ಕನಸಿನ ಮನೆಯಲ್ಲೇ ಹೆಣವಾದ ಉದ್ಯಮಿ

ಉಡುಪಿ: ಪತ್ನಿ ಹಾಗೂ ಮಗನಿಂದಲೇ ಕೊಲೆಯಾದ ಭಾಸ್ಕರ್ ಶೆಟ್ಟಿ ಬಡ ಕುಟುಂಬದಲ್ಲಿ ಹುಟ್ಟಿದರೂ ವಿದೇಶದಲ್ಲಿ ಉದ್ಯಮ ಸ್ಥಾಪಿಸುವ ಮಟ್ಟಕ್ಕೆ ಬೆಳೆದದ್ದು ರೋಚಕ ಕಥೆ. ಒಬ್ಬನೇ ಮಗನೆಂದು ಅತಿ ವಾತ್ಸಲ್ಯದಿಂದ ಸಾಕಿದ್ದಕ್ಕೆ ಪ್ರತಿಯಾಗಿ ಮಗನಿಂದ ಬೂಟು ಕಾಲಿನೇಟು ತಿಂದ ನಂತರ ಆರಂಭವಾದ ಅವರ ವ್ಯಥೆ ಕೊಲೆಯಲ್ಲಿ ಕೊನೆಯಾಗಿದ್ದು ದುರಂತ ಕಥೆ.
ಬಡವರ ಮನೆಯ ಹುಡುಗಿಯಾದರೆ ಮಗನಿಗೆ ಪ್ರೀತಿ ಉಣಿಸಿ ಸಲಹುವಳು ಎಂದು ನಂಬಿದ ತಂದೆಯ ಮಾತಿಗೆ ಸೈ ಎಂದು ರಾಜೇಶ್ವರಿ ಅವರನ್ನು ಭಾಸ್ಕರ್ ಮದುವೆಯಾಗಿದ್ದರು.
ಭಾಸ್ಕರ್ ಶೆಟ್ಟಿ ಅವರ ತಂದೆ ಶೀನಪ್ಪ ಶೆಟ್ಟಿ ಅವರದ್ದು ಮಧ್ಯಮ ವರ್ಗದ ಕುಟುಂಬ. ಚಿಕ್ಕ ದಿನಸಿ ಅಂಗಡಿ ಇಟ್ಟುಕೊಂಡಿದ್ದ ಅವರು ಒಟ್ಟು ನಾಲ್ಕು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿದ್ದ ದೊಡ್ಡ ಕುಟುಂಬವನ್ನು ನಡೆಸುತ್ತಿದ್ದರು. ಎಸ್ಎಸ್ಎಲ್ಸಿ ವರೆಗೆ ಓದಿದ ಭಾಸ್ಕರ್ ಶೆಟ್ಟಿ ವಿದ್ಯಾಭ್ಯಾಸ ನಿಲ್ಲಿಸಿ, ಸಣ್ಣಪುಟ್ಟ ಕೆಲಸ ಮಾಡಲಾರಂಭಿಸಿದರು.
ಮುಂಬೈಗೆ ಹೋದ ಅವರು ವರ್ಕ್ಶಾಪ್ವೊಂದರಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಕಾರ್ಮಿಕನಾಗಿ ದುಡಿದರು. ಆ ನಂತರ ಕಾರು ಚಾಲನೆ ಕಲಿತು ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಸೌದಿ ಅರೇಬಿಯಾಕ್ಕೆ ಹೋದರು.
ಕಾರು ಚಾಲಕರಾಗಿ ಕೆಲಸ ಮಾಡಲಾರಂಭಿಸಿದ ಅವರು, ಕೆಲವೇ ವರ್ಷಗಳಲ್ಲಿ ಆಶ್ಚರ್ಯಕರ ರೀತಿಯಲ್ಲಿ ಸ್ಥಿತಿವಂತರಾದರು. ಉಡುಪಿಯಲ್ಲಿ ಹೋಟೆಲ್ ಉದ್ಯಮ ಆರಂಭಿಸಿದರು. ವಾಣಿಜ್ಯ ಕಟ್ಟಡಗಳನ್ನು ನಿರ್ಮಾಣ ಮಾಡಿ ಬಾಡಿಗೆಗೆ ನೀಡಿದರು. ಸೌದಿ ಅರೇಬಿಯಾದಲ್ಲಿಯೇ ಆರು ಸೂಪರ್ ಮಾರ್ಕೆಟ್ಗಳನ್ನು ಆರಂಭಿಸಿ ಯಶಸ್ವಿ ಉದ್ಯಮಿಯಾಗಿ ಹೊರ ಹೊಮ್ಮಿದರು. ಉಡುಪಿಯ ಜನರು ಹುಬ್ಬೇರಿಸುವಂತೆ ಮಾಡಿದರು.
ಭಾಸ್ಕರ್ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಬಡ ಕುಟುಂಬದಲ್ಲಿ ಹುಟ್ಟಿದವರು. ಪಡುಬಿದ್ರಿಯಲ್ಲಿ ಅವರ ಪುಟ್ಟ ಮನೆ ಇದೆ. ಶೀನಪ್ಪ ಶೆಟ್ಟಿ ಅವರೇ ರಾಜೇಶ್ವರಿ ಅವರನ್ನು ಸೊಸೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಉದ್ಯಮ, ವ್ಯಾಪಾರ ವ್ಯವಹಾರಗಳಲ್ಲಿ ಮುಳುಗಿರುವ ಮಗನ ಬಗ್ಗೆ ಕಾಳಜಿ ವಹಿಸುವ ಸೊಸೆ ಬೇಕು ಎಂಬುದು ಅವರ ಉದ್ದೇಶವಾಗಿತ್ತು.
ತಂದೆಯ ಬಗ್ಗೆ ಅಪಾರ ಗೌರವ ಹೊಂದಿದ್ದ ಭಾಸ್ಕರ್ ಚಕಾರ ಎತ್ತದೆ ಮದುವೆಯಾಗಲು ಒಪ್ಪಿಗೆ ನೀಡಿದ್ದರು. ಸೌದಿ ಅರೇಬಿಯಾದಿಂದ ಬಂದು ಹುಡುಗಿ ನೋಡುವ ಶಾಸ್ತ್ರ ಪೂರೈಸಿ ವಿವಾಹವಾಗಿದ್ದರು. ರಾಜೀವ್ ಗಾಂಧಿ ಹತ್ಯೆಯ ದಿನವೇ (1991 ಮೇ 21ರಂದು) ಅವರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದರು.
ಎರಡು ವರ್ಷದ ನಂತರ ಪತ್ನಿಯನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ದಾಂಪತ್ಯಕ್ಕೆ ಮಗ ನವನೀತ್ ಶೆಟ್ಟಿ ಫಲಿತಾಂಶವಾಗಿದ್ದ. ಕೆಲವು ವರ್ಷಗಳ ಹಿಂದಿನಿಂದ ಅವರು ಸೌದಿ ಅರೇಬಿಯಾ ಹಾಗೂ ಉಡುಪಿ ಎರಡೂ ಕಡೆ ಇರುತ್ತಿದ್ದರು.
ಉಡುಪಿಯಲ್ಲಿ ದೊಡ್ಡ ಮನೆ ನಿರ್ಮಾಣ ಮಾಡುವ ಕನಸು ಇಟ್ಟುಕೊಂಡಿದ್ದ ಅವರು, ಸುಮಾರು ಕೋಟಿಗಟ್ಟಲೆ ಖರ್ಚು ಮಾಡಿ ಮಣಿಪಾಲದ ಹಯಗ್ರೀವನಗರದಲ್ಲಿ ಬೃಹತ್ ಬಂಗಲೆ ನಿರ್ಮಾಣ ಮಾಡಿದ್ದರು. ಆಸ್ತಿಯ ವಾಂಛೆ, ದಾಂಪತ್ಯ ಜಟಾಪಟಿಯ ಪರಿಣಾಮ ಅವರು ಅದೇ ಮನೆಯಲ್ಲಿಯೇ ಹೆಣವಾಗಿ ಹೋಗಿದ್ದಾರೆ.
ಉಡುಪಿಯಲ್ಲಿರುವ ವಾಣಿಜ್ಯ ಮಳಿಗೆಗಳು, ಹೋಟೆಲ್ ಉದ್ಯಮವನ್ನು ನಡೆಸಲು ಅವರು ಪತ್ನಿಗೆ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಮಾಡಿಕೊಟ್ಟಿದ್ದರು. ಪತ್ನಿ ಹಣವನ್ನು ದುಂದು ವೆಚ್ಚ ಮಾಡುತ್ತಿದ್ದಾಳೆ ಎಂದು ಅವರು ಆರೋಪಿಸುತ್ತಿದ್ದರು. ಈ ವಿಷಯಕ್ಕೂ ದಂಪತಿ ಮಧ್ಯೆ ಹಲವು ಬಾರಿ ಜಗಳವಾಗಿತ್ತು.
ಆಸ್ತಿಯೇ ಕುತ್ತು: ಪತಿಯ ಆಸ್ತಿ ಪತ್ನಿಗೆ ಸೇರಿದ್ದವಲ್ಲವೇ? ಹಾಗಿದ್ದರೂ ಕೊಲೆ ಮಾಡುವ ಹಕೀಕತ್ತು ಏಕಿತ್ತು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಭಾಸ್ಕರ್ ಶೆಟ್ಟಿ ಅವರ ಎಲ್ಲ ಆಸ್ತಿಯೂ ಸ್ವಯಾರ್ಜಿತವಾಗಿತ್ತು.
ಕಾನೂನಿನ ಪ್ರಕಾರ ಸ್ವಯಾರ್ಜಿತ ಆಸ್ತಿಯನ್ನು ಯಾರ ಹೆಸರಿಗಾದರೂ ಉಯಿಲು ಮಾಡುವ ಅಥವಾ ಮಾರಾಟ ಮಾಡುವ ಸಂಪೂರ್ಣ ಹಕ್ಕು ಅವರಿಗಿತ್ತು. ಜಗಳ ತಾರಕಕ್ಕೇರಿದ್ದರಿಂದ ಆಸ್ತಿಯನ್ನು ಕುಟುಂಬಸ್ಥರ ಹೆಸರಿಗೆ ಬರೆಯಬಹುದು ಎಂಬ ಗುಮಾನಿ ರಾಜೇಶ್ವರಿ ಅವರಿಗೆ ಬಂದಿತ್ತು.
ಆ ನಂತರ ಇಬ್ಬರ ಮಧ್ಯೆ ತಿಕ್ಕಾಟ ಆರಂಭವಾಗಿತ್ತು. ಮಗ ನವನೀತ್ ಶೆಟ್ಟಿ ಸಹ ಅಮ್ಮನ ಪರವಾಗಿದ್ದರಿಂದ ಭಾಸ್ಕರ್ ಶೆಟ್ಟಿ ನೆಮ್ಮದಿ ಕಳೆದುಕೊಂಡಿದ್ದರು. ಮಗ ಕೆಲ ದಿನಗಳ ಹಿಂದೆ ಆಧುನಿಕ ಜಿಮ್ ಆರಂಭಿಸಿದಾಗಲೂ ಅದರ ಉದ್ಘಾಟನೆಗೆ ಭಾಸ್ಕರ್ ಬಂದಿರಲಿಲ್ಲ.
ಬೂಟೇಟು ಬಿದ್ದರೂ ಶಪಿಸಿರಲಿಲ್ಲ: ಕಳೆದ ರಂಜಾನ್ ಹಬ್ಬದ ಮರುದಿನ ತಾಯಿ– ಮಗ ಹಾಗೂ ತಂದೆಯ ಮಧ್ಯೆ ಜಗಳವಾಗಿತ್ತು. ಈ ಸಂದರ್ಭದಲ್ಲಿ ಮಗ ಬೂಟು ಕಾಲಿನಿಂದ ಅಪ್ಪನಿಗೆ ಒದ್ದಿದ್ದ. ಪತ್ನಿಯೂ ಹಲ್ಲೆ ಮಾಡಿದ್ದರು. ಈ ವಿಷಯವನ್ನು ಅವರು ಆಪ್ತರ ಬಳಿ ಹೇಳಿಕೊಂಡು ಕಣ್ಣೀರು ಹಾಕಿದ್ದರು.
‘ಮಗ ಒದ್ದು ಬಿಟ್ಟ ಇದರಿಂದ ಬಹಳ ನೋವಾಯಿತು. ಆತ ತಪ್ಪು ಮಾಡಿರಬಹುದು ಸುಧಾರಿಸುತ್ತಾನೆ ಬಿಡು ಎಂದು ದೂರವಾಣಿಯಲ್ಲಿ ಮಾತನಾಡಿದಾಗ ಹೇಳಿದ್ದರು’ ಎಂದು ಸಹೋದರ ಸುರೇಂದ್ರ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.