ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡತದಲ್ಲೇ ಉಳಿದ ರೂ 110 ಕೋಟಿ

Last Updated 22 ಫೆಬ್ರುವರಿ 2011, 16:20 IST
ಅಕ್ಷರ ಗಾತ್ರ

ಚಾಮರಾಜನಗರ:  ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ಕೇವಲ ಘೋಷಣೆಯಾಗಿಯೇ ಉಳಿದಿದ್ದು, ಇಂದಿಗೂ ಬಿಡುಗಡೆಯ ಭಾಗ್ಯ ಕಂಡಿಲ್ಲ!

2008-09ನೇ ಸಾಲಿನ ಬಜೆಟ್‌ನಲ್ಲಿ ಅರಿಶಿಣ ಮಾರುಕಟ್ಟೆ ಮತ್ತು ಸಂಸ್ಕರಣಾ ಘಟಕ ಸ್ಥಾಪಿಸಲು ಜಿಲ್ಲೆಗೆ 10 ಕೋಟಿ ರೂ ಮೀಸಲಿಡಲಾಗಿತ್ತು. ಕಳೆದ ವರ್ಷದ ಬಜೆಟ್‌ನಲ್ಲಿ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಗೆ 100 ಕೋಟಿ ರೂ ಘೋಷಣೆಯಾಗಿತ್ತು. ಎರಡು ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ಬಿಡುಗಡೆಯಾಗಿಲ್ಲ. ಜತೆಗೆ, ಯೋಜನೆಯ ಅಂದಾಜುಪಟ್ಟಿ ಕೂಡ ಸಿದ್ಧವಾಗಿಲ್ಲ.

ಹೀಗಾಗಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಲಿರುವ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಬಗ್ಗೆ ಜಿಲ್ಲೆಯ ಜನರು ನಿರಾಸಕ್ತಿ ತಳೆಯುವಂತಾಗಿದೆ. ಕನಿಷ್ಠ ಮೀಸಲಿಟ್ಟಿರುವ ಅನುದಾನ ಬಿಡುಗಡೆಗೊಳಿಸಿ ಸೌಲಭ್ಯ ಕಲ್ಪಿಸಬೇಕೆಂಬ ಜನರ ಮನವಿ ಫಲಪ್ರದವಾಗಿಲ್ಲ.

ಜಿಲ್ಲೆಗೆ ಅಂಟಿಕೊಂಡು ಕಾವೇರಿ ನದಿ 110 ಕಿ.ಮೀ. ಹರಿದರೂ ನೀರಿನ ಸಮಸ್ಯೆ ಬಗೆಹರಿದಿಲ್ಲ. ಗುಂಡ್ಲುಪೇಟೆ ಮತ್ತು ಚಾಮರಾಜನಗರ ತಾಲ್ಲೂಕಿನ ಒಟ್ಟು 297 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ.

ಈ ಗ್ರಾಮಗಳ ಒಟ್ಟು 3.83 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸಲು 2004-05ನೇ ಸಾಲಿನಲ್ಲಿ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯಡಿ 102.95 ಕೋಟಿ ರೂ ಅಂದಾಜುಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಕಳೆದ ವರ್ಷ ಪುನಃ ಪರಿಷ್ಕರಿಸಿ ಸಲ್ಲಿಸಿರುವ 291 ಕೋಟಿ ರೂ ಅಂದಾಜುಪಟ್ಟಿಗೆ ಇಲ್ಲಿಯವರೆಗೂ ಅನುಮೋದನೆ ಸಿಕ್ಕಿಲ್ಲ.ಇದರ ಪರಿಣಾಮ ಗ್ರಾಮೀಣರು ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಅನುಭವಿಸುವಂತಾಗಿದೆ.

2010-11ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ 100 ಕೋಟಿ ರೂ ಅನುದಾನದಲ್ಲಿ ಜಿಲ್ಲೆಯ 18 ಕೆರೆಗಳಿಗೆ ನೀರು ತುಂಬಿಸುವ ಗುರಿಯಿದೆ. ಆ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಉದ್ದೇಶ ಹೊಂದಲಾಗಿದೆ. ಆದರೆ, ಕಬಿನಿ ನದಿಯಿಂದ ನಂಜನಗೂಡು ತಾಲ್ಲೂಕಿನ ಆಲಂಬೂರು ಗ್ರಾಮದ ಬಳಿಯಿಂದ ಏತ ನೀರಾವರಿ ಮೂಲಕ ನೀರು ಪೂರೈಸುವ ಯೋಜನೆ ವರ್ಷ ಕಳೆದರೂ ಕಾರ್ಯಗತಗೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗುತ್ತಿಲ್ಲ ಎನ್ನುವುದು ಗ್ರಾಮೀಣರ ದೂರು.

ಅರಿಶಿಣ ಮಾರುಕಟ್ಟೆ ಮತ್ತು ಸಂಸ್ಕರಣಾ ಘಟಕ ಸ್ಥಾಪನೆಯೂ ನೆನೆಗುದಿಗೆ ಬಿದ್ದಿದೆ. ಜಿಲ್ಲೆಯಲ್ಲಿ ಅತಿಹೆಚ್ಚು ಅರಿಶಿಣದ ಉತ್ಪಾದನೆಯಾಗುತ್ತಿದೆ. ಇಲ್ಲಿ ಸೂಕ್ತ ಮಾರುಕಟ್ಟೆ ಹಾಗೂ ಸಂಸ್ಕರಣಾ ಘಟಕ ಇಲ್ಲ. ಇದರ ಪರಿಣಾಮ ತಮಿಳುನಾಡಿನ ಈರೋಡ್‌ನತ್ತ ಬೆಳೆಗಾರರು ಮುಖ ಮಾಡುವಂತಾಗಿದೆ.

ಹೀಗಾಗಿ, ರಾಜ್ಯದ ಆದಾಯ ನೆರೆಯವರ ಬೊಕ್ಕಸದ ಪಾಲಾಗುತ್ತಿದೆ. ಬಜೆಟ್‌ನಲ್ಲಿ ಮಾರುಕಟ್ಟೆ ಸ್ಥಾಪನೆಗೆ ಮೀಸಲಿಟ್ಟ 10 ಕೋಟಿ ರೂ ಬಿಡುಗಡೆಯಾಗಿಲ್ಲ. ಇದರಿಂದ ಮಾರುಕಟ್ಟೆಯ ನಿರೀಕ್ಷೆಯಲ್ಲಿದ್ದ ಅರಿಶಿಣ ಬೆಳೆಗಾರರು ಕಂಗಾಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT