ಸೋಮವಾರ, ಮಾರ್ಚ್ 8, 2021
22 °C
ರೈಲು ನಿಲ್ದಾಣ ಸ್ಥಾನಮಾನ ಹಿಂಪಡೆದ ನೈರುತ್ಯ ರೈಲ್ವೆ

ಕಡ್ಲಿಮಟ್ಟಿ; ಈಗ ತಂಗುದಾಣ ಮಾತ್ರ !

ವೆಂಕಟೇಶ್ ಜಿ.ಎಚ್. Updated:

ಅಕ್ಷರ ಗಾತ್ರ : | |

ಕಡ್ಲಿಮಟ್ಟಿ; ಈಗ ತಂಗುದಾಣ ಮಾತ್ರ !

ಬಾಗಲಕೋಟೆ:  ಜನಪದದಲ್ಲಿ ಕಾಶೀಬಾಯಿಯ ದುರಂತ ಕಥನದ ಮೂಲಕ ದೇಶದಾದ್ಯಂತ ಜನಜನಿತವಾಗಿ ರುವ ಕಡ್ಲಿಮಟ್ಟಿ ರೈಲು ನಿಲ್ದಾಣ, ಈಗ ನೈರುತ್ಯ ರೈಲ್ವೆ  ದಾಖಲೆಗಳಲ್ಲಿ ನಿಲ್ದಾಣದ ಸ್ಥಾನಮಾನ ಕಳೆದು ಕೊಂಡಿದೆ. ಬದಲಿಗೆ ಅದೀಗ ಮೂರು ಪ್ಯಾಸೆಂಜರ್‌ ರೈಲುಗಳಿಗೆ ತಂಗುದಾಣ ಮಾತ್ರ. ಸೊಲ್ಲಾಪುರ–ಹುಬ್ಬಳ್ಳಿ ಮೀಟರ್‌ಗೇಜ್‌ ಮಾರ್ಗವನ್ನು ಬ್ರಾಡ್‌ಗೇಜ್ ಆಗಿ ಪರಿವರ್ತಿಸಲು 2002ರಿಂದ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು.ವಿಜಯಪುರ–ಬಾಗಲಕೋಟೆ ನಡುವಿನ ಮಾರ್ಗ ಬ್ರಾಡ್‌ಗೇಜ್‌ಗೆ ಬದಲಾಗಿ 2006ರಲ್ಲಿ ಮತ್ತೆ ರೈಲು ಓಡಾಟ ಆರಂಭವಾಗುತ್ತಿದ್ದಂತೆಯೇ ಕಡ್ಲಿಮಟ್ಟಿಗೆ ಇದ್ದ ನಿಲ್ದಾಣದ ಸ್ಥಾನಮಾನವನ್ನು ನೈರುತ್ಯ ರೈಲ್ವೆ ಹಿಂದಕ್ಕೆ ಪಡೆದಿದೆ.ಬದಲಿಗೆ ಆಸುಪಾಸಿನಲ್ಲಿಯೇ ಜಡರಾಮಕುಂಟಿ ಹಾಗೂ ಮುಗಳೊಳ್ಳಿ ಎಂಬ ಹೊಸ ಎರಡು ರೈಲು ನಿಲ್ದಾಣಗಳನ್ನು ಆರಂಭಿಸಿದೆ. ಇದರಿಂದ ಸಹಜವಾಗಿಯೇ ಕಡ್ಲಿಮಟ್ಟಿ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಅಲ್ಲಿ ಈಗ ಪಾಳುಬಿದ್ದ ರೈಲು ನಿಲ್ದಾಣ, ಸಿಬ್ಬಂದಿಯ ವಸತಿ ಗೃಹಗಳು, ಪ್ರಯಾಣಿಕರ ವಿಶ್ರಾಂತಿ ಗೃಹ, ಶೌಚಾಲಯ ಕಟ್ಟಡಗಳು ಕಾಶೀಬಾಯಿಯ ಕಥನಕ್ಕೆ ಸಾಕ್ಷಿಯಂತೆ ಗೋಚರವಾಗುತ್ತವೆ.‘ಮೀಟರ್‌ಗೇಜ್ ಅವಧಿಯಲ್ಲಿ ಬಾಗಲಕೋಟೆ ಹಾಗೂ ಆಲಮಟ್ಟಿ ನಡುವೆ ಕಡ್ಲಿಮಟ್ಟಿ ಏಕೈಕ ನಿಲ್ದಾಣ ವಾಗಿತ್ತು. ರೈಲು ನಿಲ್ದಾಣದಲ್ಲಿ ಎರಡು ಮಾರ್ಗಗಳನ್ನು ಹಾಕಿ ಕ್ರಾಸಿಂಗ್‌ಗೆ ಅವಕಾಶ ನೀಡಲಾಗಿತ್ತು. ಜೊತೆಗೆ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೂ ಅವಕಾಶ ಕಲ್ಪಿಸಲಾಗಿತ್ತು.ಈಗ ಒಂದೇ ಮಾರ್ಗ ಇದ್ದು, ಕ್ರಾಸಿಂಗ್‌ಗೆ ಅವಕಾಶವಿಲ್ಲವಾಗಿದೆ. ಬೆಳಿಗ್ಗೆ 9.30ಕ್ಕೆ ಸೊಲ್ಲಾಪುರ–ಹುಬ್ಬಳ್ಳಿ ಪ್ಯಾಸೆಂಜರ್ ರೈಲು, ಸಂಜೆ 4.30ಕ್ಕೆ ಗದಗ–ಸೊಲ್ಲಾಪುರ ಹಾಗೂ 5.30ಕ್ಕೆ ಹುಬ್ಬಳ್ಳಿ–ಸೊಲ್ಲಾಪುರ ರೈಲುಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಅಲ್ಲಿ ಗೇಟ್‌ ಕಾವಲುಗಾರ ಆಗಿ ಕೆಲಸ ಮಾಡುವ (ಗಾರ್ಡ್‌ಮನ್‌) ಗುರುಪಾದ ಪಾಟೀಲ ಹೇಳುತ್ತಾರೆ.ಕಡ್ಲಿಮಟ್ಟಿಗೆ ರೈಲು ನಿಲ್ದಾಣದ ಸ್ಥಾನಮಾನ ಇಲ್ಲದ ಕಾರಣ ಪ್ಯಾಸೆಂಜರ್ ರೈಲುಗಳಿಗೆ ಟಿಕೆಟ್ ನೀಡಲು ಅಲ್ಲಿಯೇ ತಾಂಡಾದ ನಿವಾಸಿ ಲಕ್ಷ್ಮಣ ಪವಾರ ಅವರನ್ನು ಗುತ್ತಿಗೆ ಆಧಾರದ ಮೇಲೆ ಟಿಕೆಟ್‌ ಏಜೆಂಟ್‌ ಆಗಿ ನೇಮಿಸಲಾಗಿದೆ. ಕುಡಿಯುವ ನೀರು, ವಿಶ್ರಾಂತಿಗೆ ಅವಕಾಶ, ಕ್ಯಾಂಟಿನ್, ಶೌಚಾಲಯ ಹೀಗೆ ಎಲ್ಲಾ ಮೂಲ ಸೌಕರ್ಯಗಳನ್ನು ಹಿಂದಕ್ಕೆ ಪಡೆಯಲಾಗಿದೆ.ಕೇಂದ್ರ ಸ್ಥಾನ: ಕಡ್ಲಿಮಟ್ಟಿ ರೈಲು ನಿಲ್ದಾಣ ಸುತ್ತಲಿನ ಇಲ್ಯಾಳ, ತಳಗಿಹಾಳ, ಶಿರಗುಂಪಿ, ಬೆನ್ನೂರ, ಲವಲೇಶ್ವರ ತಾಂಡಾ, ಕಡ್ಲಿಮಟ್ಟಿ, ಅಚನೂರು, ಮುಡಪೂಜೆ, ಭಗವತಿ, ಬಿಲ್‌ಕೆರೂರು, ಹಳ್ಳೂರು, ಕಡ್ಲಿಮಟ್ಟಿ ತಾಂಡಾ ಹಾಗೂ ಸಂಗಾಪುರ ಗ್ರಾಮಗಳಿಗೆ ಕೇಂದ್ರಸ್ಥಾನವಾಗಿದೆ.ಹೊಸ ರೈಲು ನಿಲ್ದಾಣಗಳು ನಮಗೆ ದೂರ ಆಗುತ್ತವೆ. ಹಾಗಾಗಿ ಇಲ್ಲಿಗೆ ರೈಲು ನಿಲ್ದಾಣದ ಅಗತ್ಯವಿದೆ. ಈ ಬಗ್ಗೆ ಈಗಾಗಲೇ ರೈಲ್ವೆ ಇಲಾಖೆಗೂ ಮನವಿ ಸಲ್ಲಿಸಲಾಗಿದೆ. ಈಗ ಮತ್ತೊಮ್ಮೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸ್ಥಳೀಯರಾದ ರಾಜಶೇಖರ ಮುದೇನೂರ ಹೇಳುತ್ತಾರೆ.ಈಗ ಈ ಭಾಗದಲ್ಲಿ ರೈಲು ಅವಲಂಬಿತರ ಪ್ರಮಾಣ ಹೆಚ್ಚಾಗಿದೆ. ಸುತ್ತಲಿನ ಅಮೋಘ ಸಿದ್ದೇಶ್ವರ, ಗುಡ್ಡದ ಸಿದ್ದರಾಮೇಶ್ವರ ಹಾಗೂ ಅಚನೂರು ಮಾರುತೇಶ್ವರ ದೇವಸ್ಥಾನಗಳಿಗೆ ಪಕ್ಕದ  ಧಾರವಾಡ, ಬೆಳಗಾವಿ, ಗದಗ ಜಿಲ್ಲೆಗಳಿಂದಲೂ ಭಕ್ತರು ಬರುತ್ತಾರೆ. ಅಮಾವಾಸ್ಯೆ ಹಾಗೂ ಬೇರೆ ಬೇರೆ ವಿಶೇಷ ದಿನಗಳಲ್ಲಿ ಸಾವಿರಾರು ಮಂದಿ ಬರುವುದರಿಂದ ಈಗ ಹಾಳು ಬಿದ್ದಿರುವ ರೈಲು ನಿಲ್ದಾಣಕ್ಕೆ ಪುನಃಶ್ಚೇತನ ನೀಡಿ ಮೂಲ ಸೌಕರ್ಯ ಕಲ್ಪಿಸಬೇಕಿದೆ. ಇನ್ನಷ್ಟು ರೈಲುಗಳನ್ನು ನಿಲ್ಲುವಂತೆ ಮಾಡಬೇಕಿದೆ ಎಂದು ಮುದೇನೂರ ಒತ್ತಾಯಿಸುತ್ತಾರೆ.‘ಕಡ್ಲಿಮಟ್ಟಿಯಲ್ಲಿ ಈಗ ನಿಲ್ದಾಣ ಇರುವ ಕಡೆ ನಿಯಮಿತವಾಗಿ ಅಹಿತಕರ ಘಟನೆಗಳು ನಡೆಯುತ್ತಿದ್ದ ಕಾರಣ ಹಾಗೂ ಅಲ್ಲಿ ಆದಾಯದಲ್ಲಿ ಇಳಿಕೆ ಆಗಿದ್ದ ಕಾರಣ ನಿಲ್ದಾಣವನ್ನು ರೈಲ್ವೆ ಇಲಾಖೆ ಜಡರಾಮಕುಂಟಿಗೆ ಸ್ಥಳಾಂತರಿಸಿದೆ’ ಎನ್ನುತ್ತಾರೆ ಬಾಗಲಕೋಟೆ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ.  ಈಗ ಇರುವ ತಂಗುದಾಣಕ್ಕೆ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ಮೊದಲಾದ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಲಾಗುವುದು. ಆ ಭಾಗದ ಜನ ಬೆಂಬಲ ನೀಡಿದರೆ ನಮಗೂ ಶಕ್ತಿ ಬರಲಿದೆ ಎಂದರು.‘ ನಿಲ್ದಾಣವನ್ನು ಅಲ್ಲಿಂದ ಎರಡು ಕಿ.ಮೀ ದೂರದ ಕಡ್ಲಿಮಟ್ಟಿ ಗ್ರಾಮಕ್ಕೆ ಸ್ಥಳಾಂತರಿಸುವಂತೆ ಇಲ್ಲವೇ ಈಗ ಇರುವ ಕಡೆಯೇ  ಸೌಕರ್ಯ ಕಲ್ಪಿಸುವಂತೆ ಇಲಾಖೆಗೆ ಪತ್ರ ಬರೆದಿರುವೆ’ ಎಂದು  ಸಂಸದ ಪಿ.ಸಿ.ಗದ್ದಿಗೌಡರ ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.