ಬುಧವಾರ, ಜೂನ್ 16, 2021
22 °C
ಕವಿತೆ

ಕತ್ತಲು

ಎಸ್. ಮಂಜುನಾಥ್ Updated:

ಅಕ್ಷರ ಗಾತ್ರ : | |ಬಂದು ನಿಂತಿತು ಕತ್ತಲು ನನ್ನಿದಿರು

ದಟ್ಟ ಗುಂಗುರು ಕೂದಲು

ಮೋಹಕ ಮುಂಗುರುಳು

ಅದರ ಮೈತುಂಬ ಕೆಂಪು ಕೆಂಪು ಬರೆ!

ನಾನು ನಿಂತಾಗ ಕೂತಾಗ ಸ್ವಿಚ್ಚೊತ್ತಿ

ಬೆಳಕಿನ ಚಾಟಿ ಬೀಸಿದ್ದರಿಂದ ಹೀಗಾಯ್ತು

–ಗೋಳಿಟ್ಟಿತುಋಷಿಗಳ ಕಾಲದಿಂದಲೂ ಕತ್ತಲನ್ನೋಡಿಸು ಎಂಬ

ಮಾತು ಕೇಳಿ ಕೇಳಿ

ಹೀಗೆ ಮಾಡಿದ್ದ ಮನುಷ್ಯ

ನನಗೂ ಬದುಕಲು ಕೊಂಚ ಅವಕಾಶ ಕೊಡು

ಎಂದದರ ಮೊರೆಅಂತೆಯೇ ಈಗ

ನನ್ನ ಹೃದಯ ರಂಗಸ್ಥಳ

ಬೆಳಕಿನ ಬಟಾಬಯಲೂ ಅಲ್ಲ

ಕತ್ತಲ ಕಾಡೂ ಅಲ್ಲ

ಬೆಳಕು ಕತ್ತಲಿನಲ್ಲಿ ಜೀವ ಸರಿದಾಡುವ

ಪಾತ್ರಎಲ್ಲಿ ಹೋಗಿರಬಹುದು ಈ ಮರಗಳಡಿಯ ನೆರಳು

ರಾತ್ರಿಯ ಗಾಢ ಕತ್ತಲು

ರಸ್ತೆ ಅಗಲವಾಗಿ ಝಗಮಗ ದೀಪ ಬೆಳಗಿ

ಮತ್ಯಾವ ಹಳ್ಳಿಗೆ ದೇಶಾಂತರ?

ಮಸಣ ಗುಡಿ ದೆವ್ವ ದೇವರುಗಳೆಲ್ಲ

ಅದರೊಂದಿಗೆ?ಈಗ ಬರೀ ಮನುಷ್ಯರೇ–ಹಣವಂತ

ಕಂತ್ರಾಟುದಾರ ಪುಡಾರಿ...

ಕುಡುಕ ಹುಚ್ಚ ಭಿಕ್ಷುಕರು ಭಗ್ನ ಹೃದಯೀ ಸಂತರ ಹಾಗೆ

ಊಳಿಡುವರುಊರ ದೇವತೆಯಂಥ ನಮ್ಮ ಕತ್ತಲನು ತಲಪುತ್ತಿದೆಯೇ ಅದು?

ಬಣ್ಣ ಬಣ್ಣದ ಅಂಗಿ ಧರಿಸಿದ ಕವಿ ಕೋಡಂಗಿ

ಮಾಸಲು ಸೀರೆಯ ಬಡ ಕೂಲಿಕಾರ ಹೆಂಗಸರಷ್ಟೇ

ನೆರಳಂತೆ ಸರಿಯುವರು...ಕತ್ತಲ ಕೂದಲಿಗೂ ಈಗ ನೆರೆ ಬಂದು

ಹುಣ್ಣಿಮೆ ಚಂದ್ರ ಬಿಳಿಚಿಕೊಂಡಿದ್ದಾನೆ

ಬೆಳ್ಳಿ ಕಳೆದು!ಅವಳೂ ಒಬ್ಬ ನಟೀಮಣಿ–ಡೈ ಮಾಡಿದ ಕೇಶ ಅವಳದು

ತಂಪೆರೆವ ಅವಳ ನಗು ಬರೀ ನಟನೆ-ಮೋಸ ಹೋದೀರಿ ಜೋಕೆ!

ಅಷ್ಟಕ್ಕೂ ಈ ಮೋಸಹೋಗುವಾಟದಲ್ಲಿ

ನಿಜವಾಡುವವ ಕೇಡಿಕತ್ತಲನು ನೋಡಿದೆ ಅದರೊಂದಿಗೆ ನುಡಿದೆ ಕೂಡಿದೆನೆನ್ನುವ ಕಳ್ಳ

ಪ್ರಸಿದ್ಧ ವಿರಾಗಿ

ದೇವರಾದರೂ ವಿದ್ಯುತ್ ಗಂಟೆ ಜಾಗಟೆ

ಊದುಬತ್ತಿಯ ತುದಿಗೆ ಎಲೆಕ್ಟ್ರಿಕ್ ಕಿಡಿ

ಇದನ್ನೇ ಬೇಡುವುದುಗಣಿಯೊಳಗಿನ ಕತ್ತಲು ಬಗೆವವನ ವಜ್ರದ ಬೆಳಕಿಗವನ ಕಣ್ಣು

ಕೋರೈಸುವುದುಹೆಬ್ಬಾವಿನಂಥ ಈ ಪ್ರಾಣಿಗೆ ಮೈಯೆಲ್ಲ ಚಿರತೆ ಕಣ್ಣು

ರೆಪ್ಪೆಗಳಿಲ್ಲ, ನಿದ್ರಾಹೀನತೆಯೆ ಇದರ

ಹೆಗ್ಗಳಿಕೆ! ಉರಿವ ಕಣ್ಣುಗಳಿಂದ ಸದಾ ನಿರುಕಿಸುವುದು

ತನ್ನದೇ ಬೇಗುದಿಯಬೆಂಗಳೂರು, ಮುಂಬಯಿ, ನ್ಯೂಯಾರ್ಕು ಇದರ ಹೆಸರು

ಹಳ್ಳಿಗಾಡಿನ ಗರತಿಯರು ರೈತರು ಮಲಗಿರುವ ಹೊತ್ತಲ್ಲಿ

ಏನು ನಡೆದಿದೆ ದೂರದಕೊಳ್ಳಿ ದೀಪಗಳ ಆ ದೇಶದಲ್ಲಿ?

ಹಾದರವೆ ಕೊಲೆಸ್ಕೆಚ್ಚೆ ನೋಟುಪ್ರಿಂಟೇ?

ದೇವರುಗಳೂ ಭಾಗಿ ಆ ದೆವ್ವಗಳೊಂದಿಗೆ

ಪಟಗಳಲ್ಲಿ ಅಸಹಾಯಕರಾಗಿ

ನರಗಳಂಚಿಗೆ ಸುಡುಕಣಗಳ ಹುಚ್ಚುನರ್ತನ

ಎಲ್ಲರಿಗು ಒಂದೇ ರೋಗವಿರಲಾಗಿ

ಎಲ್ಲರೂ ಸ್ವಸ್ಥಒಳಗೆ ನರಳುವ ಸೋಲಿಗ ಕನಸುತ್ತಾನೆ

ಬೆಟ್ಟದ ದಟ್ಟ ಕಾಡಿನಲಿರುವ

ದೊಡ್ಡ ಸಂಪಿಗೆ ಮರ; ನಟ್ಟಿರುಳು

ಅದರ ನೆತ್ತಿಯಲಿ ಮೂಡಿದ ಚಂದ್ರ

ತಂಪೆರೆವ ತಾರೆಗಣಬೆಳಕಲ್ಲಿಕಣ್ಣು ಕಾಣುವುದೆಲ್ಲ ತನ್ನನ್ನೇ

ಜರಿದುಕೊಂಡು ಕಾಣದ್ದು ಕಣ್ಣ ಪರಿಧಿಯ ಆಚೆ

ಅದು ಬೇರೆಯೇ

ಕಂಡೂ ಕಂಡೂ ದಣಿದಿದೆ ಕಣ್ಣು

ಕಾಣದ್ದ ಮುಟ್ಟದಾಗಿಸ್ಪರ್ಶಕೆ ಬೆಚ್ಚಿ ಮನ ಇದ್ದು ಬೆಳಕಿನ ಮನೆಯಲ್ಲೇ

ಅಳುತ್ತಿದೆ ಒಂದೇ ಸಮ ತಾಯಿಗಾಗಿ

ಮಡಿಲು ಸೆರಗಿನ ಕತ್ತಲಿಗಾಗಿ!ಕತ್ತಲು ಸಿಕ್ಕಿದೆ ಎಂದಿತು ಮಗು

ಅದರ ಮುದ್ದು ಮುಷ್ಟಿಯೊಳಗೆ

ಮಿಣುಕು ಹುಳ! ಅದುಅಪರಿಮಿತ ಕತ್ತಲ ಸೃಷ್ಟಿಸುತ್ತಿತ್ತು ಆ ಮುಷ್ಟಿಯೊಳಗೆ

ನೋಡಿ ಕಣ್ಣುರಿಯಿಳಿದು ಗುಡ್ಡೆಗಳು

ಕವಳಿಹಣ್ಣು–ಈಗ

ಬೆಳಕ ಗೆದ್ದಿದ್ದೇನೆ ನಾನು!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.