ಗುರುವಾರ , ಮೇ 13, 2021
40 °C

ಕಡೇ ಗ್ರಾಮ ಅಭಿವೃದ್ಧಿ ಕಡೆಗಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಗಿರಿ: ತಾಲ್ಲೂಕಿನ ಕೊನೆಯ ಹಳ್ಳಿ ಹೊಸಗುಡ್ಡ. ಸಮಸ್ಯೆಗಳು ಕೂಡ `ಗುಡ್ಡ~ದಂತೆ ಬೆಳೆದಿವೆ, ವಿಚಿತ್ರ ಅಂದರೂ ಇದು ಸತ್ಯ, ಸ್ವಾತಂತ್ರ್ಯ ಲಭಿಸಿ 63 ವರ್ಷ ಗತಿಸಿದರೂ ಈ ಗ್ರಾಮಕ್ಕೆ ಇಲ್ಲಿ ವರೆಗೂ ಬಸ್ ಸಂಚಾರ ಇಲ್ಲ, ಹುಲಿಹೈದರ ಗ್ರಾಪಂ ಮತ್ತು ಜಿಪಂ ವ್ಯಾಪ್ತಿಯ ಹೊಸಗುಡ್ಡ ಗ್ರಾಮದ ಜನತೆ ಕನಿಷ್ಠ ಸೌಲಭ್ಯದಿಂದ ವಂಚಿತರಾಗಿದ್ದಾರೆ.ಹುಲಿಹೈದರ-ಗುಡದೂರ ಗ್ರಾಮದ ರಸ್ತೆ ಮಧ್ಯೆ ಒಂದುವರೆ ಕಿಮೀ ದೂರ ನಡೆದುಕೊಂಡು ಹೋದರೆ ಈ ಗ್ರಾಮ ಸಿಗುತ್ತದೆ, ರಸ್ತೆ ಸ್ಥಿತಿ ನೋಡಿದರೆ ಊರಿನ ಹಣೆಬರಹ ಗೊತ್ತಾಗುತ್ತದೆ. ಪರಿಶಿಷ್ಟ ಪಂಗಡದ ನಾಯಕ, ಹಿಂದುಳಿದ ಕುರುಬ ಹಾಗೂ ಪರಿಶಿಷ್ಟ ಜಾತಿಯ ಮಾದಿಗ  ಜನಾಂಗದವರು ಹೊರತುಪಡಿಸಿದರೆ ಇಲ್ಲಿ ಅನ್ಯ ಕೋಮಿನ ಜನ ಇಲ್ಲ, ~ಸರ್ಕಾರದಿಂದ ನಮ್ಮ ಗ್ರಾಮಕ್ಕ, ಏನು ಆಧಿಕ (ಸೌಲಭ್ಯ) ಇಲ್ಲರೀ~ ಎಂಬುದು ಗ್ರಾಮದ ಎಲ್ಲಾ ಜನಾಂಗದ  ದೂರಾಗಿದೆ.ಸರಿಯಾದ ರಸ್ತೆ, ಬಸ್ ಸೌಲಭ್ಯ ಇಲ್ಲದ ಕಾರಣ ಶಾಲೆಯ ಮಕ್ಕಳು ಮೂರ‌್ನಾಲ್ಕು ಕಿಮೀ ದೂರ ನಡೆಯದೆ ಮಧ್ಯೆದಲ್ಲಿಯೆ ಶಾಲೆ ತೊರೆಯುತ್ತಿದ್ದಾರೆ, ಮಕ್ಳ ಓದುವದು ಐದನೆ ತರಗತಿ ಲಾಸ್ಟ್ ನೋಡ್ರಿ ಎಂದು ವೃದ್ದ ಶಿವನಗೌಡ, ಗ್ರಾಪಂ ಮಾಜಿ ಸದಸ್ಯ ಕುಂಠೆಪ್ಪ ತಿಳಿಸುತ್ತಾರೆ.ಊರಿಗೆ ಕನ್ಯೆ ಕೊಡುವುದು ಕಷ್ಟವಾಗಿದೆ, ಮದುವೆ, ತೊಟ್ಟೀಲು, ಇತರೆ ಕಾರ್ಯಕ್ರಮಕ್ಕೆ ಬಂದ ಬೀಗ-ಬಿಜ್ಜರು `ಏಕಾರ ಈ ಊರಿಗೆ, ಕನ್ಯೆ ಕೊಟ್ಟಿವೀ~ ಎಂದು ಶಾಪ ಹಾಕುತ್ತಿದ್ದಾರೆ ಎಂದು ಅವರು ಅಸಮಾಧಾನದಿಂದ ತಿಳಿಸಿದರು.ಹುಲಿಹೈದರ ಸೊಸೈಟಿಯಲ್ಲಿ ಸೀಮೆಎಣ್ಣೆ, ಅಕ್ಕಿ, ಗೋಧಿ ತಂದರೆ ಬಾಡಿಗೆ ಗಾಡಿ ಮಾಡಿಕೊಂಡು ಬರುವಂತ ದುಸ್ಥಿತಿ ಇದೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪೈಪ್ ತೀರ ಹಳೆಯದಾಗಿದೆ, ಹತ್ತಾರು ಕಡೆ ಪೈಪ್ ಒಡೆದುಹೋಗಿದ್ದು ರಸ್ತೆಯಲ್ಲಿ ನೀರು ಹರಿಯುತ್ತಿರುವುದು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದಾಗ ಕಂಡು ಬಂತು.ಗ್ರಾಮದಲ್ಲಿ ಒಂದು ಕೈಪಂಪ್ ಇಲ್ಲ, ಕರೆಂಟ್ ಇದ್ದರೆ ಮಾತ್ರ ಗ್ರಾಮಕ್ಕೆ ನೀರು, ಮಿನಿ ವಾಟರ್ ಟ್ಯಾಂಕ್, ನೀರಿನ ತೊಟ್ಟಿ ಖಾಲಿ, ಖಾಲಿ ಎಂದು ಗ್ರಾಮದ ದ್ಯಾಮಣ್ಣ ಕುರಿ, ಫಕೀರಪ್ಪ ನಾಯಕ, ವಿರುಪಣ್ಣ ಇತರರು ತಿಳಿಸುತ್ತಾರೆ.

ಮಹಿಳೆಯರಿಗೆ ಒಂದು ಶೌಚಾಲಯ ಇಲ್ಲ, ಬೆಳಿಗ್ಗೆ ಗುಡ್ದದ ನೆರಳೆ ಬಹಿರ್ದೆಸೆಯ ತಾಣವಾದರೆ, ರಾತ್ರಿ ಸಮಯದಲ್ಲಿ ರಸ್ತೆಗಳು, ನೀವಾದ್ರೂ ಫೈಖಾನಿ ಕಟ್ಟಿಸಿ ಕೊಡ್ರಿಯಪ್ಪಾ ಎಂದು ಹನುಮಮ್ಮ, ಕರಿಯಮ್ಮ ಅಂಗಲಾಚಿದರು.ಖಾಸಗಿ ವಾಹನಗಳ ಓಡಾಟ ಕಡಿಮೆ, ಹೆರಿಗೆ ಸಮಯದಲ್ಲಿ ಗಭೀರ್ಣಿ ಮಹಿಳೆಯರು ನರಕಯಾತನೆ ಅನುಭವಿಸುತ್ತಾರೆ ಎಂದು ಅವರು ಹೇಳಿದರು.ಬಹಳ ಮಂದಿಗೆ ರೇಶನ್ ಕಾರ್ಡ್ (ಪಡಿತರ ಚೀಟಿ) ನೀಡಿಲ್ಲ, ಕಾರ್ಡ್ ಇದ್ದರೆ ಮಾತ್ರ ಭಾಗ್ಯಲಕ್ಷ್ಮೀ ಬಾಂಡ್ ನೀಡುತ್ತಾರೆ, ಬ್ಯಾಂಕ್ ಖಾತೆ ತೆಗೆಯುತ್ತಾರೆ, ಹೆಣ್ಣು ಮಕ್ಳ ಹಡೆದವರ ಸ್ಥಿತಿ ಯಾರಿಗೂ ಹೇಳಬಾರದು ಎಂದು ಶರಣಪ್ಪ ಗೌಡ್ರ ನೋವಿನಿಂದ ಹೇಳುತ್ತಾರೆ.ಬಡವರಿಗೆ ಆಶ್ರಯ ಮನೆಗಳು ದೊರೆತ್ತಿಲ್ಲ, ಹರಿಜನ ಕೇರಿ ಅಭಿವೃದ್ಧಿಯಾಗಿಲ್ಲ ಎಂದು ಲಿಂಗಪ್ಪ ಮಾದಿಗ ದೂರುತ್ತಾರೆ.ಹುಲಿಹೈದರದಿಂದ ಅಂಚೆ ಸೇವೆ ಪಡೆದುಕೊಳ್ಳಬೇಕು, ಅಂಗನವಾಡಿ ಕೇಂದ್ರದ ಮುಂದೆ ಖಾಸಗಿ ವ್ಯಕ್ತಿಯೊಬ್ಬರು ತಿಪ್ಪೆಗುಂಡಿ ಹಾಕಿದ್ದಾರೆ, ಕಾರ್ಯಕರ್ತೆ ಊರಲ್ಲಿ ಇರುವುದಿಲ್ಲ, ಬೇರೆ ಊರಿನಿಂದ ಬರುತ್ತಾರೆ ಎಂದು ಗ್ರಾಮಸ್ಥರು ಹೇಳಿದರು.  ಹೊಸ ಶಾಲೆಗೆ ಹೊರಗೋಡೆಯಾಗಿದೆ, ಆವರಣದಲ್ಲಿ ಬೃಹತ್ ಕಲ್ಲು ಬಂಡೆಗಳಿದ್ದು ಅವುಗಳನ್ನು ಹೊಡೆದು ಹಾಕಿ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಳ್ಳುತ್ತಾರೆ.ಎಂಪಿ, ಎಮ್ಮೆಲೆಗಳು ಚುನಾವಣ್ಯಾಗ ಮಾತ್ರ ಇಲ್ಲಿಗೆ ಬಂದಾರ, ಆಮೇಲೆ ಈ ಕಡೆಗೆ ಸುಳಿದಿಲ್ಲ ಹಿಂಗಾಗಿ ನಮ್ಮ ಹಳ್ಳಿಯಲ್ಲಿ ಸಮುದಾಯ ಭವನ, ಚರಂಡಿ, ಗುಡಿ, ಗುಂಡಾರ ಅಭಿವೃದ್ಧಿಯಾಗದೆ ಹಿಂದುಳಿದಿದೆ ಎಂದು ಗ್ರಾಮಸ್ಥರು ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರುತ್ತಾರೆ.ತಾಲ್ಲೂಕು ಕೇಂದ್ರದಿಂದ 36 ಕಿಮೀ ದೂರದಲ್ಲಿರುವ ಗ್ರಾಮವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ತೀರ ಕಡೆಗಣಿಸಿದ್ದಾರೆ ಎಂದು ಅವರು ಗ್ರಾಮಸ್ಥರು ತಿಳಿಸಿದರು.

-

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.