ಮಂಗಳವಾರ, ಮೇ 11, 2021
24 °C

`ಕಥೆಗಾರ ತನಗೆ ತಾನು ಪ್ರಾಮಾಣಿಕನಾಗಿರಬೇಕು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕಥೆಗಾರ ಕಥೆಯಲ್ಲಿ ಎಷ್ಟು ಹೇಳಬೇಕು ಎಂಬುದಕ್ಕಿಂತ ಎಷ್ಟು ಹೇಳಬಾರದು ಎಂಬುದು ಕೂಡಾ ಮುಖ್ಯ. ಕಥೆಯಲ್ಲಿ ಏನು ಕಾಣಿಸಬೇಕು ಹಾಗೂ ಏನು ಹೇಳಬೇಕು ಎಂಬ ಕಥೆಗಾರನ ನಿರ್ಧಾರ ಮತ್ತು ಈ ಸಮನ್ವಯ ಕಥೆಗೆ ಹೆಚ್ಚು ಅಗತ್ಯ. ಪ್ರಕಟಿಸದೇ ಉಳಿದ ಕಥೆಗಳು ಸಹ ಕಥೆಗಾರನ ಬರೆಯುವ ಪ್ರಕ್ರಿಯೆಯಲ್ಲಿ ಪ್ರಯೋಜನಕ್ಕೆ ಬರುತ್ತವೆ...'

ಆಕೃತಿ ಪುಸ್ತಕ ಮಳಿಗೆಯ ಚಾವಡಿಯಲ್ಲಿ ಭಾನುವಾರ ನಡೆದ ಸಂವಾದದಲ್ಲಿ ಕಥೆಗಾರ ವಿವೇಕ ಶಾನಭಾಗ ಅವರು ಕಥೆ ಹುಟ್ಟುವ ಸಂದರ್ಭ, ಬೆಳೆಯುವ ಬಗೆ, ಕಥೆಗಾರನ ತುಡಿತ ಹಾಗೂ ಓದುಗ ಮತ್ತು ಕಥೆಗಾರನ ಸಂಬಂಧಗಳನ್ನು ತಮ್ಮ ಮಾತುಗಳ ಮೂಲಕ ಬಿಚ್ಚಿಟ್ಟರು.`ಕಥೆ ಬರೆಯುವ ಸಂದರ್ಭದಲ್ಲಿ ಕಥೆಗಾರ ತನಗೆ ತಾನು ಪ್ರಾಮಾಣಿಕನಾಗಿರುವುದು ಅಗತ್ಯ. ಕಥೆ ಬರೆದಾದ ನಂತರ ಕಥೆಗಾರನಿಗೆ ಸಿಗದ ಅನೇಕ ಒಳಹುಗಳು ಓದುಗನಿಗೆ ಸಿಗುತ್ತವೆ. ತಾನು ಓದುಗನಿಗೆ ಏನನ್ನು ತಲುಪಿಸಬೇಕು ಎಂಬ ಬಗ್ಗೆ ಕಥೆಗಾರ ಯೋಚಿಸಬೇಕು. ಕಥೆಯ ಹುಟ್ಟು ಹಾಗೂ ಅದರ ಬೆಳವಣಿಗೆ ಕೇವಲ ಕಥೆಗಾರನಿಗೆ ಸಂಬಂಧಿಸಿದ್ದು ಮಾತ್ರವಲ್ಲ, ಒಟ್ಟೊಟ್ಟಿಗೇ ಅದು ಓದುಗನ ಜತೆಗಿನ ಸಂಬಂಧವನ್ನೂ ಸೃಷ್ಟಿಸಿಕೊಳ್ಳುತ್ತಾ ಬೆಳೆಯುತ್ತದೆ' ಎಂದು ಅವರು ನುಡಿದರು.`ಸಾಹಿತ್ಯದ ಸಂದರ್ಭದಲ್ಲಿ ಲಘು ಹಾಗೂ ಜನಪ್ರಿಯ ಎಂಬ ವಿಂಗಡಣೆ ಸರಿಯಲ್ಲ. ಸಾಹಿತ್ಯಕ್ಕೆ ಎಲ್ಲವೂ ಅಗತ್ಯ. ಸುತ್ತಮುತ್ತಲಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದಲಾವಣೆಗಳು ಜನಸಾಮಾನ್ಯರ ಮೇಲೆ ಹೇಗೋ ಕಥೆಗಾರನ ಮೇಲೂ ಪ್ರಭಾವ ಬೀರುತ್ತವೆ. ಗದ್ಯಕ್ಕೆ ತನ್ನದೇ ಆದ ಲಯವಿದೆ. ಯಾವ ಶಬ್ದ, ವಾಕ್ಯ, ವಿವರಣೆಯಲ್ಲಿ ಹೇಗೆ ಓದುಗನನ್ನು ಮುಟ್ಟಬೇಕು ಎಂಬ ಪ್ರಜ್ಞೆ ಕಥೆಗಾರನಿಗಿರಬೇಕು. ಕಥೆಗಾರನ ಅನುಭವವೇ ಕಥೆಯಲ್ಲಿ ಮೂಡಿಬರುತ್ತದೆ' ಎಂದು ಅಭಿಪ್ರಾಯಪಟ್ಟರು.`ವೃತ್ತಿಯ ಕಾರಣದಿಂದ `ದೇಶಕಾಲ' ಪತ್ರಿಕೆಯನ್ನು ನಿಲ್ಲಿಸಬೇಕಾಯಿತು. ಏಳು ವರ್ಷಗಳ ಕಾಲ ದೇಶಕಾಲವನ್ನು ನಡೆಸಿದ ಬಗ್ಗೆ ತೃಪ್ತಿ ಇದೆ. ಕನ್ನಡದ ಸಂದರ್ಭದಲ್ಲಿ ಸಣ್ಣ ಸಾಹಿತ್ಯ ಪತ್ರಿಕೆಗಳು ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಇನ್ನೂ ನಾಲ್ಕೈದು ಸಾಹಿತ್ಯ ಪತ್ರಿಕೆಗಳು ಆರಂಭವಾದರೂ ಸಾಹಿತ್ಯಾಸಕ್ತರು ಅವನ್ನು ಸ್ವೀಕರಿಸುತ್ತಾರೆ. ಸದ್ಯಕ್ಕೆ ದೇಶಕಾಲವನ್ನು ಪುನರಾರಂಭಿಸುವ ಯೋಚನೆ ಇಲ್ಲ' ಎಂದರು.ನಂತರ `ಮತ್ತೊಬ್ಬನ ಸಂಸಾರ' ಕಥಾಸಂಕಲನದ `ಶರವಣ ಸರ್ವಿಸಸ್', `ದೇಹ ಸಂಬಂಧ' ಹಾಗೂ `ದೇವಿ ಮಹಾತ್ಮೆ' ಕವನಗಳನ್ನು ವಾಚಿಸಿದರು. ಎಂ.ಜಿ. ವಿನಯ್ ಕುಮಾರ್ ಸಂವಾದ ನಡೆಸಿಕೊಟ್ಟರು. ಆಕೃತಿ ಪುಸ್ತಕದ ಡಿ.ಎನ್.ಗುರುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.ತಂತ್ರ ಇದ್ದೂ ಇಲ್ಲದಂತಿರಬೇಕು

`ಕುರ್ಚಿಯ ನಿರ್ಮಾಣದಲ್ಲಿ ಮೊಳೆಗಳ ಹಾಗೆ ಕಥೆಯಲ್ಲಿ ತಂತ್ರದ ಬಳಕೆ ಆಗಬೇಕು. ಅದು ಕಣ್ಣಿಗೆ ಕಾಣಬಾರದು, ಕೈಗೆ ಸಿಗಬಾರದು, ಇದ್ದೂ ಇರದ ಹಾಗಿರಬೇಕು. ಮನಸ್ಸಿನಲ್ಲಿ ಮೂಡಿದ ಕಥೆಗಳು ಅದ್ಭುತವಾಗಿರುತ್ತವೆ. ಬರೆಯುತ್ತಾ ಹೋದಂತೆ ನಾನು ಹೇಳಬೇಕಾದ್ದು ಇದಲ್ಲ ಎಂದು ಹಲವು ಬಾರಿ ನಿರಾಸೆಯಾಗುತ್ತದೆ. ಮೂಲದಲ್ಲಿ ಮೂಡಿದ ಕಥೆ ಬೇರೆ ಬೇರೆ ತಿರುವುಗಳನ್ನು ಪಡೆದು ಬೆಳೆಯುತ್ತದೆ' ಎಂದು ವಿವೇಕ ಶಾನಭಾಗ ಅವರು ಕಥೆಯ ಸೃಷ್ಟಿ ಕ್ರಿಯೆಯ ಅನುಭವಗಳನ್ನು ತೆರೆದಿಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.