ಭಾನುವಾರ, ಮೇ 22, 2022
23 °C

ಕನಕಗಿರಿ ಉತ್ಸವಕ್ಕೆ ಒಂದು ಕೋಟಿ ರೂಪಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಗಿರಿ: ‘ಕನಕಗಿರಿ ಉತ್ಸವ’ಕ್ಕೆ ಒಂದು ಕೋಟಿ ರೂಪಾಯಿ ನೀಡಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಮಹಾಂತೇಶ್ ಸಜ್ಜನ್ ತಿಳಿಸಿದ್ದಾರೆ.  ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ಅವರು ಈ ಭರವಸೆ ನೀಡಿದ್ದಾರೆ ಎಂದು ಸಜ್ಜನ್ ‘ಪ್ರಜಾವಾಣಿ’ ಜತೆಗೆ ದೂರವಾಣಿ ಮೂಲಕ ಮಾತನಾಡಿ ತಿಳಿಸಿದರು. ಇದೇ ತಿಂಗಳ ಕೊನೆಯ ವಾರದಲ್ಲಿ ತಾಲ್ಲೂಕಿನ ಮತ್ತೊಂದು ಐತಿಹಾಸಿಕ ತಾಣ ‘ಆನೆಗೊಂದಿ ಉತ್ಸವ’ ನಡೆಯಲಿದ್ದು ಈ ಸಮಯದಲ್ಲಿ ಕನಕಗಿರಿ ಉತ್ಸವ ಸಿದ್ಧತೆಗೆ ಅಧಿಕಾರಿಗಳು ಲಭ್ಯವಾಗುವುದಿಲ್ಲ. ಏಪ್ರಿಲ್ ತಿಂಗಳಲ್ಲಿ ವಿವಿಧ ಕೋರ್ಸ್‌ಗಳ ಪರೀಕ್ಷೆ ಇರುವ ಕಾರಣ ಮೇ 2, 3ರಂದು ಉತ್ಸವ ಆಚರಣೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಸಚಿವರು ವ್ಯಕ್ತಪಡಿಸಿದರು. ಉತ್ಸವಕ್ಕೆ ಚಿತ್ರನಟರು, ಕಲಾವಿದರು, ಆಗಮಿಸುವರು. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡುವ ಕುರಿತು ಚರ್ಚಿಸಲಾಗಿದೆ ಎಂದು ಅವರು ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ  ಉತ್ಸವಕ್ಕೆ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಶೀಘ್ರದಲ್ಲಿಯೆ ಕನಕಗಿರಿಗೆ ಭೇಟಿ ನೀಡುವರು. ನಂತರ ವಿವಿಧ ಸಮಿತಿಗಳನ್ನು ರಚನೆ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.ಕನಕಗಿರಿ ಉತ್ಸವ ಆಚರಣೆ ಮಾಡಬೇಕೆಂಬ ಈ ಭಾಗದ ಜನತೆಯ ಬಹು ವರ್ಷಗಳ ಕನಸನ್ನು  ಕಳೆದ ವರ್ಷ ಮಾಜಿ ಸಚಿವ ಶಿವರಾಜ ತಂಗಡಗಿ ನನಸು ಮಾಡಿದ್ದರು. ಆದರೆ ಈಗ ಅವರು ಶಾಸಕತ್ವದಿಂದ ಅನರ್ಹಗೊಂಡ ಹಿನ್ನೆಲೆಯಲ್ಲಿ ಕ್ಷೇತ್ರದ ಬಿಜೆಪಿ ನಿಯೋಗ ಕಾರಜೋಳ ಸೇರಿದಂತೆ ಇತರೆ ಸಚಿವ, ಸಂಸದರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಶಾಸಕರಾದ ಪರಣ್ಣ ಮುನವಳ್ಳಿ, ಆಚಾರ ಹಾಲಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಲ್ಲಾ ಶೇಷಗಿರಿರಾವ್, ವಿಶೇಷ ಎಪಿಎಂಸಿ ಮಾರುಕಟ್ಟೆ ಅಧ್ಯಕ್ಷ ಬಿ.ಜಿ. ಅರಳಿ, ಬ್ಲಾಕ್ ಬಿಜೆಪಿ ಅಧ್ಯಕ್ಷ ಗುರುಸಿದ್ದಪ್ಪ ಎರಕಲ್ ಮತ್ತಿತರರು ಭಾಗವಹಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.