ತ್ರಿ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತಿಯಾಗಿ 17 ವರ್ಷಗಳು ಕಳೆದಿವೆ. 75ರ ಇಳಿವಯಸ್ಸಿನಲ್ಲೂ ಅವರು ಬೇರೆ ಬೇರೆ ವಿಶ್ವವಿದ್ಯಾಲಯಗಳಿಗೆ ಗೌರವ ಉಪನ್ಯಾಸಕರಾಗಿ ಹೋಗುತ್ತಾರೆ. ಕಡತಗಳ ಅಧ್ಯಯನವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮಹದಾಸೆಯಿಂದ ಶೃಂಗೇರಿಯಲ್ಲಿ ಆಸಕ್ತರಿಗೆ ತರಬೇತಿ ನೀಡುತ್ತಾರೆ. ಅಂತರರಾಷ್ಟ್ರೀಯ ಮಟ್ಟದ ಇತಿಹಾಸ ಸಮ್ಮೇಳನಗಳು ಶಾಸ್ತ್ರಿ ಅವರನ್ನು ಗುರುತಿಸಿ ಸನ್ಮಾನಿಸಿವೆ.‘ಇತಿಹಾಸ ಸಂಶೋಧನೆಯ ಸುದೀರ್ಘ ಹಾದಿಯಲ್ಲಿ 15 ಶಾಶ್ವತ ಮೌಲ್ಯಯುತ ಕೃತಿಗಳನ್ನು ರಚಿಸಿದ ಸಂತೃಪ್ತ ಭಾವ ಇದೆ. ಭೂತಕಾಲದಲ್ಲಿ ದಾಖಲಾಗದ, ಭವಿಷ್ಯತ್ತಿನಲ್ಲಿ ಸಂಶೋಧಕರಿಗೆ ಮೂಲ ಆಕರ ಗ್ರಂಥ ಆಗಲಿರುವ ಕೃತಿಗಳು

ಇವಾಗಿವೆ’ ಎಂದು ಶಾಸ್ತ್ರಿ ಅವರು ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.